ಗುಬ್ಬಿ ಶಾಸಕ ಶ್ರೀನಿವಾಸ್‌ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಸಂಸದರಿಗೆ ಅವಾಚ್ಯ ಪದ ಬಳಕೆಗೆ ಆಕ್ರೋಶ

392

Get real time updates directly on you device, subscribe now.

ತುಮಕೂರು: ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಅವರು ಲೋಕಸಭಾ ಸದಸ್ಯ ಜಿ.ಎಸ್‌.ಬಸವರಾಜು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಖಂಡಿಸಿ ಬಿಜೆಪಿ ತುಮಕೂರು ನಗರ ಘಟಕದಿಂದ ಟೌನ್ ಹಾಲ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಟೌನ್ ಹಾಲ್‌ ಸರ್ಕಲ್ ನಲ್ಲಿ ಸಮಾವೇಶಗೊಂಡ ಕಾರ್ಯಕರ್ತರನ್ನು ಉದ್ದೇಶಿಸಿ ಮಹಾನಗರ ಪಾಲಿಕೆ ಮೇಯರ್‌ ಬಿ.ಜಿ.ಕೃಷ್ಣಪ್ಪ ಮಾತನಾಡಿ, ಸಂಸ್ಕಾರ ರಹಿತ ಶಾಸಕ ಶ್ರೀನಿವಾಸ್‌, ಮುತ್ಸದ್ಧಿ ರಾಜಕಾರಣಿ ಸಂಸದರ ವಿರುದ್ಧ ಏಕವಚನದಲ್ಲಿ ಮಾತನಾಡಿರುವುದು ಸರಿಯಲ್ಲ, ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಯಾಚಿಸದೆ ಇದ್ದರೆ ತಕ್ಕ ಪಾಠ ಕಲಿಸುತ್ತೇವೆ, ಸಾರ್ವಜನಿಕವಾಗಿ ಹೇಗೆ ಮಾತನಾಡಬೇಕು ಎಂಬ ತಿಳುವಳಿಕೆ ಇಲ್ಲದ ಶ್ರೀನಿವಾಸ್‌ ಜನಪ್ರತಿನಿಧಿಯಾಗಿ ಇರಲು ಯೋಗ್ಯತೆ ಇಲ್ಲ,ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವೀಶ್‌ ಮಾತನಾಡಿ, ಗಾಜಿನ ಮನೆಯಲ್ಲಿ ಇರುವುದನ್ನು ಮರೆತು ವರ್ತಿಸಿರುವ ಶ್ರೀನಿವಾಸ್‌ ವರ್ತನೆ ಖಂಡನೀಯ, ಅಭಿವೃದ್ಧಿ ಹರಿಕಾರ, ನೀರಾವರಿ ತಜ್ಞರಾಗಿರುವ ಬಸವರಾಜು ವಿರುದ್ಧ ನಾಲಿಗೆ ಹರಿಬಿಟ್ಟಿರುವುದು ಸರಿಯಲ್ಲ, ಅವರ ಮಟ್ಟದಲ್ಲಿ ಮಾತನಾಡುವುದು ನಮ್ಮ ಪಕ್ಷದ ಸಂಸ್ಕೃತಿಯಲ್ಲ, ಶ್ರೀನಿವಾಸ್‌ ನಿಂದನೆ ಗುಬ್ಬಿ ಜನರಿಗೆ ಮಾಡಿರುವ ಅವಮಾನ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆಯೇ ನೀರಾವರಿ ಚೆನ್ನಾಗಿದೆ ಎಂದು ಅವರೆ ಹೇಳುತ್ತಾರೆ, ಜಿ.ಎಸ್‌.ಬಸವರಾಜು ಲೋಕಸಭಾ ಸದಸ್ಯರಾದ ನಂತರ ಮಾಡಿರುವ ಕೆಲಸದ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಯಾವುದೇ ರಾಜಕಾರಣಿ ಆದರು ಅವರಿಗೆ ನೀಡಬೇಕಾದ ಗೌರವ ನೀಡಬೇಕಿರುವುದು ಜನಪ್ರತಿನಿಧಿಯಾಗಿರುವ ಶ್ರೀನಿವಾಸ್‌ ಅವರ ಕರ್ತವ್ಯ ಎಂದು ಹೇಳಿದರು.
ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಿವಪ್ರಸಾದ್‌ ಮಾತನಾಡಿ, ಗುಬ್ಬಿ ಶಾಸಕ ಶ್ರೀನಿವಾಸ್‌ ಅವರು ಸಂಸದರ ಬಗ್ಗೆ ಮಾತನಾಡಿರುವ ರೀತಿ ಅವರಿಗೆ ಸಂಸ್ಕಾರ ಇಲ್ಲ ಎನ್ನುವುದನ್ನು ತೋರಿಸುತ್ತದೆ, ನಾಲಿಗೆಗೆ ಮಿತಿ ಇಲ್ಲದ ಸಂಸ್ಕಾರವಿಲ್ಲದ ಶ್ರೀನಿವಾಸ್‌ ಅಂತಹವರಿಂದ ರಾಜಕೀಯ ಮೌಲ್ಯ ಕುಸಿದಿದೆ. ಶಾಸಕನಾಗಿ ಎಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದು ಜನರಿಗೆ ತಿಳಿಸಲಿ, ಸಂಸದರ ಮಾತಿನ ಬಗ್ಗೆ ಒಮ್ಮತವಿಲ್ಲದೆ ಇದ್ದರೆ ಪ್ರಜಾಸತಾತ್ಮಕ ರೀತಿಯಲ್ಲಿ ಟೀಕಿಸಲಿ, ಅದನ್ನು ಬಿಟ್ಟು ವೈಯಕ್ತಿಕ ವಾಗಿ ನಿಂದಿಸುವುದು, ವಿಕೃತವಾಗಿ ನಡೆದುಕೊಳ್ಳುವುದು ಸರಿಯಲ್ಲ, ಅಂತಹ ಶಾಸಕರಿಗೆ ಜನರು ಬುದ್ಧಿ ಕಲಿಸಲಿದ್ದಾರೆ ಎಂದರು.
ಜನರಿಗೆ ಯಾರು ಲೂಟಿಕೋರರು, ಯಾರು ಶ್ರೀಮಂತರು ಎನ್ನುವುದು ಗೊತ್ತಿದೆ. ಅಸಭ್ಯವಾಗಿ ಮಾತನಾಡುವುದು ಬಿಡದೆ ಇದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಕ್ಷಮೆ ಕೋರದೆ ಇದ್ದರೆ ಜಿಲ್ಲೆಯಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ, ಗುಬ್ಬಿ ಅಭಿವೃದ್ಧಿಯಾಗಬೇಕಾದರೆ ಸಂಸದರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಕೊಪ್ಪಳ್‌ ನಾಗರಾಜು, ಹನುಮಂತರಾಜು, ರಕ್ಷಿತ್‌, ಪಾಲಿಕೆ ಸದಸ್ಯ ಸಿ.ಎನ್‌.ರಮೇಶ್‌, ಮಲ್ಲಿಕಾರ್ಜುನ್‌, ವಿಷ್ಣುವರ್ಧನ್‌, ಸಿಂಡಿಕೇಟ್‌ ಸದಸ್ಯ ಶಿವಕುಮಾರ್‌, ಟೂಡಾ ಸದಸ್ಯ ಅಣ್ಣೇನಹಳ್ಳಿ ಶಿವಕುಮಾರ್‌, ಮಾಜಿ ಶಾಸಕ ಗಂಗಹನುಮಯ್ಯ, ಪಾಲಿಕೆ ಸದಸ್ಯರಾದ ನಳಿನ ಇಂದ್ರಕುಮಾರ್‌, ಮಂಜುನಾಥ್‌, ದೀಪಶ್ರೀ, ಗಿರಿಜಾ ಧನಿಯಾಕುಮಾರ್‌, ಮಲ್ಲಿಕಾರ್ಜುನ್‌, ಎಂ.ವೈ.ರುದ್ರೇಶ್‌, ವೇದಮೂರ್ತಿ, ಹೊನ್ನುಡಿಕೆ ಲೋಕೇಶ್‌, ಚಂದ್ರಶೇಖರ್‌, ವಿನಯ್‌ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!