ಮೃತ ಸಾರಿಗೆ ಸಿಬ್ಬಂದಿಗೆ ಪರಿಹಾರ ವಿತರಿಸಲು ಒತ್ತಾಯ

153

Get real time updates directly on you device, subscribe now.

ತುಮಕೂರು: ಸರಕಾರ ಘೋಷಿಸಿದಂತೆ ಕೊರೊನ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿ ಮೃತಪಟ್ಟ ಸಾರಿಗೆ ಇಲಾಖೆಯ 176 ನೌಕರರಿಗೆ 30 ಲಕ್ಷ ರೂ. ಪರಿಹಾರ ನೀಡುವಂತೆ ವೆಲ್ಫೇರ್‌ ಪಾರ್ಟಿ ಆಫ್‌ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್‌ ಹುಸೇನ್‌ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕೊರೊನ ಮೊದಲನೇ ಅಲೆ ಮತ್ತು ಎರಡನೇ ಅಲೆಯಲ್ಲಿ 176 ಜನರು ಸಾವನ್ನಪ್ಪಿದ್ದಾರೆ. ರಾಜ್ಯದ ಸಾರಿಗೆ ಮಂತ್ರಿಗಳಾಗಿದ್ದ ಲಕ್ಷ್ಮಣಸವದಿ ಅವರು ಕೊರೊನ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿ, ಮೃತರಾದ ಕುಟುಂಬಗಳಿಗೆ ತಲಾ 30 ಲಕ್ಷ ರೂ. ಪರಿಹಾರ ನೀಡುವ ಭರವಸೆ ನೀಡಿದ್ದರು, ಅದರಂತೆ ನಡೆದುಕೊಳ್ಳದಿರುವುದು ಖಂಡನೀಯ ಎಂದರು.
ಸರಕಾರದ ಸಾರಿಗೆ ಮಂತ್ರಿಗಳ ಭರವಸೆ ನಂಬಿ, ತಮ್ಮ ಪ್ರಾಣ ಪಣಕ್ಕಿಟ್ಟು ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ ಹಾಗೂ ವಾಯುವ್ಯ ಸಾರಿಗೆ ನೌಕರರು ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಕರೆದುಕೊಂಡು ಹೋಗುವ ಮೂಲಕ ತಮ್ಮ ಕರ್ತವ್ಯ ನಿರ್ವಹಿಸಿದ್ದು, ಈ ವೇಳೆ ಮೊದಲನೇ ಅಲೆಯಲ್ಲಿ ಕೆಎಸ್‌ಆರ್‌ಟಿಸಿಯ 39, ವಾಯುವ್ಯಸಾರಿಗೆ 32 ಜನರು ಹಾಗೂ ಎರಡನೇ ಅಲೆಯಲ್ಲಿ ಕೆಎಸ್‌ಆರ್‌ಟಿಸಿಯ 57 ಜನರು ಹಾಗೂ ವಾಯುವ್ಯ ಸಾರಿಗೆಯ 48 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು, ಆದರೆ ಸರಕಾರ ಇದುವರೆಗೂ ಘೋಷಣೆ ಮಾಡಿದ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ, ಕೆಎಸ್‌ಆರ್‌ಟಿಸಿ ಮಾತ್ರ 7 ಜನರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ. ನೀಡಿ ಕೈತೊಳೆದುಕೊಂಡಿದೆ. ಸರಕಾರ ಕೂಡಲೇ ಪರಿಹಾರದ ಹಣ ಬಿಡುಗಡೆ ಮಾಡದಿದ್ದರೆ ನ್ಯಾಯಾಲಯದ ಮೆಟ್ಟಿಲು ಹತ್ತುವ ಕೆಲಸವನ್ನು ವೆಲ್ಫೇರ್‌ ಪಾರ್ಟಿ ಆಫ್‌ ಇಂಡಿಯಾ ಅನಿವಾರ್ಯವಾಗಿ ಮಾಡಬೇಕಾಗುತ್ತದೆ ಎಂದು ರಾಜ್ಯಾಧ್ಯಕ್ಷ ತಾಹೀರ್‌ ಹುಸೇನ್‌ ತಿಳಿಸಿದರು.
