ಕುಣಿಗಲ್: ರಾಜ್ಯ ಸರ್ಕಾರವು ಜನಪರ ಅಭಿವೃದ್ಧಿ ನಿಟ್ಟಿನಲ್ಲಿ ಜಾರಿಗೊಳಿಸುವ ಅಭಿವೃದ್ಧಿ ಕಾಮಗಾರಿ ಭೂಸ್ವಾಧೀನ ಪ್ರಕ್ರಿಯೆಗೆ ರೈತರು, ಭೂಮಾಲೀಕರು ಸಹಕಾರ ನೀಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಚನ್ನಬಸಪ್ಪ ಮನವಿ ಮಾಡಿದರು.
ಮಂಗಳವಾರ ತಾಲೂಕಿನ ಹಾಲುವಾಗಿಲು ಗ್ರಾಮದಲ್ಲಿ ಶ್ರೀರಂಗ ಏತನೀರಾವರಿ ಯೋಜನೆ ಭೂಸ್ವಾಧೀನ ಪ್ರಕ್ರಿಯೆಗೆ ಪುನರ್‌ವಸತಿ ಹಾಗೂ ಪುನರ್‌ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾದ ಭೂಸ್ವಾಧೀನ ರೈತರ ಸಭೆಯಲ್ಲಿ ಮಾತನಾಡಿ, ಶ್ರೀರಂಗ ಏತನೀರಾವರಿ ಯೋಜನೆ ಭೂಸ್ವಾಧೀನ ಕಾರ್ಯ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದೆ, ಯೋಜನೆ ಅನುಷ್ಠಾನಗೊಂಡಲ್ಲಿ ಈ ಭಾಗದ ರೈತರಿಗೆ ಸಹಕಾರಿಯಾಗಲಿದೆ, ಹಾಲುವಾಗಿಲು, ಹೊಸೂರು, ದೇವಸ್ಥಾನ ದಾಸನಪುರ, ಕತ್ತರಿಘಟ್ಟ, ತಿಪ್ಪಸಂದ್ರ ಭಾಗದ ಐದು ಗ್ರಾಮಗಳ ಮುನ್ನೂರು ಖಾತೆದಾರರ 600 ಸರ್ವೇನಂಬರ್ ಪೈಕಿ 19 ಎಕರೆ ಮಾತ್ರ ಭೂಸ್ವಾಧೀನವಾಗಲಿದೆ. ಭೂಸ್ವಾಧೀನ ಕಾಯಿದೆಯ ಅರ್‌ಆರ್ ನಿಯಮಾನುಸಾರ ಒಟ್ಟಾರೆ ಭೂಮಿ ಇರುವ ರೈತರ ಅರ್ಧದಷ್ಟು ಭೂಮಿ ಸ್ವಾಧೀನವಾದರೆ ಐದುಲಕ್ಷ ಹೆಚ್ಚುವರಿ ಪರಿಹಾರ, ಮನೆ ಕಳೆದುಕೊಂಡರೆ ಐದುಲಕ್ಷ ಹೆಚ್ಚುವರಿಪರಿಹಾರ ನೀಡಲಾಗುವುದ ಅದರೆ, ಈ ಐದು ಗ್ರಾಮಗಳ ವ್ಯಾಪ್ತಿಯಲ್ಲಿ ಅಂತಹ ಫಲಾನುಭವಿ ಇಲ್ಲ. ಯಾವುದೇ ರೈತರ ಹೆಸರು ಕೈ ಬಿಟ್ಟಲ್ಲಿ ಸೇರ್ಪಡೆಗೆ ಅವಕಾಶ ಇದೆ ಎಂದು ಐದು ಗ್ರಾಮಗಳ ಭೂಸ್ವಾಧೀನಕ್ಕೆ ಒಳಪಡುವ ರೈತರ ಹೆಸರುವಾಚಿಸಿ ಯಾವುದೇ ಹೊಸಸೇರ್ಪಡೆ ಇಲ್ಲದ ಕಾರಣ ಸಭೆ ಮುಕ್ತಾಯಗೊಳಿಸಿದರು.
ಗ್ರಾಪಂ ಸದಸ್ಯ ಹಾಲುವಾಗಿಲುಸ್ವಾಮಿ ಮಾತನಾಡಿ, ಭೂಸ್ವಾಧೀನ ಮಾಡಿಕೊಂಡರು ಪರಿಹಾರ ನೀಡಲು ಅಲೆದಾಡಿಸುತ್ತಾರೆ. ದಾಖಲೆ ಎಷ್ಟೆ ಕೊಟ್ಟರೂ ಸರಿಯಾಗಿ ಪರಿಹಾರ ನೀಡೊಲ್ಲ. ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿ ಪ್ರಶ್ನಿಸಿದರೆ ವಕೀಲರನ್ನು ಕರೆತನ್ನಿ ಪರಿಹಾರ ಪಡೀರಿ ಅಂತಾರೆ, ರೈತರು ಜಮೀನುಕೊಟ್ಟು ಪರಿಹಾರಕ್ಕೆ ನಿಮ್ಮ ಕಚೇರಿ ಬಾಗಿಲು ಅಲೆಯಲಾಗದು, ಪರಿಹಾರ ನೀಡದ ಹೊರತು ಕಾಮಗಾರಿಗೆ ರೈತರು ಬಿಡುವುದಿಲ್ಲ ಎಂದರೆ, ರೈತ ವಿಶ್ವನಾಥ ಇತರರು ದಾಖಲೆಗಳ ತಾತ ಮುತ್ತಾತಂದಿರ ಹೆಸರಲ್ಲಿವೆ ಏನು ಮಾಡೋದು ಎಂದರು. ಇದಕ್ಕೆ ಎಡಿಸಿ ಉತ್ತರಿಸಿ, ರೈತರನ್ನು ಅನಗತ್ಯ ಕಚೇರಿಗೆ ಅಲೆದಾಡಿಸುವುದಿಲ್ಲ, ತಹಶೀಲ್ದಾರ್ ಕಚೇರಿಗೆ ಭೂಸ್ವಾಧೀನಾಧಿಕಾರಿ ಕಚೇರಿಯಿಂದ ಮಾಹಿತಿ ಪಡೆದು ಅಗತ್ಯ ದಾಖಲೆ ಕೊಡಿಸಿ ಶೀಘ್ರ ಪರಿಹಾರ ಕೊಡಿಸಲು ಶ್ರಮಿಸಲಾಗುವುದು ಎಂದರು.
ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮಹಾಬಲೇಶ್ವರ್, ವಿಶೇಷ ಭೂಸ್ವಾಧೀನಾಧಿಕಾರಿ ಯಶೋಧ, ಹೇಮಾವತಿ ನಾಲಾ ವಲಯದ ಇಇ ಲಕ್ಷ್ಮೀ, ಎಇಇ ರವಿ, ತೋಟಗಾರಿಕೆ ಸಹಾಯಕ ನಿರ್ದೇಶಕ ನಾಗರಾಜಯ್ಯ ಇತರರು ಇದ್ದರು.
ಸ್ವಾಮಿ, ಹೇಮಾವತಿ ನಾಲೆಯಲ್ಲಿ ತಾಲೂಕಿಗೆ ನಿಗದಿಯಂತೆ ನೀರು ಹರಿಸಲಾಗುತ್ತಿಲ್ಲ, ಹೇಮಾವತಿ ನೀರು ತಾಲೂಕಿಗೆ ಸಮರ್ಪಕವಾಗಿ ಹರಿಯದ ಮೇಲೆ ಶ್ರೀರಂಗ ಏತ ನೀರಾವರಿ ಯೋಜನೆಗೆ ನೀರು ಎಲ್ಲಿಂದ ತರ್ತೀರಾ, ಮೊದಲು ತಾಲೂಕಿಗೆ ಸರಿಯಾದ ಪ್ರಮಾಣದಲ್ಲಿ ಹೇಮಾವತಿ ನೀರು ಹರಿಸಿದ, ಆಮೇಲೆ ಶ್ರೀರಂಗ ಏತನೀರಾವರಿ ಯೋಜನೆಗೂ ಬೇಕಾದ ಹೆಚ್ಚುವರಿ ನೀರು ಹರಿಸಿ, ರೈತರಿಗೆ ಸರಿಯಾಗಿ ಪರಿಹಾರ ಕೊಡಲ್ಲ, ಆಗಲೆ ರೈತರ ಜಮೀನಿನಲ್ಲಿ ಅಗೆದು ಕಾಮಗಾರಿ ಮಾಡಲು ಬರ್ತೀರಾ, ಎಲ್ಲಿವರೆಗೂ ಪರಿಹಾರ ಕೊಡಲ್ವೋ ಅಲ್ಲಿವರೆಗೂ ಕಾಮಗಾರಿ ಮಾಡಲು ಅವಕಾಶ ನೀಡೊಲ್ಲ, ಪರಿಹಾರ ಕೊಡದೆ ಕೆಲಸ ಮಾಡೋದು ಎಷ್ಟು ಸರಿ, 2005-06ರಲ್ಲಿ ನಾಲೆಗೆ ಜಮೀನು ಸ್ವಾಧೀನಪಡಿಸಿಕೊಂಡು ಇನ್ನು ಪರಿಹಾರ ನೀಡಿಲ್ಲ, ರೈತರು ನಾಲೆ ಮುಚ್ಚಿದ್ದಾರೆ, ಈ ರೀತಿ ಆದರೆ ಹೇಗೆ ನೀರು ಬರುತ್ತೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಎಡಿಸಿ, ತಾವು ನೂತನ ಭೂಸ್ವಾಧೀನ ಕಾಯಿದೆಯ ಅಡಿಯಲ್ಲಿ ಪುನರ್‌ವಸತಿ, ಪುನರ್ ವ್ಯವಸ್ಥೆ ಕಲ್ಪಿಸಲು ನಿಯೋಜಿಸಲಾಗಿರುವ ಅಧಿಕಾರಿ, ಹೀಗಾಗಿ ಕೆಳಹಂತದ ನೌಕರರನಾಗಿದ್ದು ನೀರು ಬಿಡುವುದು ಸರ್ಕಾರ ಸಚಿವರ, ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ಮಟ್ಟದ್ದು, ಅವರನ್ನೆ ಕೇಳಿ, ನನಗೆ ವಹಿಸಿರುವ ಕೆಲಸವನ್ನಷ್ಟೆ ಮಾಡಲು ಅವಕಾಶ ಇದೆ, ದಯಮಾಡಿ ಸಹಕಾರ ನೀಡಿ ಎಂದರು.
ಅಭಿವೃದ್ಧಿ ಕಾರ್ಯಗಳಿಗೆ ರೈತರು, ಭೂ ಮಾಲೀಕರು ಸಹಕರಿಸಲಿ
Get real time updates directly on you device, subscribe now.
Prev Post
Next Post
Comments are closed.