ವೇತನ ತಾರತಮ್ಯ ನಿವಾರಿಸಿ ಅನುದಾನ ಬಿಡುಗಡೆಗೆ ಆಗ್ರಹ

162

Get real time updates directly on you device, subscribe now.

ತುಮಕೂರು: ಅಂಗನವಾಡಿ ಕಾರ್ಯಕರ್ತರಿಗೆ ವೇತನ ಬಿಡುಗಡೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸರಕಾರಕ್ಕೆ ಸಲ್ಲಿಸಿರುವ 339.48 ಕೋಟಿ ರೂಗಳ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು,ಮಕ್ಕಳಿಗೆ ಕೋಳಿ ಮೊಟ್ಟೆ ಹಂಚಿಕೆಯಲ್ಲಿ ಆಗಿರುವ ಅವ್ಯವಹಾರವನ್ನು ತನಿಖೆ ನಡೆಸಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ,ಇಂದು ಅಂಗನವಾಡಿ ಕಾರ್ಯಕರ್ತರು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿ ಇಲಾಖೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಅಂಗನವಾಡಿ ನೌಕಕರ ಯೂನಿಯನ್ ಜಿಲ್ಲಾಧ್ಯಕ್ಷೆ ಜಿ.ಕಮಲ, 2016ರಿಂದ ಇದುವರೆಗೂ ನಿವೃತ್ತರಾಗಿರುವ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರಿಗೆ ಇದುವರೆಗೂ ಇಡಿಗಂಟಾಗಲಿ, ಎನ್‌ಪಿಎಸ್‌ ಧನವಾಗಲಿ ನೀಡಿಲ್ಲ. ಅಲ್ಲದೆ ಇಲಾಖೆಗೆ ಹೊಸದಾಗಿ ಕಾರ್ಯಕರ್ತರಾಗಿ ನೇಮಕವಾಗುವ ಕಾರ್ಯಕರ್ತೆಯರಿಗೂ, 10-15 ವರ್ಷ ಸೇವೆ ಸಲ್ಲಿಸಿದ ಹಿರಿಯ ಕಾರ್ಯಕರ್ತೆಯರಿಗೆ ತಲಾ 10 ಸಾವಿರ ರೂ. ವೇತನ ನೀಡಲಾಗುತ್ತಿದೆ. ಇದನ್ನು ಬದಲಾಯಿಸಿ ಸೇವಾ ಹಿರಿತನ ಪರಿಗಣಿಸುವಂತೆ ಇಲಾಖೆಯ ಮುಂದೆ ಬೇಡಿಕೆ ಇಟ್ಟ ಪರಿಣಾಮ 20 ವರ್ಷ ಸೇವೆ ಸಲ್ಲಿಸಿದವರಿಗೆ 2,000 ರೂ., 15 ವರ್ಷದವರಿಗೆ 1500 ರೂ., 10 ವರ್ಷದವರಿಗೆ 1000 ರೂ. ಮತ್ತು 5 ವರ್ಷದವರಿಗೆ 500 ರೂ. ಗಳ ಹೆಚ್ಚುವರಿ ನೀಡಲು ಇಲಾಖೆಗೆ 6.99 ಕೋಟಿ ರೂ. ಮನವಿ ಹಾಗೂ ಇನ್ನಿತರ ವೇತನ ತಾರತಮ್ಯ ನಿವಾರಣೆಗೆ ಒಟ್ಟು 139.49 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದರೂ ಇದುವರೆಗೂ ಬಿಡುಗಡೆಯಾಗಿಲ್ಲ, ಕೂಡಲೇ ಸರಕಾರ ನೀಡಿದ ಭರವಸೆಯಂಗೆ ಪ್ರಸ್ತಾಪಿತ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಕೊರೊನ ಮೊದಲನೆ ಅಲೆಯಲ್ಲಿ 28 ಜನ ಮತ್ತು ಎರಡನೇ ಅಲೆಯಲ್ಲಿ 16 ಜನ ಬಲಿಯಾದರೆ, 173 ಜನರು ಸೋಂಕಿಗೆ ಒಳಗಾಗಿದ್ದಾರೆ. ಫ್ರಂಟ್ ಲೈನ್‌ ವರ್ಕರ್ಸ್ ಆಗಿ ಕಾರ್ಯ ನಿರ್ವಹಿಸಿದ ಇವರಿಗೆ ಸರಕಾರವೇ ಭರವಸೆ ನೀಡಿದಂತೆ ಕೂಡಲೇ 1 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಈ ಸಂಬಂಧ ಮನವಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಗುಲ್ಜಾರ್‌ ಭಾನು, ಗೌರಮ್ಮ, ಗಂಗಮ್ಮ, ತಾಲೂಕು ಅಧ್ಯಕ್ಷರಾದ ಜಬಿನಾಖಾನಂ, ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್‌ ಮುಜೀಬ್‌ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!