ಕೊರೊನ ಸಂದರ್ಭದಲ್ಲಿ ಸಾರಿಗೆ ನೌಕರರ ರೀತಿಯೇ ಆರೋಗ್ಯ, ಪೊಲೀಸ್‌, ಕಂದಾಯ, ಪತ್ರಕರ್ತರು ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದು, ಅವರಲ್ಲಿಯೂ ಕೆಲವರು ಮೃತರಾಗಿದ್ದಾರೆ. ಆದರೆ ಯಾರೊಬ್ಬರಿಗೂ ಸರಕಾರ ಪರಿಹಾರ ಒದಗಿಸುತ್ತಿಲ್ಲ, ಹೀಗಾಗದರೆ ಮುಂದೆ ಎದುರಾಗುವ ಮೂರನೇ ಅಲೆಯಲ್ಲಿ ಸರಕಾರದ ನಿರ್ದೇಶನ ಪಾಲಿಸಲು ಯಾರು ತಾನೇ ಮುಂದೆ ಬರಲು ಸಾಧ್ಯ ಎಂದು ಪ್ರಶ್ನಿಸಿದ ಅವರು ಸರಕಾರದ ಭರವಸೆ ನಂಬಿ ಕೆಲಸ ಮಾಡಿದ ಕುಟುಂಬಗಳು ಇಂದು ಬೀದಿ ಪಾಲಾಗಿವೆ. ಹಾಗಾಗಿ ಸರಕಾರ ಸಂತ್ರಸ್ಥ ಕುಟುಂಬಗಳ ನೆರವಿಗೆ ಬರಬೇಕಾಗಿದೆ ಎಂದು ಆಗ್ರಹಿಸಿದರು.
ಕೊರೊನ ಮೊದಲನೇ ಅಲೆ, ಎರಡನೇ ಅಲೆಯಲ್ಲಿ ಸರಕಾರದ ನಿರ್ಲಕ್ಷದ ಫಲವಾಗಿ ಸಾವಿರಾರು ಕುಟುಂಬಗಳು ತಮ್ಮ ಆಪ್ತರನ್ನು ಕಳೆದುಕೊಂಡಿವೆ. ಅಲ್ಲದೆ ರಾಜ್ಯದ 11 ಜಿಲ್ಲೆಗಳಲ್ಲಿ ನೆರೆ ಬಂದು ಜನರು ತುತ್ತು ಅನ್ನಕ್ಕು ಪರದಾಡುವಂತಹ ಸ್ಥಿತಿ ಇದೆ. ಹೀಗಿದ್ದು ಸಹ ರಾಜ್ಯ ಸರಕಾರ ಸಿಎಂ ಕುರ್ಚಿ ಬದಲಾವಣೆ, ಖಾತೆ ಹಂಚಿಕೆಯಂತಹ ಕಾರ್ಯದಲ್ಲಿ ಮುಳುಗಿ ಜನರನ್ನು ಕಡೆಗಣಿಸಿದೆ, ಇದು ಒಳ್ಳೆಯ ಸರಕಾರದ ನಡವಳಿಕೆಯಲ್ಲ, ಕೂಡಲೇ ಸಂತ್ರಸ್ಥರ ನೆರವಿಗೆ ಸರಕಾರ ಬರಬೇಕೆಂಬುದು ವೆಲ್ಫೇರ್‌ ಪಾರ್ಟಿ ಆಫ್‌ ಇಂಡಿಯಾದ ಒತ್ತಾಯವಾಗಿದೆ ಎಂದು ತಾಹೀರ್‌ ಹುಸೇನ್‌ ನುಡಿದರು.
ವೆಲ್ಫೇರ್‌ ಪಾರ್ಟಿ ಅಫ್‌ ಇಂಡಿಯಾದ ಜಿಲ್ಲಾಧ್ಯಕ್ಷ ತಾಜುದ್ದೀನ್‌ ಷರೀಫ್‌ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಕೊರೊನ ಮೊದಲನೇ ಅಲೆ ಮತ್ತು ಎರಡನೇ ಅಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರ ನಡೆಸುವ ಮೂಲಕ ಸಂಕಷ್ಟವನ್ನು ಹತ್ತಿರದಿಂದ ನೋಡಿದ್ದೇವೆ. ಹಾಗಾಗಿ ಮೂರನೇ ಅಲೆ ತಡೆಯುವ ಕುರಿತು ಜಿಲ್ಲಾಡಳಿತ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಯುದ್ಧ ಕಾಲದಲ್ಲಿ ಶಸ್ತ್ರಭ್ಯಾಸ ಎನ್ನುವುದಕ್ಕೆ ಬದಲಾಗಿದೆ. ಈ ಹಿಂದೆ ಜಿಲ್ಲಾಡಳಿತದೊಂದಿಗೆ ಕೈಜೊಡಿಸಿ ಕೆಲಸ ಮಾಡಿದ ಸಂಘ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಹೆಚ್ಚು ಸೂಕ್ತವೆಂದರು.
ಸುದ್ದಿಗೋಷ್ಠಿಯಲ್ಲಿ ವೆಲ್ಫೇರ್‌ ಪಾರ್ಟಿ ಆಫ್‌ ಇಂಡಿಯಾದ ಮಾಧ್ಯಮ ಕಾರ್ಯದರ್ಶಿ ಅಜೀಜ್‌ ಜಾಗಿರ್ದಾರ್‌, ಜಿಲ್ಲಾ ಕಾರ್ಯಾಧ್ಯಕ್ಷ ಅಫ್ಜಲ್‌ ಸೇರಿದಂತೆ ಹಲವರು ಇದ್ದರು.

Get real time updates directly on you device, subscribe now.

Comments are closed.

error: Content is protected !!