ತುಮಕೂರು: ಗ್ರಾಮಗಳ ಅಭಿವೃದ್ಧಿಗಾಗಿ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಪರಿಕಲ್ಪನೆ ಸಾಕಾರಗೊಳಿಸುವಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ನಗರದ ಎಸ್‌ಐಟಿ ಕಾಲೇಜಿನ ಬಿರ್ಲಾ ಆಡಿಟೋರಿಯಂನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮೈಸೂರಿನ ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಜಿಲ್ಲಾ ಪಂಚಾಯತಿ ಸಹಯೋಗದಲ್ಲಿ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗಾಗಿ ಏರ್ಪಡಿಸಿದ್ದ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗ್ರಾಮೀಣ ಭಾಗದ ಜನರು ಸ್ಥಳೀಯ ಸಂಪನ್ಮೂಲವನ್ನು ಬಳಸಿಕೊಂಡು ನೆಮ್ಮದಿಯ ಜೀವನ ನಡೆಸಲು ಗ್ರಾಮಗಳಿಗೆ ಒಡೆತನ ನೀಡುವ ಸಲುವಾಗಿ ಗಾಂಧೀಜಿಯವರು ಗ್ರಾಮ ಸ್ವರಾಜ್ ಕಲ್ಪನೆಯ ಕನಸು ಕಂಡಿದ್ದರು. ಇದನ್ನು ಸಾಕಾರಗೊಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ನಜೀರ್‌ಸಾಬ್ ಅವರ ನಾಯಕತ್ವದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಗಟ್ಟಿಯಾದ ನಿಲುವು ದೊರೆತಿದ್ದು, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿಗಳನ್ನು ಬಲಪಡಿಸಿದಂತಾಗಿದೆ, ಗ್ರಾಮ ಪಂಚಾಯತಿಗಳು ಸ್ಥಳೀಯ ಮಟ್ಟದಲ್ಲಿ ಆಯ್ಕೆಗೊಂಡ ಸದಸ್ಯರು ಜನರ ಆಸೆ, ಅಭಿಲಾಷೆ ಪೂರೈಸಿ ಶಾಂತಿಯಿಂದ ಬದುಕು ಕಟ್ಟಿಕೊಳ್ಳುವ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಕಾಲ ಕಾಲಕ್ಕೆ ಅಭಿವೃದ್ಧಿ ಪಡಿಸಬೇಕು ಎಂದರು.
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮ ಸಭೆಗಳು ಬಹು ಮುಖ್ಯವಾಗಿದ್ದು, ರಾಷ್ಟ್ರದ ಬುನಾದಿಯಾಗಿವೆ, ಶೇ.80ರಷ್ಟು ಜನರು ಸೇರುವ ಮೂಲಕ ಗ್ರಾಮ ಸಭೆಗಳನ್ನು ನಿಷ್ಪಕ್ಷವಾಗಿ ನಡೆಸುವುದರೊಂದಿಗೆ ಜನರು ಬಯಸುವ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಆ ಮೂಲಕ ಗ್ರಾಮ ಸ್ವರಾಜ್ಯದ ಕನಸು ನನಸುಗೊಳಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯ್ತಿ ವ್ಯವಸ್ಥೆಗೆ ಗ್ರಾಮ ಸಭೆಗಳು ಅಡಿಪಾಯವಾಗಿದ್ದು, ಗ್ರಾಮ ಸಭೆಗಳನ್ನು ಯಶಸ್ವಿಗೊಳಿಸಬೇಕು, ಗ್ರಾಮ ಸಭೆಗಳಲ್ಲಿ ಆಯ್ಕೆಯಾಗುವ ಮನೆ ನಿರ್ಮಾಣ, ನಿವೇಶನ ಹಂಚಿಕೆ ಸೇರಿದಂತೆ ಇತರೆ ಯೋಜನೆಗಳ ಅನುಷ್ಠಾನದ ಅಧಿಕಾರವನ್ನು ಸ್ಥಳೀಯ ಮಟ್ಟಕ್ಕೆ ನೀಡಲಾಗಿದ್ದು, ಗ್ರಾಮ ಸಭೆಗಳ ಕುರಿತು ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಗ್ರಾಮ ಪಂಚಾಯ್ತಿಯ ಜನ ಪ್ರತಿನಿಧಿಗಳು ಉದಾಸೀನ ತೋರದೆ ಗ್ರಾಮಸಭೆಗಳನ್ನು ನಡೆಸಬೇಕು. ತಮ್ಮ ಆಡಳಿತದ ಅಧಿಕಾರ ಸದ್ಬಳಕೆ ಮಾಡಿಕೊಂಡು ಜನರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದರು.
ನಿವೇಶನ ಕಲ್ಪಿಸಲು ಆದ್ಯತೆ: ಗ್ರಾಮ ಸ್ವರಾಜ್ ಯೋಜನೆಯಡಿ ಅನೇಕ ಕಾರ್ಯಕ್ರಮ ರೂಪಿಸಲಾಗಿದ್ದು, ಮುಖ್ಯವಾಗಿ ಮನೆ ಇಲ್ಲದವರಿಗೆ ನಿವೇಶನ ಕಲ್ಪಿಸಲು ಆದ್ಯತೆ ಕೊಡಬೇಕು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಗಮನಕ್ಕೆ ತಂದು ಜಾಗ ಗುರುತಿಸಿ ನಿವೇಶನ ಒದಗಿಸಿ ಮನೆ ನಿರ್ಮಾಣ ಮಾಡಿಕೊಡಬೇಕು ಎಂದರು.
ಜಲ ಜೀವನ್ ಮಿಷನ್: ಕೇಂದ್ರ ಸರ್ಕಾರದ ಜಲಜೀವನ ಮಿಷನ್ ಯೋಜಯಡಿ 11 ಸಾವಿರ ಕೋಟಿ ರೂ. ಮೀಸಲಿರಿಸಲಾಗಿದ್ದು, ಗ್ರಾಮಗಳ ಪ್ರತಿ ಮನೆಗೂ ನಳ ಸಂಪರ್ಕ ಕಲ್ಪಿಸಿ ಕುಡಿಯುವ ನೀರು ಒದಗಿಸುವ ಗುರಿ ಹೊಂದಲಾಗಿದ್ದು, ಜಲ ಜೀವನ್ ಮಿಷನ್ ಯೋಜನೆಗೆ ಹೆಚ್ಚಿನ ಒತ್ತು ಕೊಡಬೇಕು. ಈ ಯೋಜನೆಯಡಿ ಗ್ರಾಮಗಳಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಆದ್ಯತೆ ಕೊಡಬೇಕು ಎಂದು ತಿಳಿಸಿದು.
ಸ್ವಚ್ಛ ಭಾರತ್ ಮಿಷನ್: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಗ್ರಾಮ ಪಂಚಾಯ್ತಿಗಳ ಮಟ್ಟದಲ್ಲಿ ಆಧುನಿಕ ಸಲಕರಣೆಗಳನ್ನು ಬಳಸಿಕೊಂಡು ಸೂಕ್ತ ರೀತಿಯಲ್ಲಿ ಕಸ ವಿಲೇವಾರಿ ಮಾಡಬೇಕು. ಅಭಿವೃದ್ಧಿ ಕಾಮಗಾರಿಗಳಂತೆಯೇ ಸ್ವಚ್ಛತೆಗೂ ಹೆಚ್ಚು ಒತ್ತು ಕೊಡಬೇಕು. ಗೌರವಯುತವಾಗಿ ಅಂತ್ಯ ಸಂಸ್ಕಾರ ನಡೆಸಲು ಪ್ರತಿ ಹಳ್ಳಿಯಲ್ಲಿಯೂ ಗ್ರಾಮ ಸಭೆಗಳಲ್ಲಿ ಚರ್ಚಿಸಿ ಜಾಗ ಗುರುತಿಸಿ ಸ್ಮಶಾನಗಳನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದರು.
ನರೇಗಾ ಯೋಜನೆಗೆ ಆದ್ಯತೆ: ಗ್ರಾಮೀಣ ಜನರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಜಾರಿಗೆ ತರಲಾಗಿರುವ ನರೇಗಾ ಯೋಜನೆ ಅನುಷ್ಠಾನಕ್ಕೆ ಎಲ್ಲರೂ ಕೈಜೋಡಿಸಬೇಕು, ಹೆಚ್ಚು ಹೆಚ್ಚು ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಹಮ್ಮಿಕೊಳ್ಳುವ ಮೂಲಕ ಬಡ ಜನರಿಗೆ ಕೂಲಿ ಒದಗಿಸಬೇಕು, ಈಗಾಗಲೇ ನಿರ್ಮಾಣವಾಗಿರುವ ಕೃಷಿ ಹೊಂಡ, ಕೊಟ್ಟಿಗೆಗಳಿಗೆ ನರೇಗಾ ಯೋಜನೆಯಡಿ ಅಕ್ರಮವಾಗಿ ಹಣ ಸಂದಾಯವಾಗುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು, ಎಲ್ಲಿಯೂ ನರೇಗಾ ಹಣ ದುರ್ಬಳಕೆಯಾಗದಂತೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.
ದೂರದೃಷ್ಟಿ ಯೋಜನೆ: ಗ್ರಾಮ ಪಂಚಾಯ್ತಿಗಳಿಗೆ ಹೆಚ್ಚಿನ ಅಧಿಕಾರ ಒದಗಿಸುವ ನಿಟ್ಟಿನಲ್ಲಿ ಈ ಬಾರಿ ಆಯ ವ್ಯಯದಲ್ಲಿ ದೂರದೃಷ್ಟಿ ಯೋಜನೆ ರೂಪಿಸಲಾಗಿದೆ. ಈ ಯೋಜನೆಯು 5 ವರ್ಷಗಳ ಅಭಿವೃದ್ಧಿ ಕಾಮಗಾರಿಗಳ ಒಳ ನೋಟವನ್ನೊಳಗೊಂಡಿದ್ದು, ಯೋಜನೆಯಡಿ ಕಾಮಗಾರಿಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪಂಚಾಯಿತಿ ಸಿಇಓ ಡಾ.ಕೆ.ವಿದ್ಯಾಕುಮಾರಿ ಹಾಗೂ ಸಂಪನ್ಮೂಲ ವ್ಯಕ್ತಿಗಳು ಇದ್ದರು.
Comments are closed.