ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಯತ್ನ ಖಂಡಿಸಿ ಪ್ರತಿಭಟನೆ

213

Get real time updates directly on you device, subscribe now.

ಶಿರಾ: ಬುಧವಾರ ನಗರದ ಅಪ್ರಾಪ್ತ ಬಾಲಕಿಯ ಮೇಲೆ ಅನ್ಯ ಕೋಮಿನ ಯುವಕನೊಬ್ಬ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದು, ಅದೇ ವೇಳೆ ಸ್ಥಳದಲ್ಲಿದ್ದ ಇಬ್ಬರು ಯುವಕರಿಂದ ಬಾಲಕಿ ಪಾರಾಗಿದ್ದಾಳೆ ಎನ್ನುವ ವಿಷಯ ನಗರದಲ್ಲಿ ಹಬ್ಬಿದ ಕಾರಣ, ಗುರುವಾರ ನಗರದಲ್ಲಿ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.
ಘಟನೆ ಖಂಡಿಸಿ ಮತ್ತು ಘಟನೆಗೆ ಕಾರಣರಾದ ಯುವಕನಿಗೆ ಉಗ್ರ ಶಿಕ್ಷೆ ಕೊಡಿಸಬೇಕೆಂದು ತಾಲ್ಲೂಕು ಆಡಳಿತ ಮತ್ತು ಪೊಲೀಸ್‌ ಇಲಾಖೆಯನ್ನು ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆ, ತಾಲ್ಲೂಕು ವೀರಶೈವ ಮಹಾಸಭಾ, ಕಟ್ಟೆ ಬಸವೇಶ್ವರ ಸಮಿತಿ, ವೀರಶೈವ ಲಿಂಗಾಯಿತ ಹಿತರಕ್ಷಣಾ ಸಮಿತಿ, ಬಿಜೆಪಿ ಮಹಿಳಾ ಮೋರ್ಚಾ ಸೇರಿದಂತೆ ವಿವಿಧ ಸಂಘಟನೆಗಳು ಗುರುವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಪೊಲೀಸ್‌ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಿದವು.
ಈ ವೇಳೆ ಹಿಂದೂ ಜಾಗರಣಾ ವೇದಿಕೆಯ ಮಂಜುನಾಥ್‌ ಮಾತನಾಡಿ, ಘಟನೆಯ ಎಫ್‌ಐಆರ್‌ ಬಗ್ಗೆ ಅಸಮಧಾನ ವ್ಯಕ್ತಪಡಿಸಿ, ಲೈಂಗಿಕ ದೌರ್ಜನ್ಯ ಎಸಗಿರುವ ಯುವಕ ಒಬ್ಬನೇ ಇಂತಹ ಕೃತ ನಡೆಸಿರಲು ಸಾಧ್ಯವಿಲ್ಲ. ತೀವ್ರ ತನಿಖೆ ನಡೆಸಿ ಆತನ ಜೊತೆಯಲ್ಲಿ ಪಾಲ್ಗೊಂಡಿರಬಹುದಾದ ಎಲ್ಲರಿಗೂ ಉಗ್ರ ಶಿಕ್ಷೆ ಕೊಡಿಸಬೇಕು ಎನ್ನುವುದು ತಮ್ಮ ಒತ್ತಾಯ, ಆದರೆ ಇಲ್ಲಿ ಕೃತ್ಯ ಎಸಗಿರುವವನನ್ನೇ ಅಪ್ರಾಪ್ತ ಬಾಲಕ ಎನ್ನುವಂತೆ ಬಿಂಬಿಸಲಾಗಿದೆ. 16 ವರ್ಷ ಮೀರಿದ ಎಲ್ಲರೂ ಇಂತಹ ಘಟನೆಯಲ್ಲಿ ಕ್ರಿಮಿನಲ್‌ ಎಂದೇ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಆಡಳಿತ ಮತ್ತು ಪೊಲೀಸ್‌ ವೈಫಲ್ಯದಿಂದ ಅನ್ಯ ಕೋಮಿನ ಯುವಕರು ಗಾಂಜಾ, ಸಲ್ಯೂಷನ್‌ ಮೊದಲಾದ ಮಾದಕ ವಸ್ತುಗಳ ವ್ಯಸನಿಗಳಾಗಿದ್ದಾರೆ. ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಯಾರೇ ಆಗಲಿ, ಯಾವುದೇ ಕೋಮಿನವರಾಗಲಿ, ತಕ್ಕ ದಂಡನೆ ನೀಡುವ ಅಗತ್ಯವಿದೆ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರಾಜ್ಯ ರೇಷ್ಮೆ ಉದ್ಯಮಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್‌.ಆರ್‌.ಗೌಡ ಮಾತನಾಡಿ, ಇಂತಹ ಘಟನೆ ಶಿರಾ ನಾಗರಿಕರೆಲ್ಲರೂ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಇಂತಹ ಅವಮಾನೀಯ ಹಾಗೂ ದುಷ್ಕೃತ್ಯವನ್ನು ಕೆಲವೆ ಸಂಘಟನೆಗಳು ಮಾತ್ರ ಅಲ್ಲ, ಇಡೀ ನಾಗರಿಕ ವ್ಯವಸ್ಥೆಯೇ ಖಂಡಿಸಿ ಪ್ರತಿಭಟಿಸಬೇಕು ಎಂದು ಕರೆ ನೀಡಿದರು.
ಶಿರಾ ಮಿನಿ ಬಾಂಬೆ ತರಹ ಹೊರಹೊಮ್ಮಿದೆ, ಎಲ್ಲಾ ಮಾಫಿಯಾಗಳು ಇಲ್ಲಿ ನಡೆಯುತ್ತಿವೆ, ಡ್ರಗ್‌, ಅಫೀಮು, ಗಾಂಜಾ ಎಲ್ಲವೂ ಕೂಡ ಇಲ್ಲಿ ನಡೆಯುತ್ತಿದೆ, ಈ ಬಗ್ಗೆ ಪೊಲೀಸ್‌ ಇಲಾಖೆಗೆ ಮಾಹಿತಿ ಇದ್ದರೂ ಕಡಿವಾಣ ಹಾಕುವಲ್ಲಿ ನಿರ್ಲಕ್ಷ ತೋರಿಸುತ್ತಿದ್ದಾರೆ ಎಂದು ವಿಷಾದಿಸಿದರು.

