ಕುಣಿಗಲ್: ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಸ್ವಾತಂತ್ರ ಹೋರಾಟಗಾರ ಕಳೆದ ಎರಡು ದಶಕಗಳಿಂದಲೂ ತನ್ನ ಜಮೀನಿನ ದಾಖಲೆ ಸರಿಪಡಿಸಿಕೊಳ್ಳಲಾಗದೆ 98ನೇ ವಯಸ್ಸಿನಲ್ಲೂ ಕಂದಾಯ ಇಲಾಖಾ ಕಚೇರಿಗಳ ಎಡ ತಾಕುತ್ತಾ ತಾನು ಬದುಕಿರುವ ಅವಧಿಯಲ್ಲಾದರೂ ತನ್ನ ಭೂಮಿ ದಾಖಲೆ ಸರಿಹೋಗುವುದೆ ಎಂದು ಕನವರಿಸುತ್ತಿದ್ದಾರೆ.
ತಾಲೂಕಿನ ಅಮೃತೂರು ಹೋಬಳಿಯ ಚಂದನಹಳ್ಳಿ ಗ್ರಾಮದ ವೈ.ಸಿ.ನಂಜುಂಡಯ್ಯನವರು ಸ್ವಾತಂತ್ರ ಹೋರಾಟದ ವಿವಿಧ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಗೋವಾ ವಿಮೋಚನೆ ಚಳವಳಿಯಲ್ಲಿ ಗುಂಡೇಟು ತಿಂದು ಹಲವು ತಿಂಗಳು ಆಸ್ಪತ್ರೆಯಲ್ಲಿ ಕಳೆದು, ತುರ್ತು ಪರಿಸ್ಥಿತಿಯಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಅಡ್ವಾನಿ ಸೇರಿದಂತೆ ಇತರರ ಜೊತೆ ಜೈಲು ವಾಸ ಅನುಭವಿಸಿ, ಸ್ವಾತಂತ್ರ ಹೋರಾಟಗಾರರಿಗೆ ನೀಡುವ ಸವಲತ್ತನ್ನು ಧಿಕ್ಕರಿಸಿ, ಇತ್ತೀಚೆಗೆ ಇವರ ಸೇವೆ ಗುರುತಿಸಿ ಬಿಜೆಪಿ ಮುಖಂಡರು ಐದು ಲಕ್ಷ ರೂ. ಚೆಕ್ ನೀಡಿ ಸನ್ಮಾನಿಸಲು ಮುಂದಾದಾಗ ಚೆಕ್ ತಿರಸ್ಕರಿಸಿ ಸನ್ಮಾನ ಸ್ವೀಕರಿಸಿ ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ.
ವೈ.ಸಿ.ನಂಜುಂಡಯ್ಯನವರಿಗೆ 1970ರಲ್ಲಿ ಅಂದಿನ ಮೈಸೂರು ಸರ್ಕಾರದ ಕೃಷಿ ಇಲಾಖೆ, ಇವರು ಕೃಷಿ ವಿಷಯದಲ್ಲಿ ಎಲ್‌ಎಜಿ ವ್ಯಾಸಂಗ ಮಾಡಿದ್ದರಿಂದ ಇವರ ಜೊತೆ ಇತರೆ 16 ಮಂದಿ ಕೋರ್ಸ್ ಮಾಡಿದ್ದರಿಂದ ಮಾರ್ಕೋನಹಳ್ಳಿ ಅಚ್ಚುಕಟ್ಟು ಪ್ರದೇಶದಲ್ಲಿನ ಅಗ್ರಿಕಲ್ಚರಲ್ ಕಾಲೋನಿಯಲ್ಲಿ ಪ್ರತಿಯೊಬ್ಬರಿಗೂ ಹನ್ನೊಂದುವರೆ ಎಕರೆ ಜಮೀನು ಮಂಜೂರು ಮಾಡಿ, ಕೃಷಿ ಚಟುವಟಿಕೆ ಕೈಗೊಳ್ಳಲು 3,200 ರೂ. ಸಹಾಯ ಧನವೂ ನೀಡಿತ್ತು. ಅದರಂತೆ ಇವರು ಸರ್ಕಾರದ ಪ್ರೋತ್ಸಾಹದಿಂದ ಕೃಷಿ ಚಟುವಟಿಕೆ ನಡೆಸಿ ಸದರಿ ಎಂ.ಎ.ಕಾಲೋನಿಯಲ್ಲಿ ಮಂಜೂರು ಮಾಡಿದ್ದ ಸರ್ಕಾರಿ ಭೂಮಿಯ ಷರತ್ತು ಪೂರೈಸಿ ಇವರು ಸೇರಿದಂತೆ ಇವರೊಟ್ಟಿಗೆ ಇದ್ದ ಇತರೆ 16 ಮಂದಿಯ ಜಮೀನಿನ ದಾಖಲೆಗಳು ಅವರ ಹೆಸರಿಗೆ ಹಕ್ಕು ದಾಖಲೆ ನೀಡಲಾಯಿತು.
