ಕಾಡುಗೊಲ್ಲರಲ್ಲದ ಪೂರ್ಣಿಮಗೆ ಸಚಿವ ಸ್ಥಾನ ಬೇಡ

307

Get real time updates directly on you device, subscribe now.

ತುಮಕೂರು: ಮಾಜಿ ಮಂತ್ರಿ ದಿವಂಗತ ಎ.ಕೃಷ್ಣಪ್ಪ ಮತ್ತು ಅವರ ಮಗಳು ಪೂರ್ಣಿಮ ಅವರು ಕಾಡುಗೊಲ್ಲರ ಹೆಸರಿನಲ್ಲಿ ರಾಜಕೀಯ ಶಕ್ತಿ ಬೆಳೆಸಿಕೊಂಡು, ಅದೇ ಸಮುದಾಯಕ್ಕೆ ಅನ್ಯಾಯವೆಸಗುತಿದ್ದು, ಮುಖ್ಯಮಂತ್ರಿಗಳು ಹಾಗೂ ಪಕ್ಷದ ಮುಖಂಡರು ಅವರಿಗೆ ಯಾವುದೇ ರೀತಿಯ ಮಂತ್ರಿ ಪದವಿ, ನಿಗಮ ಮಂಡಳಿಗಳನ್ನು ನೀಡಬಾರದೆಂದು ತುಮಕೂರು ಜಿಲ್ಲಾ ಗೊಲ್ಲ ಸಂಘದ ಅಧ್ಯಕ್ಷ ಬಿ.ಟಿ.ಗೋವಿಂದರಾಜು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಾದಿ ಕಾಲದಿಂದಲೂ ಕಾಡುಗೊಲ್ಲರನ್ನು ಊರುಗೊಲ್ಲರು ತುಳಿಯುತ್ತಾ ಬಂದಿದ್ದು, ಪ್ರಸ್ತುತ ಅತಿ ಕಡಿಮೆ ಸಂಖ್ಯೆಯಲ್ಲಿರುವ ಗೊಲ್ಲರು, ಕಾಡುಗೊಲ್ಲರ ಸಂಖ್ಯೆ ತೋರಿಸಿ, ಅವರ ಹೆಸರಿನಲ್ಲಿ ಸ್ಥಾನ ಮಾನಗಳನ್ನು ಪಡೆಯುತ್ತಿದ್ದಾರೆ. ಆದರೆ ಕಾಡುಗೊಲ್ಲರ ಅಭಿವೃದ್ಧಿಗೆ ಕನಿಷ್ಠ ಕಾಳಜಿ ತೋರಿಲ್ಲ. ಇಂದಿಗೂ ಓಟ್‌ ಬ್ಯಾಂಕ್‌ ರಾಜಕಾರಣಕ್ಕೆ ಕಾಡುಗೊಲ್ಲರು ಬಲಿಯಾಗುತ್ತಿದ್ದಾರೆ ಎಂದು ಆರೋಪಿಸಿದರು.
ದಿವಂಗತ ಎ.ಕೃಷ್ಙಪ್ಪ ಅವರು 1999ರಲ್ಲಿ ಎಸ್‌.ಎಂ.ಕೃಷ್ಣ ಅವರಿಗೆ ಕಾಡುಗೊಲ್ಲರ ಒಟ್ಟು ಸಂಖ್ಯೆ ತೋರಿಸಿ, ಸಮಾಜ ಕಲ್ಯಾಣ ಇಲಾಖೆಯಂತಹ ಪ್ರಭಾವಿ ಸಚಿವ ಸ್ಥಾನ ಪಡೆದರೂ ಕಾಡುಗೊಲ್ಲರ ಹಟ್ಟಿಯ ಕಡೆಗೆ ತಿರುಗಿಯೂ ನೋಡಲಿಲ್ಲ. ಇಂದಿಗೂ ಕಾಡುಗೊಲ್ಲರು, ಕುರಿ ರೊಪ್ಪ, ದನದ ಕೊಟ್ಟಿಗೆಯಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಈಗ ಅವರ ಮಗಳು ಪೂರ್ಣಿಮ ಸಹ ಅದೇ ಹಾದಿಯಲ್ಲಿ ಬಹುಸಂಖ್ಯಾತ ಕಾಡುಗೊಲ್ಲರನ್ನು ತೋರಿಸಿ ಸರಕಾರದಲ್ಲಿ ಮಂತ್ರಿ ಪದವಿ ಪಡೆಯಲು ಮುಂದಾಗಿದ್ದಾರೆ. ಎ.