ಮಧುಗಿರಿ: ಪಟ್ಟಣದಲ್ಲಿ ಹಮ್ಮಿಕೊಂಡಿರುವ ಯುಡಿಜಿ ಅವೈಜ್ಞಾನಿಕ ಮತ್ತು ಕಾಮಗಾರಿ ವಿಳಂಬದಿಂದಾಗಿ ಜನತೆಗೆ ಬಹಳಷ್ಟು ತೊಂದರೆಯಾಗುತ್ತಿದೆ ಎಂದು ಮಾಜಿ ಶಾಸಕ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ತಮ್ಮ ಸ್ವಗೃಹದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನ ಅವಧಿಯಲ್ಲಿ 49 ಕೋಟಿ ವೆಚ್ಚದಲ್ಲಿ ಪಟ್ಟಣದ ಅಭಿವೃದ್ಧಿಗಾಗಿ ಹೈಟೆಕ್ ಟೆಕ್ನಾಲಜಿಯ ಯುಜಿಡಿ ಕಾಮಗಾರಿಯಲ್ಲಿ ಮಂಜೂರು ಮಾಡಲಾಗಿತ್ತು, ಆದರೆ ಇಂದು ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿರುವ ಸೂಚನೆಗಳ ಪ್ರಕಾರ ನಡೆಯುತ್ತಿಲ್ಲ, ಕಾಮಗಾರಿ ಗುಣಮಟ್ಟದ ಬಗ್ಗೆ ಸರಿಯಾಗಿ ಗಮನಹರಿಸುತ್ತಿಲ್ಲ, ಮ್ಯಾನ್ ಹೋಲ್ ಗಳ ಕ್ಯೂರಿಂಗ್ ಸರಿಯಾಗಿ ಮಾಡುತ್ತಿಲ್ಲ, ಗುಂಡಿಗಳನ್ನು ಅಗೆದು ಪೈಪ್ ಗಳನ್ನು ಅಳವಡಿಸಿದ ನಂತರ ಸಮರ್ಪಕವಾಗಿ ಗುಂಡಿಗಳನ್ನು ಮುಚ್ಚದೇ ಪಟ್ಟಣದ ರಸ್ತೆಗಳೆಲ್ಲಾ ಗುಂಡಿಮಯವಾಗಿವೆ. ಇದರಿಂದ ವಾಹನಗಳು ಗುಂಡಿಗಳಲ್ಲಿ ಸಿಲುಕಿಕೊಂಡು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂಬುದಾಗಿ ಬಹಳಷ್ಟು ಆರೋಪ ಕೇಳಿ ಬರುತ್ತಿದ್ದು, ಸಂಬಂಧಪಟ್ಟವರು ಆದಷ್ಟು ಬೇಗ ಇದರ ಬಗ್ಗೆ ಗಮನ ಹರಿಸಿ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕಿದೆ ಎಂದರು. ನಂತರ ಯುಜಿಡಿ ಇಂಜಿನಿಯರ್ ಗೆ ಕರೆ ಮಾಡಿ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ನಿಮ್ಮ ಅಧ್ಯಕ್ಷ ರಾಜೂಗೌಡರನ್ನು ಕರೆಸಿ ಸ್ಥಳ ಪರಿಶೀಲನೆ ಮಾಡಿಸಬೇಕಾಗುತ್ತದೆ ಎಂದು ತಾಕೀತು ಮಾಡಿದರು.
ಜನಗಣತಿ ವರದಿ ಬಹಿರಂಗ ಮಾಡಿ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜು ಅಧ್ಯಕ್ಷರಾಗಿದ್ದಾಗ ಜನಗಣತಿ ಕಾರ್ಯ ಮಾಡಿದ್ದು, ಇದಕ್ಕೆ ಸುಮಾರು 200 ಕೋಟಿಗೂ ಅಧಿಕ ಹಣ ವ್ಯಯ ಮಾಡಿದ್ದು, ಈ ವರದಿಯನ್ನು ಸರ್ಕಾರ ಕೂಡಲೇ ಬಹಿರಂಗ ಮಾಡಬೇಕು. ಜನಗಣತಿ ಆಧಾರದ ಮೇಲೆ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಂಶಗಳನ್ನು ಪರಿಗಣಿಸಿ ತಳ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು, ಸಿದ್ದರಾಮಯ್ಯನವರ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು 2 ಕೆಜಿಗೆ ಇಳಿಸಿದ್ದು, ಬಡವರ ಅನ್ನವನ್ನು ಸರ್ಕಾರ ಕಿತ್ತುಕೊಂಡಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಲಾ ಕಾಲೇಜುಗಳ ಆರಂಭಕ್ಕೆ ಸರ್ಕಾರ ಆತುರದ ನಿರ್ಧಾರ ಮಾಡಬಾರದು. ತಜ್ಞರ ಸೂಚನೆಗಳನ್ನು ಪಾಲಿಸಿ ನಿರ್ಧರಿಸಬೇಕಿದೆ, ಯಾವುದೇ ಉದಾಸೀನ ಮನೋಭಾವ ಬೇಡ, ನಮಗೆ ಮಕ್ಕಳ ಆರೋಗ್ಯವೇ ಮುಖ್ಯ, ನಮ್ಮ ತಾಲೂಕಿನ ಬಡ ಕುಟುಂಬದಿಂದ ಬಂದ ಪಟ್ಟಣದ ಕಾರ್ಡಿಯಲ್ ಶಾಲೆಯ ವಿದ್ಯಾರ್ಥಿನಿ ಹರ್ಷಿತಾ ರಾಜ್ಯಕ್ಕೇ ಟಾಪರ್ ಆಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ, ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿನಿ ಪಾವತಿಸಿರುವ ಶಾಲಾ ಶುಲ್ಕವನ್ನು ಹಿಂದಿರುಗಿಸಿರುವುದು ಶ್ಲಾಘನೀಯ ಎಂದರು.