2000-01ನೇ ಸಾಲಿನಲ್ಲಿ ಪಹಣಿ ಗಣಕೀಕರಣದ ಸಮಯದಲ್ಲಿ ಉಂಟಾದ ತಾಂತ್ರಿಕ ದೋಷ, ಅಂದಿನ ಕೆಲ ಕಂದಾಯ ಇಲಾಖಾಧಿಕಾರಿಗಳ ಎಡವಟ್ಟಿನಿಂದ ಇವರ ಹೆಸರಿಗೆ ಇದ್ದ ಭೂಮಿ ಹಕ್ಕು ದಾಖಲೆಯ ಅಸ್ತವ್ಯಸ್ತವಾಯಿತು. ಆದರೆ ಭೂಮಿಯಲ್ಲಿ ಇಂದಿಗೂ ಇವರೆ ಕೃಷಿ ಮಾಡುತ್ತಿದ್ದಾರೆ. ಅಂದಿನಿಂದ ಇವರು ತಮ್ಮ ಭೂ ದಾಖಲೆ ಸರಿಪಡಿಸಿಕೊಡುವಂತೆ ರಾಷ್ಟ್ರೀಯ ಮಾನವಹಕ್ಕು ಆಯೋಗ, ಲೋಕಾಯುಕ್ತ ಎಲ್ಲೆಡೆ ಮನವಿ ಸಲ್ಲಿಸಿದ ಮೇರೆಗೆ ಲೋಕಾಯುಕ್ತರು ಇವರ ಮನವಿ ಆಲಿಸಿ ಕುಣಿಗಲ್ ತಹಶೀಲ್ದಾರ್‌ಗೆ ಇವರ ಆಸ್ತಿಹಕ್ಕು ದಾಖಲಿಸುವಂತೆ 2008ರಲ್ಲಿ ಆದೇಶ ನೀಡಿತು. ಲೋಕಾಯುಕ್ತರಿಗೆ ಪ್ರಮಾಣಪತ್ರ ಸಲ್ಲಿಸಿದ ಅಂದಿನ ತಹಶೀಲ್ದಾರ್ ಪುನಹ 2008-09 ರಲ್ಲಿ ಹೊಸ ಉಳುಮೆ ಚೀಟಿ ನೀಡಿದರು. ಆದರೆ ಹಕ್ಕು ದಾಖಲೆ ಸರಿಪಡಿಸಲಿಲ್ಲ. ಪುನಹ ಲೋಕಾಯುಕ್ತ ಮೊರೆ ಹೋದ ಕಾರಣ 2016ರಲ್ಲಿ ಮತ್ತೊಬ್ಬ ತಹಶೀಲ್ದಾರ್ ಬೇರೊಂದು ಉಳುಮೆ ಚೀಟಿ ನೀಡಿದರೂ ಹಕ್ಕುದಾಖಲೆ ಸರಿಪಡಿಸಿಲ್ಲ.
ಹಿರಿಯ ಸ್ವಾತಂತ್ರ ಹೋರಾಟಗಾರ 97ನೇ ವಯಸ್ಸಿನಲ್ಲಿ ಇಂದಿಗೂ ದಿನಾಲೂ ಬಸ್ಸಿನಲ್ಲಿ ಬಂದು ತಾಲೂಕು ಕಚೇರಿಗೆ ಭೂ ದಾಖಲೆ ಸರಿಪಡಿಸಿಕೊಡುವಂತೆ ಅಧಿಕಾರಿಗಳಿಗೆ ಮನವಿ ನೀಡುವುದು ತಪ್ಪಿಲ್ಲ. ಇಂದಿನ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವೈ.ಸಿ.ಯವರು ದೇಶದ ಸ್ವಾತಂತ್ರಕ್ಕೆ ಹೋರಾಡಿ ನಮ್ಮ ವ್ಯವಸ್ಥೆಬೇಕೆಂದು ಪಡೆದಿದ್ದು ಈಗ ನಮ್ಮ ವ್ಯವಸ್ಥೆಯಲ್ಲಿ ಎಷ್ಟು ತಿರುಗಾಡಿಸುತ್ತಾರೆ. ಹಿರಿಯರು ಎಂದು ನೋಡದೆ ನಮ್ಮ ದಾಖಲೆಗಳು ಸರಿ ಇದ್ದರೂ ಸರಿಪಡಿಸುವ ಕೆಲಸ ಮಾಡುತ್ತಿಲ್ಲ. ಒಟ್ಟಿನಲ್ಲಿ ನಾನು ಜೀವಂತ ಇರುವಷ್ಟುರೊಳಗೆ ನನ್ನ ದಾಖಲೆ ಮಾಡಿಕೊಡುತ್ತಾರಾ, ಆ ದೇವರೆ ಇವರಿಗೆ ಒಳ್ಳೆ ಬುದ್ಧಿ ಕೊಡಬೇಕು ಎನ್ನುತ್ತಾರೆ.
