ಹಿಂದುಳಿದ, ತಳಸಮುದಾಯಗಳ ಜಾಗೃತಿಗಾಗಿ ಸಭೆ

342

Get real time updates directly on you device, subscribe now.

ತುಮಕೂರು: ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟ ಹಾಗೂ ಅತಿ ಹಿಂದುಳಿದ, ತಳಸಮುದಾಯಗಳ ಜನ ಜಾಗೃತಿಗಾಗಿ ಮುಖಂಡರ ಸಭೆಯನ್ನು ಹರ್ಬನ್‌ ರೆಸಾರ್ಟ್‌ ನಲ್ಲಿ ಆಗಸ್ಟ್ 21 ರಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ತಿಳಿಸಿದ್ದಾರೆ
ಆಗಸ್ಟ್ 21 ರಂದು ನಡೆಯುವ ಪೂರ್ವಭಾವಿ ಸಭೆಯ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಮುಖಂಡರೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ, ಹಿಂದುಳಿದ ವರ್ಗಗಳ ಮೀಸಲಾತಿ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಉನ್ನತ್ತೀಕರಣ ಕುರಿತಂತೆ ಜನ ಜಾಗೃತಿ ಮೂಡಿಸುವ ಸಲುವಾಗಿ ಈ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದರು.
ತಳ ಸಮುದಾಯ ಮತ್ತು ಹಿಂದುಳಿದ ವರ್ಗಗಳ ನ್ಯಾಯಯುತ ಬೇಡಿಕೆಯಾಗಿರುವ ಮೀಸಲಾತಿ ಪಡೆಯಲು ಮಾಡಬೇಕಿರುವ ಅವಶ್ಯಕ ಹೋರಾಟ ಮಾಡುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದ ಅವರು, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿರುವ ಅತಿ ಹಿಂದುಳಿದಿರುವ ಸಮುದಾಯದ ಮುಖಂಡರ ಸಭೆ ಕರೆಯಲಾಗಿದ್ದು, ಹಿಂದುಳಿದ ವರ್ಗಗಳಲ್ಲಿ ಜಾಗೃತಿ ಮೂಡಿಸಲು ಸಲಹೆ ಸ್ವೀಕರಿಸಲಾಗುವುದು ಎಂದರು.
ಹಿಂದುಳಿದ ವರ್ಗಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳಲ್ಲಿರುವ ಹಿಂದುಳಿದ ವರ್ಗಗಳ ನಾಯಕರ ನೇತೃತ್ವದಲ್ಲಿ ಸಭೆ ಏರ್ಪಡಿಸುವ ಉದ್ದೇಶ ಹೊಂದಿದ್ದು, ಹಿಂದುಳಿದ ವರ್ಗಗಳ ಏಳ್ಗೆಗೆ ಶ್ರಮಿಸುವ ನಾಯಕರನ್ನು ಒಂದೆಡೆ ಸೇರಿಸುವ ಮೂಲಕ ಹಿಂದುಳಿದ ವರ್ಗಗಳಿಗೆ ನ್ಯಾಯಯುತವಾಗಿ ದೊರೆಯಬೇಕಾದ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು, ತುಮಕೂರು ಜಿಲ್ಲೆಯ ಹಿಂದುಳಿದ ವರ್ಗಗಳ ಮುಖಂಡರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ, ಈ ಸಭೆಯಲ್ಲಿ ಬರುವ ಅಭಿಪ್ರಾಯ ಕ್ರೂಡಿಕರಿಸಿ ಹಿಂದುಳಿದ ವರ್ಗಗಳ ಹಕ್ಕುಗಳ ರಕ್ಷಣೆ ಕುರಿತಂತೆ ಸರಕಾರದ ಮೇಲೆ ಒತ್ತಡ ತರಲು ಪ್ರಯತ್ನಿಸಲಾಗುವುದು. ಅಲ್ಲದೇ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಸೇರಿದಂತೆ ಪಕ್ಷಾತೀತವಾಗಿ ಹಿಂದುಳಿದ ವರ್ಗಗಳ ಘಟಾನುಘಟಿ ನಾಯಕರನ್ನು ಕರೆಯಿಸಿ ಸಮಾವೇಶ ನಡೆಸಲಾಗುವುದು ಇದು ಪಕ್ಷಾತೀತ ಕಾರ್ಯಕ್ರಮ ಎಂದು ಕೆ.ಎನ್‌.ರಾಜಣ್ಣ ತಿಳಿಸಿದರು.
ಇದೇ ವೇಳೆ ಹಿಂದುಳಿದ ವರ್ಗಗಳ ಮುಖಂಡರಾದ ಎಸ್‌.ನಾಗಣ್ಣ, ಆರ್‌.ಸಿ.ಅಂಜನಪ್ಪ, ಆರ್‌.ರಾಜೇಂದ್ರ, ಜಿ.ಎಂ.ಸಣ್ಣಮುದ್ದಯ್ಯ, ಹಿಂದುಳಿದ ಸಮುದಾಯಗಳ ಒಕ್ಕೂಟದ ಸಂಚಾಲಕರಾದ ಧನಿಯಾಕುಮಾರ್‌, ಪ್ರೆಸ್‌ ರಾಜಣ್ಣ, ಚಂದ್ರಶೇಖರ್‌ ಗೌಡ, ಶಾಂತರಾಜು, ಟಿ.ಆರ್‌.ಸುರೇಶ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಿ.ನಾಗೇಶ್‌ ಬಾಬು, ಟಿ.ಪಿ.ಮಂಜುನಾಥ್‌, ಜಿ.ಎನ್‌.ಮೂರ್ತಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!