ಪೊಲೀಸ್‌ ಭರವಸೆ: ನಗರಕ್ಕೆ ಭೇಟಿ ನೀಡಿದ್ದ ಜಿಲ್ಲಾ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಯಾವುದೇ ಹೆಚ್ಚಿನ ಅವಘಡಗಳಿಗೆ ಅವಕಾಶ ನೀಡದಂತೆ ಪೊಲೀಸ್‌ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಘಟನೆಯಲ್ಲಿ ಅಪರಾಧಿಗೆ ಯಾವುದೇ ಕರುಣೆ ತೋರಿಸುವುದಿಲ್ಲ ಎಂದು ಭರವಸೆ ನೀಡಿದ ಅವರು, ನಗರದಲ್ಲಿ ಹೆಚ್ಚುತ್ತಿರುವ ಡ್ರಗ್‌ ಮಾಫಿಯಾವನ್ನು ಹಂತ ಹಂತವಾಗಿ ನಿರ್ಮೂಲನೆ ಮಾಡುವ ಭರವಸೆ ನೀಡಿದರು.
ಇಲ್ಲಿನ ದುರ್ಗಮ್ಮ ದೇವಾಲಯದ ಆವರಣಲ್ಲಿ ಜಮಾವಣೆಗೊಂಡ ವಿವಿಧ ಸಂಘಟನೆಗಳ ಸದಸ್ಯರು, ಘೋಷಣೆಗಳೊಂದಿಗೆ ತೆರಳಿ ಪೊಲೀಸ್‌ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದರು. ಇದೇ ವೇಳೆ ಘಟನೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ಕೊಡಿಸುವಂತೆ ಮನವಿ ಸಲ್ಲಿಸಲಾಯಿತು. ರಾಜ್ಯ ತೆಂಗು, ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್‌, ಬಿಜೆಪಿ ನಗರಾಧ್ಯಕ್ಷ ವಿಜಯರಾಜ್‌, ಯುವ ಘಟಕ ಅಧ್ಯಕ್ಷ ಯಶವಂತ್‌, ಗ್ರಾಮಾಂತರ ಯುವ ಘಟಕ ಅಧ್ಯಕ್ಷ ಮಧುಸೂಧನ್‌, ದೇವರಾಜು, ರಾಘವೇಂದ್ರ, ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿ ಸ್ವಪ್ನ, ಶಿವಮ್ಮ, ನಾಗರತ್ನ, ವೀರಶೈವ ಮಹಾಸಭಾ ಅಧ್ಯಕ್ಷ ಮಂಜುನಾಥ್‌, ರವಿಶಂಕರ್‌, ವೀರಶೈವ ಲಿಂಗಾಯಿತ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಟರಾಜು, ಮಲ್ಲಯ್ಯ ನಿಲುವಂಗಿ ಮಠ್‌, ಆನಂದ್‌, ಸೋಮಶೇಖರ್‌, ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ತಾಲ್ಲೂಕು ಅಧ್ಯಕ್ಷ ಸಿಂಚು ನಾರಾಯಣ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!