ಸರ್ಕಾರ ಡಿಸೇಲ್‌ ಮೇಲಿನ ತೆರಿಗೆ ಇಳಿಸಲಿ: ಷಣ್ಮುಗಪ್ಪ

446

Get real time updates directly on you device, subscribe now.

ತುಮಕೂರು: ಡಿಸೇಲ್‌ ಮೇಲೆ ರಾಜ್ಯ ಸರಕಾರ ವಿಧಿಸುತ್ತಿರುವ 26.50 ರೂ ತೆರಿಗೆ ಕಡಿಮೆ ಮಾಡಬೇಕು, ಇದರಿಂದ ಸರಕಾರಕ್ಕೆ ಹಾಗೂ ಲಾರಿ ಮಾಲೀಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಫೆಡರೇಶನ್‌ ಆಫ್‌ ಕರ್ನಾಟಕ ಲಾರಿ ಓನರ್ಸ್ ಅಂಡ್‌ ಏಜೆಂಟ್ಸ್ ಅಸೋಸಿಯೇಷನ್‌ ದಕ್ಷಿಣ ಭಾರತದ ಅಧ್ಯಕ್ಷ ಷಣ್ಮುಖಪ್ಪ ತಿಳಿಸಿದ್ದಾರೆ.
ತುಮಕೂರು ಲಾರಿ ಮಾಲೀಕರ ಸಂಘ ಹಾಗೂ ಫೆಡರೇಶನ್‌ ಆಫ್‌ ಕರ್ನಾಟಕ ಲಾರಿ ಓನರ್ಸ್ ಅಂಡ್‌ ಏಜೆಂಟರ್ಸ್ ಅಸೋಸಿಯೇಷನ್‌ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 124ನೇ ಸರ್ವ ಸದಸ್ಯರ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿಸೇಲ್‌ ಮೇಲಿನ ಸೆಸ್‌ ಕಡಿತ ಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಡಿಸೇಲ್‌ ರಾಜ್ಯದಲ್ಲಿ ಖರ್ಚಾಗುವುದರಿಂದ ರಾಜ್ಯ ಸರಕಾರಕ್ಕೆ ಆದಾಯ ಬರಲಿದೆ, ಅಲ್ಲದೆ ಲಾರಿ ಮಾಲೀಕರಿಗೂ ಕೊಂಚ ಉಳಿತಾಯವಾಗಲಿದೆ ಎಂದರು.
ಪ್ರಸ್ತುತ ರಾಜ್ಯದಲ್ಲಿ 6 ಲಕ್ಷ ಲಾರಿಗಳಿವೆ, ಇವುಗಳಲ್ಲಿ ದಿನಂಪ್ರತಿ 40 ಸಾವಿರಕ್ಕು ಹೆಚ್ಚು ಲಾರಿಗಳು ಓಡಾಡುತ್ತವೆ, ಒಂದು ಲಾರಿಗೆ ಕನಿಷ್ಠ 200 ಲೀಟರ್‌ ಡಿಸೇಲ್‌ ಎಂದರೂ 8 ಲಕ್ಷ ಲೀಟರ್‌ ಖರ್ಚಾಗಲಿದೆ, ತೆರಿಗೆ ಹೆಚ್ಚಳದಿಂದ ಲಾರಿ ಮಾಲೀಕರು, ನೆರೆಯ ಆಂಧ್ರ, ತಮಿಳುನಾಡು, ಪಾಂಡುಚೇರಿ, ಮಹಾರಾಷ್ಟ್ರದಲ್ಲಿ ಡಿಸೇಲ್‌ ತುಂಬಿಸಿಕೊಂಡು ಬರುವುದರಿಂದ ನಮ್ಮ ರಾಜ್ಯದಲ್ಲಿ ಡಿಸೇಲ್‌ ಖರ್ಚಾಗುವುದು ಕಡಿಮೆ, ಇದು ಸರಕಾರಕ್ಕೂ ನಷ್ಟ, ಲಾರಿ ಮಾಲೀಕರಿಗೂ ನಷ್ಟ ಎಂದು ಷಣ್ಮುಗಪ್ಪ ತಿಳಿಸಿದರು.