ಕೃಷ್ಣಪ್ಪ ಕುಟುಂಬದ ಉದ್ಧಾರ ಬಿಟ್ಟು ಕಾಡುಗೊಲ್ಲರಿಗೆ ಯಾವುದೇ ರೀತಿಯ ಅನುಕೂಲ ಆಗಿಲ್ಲ, ಹಾಗಾಗಿ ಅವರಿಗೆ ಸಚಿವ ಸ್ಥಾನವಾಗಲಿ, ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನವಾಗಲಿ ನೀಡಬಾರದು ಎಂಬುದು ಗೊಲ್ಲ ಸಮುದಾಯದ ಒತ್ತಾಯವಾಗಿದೆ ಎಂದು ಬಿ.ಟಿ.ಗೋವಿಂದರಾಜು ತಿಳಿಸಿದರು.
ಗೊಲ್ಲ ಸಮುದಾಯದ ಮುಖಂಡ ರಮೇಶ್‌ ಮಾತನಾಡಿ, ಶಿರಾ ಉಪಚುನಾವಣೆಯಲ್ಲಿ ಸುಮಾರು 40 ಸಾವಿರದಷ್ಟು ಗೊಲ್ಲ ಮತದಾರರನ್ನು ಮುಂದಿಟ್ಟುಕೊಂಡು ಗೆಲುವು ಸಾಧಿಸಿದ ಬಿಜೆಪಿ ಪಕ್ಷ, ಆ ನಂತರ ಕೊಟ್ಟ ಮಾತಿನಂತೆ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಮಾಡಲು ಹೊರಟಾಗ ಕಲ್ಲು ಹಾಕಿದ್ದು, ಇದೇ ಪೂರ್ಣೀಮ ಶ್ರೀನಿವಾಸ್‌, ಕಾಡುಗೊಲ್ಲರ ಬದಲು ಸಮಗ್ರ ಗೊಲ್ಲರ ಅಭಿವೃದ್ಧಿ ನಿಗಮ ಎಂದು ಹೆಸರು ಬದಲಾಯಿಸಿ ಗೊಂದಲ ಸೃಷ್ಟಿಸಿದ ಪರಿಣಾಮ, ಚುನಾವಣೆ ಮುಗಿದು 9 ತಿಂಗಳು ಕಳೆದರೂ ಅಧ್ಯಕ್ಷರ ನೇಮಕವಾಗಲಿ, ಅನುದಾನವಾಗಲಿ ಬಿಡುಗಡೆಯಾಗಿಲ್ಲ, ಈಗ ಕಾಡುಗೊಲ್ಲರಲ್ಲದ ಬೆಟ್ಟಸ್ವಾಮಿ ಅವರನ್ನು ನಿಗಮದ ಅಧ್ಯಕ್ಷರನ್ನಾಗಿ ಕೂರಿಸಲು ಇದೇ ಎ.ಕೃಷ್ಣಪ್ಪ ಕುಟುಂಬದ ಸದಸ್ಯರು ಪ್ರಯತ್ನಿಸುತ್ತಿದ್ದು, ಇದಕ್ಕೆ ಮುಖ್ಯಮಂತ್ರಿಗಳಾಗಲಿ, ಪಕ್ಷದ ಮುಖಂಡರಾಗಲು ಅವಕಾಶ ನೀಡಬಾರದೆಂಬುದು ನಮ್ಮ ಒತ್ತಾಯವಾಗಿದೆ. ಕಾಡುಗೊಲ್ಲರ ಬಗ್ಗೆ ಸರಕಾರಕ್ಕೆ ಅಷ್ಟೊಂದು ಕಾಳಜಿ ಇದ್ದರೆ, ಕೂಡಲೇ ಈ ಹಿಂದಿನಂತೆ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಎಂದು ಬದಲಾಯಿಸಿ, ಅದೇ ಸಮುದಾಯದ ಒಬ್ಬರನ್ನು ನಿಗಮದ ಅಧ್ಯಕ್ಷರಾಗಿ ಮಾಡಬೇಕೆಂಬುದು ನಮ್ಮೆಲ್ಲರ ಆಗ್ರಹವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡ ದಿಲೀಪ್‌ ಇದ್ದರು.

Get real time updates directly on you device, subscribe now.

Comments are closed.

error: Content is protected !!