ಮೇಕೆ ದಾಟು ಯೋಜನೆಯನ್ನು ನಾವು ಮಾಡಲೇ ಬೇಕು, ನಮ್ಮ ನೆಲ ಜಲ ಜನರ ಹಿತ ಕಾಪಾಡಲು ನಾವು ಸದಾ ಬದ್ಧವಾಗಿರಬೇಕು ಎಂದರು.
ಬಡವರ ಸೌಲಭ್ಯ ಕಸಿದರೆ ಸತ್ತ ಹೆಣದ ಮೇಲಿನ ಊಟ ಮಾಡಿದಂತೆ. ಗಂಗಾ ಕಲ್ಯಾಣ ಯೋಜನೆ ಬಡ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಜಾರಿಯಾದ ನೀರಾವರಿ ಯೋಜನೆಯಾಗಿದ್ದು, ಇದೊಂದು ಪುಣ್ಯದ ಕೆಲಸ, ಇದರಲ್ಲೂ ಕಮಿಷನ್ ಹೊಡೆಯಲು ನೋಡುವುದು ಮಹಾಪಾಪ, ಜಿಲ್ಲೆಯ ಮಧುಗಿರಿ- ಪಾವಗಡ ತಾಲೂಕುಗಳಲ್ಲಿ ಮಟ್ಕಾ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಹಳ್ಳಿಗಳಲ್ಲಿ ಅಕ್ರಮ ಮದ್ಯ ಪ್ರಕರಣ ತಾಂಡವವಾಡುತ್ತಿವೆ. ಬಹಳಷ್ಟು ಕಳ್ಳತನ ಪ್ರಕರಣ ಮತ್ತು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜಜ್ಯ ಪ್ರಕರಣ ನಿರಂತರವಾಗಿ ವರದಿಯಾಗುತ್ತಿರುವುದು ಬೇಸರದ ಸಂಗತಿ, ಇದರ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದರು.
ಸಿ.ಟಿ.ರವಿ ನಾಲಿಗೆಯನ್ನು ಇಟ್ಟಿಗೆಯಿಂದ ಉಜ್ಜಬೇಕು
ಇಂಡಿಯಾ ಎಂದರೆ ಇಂದಿರಾ ಎಂಬಂತೆ ಎಂದು ಪ್ರಪಂಚದ ದೇಶಗಳು ನೆನೆಸಿಕೊಳ್ಳುತ್ತಿವೆ, ದೇಶದ ಪ್ರಧಾನ ಮಂತ್ರಿಗಳಲ್ಲೇ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಹೆಸರು ಇಂದಿರಾರವರದ್ದು, ಈಗಿನ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸಲು ಹೊರಟಿಸುವುದು ಸಣ್ಣತನದ ಪರಮಾವಧಿ, ಬಿಜೆಪಿ ಸರ್ಕಾರ ನೂತನ ಯೋಜನೆಗಳನ್ನು ಜಾರಿಗೆ ತಂದು ಹೊಸ ಹೆಸರುಗಳನ್ನಿಡಲಿ ಯಾರೂ ಬೇಡ ಅನ್ನುವುದಿಲ್ಲ, ಆರ್ ಎಸ್ ಎಸ್ ಪ್ರಭಾವದಿಂದಾಗಿ ಸಿ.ಟಿ.ರವಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದು, ಈ ಗಿರಾಕಿ ಸ್ವಾತಂತ್ರ್ಯ ಬಂದಾಗ ಹುಟ್ಟೇ ಇರಲಿಲ್ಲ, ಇವರ ನಾಲಿಗೆಯನ್ನು ಇಟ್ಟಿಗೆಯಿಂದ ಉಜ್ಜಿ ಪಾವನ ಮಾಡಬೇಕು ಎಂದು ರಾಜಣ್ಣ ಆಕ್ರೋಶ ಹೊರ ಹಾಕಿದರು.
Comments are closed.