ಸಾವನ್ನಪ್ಪಿದ ಬಾಲಕನ ಕುಟುಂಬಕ್ಕೆ ಸಚಿವರಿಂದ ಸಾಂತ್ವನ- 1 ಲಕ್ಷ ಪರಿಹಾರ ವಿತರಣೆ

ಸ್ವಾತಂತ್ರ್ಯ ದಿನದಂದು ಧ್ವಜಸ್ತಂಭ ದುರ್ಘಟನೆ

2,082

Get real time updates directly on you device, subscribe now.

ತುಮಕೂರು: ಸ್ವಾತಂತ್ರ್ಯ ದಿನಾಚರಣೆಯಂದು ತುಮಕೂರು ತಾಲೂಕಿನ ಕರೀಕೆರೆ ಗ್ರಾಮದ ಶಾಲೆಯಲ್ಲಿ ಧ್ವಜಸ್ತಂಭ ನಿಲ್ಲಿಸಲು ಹೋಗಿ ವಿದ್ಯುತ್‌ ಸ್ಪರ್ಶದಿಂದ ಸಾವನ್ನಪ್ಪಿದ ಬಾಲಕ ಚಂದನ್ ಅವರ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಯ ತಾಯಿ ಮತ್ತು ಅಜ್ಜಿಗೆ ಸಾಂತ್ವನ ತುಂಬಿದ್ದೇನೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬಿ.ಸಿ.ನಾಗೇಶ್‌ ತಿಳಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಾವನ್ನಪ್ಪಿರುವ ಬಾಲಕನು ಅಜ್ಜಿಗೆ ಒಬ್ಬನೇ ಮೊಮ್ಮಗ ಹಾಗೂ ತಾಯಿಗೆ ಒಬ್ಬನೇ ಮಗನಾಗಿದ್ದ, ಬಾಲಕನನ್ನು ಅಜ್ಜಿ ಕಷ್ಟಪಟ್ಟು ಸಾಕಿ ಸಲುಹಿದ್ದರು. ತಂದೆಯ ಮುಖವನ್ನೂ ನೋಡದೆ ಇದ್ದ ಬಾಲಕ ಈ ಅನಾಹುತಕ್ಕೆ ಬಲಿಯಾಗಿರುವುದು ದುಃಖ ತಂದಿದೆ ಎಂದರು.
ಬಾಲಕನನ್ನು ಕಳೆದುಕೊಂಡ ಅಜ್ಜಿ, ಅಮ್ಮನ ದುಃಖವನ್ನು ನೀಗಿಸುವ ಶಕ್ತಿಯಿಲ್ಲ, ಆದರೆ ಸಂಸಾರಕ್ಕೆ ಅವಶ್ಯವಿರುವ ಒಂದಿಷ್ಟು ಸಹಕಾರದ ಹಿನ್ನೆಲೆಯಲ್ಲಿ ಇಲಾಖೆಯಿಂದ ಒಂದು ಲಕ್ಷ ರೂ. ಚೆಕ್‌ ಕೊಟ್ಟಿದ್ದೇನೆ, ಕುಟುಂಬಸ್ಥರು ಕೆಲಸ ಕೊಡಿಸಿ ಎಂದು ಮನವಿ ತೋಡಿಕೊಂಡಿದ್ದಾರೆ, ಈ ಬಗ್ಗೆ ಗಮನಹರಿಸುತ್ತೇನೆ ಎಂದರು.
ಈ ಘಟನೆ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆಯಲ್ಲಿಯೂ ಮಾತನಾಡಿದ್ದೇನೆ, ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವ ವ್ಯವಸ್ಥೆ ಮಾಡುತ್ತೇನೆ, ಉಳಿದಂತೆ ಈ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಲಾಗಿದ್ದು, ಆ ಇಬ್ಬರೂ ಯುವಕರನ್ನು ಡಿಸ್ಚಾರ್ಜ್‌ ಆಗಲಿದ್ದಾರೆ, ಅವರ ಚಿಕಿತ್ಸಾ ವೆಚ್ಚ ಸರ್ಕಾರದಿಂದ ಭರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 508 ಶಾಲೆಗಳ ಮೇಲೆ ವಿದ್ಯುತ್‌ ತಂತಿ ಹಾದು ಹೋಗಿದೆ, ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಾಲಕ ಸಾವನ್ನಪ್ಪಿದ ಘಟನೆ ನಡೆದ ತಕ್ಷಣವೇ ಸಂಬಂಧಿಸಿದವರಿಗೆ ಪತ್ರ ಬರೆದಿದ್ದೇನೆ, ಇಂತಹ ಅವಘಡಗಳು ಮರುಕಳಿಸದಂತೆ ಕ್ರಮ ವಹಿಸಲಾಗುವುದು, ಶಾಲೆಗಳ ಮೇಲೆ ಹಾದು ಹೋಗಿರುವ ವಿದ್ಯುತ್‌ ತಂತಿಯನ್ನು ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ವರ್ಷದ ಹಿಂದೆ ಗ್ರಾಮಸ್ಥರೆ ವಿದ್ಯುತ್‌ ತೆರವುಗೊಳಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಕ್ರಮವಹಿಸಿಲ್ಲ, ಇದು ದುರಂತವೇ ಸರಿ, ಆಕಸ್ಮಿಕವಾಗಿ ಘಟನೆ ನಡೆದಿದೆ. ಬಾಲಕನ ತಾಯಿಗೆ ಮುಂದಿನ ದಿನಗಳಲ್ಲಿ ಉದ್ಯೋಗ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರಲ್ಲದೆ ಶಾಲೆಯ ಶಿಕ್ಷಕಿಯನ್ನು ಅಮಾನತಿನಲ್ಲಿಡಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.
ಕೋವಿಡ್‌ ಮಾರ್ಗಸೂಚಿ ಪ್ರಕಾರ ಶಾಲೆಗಳು ಆರಂಭ
ಇದೇ ತಿಂಗಳ 23ರ ನಂತರ ಪ್ರೌಢಶಾಲೆಗಳು ಆರಂಭಗೊಳ್ಳಲಿದ್ದು, ಡಿಸಿ, ಎಸ್ಪಿ, ಡಿಡಿಪಿಐ, ಬಿಇಓಗಳು ಕೋವಿಡ್‌ ಮಾರ್ಗಸೂಚಿಯನ್ವಯ ಶಾಲೆ ಪ್ರಾರಂಭವಾಗಲು ಕ್ರಮ ವಹಿಸಲಿದ್ದು, ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿರುವ ಬಗ್ಗೆ ತಜ್ಞರು ತಮ್ಮ ಅಭಿಪ್ರಾಯ ತಿಳಿಸಿದ್ದು, ಕೋವಿಡ್‌ ಸೋಂಕು ಮಕ್ಕಳಲ್ಲಿ ಹೆಚ್ಚಾಗಿ ಕಾಣುವುದಿಲ್ಲ ಎಂಬ ಅಭಿಪ್ರಾಯದ ಮೇರೆಗೆ ಶಾಲೆಗಳನ್ನು ತೆರೆಯಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮಾರ್ಗಸೂಚಿಗಳನ್ನ ಪಾಲನೆ ಮಾಡಬೇಕು ಎಂದು ತಿಳಿಸಿದರು.
ಈ ಬಾರಿ 8,75,000 ಮಕ್ಕಳು ಯಾವುದೇ ಕೋವಿಡ್‌ ಸೋಂಕಿಗೆ ಒಳಗಾಗದೇ ಎಸ್‌ಎಸ್‌ಎಲ್‌ಸಿ ಪರಿಕ್ಷೇ ಬರೆದಿದ್ದು ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳನ್ನು ಕೋವಿಡ್‌ ಮಾರ್ಗಸೂಚಿ ಪ್ರಕಾರ ಆರಂಭಿಸಲಾಗುತ್ತಿದ್ದು, 1-2ನೇ ಅಲೆಯ ನಂತರ ಮಕ್ಕಳಿಗೆ ಸೋಂಕು ದೃಢಪಟ್ಟರೆ ಶಾಲೆಯನ್ನು ಒಂದು ವಾರ ಸ್ಥಗಿತಗೊಳಸಿ ಸ್ಯಾನಿಟೈಸ್‌ ಮಾಡಿದ ನಂತರ ಪ್ರಾರಂಭಿಸಲಾಗುವುದು, 44,432 ಶಾಲೆಗಳ ಪೈಕಿ 7903 ಶಾಲೆಗಳು ಸಿ ಮತ್ತು ಡಿ ಕ್ಯಾಟಗರಿಯಲ್ಲಿ ಬರುವ ಶಾಲೆಗಳನ್ನು ವಿಶೇಷವಾಗಿ ಅಭಿವೃದ್ಧಿಗೊಳಿಸಲು ಸೂಕ್ತ ಕ್ರಮ ವಹಿಸಲಾಗುವುದು ಹಾಗೂ ಖಾಲಿ ಇರುವ ಶಿಕ್ಷಕರ ನೇಮಕಾತಿಗೆ ಸರ್ಕಾರ ಈಗಾಗಲೇ ಹೊಸ ಮಾನದಂಡ ರೂಪಿಸಲಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಜ್ಯೋತಿ ಗಣೇಶ್‌, ಡಾ.ರಾಜೇಶ್‌ ಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಂಜಯ್ಯ, ಡಯಟ್‌ ಉಪ ನಿರ್ದೇಶಕ ಮಂಜುನಾಥ್‌, ಬಿಆರ್‌ಸಿ ಗಂಗಹನುಮಯ್ಯ, ಬಿಇಓ ಹನುಮನಾಯಕ, ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಹುಲಿನಾಯ್ಕರ್‌, ವೈದ್ಯಕೀಯ ನಿದೇರ್ಶಕ ಡಾ.ರಮಣ್‌ ಹುಲಿನಾಯ್ಕರ್‌, ಎಂ.ಎಸ್‌.ಪಾಟೀಲ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!