ಲೋಡ್‌ ಮತ್ತು ಅನ್‌ ಲೋಡ್‌ ಇವೆರಡು ಲಾರಿ ಮಾಲೀಕರಿಗೆ ಸಂಬಂಧಿಸಿದ್ದಲ್ಲ, ಆದರೆ ನಮ್ಮಿಂದಲೇ ಕಟ್ಟಿಸಲಾಗುತ್ತಿದೆ, ಈ ಬಗ್ಗೆ ಹಲವಾರು ಬಾರಿ ಸರಕಾರಕ್ಕೆ, ವಾಣಿಜ್ಯ ವಹಿವಾಟು ನಡೆಸುವ ಸಂಘ ಸಂಸ್ಥೆಗಳ ಮುಖಂಡರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಹಾಗಾಗಿ ಸೆ. 01 ರಿಂದ ರಾಜ್ಯಾದ್ಯಂತ ಲೋಡ್‌ ಮತ್ತು ಅನ್‌ ಲೋಡಿಂಗ್‌ ಮತ್ತು ಓವರ್‌ ಲೋಡ್‌ ಮಾಡುವುದಿಲ್ಲ ಎಂದು ಇಂದಿನ ಸರ್ವ ಸದಸ್ಯರ ಸಭೆ ನಿರ್ಣಯ ಕೈಗೊಂಡಿದ್ದು, ಸೆಪ್ಟಂಬರ್‌ ಒಂದರಿಂದ ಲೋಡ್‌ ಮತ್ತು ಅನ್‌ ಲೋಡ್‌ಗೆ ಲಾರಿಯವರು ಹಣ ಭರಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಲಾರಿ ಮಾಲೀಕರು ಮತ್ತು ಸರಕಾರಕ್ಕೆ ಓವರ್‌ ಲೋಡ್‌ ಎಂಬುದು ಒಂದು ದೊಡ್ಡ ತಲೆನೋವಾಗಿದೆ, ಸರಕಾರವೇ ಓವರ್‌ ಲೋಡ್‌ಗೆ ಬೆಂಬಲವಾಗಿ ನಿಂತಂತೆ ಕಾಣುತ್ತಿದೆ. ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಓವರ್‌ ಲೋಡ್‌ನಿಂದ ರಸ್ತೆಗಳು ಹಾಳಾಗಲಿವೆ. ಸರಕಾರ ಕೂಡಲೇ ಓವರ್‌ ಲೋಡ್‌ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಅಲ್ಲದೆ ಸೆಪ್ಟಂಬರ್‌ 1 ರಿಂದ ನಮ್ಮ ಸಂಘ ಓವರ್‌ ಲೋಡ್‌ ಹಾಕದಿರಲು ನಿರ್ಧರಿಸಿದೆ ಎಂದು ಷಣ್ಮುಗಪ್ಪ ತಿಳಿಸಿದರು.
ಡಿಸೇಲ್‌ ಬೆಲೆ ಹೆಚ್ಚಳ ಹಾಗೂ ಕೊರೊನಾ ಕಾರಣದಿಂದ ಹಲವು ಲಾರಿಗಳನ್ನು ಮುಟ್ಟುಗೋಲು ಹಾಕಿದ್ದು, ಸರಕಾರ ಮಧ್ಯ ಪ್ರವೇಶಿಸಿ ಬಾಡಿಗೆ ದರ ನಿಗದಿಪಡಿಸಬೇಕೆಂದು ಒತ್ತಾಯಿಸಿದ ಅವರು, ಲೋಡ್‌ ಮತ್ತು ಅನ್‌ ಲೋಡಿಂಗ್‌ ