ಮೂಳೆ ಇಲ್ಲದ ನಾಲಿಗೆ ಈ ಮಾತು ತರವೇ?

ಸಂಸದ ಬಸವರಾಜ್‌, ಶಾಸಕ ಶ್ರೀನಿವಾಸ್‌ ನಡುವೆ ನೀನಾ ನಾನಾ ಫೈಟ್‌- ಏಕವಚನ, ಅಶ್ಲೀಲ ಪದಗಳ ಬಳಕೆ- ಜನರ ಎದುರೇ ನಾಯಕರ ಕದನ

907

Get real time updates directly on you device, subscribe now.

ತುಮಕೂರು: ನೀನು ಅಯೋಗ್ಯ, ಇಲ್ಲ ನೀನು ಅಯೋಗ್ಯ, ನಿನಗೆ ಮಾನ ಮರ್ಯಾದೆ ಇಲ್ಲ, ಸುಳ್ಳು ಬೊಗಳ್ತೀಯಾ.. ಹೀಗೆ ಆಕ್ರೋಶದ ಅಣಿಮುತ್ತುಗಳು ಆ ಇಬ್ಬರು ನಾಯಕರ ಬಾಯಿಂದ ಹೊರ ಹೊಮ್ಮುತ್ತಿದ್ದರೆ ಅಲ್ಲಿದ್ದ ಜನರು ಸುಮ್ಮನೆ ನೋಡುತ್ತಾ ನಿಂತು ಬಿಟ್ಟಿದ್ದರು.
ಹೀಗೆ ಒಬ್ಬರನ್ನೊಬ್ಬರು ನಿಂದಿಸುತ್ತಾ, ನೀನು ಅಂಥವನು, ನೀನು ಇಂಥವನು ಎಂದು ಏಕವಚನದಲ್ಲೇ ಕದನಕ್ಕಿಳಿದಿದ್ದು ಬೇರೆ ಯಾರು ಅಲ್ಲ, ಅದು ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಜಿ.ಎಸ್‌.ಬಸವರಾಜು ಹಾಗೂ ಗುಬ್ಬಿ ಕ್ಷೇತ್ರದ ಶಾಸಕ ಎಸ್‌.ಆರ್‌.ಶ್ರೀನಿವಾಸ್.
ಗುಬ್ಬಿ ತಾಲೂಕು ಚೇಳೂರು ಹೋಬಳಿ ಸಿ.ನಂದಿಹಳ್ಳಿ ಗ್ರಾಮದಲ್ಲಿ ನಿರ್ಮಾಣವಾದ ಉಪ ವಿದ್ಯುತ್‌ ವಿತರಣಾ ಕೇಂದ್ರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಿದ ಸಂಸದ ಜಿ.ಎಸ್‌.ಬಸವರಾಜು ಮತ್ತು ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ನಂತರದಲ್ಲಿ ಆರಾಮಾವಾಗಿ ಕುಳಿತ ಮಾತು ಆರಂಭಿಸಿದ ಸಂಸದರು ಈ ಸ್ಥಳದಲ್ಲಿ ಡ್ಯಾಂ ನಿರ್ಮಾಣ ಮಾಡುವುದಾಗಿ, ಸುಮಾರು 500 ಎಕರೆ ಪ್ರದೇಶ ವಶಕ್ಕೆ ಪಡೆದು ಒಂದು ಎಕರೆಗೆ ಕೋಟಿ ರೂ. ಪರಿಹಾರ ಒದಗಿಸುವ ಮಾತುಗಳಾಡಿದರು.
ಈ ಮಾತನ್ನು ಗಮನಿಸಿದ ಶಾಸಕ ಶ್ರೀನಿವಾಸ್‌ ಸಂಸದರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡು ಇಲ್ಲಿನ ರೈತರಿಗೆ ಬರಿ ಸುಳ್ಳು ಆಶ್ವಾಸನೆ ನೀಡುತ್ತಾ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವಾಚ್ಯ ಶಬ್ದಗಳಿಂದ ಪರಸ್ಪರ ಇಬ್ಬರು ನಿಂದಿಸಿಕೊಂಡು ಪರಸ್ಪರ ಕೈ ಮಿಲಾಯಿಸುವ ಹಂತಕ್ಕೆ ಬರುತ್ತಾರೆ, ಆಗ ಸ್ಥಳೀಯರು ಮಧ್ಯ ಪ್ರವೇಶಿಸಿ ಇಬ್ಬರನ್ನೂ ಸಮಾಧಾನ ಪಡಿಸುತ್ತಾರೆ.
ಇಷ್ಟೇ ಅಲ್ಲದೆ ಇಬ್ಬರು ನಾಯಕರು ಏಕವಚನದಲ್ಲಿ ಅಶ್ಲೀಲ ಪದಗಳನ್ನು ಬಳಸಿ ಬೈದಾಡಿಕೊಂಡು ಅಪಹಾಸ್ಯಕ್ಕೆ ಒಳಗಾಗಿದ್ದಾರೆ. ಜನಪ್ರತಿನಿಧಿಗಳು ಜನರ ಪಾಲಿಗೆ ಆದರ್ಶ ವ್ಯಕ್ತಿಗಳಾಗಬೇಕು, ಜನರು ನಾಯಕರನ್ನು ಹಿಂಬಾಲಿಸುವ ರೀತಿಯಲ್ಲಿ ನಡೆದುಕೊಳ್ಳಬೇಕು, ಆದರೆ ಜನ ಪ್ರತಿನಿಧಿಗಳು ಜನರ ಎದುರೇ ಹೀಗೆ ಪರಸ್ಪರ ಬೈದಾಡಿಕೊಂಡು ನೀನಾ ನಾನಾ ಎಂಬಂತೆ ಕುಸ್ತಿಗೆ ಬಿದ್ದು ತಮ್ಮ ಮರ್ಯಾದೆಯನ್ನು ತಾವೇ ಹರಾಜು ಹಾಕಿಕೊಂಡಿದ್ದಾರೆ.
ಶಾಸಕ ಶ್ರೀನಿವಾಸ್‌ ಗುಬ್ಬಿ ಕ್ಷೇತ್ರದಲ್ಲಿ ಗೆದ್ದು ಒಂದಷ್ಟು ಅಭಿವೃದ್ಧಿ ಕಾರ್ಯ ಮಾಡುತ್ತಾ ಜನ ನಾಯಕರೆನಿಸಿಕೊಂಡಿದ್ದಾರೆ, ಏನೇ ಸಮಸ್ಯೆ, ಅಭಿವೃದ್ಧಿ ವಿಚಾರಗಳಿದ್ದಲ್ಲಿ ಸಂಸದರೊಟ್ಟಿಗೆ ಚರ್ಚೆ ನಡೆಸಬಹುದಿತ್ತು, ನಾಲ್ಕು ಗೋಡೆ ಮಧ್ಯೆ ಕುಳಿತು ಮಾತನಾಡಿದರೆ ಎಲ್ಲಾ ಸರಿ ಹೋಗುತ್ತಿತ್ತು, ಅದು ಬಿಟ್ಟು ಏಕಾಏಕಿ ಜನರ ಎದುರೇ ಸಂಸದರನ್ನು ಬಾಯಿಗೆ ಬಂದಂತೆ ಬೈದಿದ್ದು ಸರಿಯಲ್ಲ, ಹಿರಿಯರಾದ ಸಂಸದರನ್ನು ಗೌರವದಿಂದ ಕಾಣಬೇಕಿತ್ತು, ಸಂಸದರನ್ನು ಏಕ ವಚನದಲ್ಲಿ ಅಶ್ಲೀಲ ಪದ ಬಳಸಿ ಮಾತನಾಡಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಬಿಜೆಪಿ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದ್ದಾರೆ.
ಇನ್ನು ಸಂಸದ ಜಿ.ಎಸ್‌.ಬಸವರಾಜು ಅವರು ಕೂಡ ಶಾಸಕರ ಬಗ್ಗೆ ಮಾತನಾಡಬಾರದಿತ್ತು, ಹಿರಿಯರಾದ ಬಸವರಾಜು ಕಿರಿಯರಾದ ಶ್ರೀನಿವಾಸ್‌ ಅವರನ್ನು ಕೂರಿಸಿಕೊಂಡು ಮಾತನಾಡಬೇಕಿತ್ತು, ಅದು ಬಿಟ್ಟು ಜನರ ಎದುರೇ ಶ್ರೀನಿವಾಸ್‌ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು ತಪ್ಪು ಎಂಬುದು ಜೆಡಿಎಸ್‌ ಕಾರ್ಯಕರ್ತರ ವಾದ.
ಅದೇನೆ ಇರಲಿ, ಜನರಿಗೆ ಮಾದರಿಯಾಗಬೇಕಿದ್ದ ನಾಯಕರಿಬ್ಬರು ಜನರ ಎದುರು ಕಿತ್ತಾಡಿಕೊಂಡು ನಾಲಿಗೆ ಹರಿ ಬಿಟ್ಟಿರುವುದು ನಾಚಿಕೆಗೇಡಿನ ಸಂಗತಿ, ದ್ವೇಷಕ್ಕೆ ಬಿದ್ದವರಂತೆ ಪರಸ್ಪರ ನಿಂದನೆ ಮಾಡಿಕೊಂಡಿರುವುದು ಯಾವ ಪುರುಷಾರ್ಥಕ್ಕೆ, ಇಂಥ ಜನ ನಾಯಕರು ನಾಗರಿಕ ಸಮಾಜಕ್ಕೆ ಯಾವ ಸಂದೇಶ ಕೊಡುತ್ತಾರೆ, ಮೂಳೆ ಇಲ್ಲದ ನಾಲಿಗೆ… ಈ ಮಾತು ತರವೇ? ಎಂದು ಮತ ಹಾಕಿ ಗೆಲ್ಲಿಸಿದ ಜನರೇ ಕೇಳುವಂತಾಗಿದೆ.

Get real time updates directly on you device, subscribe now.

Comments are closed.

error: Content is protected !!