ಕುಣಿಗಲ್: 2023 ಕ್ಕೆ ಕುಣಿಗಲ್ ನಲ್ಲಿ ಜೆಡಿಎಸ್ ಶಾಸಕರು ಹಾಗೂ ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ನಿಟ್ಟಿನಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು ಶ್ರಮಿಸಬೇಕೆಂದು ತಾಲೂಕು ಜೆಡಿಎಸ್ ನೂತನ ಅಧ್ಯಕ್ಷ ಬಿ.ಎನ್.ಜಗದೀಶ್ ತಿಳಿಸಿದರು.
ಶುಕ್ರವಾರ ಪಟ್ಟಣದಲ್ಲಿ ನಡೆದ ಜೆಡಿಎಸ್ ಹಿರಿಯ ಮುಖಂಡರ ಸಭೆ ಹಾಗೂ ಹೊಸ ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ಘೋಷಣೆಯಾದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿ, ತಾಲೂಕಿನಲ್ಲಿ ಹಿಂದೆ ಇದ್ದ ಸಚ್ಚಾರಿತ್ರ ರಾಜಕಾರಣ ಮರೆಯಾಗಿದೆ, ದ್ವೇಷಪೂರಿತ ರಾಜಕಾರಣ ವ್ಯವಸ್ಥೆಗೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಒತ್ತು ನೀಡಿವೆ. ಈ ಪಕ್ಷಗಳ ದೌರ್ಜನ್ಯವನ್ನು ಸಮರ್ಥವಾಗಿ ನಿಭಾಯಿಸಿ ಮುಂದಿನ ಜಿಪಂ, ತಾಪಂ ಚುನಾವಣೆ ಸೇರಿದಂತೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲಾ ಕಾರ್ಯಕರ್ತರು ಸಹಕಾರ ನೀಡಬೇಕೆಂದರು.
ಮಾಜಿ ಸಚಿವ, ತಾಲೂಕು ಜೆಡಿಎಸ್ ವರಿಷ್ಠ ಡಿ.ನಾಗರಾಜಯ್ಯ, ತಾಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತರು ಉದಾಸಿನ ಮನೋಭಾವ ತೋರುವುದರಿಂದ ಸಂಘಟನೆ ಉತ್ತಮವಾಗಿದ್ದರೂ ಪಕ್ಷದ ಕಾರ್ಯಕರ್ತರು ಅಧಿಕಾರಕ್ಕೆ ಬರುತ್ತಿಲ್ಲ, ಉದಾಸೀನ ತೊರೆದು ಉತ್ಸಾಹ, ಹುಮ್ಮಸ್ಸಿನಿಂದ ಸಂಘಟಿತವಾಗಿ ಶ್ರಮಿಸಿದರೆ ತಾಲೂಕಿನ ಎಲ್ಲಾ ಹಂತದಲ್ಲೂ ಜೆಡಿಎಸ್ ಅಧಿಕಾರ ಹಿಡಿಯಬಹುದು, ಜಿಲ್ಲೆಯಲ್ಲೂ ಉತ್ತಮ ಸಾಧನೆ ಮಾಡಬಹುದು ಎಂದರು.
