ಕಾಂಗ್ರೆಸ್‌ ಜಿಎಸ್‌ಟಿ ರಾಜಕೀಯ ಮಾಡ್ತಿದೆ: ಖೂಬಾ

371

Get real time updates directly on you device, subscribe now.

ತುಮಕೂರು: ಜಿಎಸ್‌ಟಿ ರಾಜಕೀಯ ಮಾಡುವ ವಿಚಾರವಲ್ಲ, ಆದರೂ ಕಾಂಗ್ರೆಸ್‌ ಪಕ್ಷದವರಿಗೆ ರಾಜಕೀಯ ಮಾಡಲು ಬೇರೆ ಯಾವ ವಿಚಾರವೂ ಸಿಗದ ಕಾರಣ ಜಿಎಸ್‌ಟಿಯನ್ನೆ ಮುಂದಿಟ್ಟು ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಕೇಂದ್ರದ ರಾಸಾಯನಿಕ, ರಸಗೊಬ್ಬರ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್‌ಟಿ ವಿಚಾರದಲ್ಲಿ ಎಲ್ಲ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ಕೊಟ್ಟಿದೆ. ಆದರೂ ಕಾಂಗ್ರೆಸ್‌ನವರು ನಮ್ಮ ಪಾಲಿನ ಜಿಎಸ್‌ಟಿ ಹಣ ಬಂದಿಲ್ಲ ಎಂದು ಹೇಳುವದು ಅರ್ಥಹೀನವಾದುದು ಎಂದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂ.ಡಾ. ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ ಜಿಎಸ್‌ಟಿ ಜಾರಿಗೆ ತರಲು ಸಾಧ್ಯವಾಗಲಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ಜಿಎಸ್‌ಟಿ ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ತರವಲ್ಲ ಎಂದರು.
ಜಿಎಸ್‌ಟಿ ಸಂಬಂಧ ಪ್ರತಿ ತಿಂಗಳು ನಡೆಯುವ ಸಭೆಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಪಾಲ್ಗೊಳ್ಳುವ ಸಚಿವರು ವಿಷಯ ಮಂಡಿಸುತ್ತಾರೆ. ಹೀಗಿರುವಾಗ ವಿನಾ ಕಾರಣ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುವುದು ಸರಿಯಲ್ಲ. ಜಿಎಸ್‌ಟಿ ವಿಚಾರವಾಗಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿಲ್ಲ ಎಂದರು.
ಕೇಂದ್ರದಿಂದ ನನ್ನ ವ್ಯಾಪ್ತಿಗೆ ಒಳಪಡುವ ಇಲಾಖೆಗಳಿಂದ ಕರ್ನಾಟಕ ರಾಜ್ಯಕ್ಕೆ ಸಾಧ್ಯವಾಗುವಷ್ಟು ಕೊಡುಗೆ ನೀಡಲು ಶ್ರಮಿಸುವುದಾಗಿ ರಾಸಾಯನಿಕ, ರಸಗೊಬ್ಬರ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ ಇಂದಿಲ್ಲಿ ತಿಳಿಸಿದರು.
ನನ್ನ ಖಾತೆಗೆ ಫರ್ಟಿಲೈಸರ್‌, ಕಮಿಕಲ್ಸ್ ಹಾಗೂ ಫಾರ್ಮಸಿಟಿಕಲ್‌ ಇಲಾಖೆಗಳು ಒಳಪಡಲಿದ್ದು, ಈಗಾಗಲೇ ರಾಜ್ಯಕ್ಕೆ ಫಾರ್ಮಸಿಟಿಕಲ್‌ ಪಾರ್ಕ್ ಘೋಷಣೆ ಮಾಡಲಾಗಿದೆ. ಮಂಗಳೂರಿನಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪನೆಯಾಗಲಿದೆ ಹಾಗೂ ಅನೇಕ ಕಡೆ ಸೋಲಾರ್‌ ಪಾರ್ಕ್ ಗಳನ್ನು ಸ್ಥಾಪಿಸುವ ಸಂಬಂಧ ಟೆಂಡರ್ ಗಳನ್ನು ಕರೆಯಲಾಗಿದೆ, ರಾಜ್ಯದಲ್ಲಿ ಇಫ್ರೋ ನ್ಯಾನೋ ಟೆಕ್ನಾಲಜಿ ಉತ್ಪಾದಿಸುವ ಪ್ರಕ್ರಿಯೆಯೂ ಪ್ರಾರಂಭವಾಗಿದೆ ಎಂದರು.
ಸಿದ್ದಗಂಗಾ ಮಠ ಪವಿತ್ರವಾದಂತಹ ಸ್ಥಳ, ಇಲ್ಲಿ ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ದಾಸೋಹದ ಮುಖಾಂತರ ವಿದ್ಯಾರ್ಜನೆ ಮಾಡುತ್ತಾ ಅನೇಕ ದಶಮಾನಗಳಿಂದ ಸಿದ್ದಗಂಗಾ ಮಠ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ ನೇತೃತ್ವದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ವಿಶ್ವ ಪ್ರಸಿದ್ದಿಯಾಗಿದೆ ಎಂದರು.
ಇಂತಹ ಮಹಾನ್‌ ಸಂಸ್ಥೆಯ ಎಸ್‌ಐಟಿಯಲ್ಲಿ ನಾನು ಕೂಡ ವಿದ್ಯಾರ್ಥಿಯಾಗಿ ಇಂಜಿನಿಯರಿಂಗ್‌ ಮುಗಿಸಿದ್ದೇನೆ. ಸಿದ್ದಗಂಗಾ ಮಠದಲ್ಲಿ ನನಗೆ ಸಿಕ್ಕಿದ ಸಂಸ್ಕಾರ, ಸಂಸ್ಕೃತಿ ನನ್ನ ಜೀವನದಲ್ಲಿ ಅನೇಕ ಘನ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು ಎಂದರು.
ನರೇಂದ್ರ ಮೋದಿಯವರ ಸಂಪುಟದಲ್ಲಿ ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಪುಣ್ಯ ಕ್ಷೇತ್ರಕ್ಕೆ ಬಂದು ಶ್ರೀಗಳ ಗದ್ದುಗೆ ದರ್ಶನ ಪಡೆದು, ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದು ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಶಕ್ತಿ ನೀಡುವಂತೆ ಪ್ರಾರ್ಥಿಸಿದ್ದೇನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್‌, ಮಾಜಿ ಸಚಿವ ಸೊಗಡು ಶಿವಣ್ಣ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!