ಆರು ತಿಂಗಳಲ್ಲಿ ಗ್ರಾಪಂ ಗಳಲ್ಲಿಯೂ ಘನತ್ಯಾಜ್ಯ ನಿರ್ವಹಣೆ ಮಾಡಿ

ಗ್ರಾಮಗಳಲ್ಲಿ ಸ್ವಚ್ಛತೆ, ಕುಡಿವ ನೀರಿಗೆ ಆದ್ಯತೆ ನೀಡಿ: ಈಶ್ವರಪ್ಪ

141

Get real time updates directly on you device, subscribe now.

ತುಮಕೂರು: ಜಿಲ್ಲೆಯಲ್ಲಿ 6 ತಿಂಗಳೊಳಗಾಗಿ ಎಲ್ಲಾ 330 ಗ್ರಾಮ ಪಂಚಾಯತಿಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಎಸ್‌.ಐ.ಟಿ. ಕಾಲೇಜಿನ ಬಿರ್ಲಾ ಆಡಿಟೋರಿಯಂನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಮೈಸೂರಿನ ಅಬ್ದುಲ್‌ ನಜೀರ್‌ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಂಸ್ಥೆ, ಜಿಲ್ಲಾ ಪಂಚಾಯತಿಯ ಸಹಯೋಗದಲ್ಲಿ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗಾಗಿ ಏರ್ಪಡಿಸಿದ್ದ ಒಂದು ದಿನದ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ಹೊಸದಾಗಿ ಆಯ್ಕೆಯಾಗಿರುವ ಗ್ರಾಮಪಂಚಾಯತಿ ಅಧ್ಯಕ್ಷರು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಆದ್ಯತೆ ನೀಡುವುದರೊಂದಿಗೆ ತ್ಯಾಜ್ಯ ನಿರ್ವಹಣೆ ಮಾಡಲು ಸೂಕ್ತ ಕಟ್ಟಡ ಗುರುತಿಸಬೇಕು ಎಂದು ನಿರ್ದೇಶನ ನೀಡಿದರು.
ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾಗುವ ಅವಕಾಶ ಎಲ್ಲರಿಗು ದೊರೆಯುವುದಿಲ್ಲ. ಗ್ರಾಮಗಳ ಅಭಿವೃದ್ಧಿಗೆ ಸಿಕ್ಕಿರುವ 5 ವರ್ಷಗಳ ಅಧಿಕಾರಾವಕಾಶ ಬಳಸಿಕೊಳ್ಳಬೇಕು. ಉತ್ತಮ ಕೆಲಸ ಮಾಡುವುದರ ಮೂಲಕ ನಂಬಿಕೆ ಇಟ್ಟು ಗೆಲ್ಲಿಸಿರುವ ಜನರ ಋಣ ತೀರಿಸಬೇಕು. ಪ್ರತಿ ದಿನ ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ನೀಡಿ ಪಂಚಾಯತಿ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಜನರ ವಿಶ್ವಾಸ ತೆಗೆದುಕೊಂಡು ಪರಿಹರಿಸಬೇಕು ಎಂದು ಗ್ರಾಪಂ ಅಧ್ಯಕ್ಷರಿಗೆ ಕಿವಿಮಾತು ಹೇಳಿದರು.
ದೇಶದ ಯಾವುದೇ ಉದ್ಯೋಗ ರಹಿತ ಪ್ರಜೆ ಉಪವಾಸವಿರಬಾರದೆಂದು ನರೇಗಾ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಯಡಿ ಬಡವರಿಗೆ ಉದ್ಯೋಗ ನೀಡುವ ಮೂಲಕ ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು. ನರೇಗಾ ಯೋಜನೆಯಡಿ ಅಂಗನವಾಡಿ ದುರಸ್ಥಿಯಲ್ಲದೆ ಶಾಲಾ ಕಟ್ಟಡ ದುರಸ್ಥಿಗೂ ಅವಕಾಶ ಮಾಡಿಕೊಡಲಾಗುವುದು ಎಂದರಲ್ಲದೆ, ನರೇಗಾ ಯೋಜನೆಯಡಿ ಕೇಂದ್ರದಿಂದ 13 ಕೋಟಿ ಮಾನವ ದಿನಗಳನ್ನು ಸೃಜಿಸಲು ಗುರಿ ನೀಡಲಾಗಿತ್ತು. ಕಳೆದ ನವೆಂಬರ್‌ನಲ್ಲಿಯೇ ರಾಜ್ಯದಲ್ಲಿ ಮಾನವ ದಿನಗಳನ್ನು ಸೃಜಿಸುವಲ್ಲಿ ಗುರಿ ಮೀರಿ ಸಾಧನೆ ಮಾಡುವ ಮೂಲಕ ರಾಜ್ಯವು ಮೊದಲ ಸ್ಥಾನದಲ್ಲಿದೆ. ಗುರಿ ಮೀರಿದ ಸಾಧನೆಗಾಗಿ ಪ್ರಧಾನ ಮಂತ್ರಿ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ನರೇಗಾ ಯೋಜನೆಯಡಿ ಪ್ರತಿಯೊಬ್ಬರಿಗೂ ಕೆಲಸ ನಿರ್ವಹಿಸುವ ಅವಕಾಶವಿದ್ದು, ಉದ್ಯೋಗ ಚೀಟಿ ಪಡೆದುಕೊಳ್ಳಬಹುದು. ಕಲ್ಯಾಣಿ, ಗೋಕಟ್ಟೆ, ಕೊಳವೆ ಬಾವಿಗೆ ಮರುಪೂರಣ ಗುಂಡಿ, ಕೃಷಿ ಹೊಂಡ, ಕೆರೆಗಳ ಹೂಳೆತ್ತುವುದು ಸೇರಿದಂತೆ ಅನೇಕ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿರುವ ಕೆರೆಕಟ್ಟೆ, ಕಲ್ಯಾಣಿಗಳು ಒತ್ತುವರಿಯಾಗದಂತೆ ಕ್ರಮವಹಿಸುವುದು ಪ್ರತಿ ಸದಸ್ಯನ ಹೊಣೆಗಾರಿಕೆಯಾಗಿದೆ ಎಂದರು.
ಪ್ರತಿ ಹಳ್ಳಿಗಳಲ್ಲೂ ಬಯಲು ಶೌಚಾಲಯ ಮುಕ್ತಗೊಳಿಸಲು ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಗ್ರಾಮ ಪಂಚಾಯ್ತಿಯ ಸದಸ್ಯರು, ಪಿಡಿಓಗಳು ಜನರಲ್ಲಿ ಅರಿವು ಮೂಡಿಸಬೇಕು. ವಿಶೇಷ ಘಟಕ ಯೋಜನೆಯಡಿ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ನೀಡಲಾಗುತ್ತಿದ್ದ 15 ಸಾವಿರ ರೂ.ಗಳ ಸಹಾಯಧನವನ್ನು 20 ಸಾವಿರ ರೂ. ಗಳಿಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷರು, ಸದಸ್ಯರು ಪಕ್ಷಭೇದ ಮರೆತು ತಮ್ಮ ಗ್ರಾಮದ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು. ಗ್ರಾಮ ಪಂಚಾಯತಿಗಳಲ್ಲಿ ಪ್ರತಿವರ್ಷ ಹೊಸ ಯೋಜನೆಗಳನ್ನು ರೂಪಿಸಿ ಜನಪರ ಕೆಲಸಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಕೋವಿಡ್‌ ನಿಯಂತ್ರಣ ತರುವಲ್ಲಿ ಗ್ರಾಮ ಪಂಚಾಯತಿಗಳು ಶ್ರಮಿಸಿರುವ ಪರಿಣಾಮದಿಂದ ರಾಜ್ಯದಲ್ಲಿ ಕೋವಿಡ್‌ ಹತೋಟಿಗೆ ಬಂದಿದೆ. ಅಭಿವೃದ್ಧಿ ಕೆಲಸ ಕೈಗೊಳ್ಳುವಾಗ ಪಿಡಿಓಗಳು ಚುನಾಯಿತ ಪ್ರತಿನಿಧಿಗಳೊಂದಿಗೆ ಸಹಕರಿಸಬೇಕು ಎಂದರು.
ಪಂಚಾಯತಿ ಮಟ್ಟದಲ್ಲಿ ಕೆರೆಗಳ ಅಭಿವೃದ್ಧಿ, ಸಸಿ ಬೆಳೆಸುವುದು, ಜನಪದ, ಕ್ರೀಡೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುವುದು ಸೇರಿದಂತೆ ಗ್ರಾಮದ ಅಭಿವೃದ್ಧಿಗೆ ಕಟಿಬದ್ಧರಾಗಬೇಕು ಎಂದು ತಿಳಿಸಿದರು.
ಉಡುಪಿ ಜಿಪಂ ಯೋಜನಾಧಿಕಾರಿ ಶ್ರೀನಿವಾಸರಾವ್‌ ತ್ಯಾಜ್ಯ ನಿರ್ವಹಣೆ ಕುರಿತು ಉಪನ್ಯಾಸ ನೀಡಿ, ತ್ಯಾಜ್ಯ ನಿರ್ವಹಣೆ ಮಾಡುವುದು ಜಟಿಲ ಸಮಸ್ಯೆಯಾಗಿದೆ. ನೀರಿನ ಬಾಟಲಿ ಉಪಯೋಗಿಸುವುದು, ಹೊರಗಿನ ಆಹಾರ ತಿನಿಸುಗಳಿಂದಲೂ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ನಗರ ಪ್ರದೇಶಗಳಂತೆ ಹಳ್ಳಿಗಳಲ್ಲಿಯೂ ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆಯಾಗಬೇಕು. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಕುವುದು, ಸುಡುವುದರಿಂದ ಪರಿಸರ ನಾಶವಾಗಿ ಭೂಮಿಯು ಫಲವತ್ತತೆ ಕಳೆದುಕೊಂಡು ಅಂತರ್ಜಲ ಕುಸಿಯುತ್ತದೆ. ಎಲ್ಲ ಗ್ರಾಮಪಂಚಾಯ್ತಿಗಳು ಕಡ್ಡಾಯವಾಗಿ ತ್ಯಾಜ್ಯದ ಸಂಗ್ರಹಣೆ, ವಿಂಗಡಣೆ, ನಿರ್ವಹಣೆಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಿದರೆ ಸುಲಭ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡಬಹುದು. ಗ್ರಾಮದ ಎಲ್ಲ ಮನೆಗಳಲ್ಲಿ ತ್ಯಾಜ್ಯ ನಿರ್ವಹಣೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಪರಿಸರವಾದಿ ಶಿವಾನಂದ ಕಳವೆ ಅವರು ಕೆರೆಗಳ ಪುನಶ್ಚೇತನ ಕುರಿತು ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಹೂಳೆತ್ತಿಸುವ ಮೂಲಕ ಕೆರೆಗಳನ್ನು ಪುನಶ್ಚೇತನಗೊಳಿಸಬೇಕು. ಕೆರೆಗಳನ್ನು ಹಾಳು ಮಾಡಿರುವುದರಿಂದ ನೀರಿನ ಸಮಸ್ಯೆ ಉದ್ಭವವಾಗುತ್ತದೆ. ಜನರಲ್ಲಿ ಜಲಸಾಕ್ಷರತೆ ಅಗತ್ಯ ಎಂದು ತಿಳಿಸಿದರಲ್ಲದೆ, ಮನೆ ಮನೆಗೆ ನೀರಿನ ಸಂಪರ್ಕ ಕಲ್ಪಿಸುವ ಕೇಂದ್ರದ ಜಲಜೀವನ್‌ ಮಿಷನ್‌ ಯೋಜನೆ ಯಶಸ್ವಿಯಾಗಬೇಕಾದರೆ ಕೆರೆಗಳ ಪುನಶ್ಚೇತನ ಅಗತ್ಯ ಎಂದು ತಿಳಿಸಿದರು.
ಗ್ರಾಮಪಂಚಾಯತಿ ಆಯುಕ್ತಾಲಯದ ನಿರ್ದೇಶಕ ಯಾಲಕ್ಕಿಗೌಡ ಮಾತನಾಡಿ, ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಪಿಡಿಒಗಳಿಗೆ ಕಾರ್ಯಾಗಾರ ಏರ್ಪಡಿಸಿರುವುದು ಶ್ಲಾಘನೀಯ. ಗ್ರಾಮ ಪಂಚಾಯತಿಗಳು ತನ್ನಲ್ಲಿರುವ ಸಂಪನ್ಮೂಲದಿಂದಲೇ ಕಡಿಮೆ ವೆಚ್ಚದಲ್ಲಿ ಗ್ರಾಮಗಳ ಅಭಿವೃದ್ಧಿಪಡಿಸಬೇಕು ಎಂದು ತಿಳಿಸಿದರು.
ನಂತರ ಕಾರ್ಯಾಗಾರದಲ್ಲಿ ಮಧುಗಿರಿ ದೊಡ್ಡಮಾಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ಪಂಚಾಕ್ಷರಿ, ಶಿರಾ ತಾಲ್ಲೂಕು ಬೇವಿನಹಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್‌ ಮಾತನಾಡಿ, ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಅನುಭವ ಹಂಚಿಕೊಂಡರು.
ಕಾರ್ಯಾಗಾರಕ್ಕೆ ಗೈರು ಹಾಜರಾಗಿದ್ದ ಮಧುಗಿರಿ ತಾಲ್ಲೂಕು ಚಂದ್ರಗಿರಿ ಗ್ರಾಪಂ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡಲು ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾಕುಮಾರಿ ಅವರಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ನರೇಗಾ ಯೋಜನೆ, ಮಹಿಳಾ ಕಾಯಕೋತ್ಸವ, ರೈತಬಂಧು ಕುರಿತು ಸಿದ್ಧಪಡಿಸಿರುವ ಮಾಹಿತಿ, ಶಿಕ್ಷಣ, ಸಂವಹನ ಸಿಡಿಯನ್ನು ಸಚಿವರು ಬಿಡುಗಡೆ ಮಾಡಿದರು.

Get real time updates directly on you device, subscribe now.

Comments are closed.

error: Content is protected !!