ಬಿಜೆಪಿ ಸರ್ಕಾರದ ಅಸಹಕಾರದಿಂದ ಅಭಿವೃದ್ಧಿಗೆ ಹಿನ್ನಡೆ

403

Get real time updates directly on you device, subscribe now.

ಕುಣಿಗಲ್‌: ರಾಜ್ಯ ಬಿಜೆಪಿ ಸರ್ಕಾರದ ಅಸಹಕಾರ ಧೋರಣೆಯಿಂದ ಪಟ್ಟಣ ಸೇರಿದಂತೆ ತಾಲೂಕಿನ ಅಭಿವೃದ್ಧಿ ಕೆಲಸ ಮಾಡಲು ತೀವ್ರ ತೊಂದರೆಯಾಗುತ್ತಿದೆ ಎಂದು ಶಾಸಕ ಡಾ.ರಂಗನಾಥ ತಿಳಿಸಿದರು.
ಬುಧವಾರ ಪುರಸಭೆ ವತಿಯಿಂದ ನಡೆದ 140 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿ ಗುದ್ದಲಿಪೂಜೆ, ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಮುಖ್ಯಮಂತ್ರಿಗಳ ಬದಲಾವಣೆ ನಂತರವಾದರೂ ಕ್ಷೇತ್ರಕ್ಕೆ ಅನುದಾನ ಹೆಚ್ಚಿನ ರೀತಿಯಲ್ಲಿ ಸಿಗುತ್ತದೆ ಎಂದು ಭಾವಿಸಿ ಅವರ ಭೇಟಿಗೆ ಪ್ರಯತ್ನಿಸಿದರೂ ಇನ್ನು ಭೇಟಿ ಮಾಡಲಾಗುತ್ತಿಲ್ಲ, ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿರುವ ಹಲವಾರು ಕಾಮಗಾರಿಗಳ ಪೂರ್ಣಗೊಳಿಸಲು ಸೂಕ್ತ ಅನುದಾನ ನೀಡುತ್ತಿಲ್ಲವಾದ್ದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ. ಪುರಸಭೆ ಬಸ್‌ನಿಲ್ದಾಣ ಕಾಮಗಾರಿಗೆ ಸಂಸದರ ಅನುದಾನದಿಂದ, ನಮ್ಮ ಅನುದಾನ ಸೇರಿದಂತೆ ಡಿಎಂಎಫ್‌ ಫಂಡ್‌ ಹೊಂದಾಣಿಕೆ ಮಾಡಿಕೊಂಡು ಕಾಮಗಾರಿಗೆ ಅಗತ್ಯ ಸಿದ್ಧತೆ ಮಾಡಲಾಗುವುದು ಎಂದರು.
ವಿದ್ಯುತ್‌ ಚಿತಾಗಾರ ನಿರ್ಮಾಣವಾಗಿದ್ದು ಪೂರ್ಣಗೊಳಿಸುವ ನಿಟ್ಟಿನಲ್ಲಿ ಬೇಕಾದ ಸಲಕರಣೆ ಪೂರೈಕೆ ಆಗಿದೆ, ರಸ್ತೆ ನಿರ್ಮಾಣಕ್ಕೆ ಪುರಸಭೆ ಅನುದಾನದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ತಾಲೂಕಿಗೆ 3,100 ಎಂಸಿಎಫ್‌ಟಿ ಹೇಮೆ ನೀರು ಹರಿಸಬೇಕಿದೆ. ಸತತ ಒತ್ತಡದ ಪರಿಣಾಮ ಒಂದುವಾರ ನೀರು ಹರಿಸಲು ಒಪ್ಪಿದ್ದಾರೆ, ಇದರಲ್ಲಿ ಕೇವಲ 700 ಎಂಸಿಎಫ್‌ಟಿ ಮಾತ್ರ ನೀರು ಪೂರೈಕೆಯಾಗಲಿದ್ದು ತಾಲೂಕಿಗೆ ನಿಗದಿತ ಹೇಮೆ ನೀರು ಬರಲು ಲಿಂಕ್‌ ಕೆನಾಲ್‌ ಕಾಮಗಾರಿ ಪ್ರಮುಖ ಅನುಷ್ಠಾನವಾಗಬೇಕಿದೆ, ಈ ನಿಟ್ಟಿನಲ್ಲಿ ಉಪವಾಸ ಸತ್ಯಾಗ್ರಹ ಅಥವಾ ಪಾದಯಾತ್ರೆ ಹೋರಾಟ ಮಾಡುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಕಲಚೇತನರ ನಿಧಿ ಅಡಿಯಲ್ಲಿ ಏಳುಮಂದಿ ವಿಕಲಚೇತನರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ವಿತರಿಸಿದರು. ಪುರಸಭೆ ಅಧ್ಯಕ್ಷ ನಾಗೇಂದ್ರ, ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿಸಮಿತಿ ಅಧ್ಯಕ್ಷ ಸಮೀವುಲ್ಲಾ, ಸದಸ್ಯರಾದ ಅಸ್ಮ, ದೇವರಾಜ, ಅರುಣ ಕುಮಾರ, ಮಲ್ಲಿಪಾಳ್ಯಶ್ರೀನಿವಾಸ, ನಾಗರಾಜು, ಜಯಲಕ್ಷ್ಮೀ, ಮುಖ್ಯಾಧಿಕಾರಿ ರವಿಕುಮಾರ್‌, ಕಂದಾಯಾಧಿಕಾರಿ ಜಗರೆಡ್ಡಿ, ಮುಖಂಡರಾದ ಚಂದ್ರಶೇಖರ, ಪಾಪಣ್ಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!