ಈಬಗ್ಗೆ ಹೊಸದಾಗಿ ಬಂದಿರುವ ತಹಶೀಲ್ದಾರ್ ಅವರನ್ನು ಕೇಳಿದರೆ ಅವರ ದಾಖಲೆ ಪರಿಶೀಲಿಸಿ ಶೀಘ್ರದಲ್ಲೆ ಅವರಿಗೆ ನ್ಯಾಯ ಕೊಡಿಸಲಾಗುವುದು ಎಂದಿದ್ದಾರೆ.
ಅಗತ್ಯ ಮಾಹಿತಿಗೆ ಎಲ್‌ಎಜಿ ಕೋರ್ಸ್
ಲೈಸನ್ಸ್ ಅಗ್ರಿಕಲ್ಚರಲ್ ಗ್ರಾಜುಯೇಟ್, ಇದು 1950ರಲ್ಲಿ ಮೈಸೂರು ಸರ್ಕಾರ ಯುವಕರನ್ನು ಕೃಷಿ ಚಟುವಟಿಕೆಗೆ ಪ್ರೋತ್ಸಾಹಿಸಲು ಜಾರಿಗೊಳಿಸಿದ್ದ 4 ವರ್ಷದ ಕೋರ್ಸ್, ಮೆಟ್ರಿಕ್ ಆದ ನಂತರ ಯುವಕರಿಗೆ ಕೃಷಿಯಲ್ಲಿ ತರಬೇತಿ ನೀಡಿ, ತರಬೇತಿ ಪೂರ್ಣಗೊಳಿಸಿದ ನಂತರ ಅವರಿಗೆ ಸರ್ಕಾರವೆ ಜಲಾಶಯದ ವ್ಯಾಪ್ತಿಯಲ್ಲಿ ಕೃಷಿ ಇಲಾಖೆ ಹೆಸರಿನಲ್ಲಿ ಜಮೀನು ಸ್ವಾಧೀನ ಪಡಿಸಿಕೊಂಡು, ಈ ಪದವೀಧರರಿಗೆ ಹಂಚಿಕೆ ಮಾಡಿ, ಪ್ರತಿಯೊಬ್ಬರಿಗೂ ಕೃಷಿ ಕೈಗೊಳ್ಳಲು ಬೇಕಾದ ಉಪಕರಣ ಖರೀದಿಗೆ ಧನಸಹಾಯ ಮಾಡಿ, ಯಶಸ್ವಿಯಾಗಿ ಇವರು ಬೆಳೆ ಬೆಳೆದ ನಂತರದ ಅವಧಿಯಲ್ಲಿ ಇವರ ಹೆಸರಿಗೆ ಭೂಮಿ ದಾಖಲೆ ನೀಡಲಾಗುತ್ತಿತ್ತು, 1970ರಲ್ಲಿ ಒಟ್ಟು 24 ಮಂದಿ ಕೋರ್ಸ್ ಮಾಡಿದ್ದ ಏಳು ಮಂದಿಗೆ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯ ವ್ಯಾಪ್ತಿಯ ಅರ್ಜುನಹಳ್ಳಿ ಕಾಲೋನಿ ಬಳಿ, ಉಳಿಕೆಯವರಿಗೆ ಮಾರ್ಕೋನಹಳ್ಳಿ ಅಗ್ರಕಲ್ಚರಲ್ ಕಾಲೋನಿ (ಎಂ.ಎ.ಕಾಲೋನಿ) ಎಂದು ಚಂದನಹಳ್ಳಿ ಗ್ರಾಮದ ಬಳಿ ನೀಡಲಾಯಿತು.
Comments are closed.