ಜಿಪಂ ಮಾಜಿ ಅಧ್ಯಕ್ಷ ಡಾ.ರವಿಬಾಬು, ಡಿ.ನಾಗರಾಜಯ್ಯನವರು ಶಾಸಕರಾಗಿದ್ದಾಗ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ ಮಾರ್ಕೋನಹಳ್ಳಿ ಜಲಾಶಯಕ್ಕೆ ನೀರು ನಿಗದಿ ಮಾಡಿದ್ದು, ಆದರೆ ಈಗಿನ ಶಾಸಕರು ವಾಸ್ತವ ಮರೆಮಾಚಿ ನಾವು ಮಾಡಿದ್ದು ನಾವು ಮಾಡಿದ್ದು ಎಂದು ಸುಳ್ಳು ಹೇಳಿಕೆಗಳ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ. ಸರ್ಕಾರದ ಮಟ್ಟದಲ್ಲಿ ದಾಖಲೆಗಳಿವೆ ಪರಿಶೀಲಿಸಿ ನೋಡಲಿ, ಡಿ.ನಾಗರಾಜಯ್ಯನವರು ಮಾಡಿದ ಅಭಿವೃದ್ಧಿ ಕಾರ್ಯಗಳ ಅನುದಾನವನ್ನು ಮೂರು ವರ್ಷ ಕಾಲ ಮಾಡಿದ್ದಾರೆ ಹೊರತು ಇವರು ಸ್ವಂತವಾಗಿ ಏನು ಮಾಡಿಲ್ಲ. ಕೇವಲ ಫೇಸ್ ಬುಕ್ ನಲ್ಲಿ ಪುಕ್ಕಟ್ಟೆ ಪ್ರಚಾರ ಗಿಟ್ಟಿಸಿಕೊಂಡು ಸರ್ಕಾರದಿಂದ ಬರುವ ಅನುದಾನ ತರದೆ ನಿರ್ಲಕ್ಷ್ಯ ವಹಿಸಿರುವ ಕಾರಣ ಕ್ಷೇತ್ರದ ಅಭಿವೃದ್ಧಿ ಕಾರ್ಯ 10 ವರ್ಷ ಹಿಂದಕ್ಕೆ ಹೋಗಿದೆ. ತಾಲೂಕಿನಲ್ಲಿ ಜೆಡಿಎಸ್ ಸದೃಢವಾಗಿದ್ದು, ಕಾರ್ಯಕರ್ತರು ಒಮ್ಮತದಿಂದ ಶ್ರಮಿಸುವ ಮೂಲಕ ಪಕ್ಷಕ್ಕೆ ಅಧಿಕಾರ ತರುವ ಜೊತೆಯಲ್ಲಿ ತಾವು ಅಧಿಕಾರ ಹೊಂದಬೇಕೆಂದರು.
ಜಿಲ್ಲಾ ವೀಕ್ಷಕ ಬೆಳ್ಳಿಲೋಕೇಶ್ ಮಾತನಾಡಿ, ಜಗದೀಶ್ ನಾಗರಾಜಯ್ಯನವರ ಮಗನೆಂದು ತಾಲೂಕು ಅಧ್ಯಕ್ಷರನ್ನಾಗಿ ಮಾಡಿಲ್ಲ, ಇಲ್ಲಿ ಕುಟುಂಬ ರಾಜಕಾರಣ ಎಂದು ಟೀಕೆ ಮಾಡುವವರಿದ್ದಾರೆ, ಆದರೆ ಸಂಘಟನಾತ್ಮಕವಾಗಿ ಶ್ರಮಿಸುವ ಜೊತೆಯಲ್ಲಿ ವಿರೋಧ ಪಕ್ಷಗಳು ಒಡ್ಡುವ ಸವಾಲಿಗೆ ಎದೆಯೊಡ್ಡಿ ನಿಲ್ಲುವ ಸಾಮಾರ್ಥ್ಯ ಇರುವ ಕಾರಣ ಸ್ಥಾನ ನೀಡುವ ಜೊತೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ, ಅದನ್ನು ಪೂರೈಸಬೇಕೆಂದರು.
22 ವರ್ಷಗಳ ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ಪಕ್ಷ ಮುನ್ನಡೆಸಿದ ನಿರ್ಗಮಿತ ಅಧ್ಯಕ್ಷ ಕೆ.ಎಲ್.ಹರೀಶ್‌ಗೆ ಸನ್ಮಾನಿಸಲಾಯಿತು. ಜಿಲ್ಲಾಧ್ಯಕ್ಷ ಆಂಜನಪ್ಪ, ಪ್ರಮುಖರಾದ ಗಂಗಣ್ಣ, ದೇವರಾಜ, ಹಾಲನೂರು ಅನಂತಕೃಷ್ಣ, ಸೊಗಡು ವೆಂಕಟೇಶ, ಕೆಂಪರಾಜು, ರಂಗನಾಥ, ಕಾಮನಹಳ್ಳಿ ರಾಮಣ್ಣ, ಶಿವಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಹರೀಶ್ ನಾಯಕ, ರಾಮಣ್ಣ, ಎಪಿಎಂಸಿ ಅಧ್ಯಕ್ಷ ಹೇಮರಾಜು ಇತರರು ಇದ್ದರು.
ಕುಮಾರಸ್ವಾಮಿಯನ್ನು ಸಿಎಂ ಮಾಡಲು ಶ್ರಮಿಸಿ: ಜಗದೀಶ್
Get real time updates directly on you device, subscribe now.
Comments are closed.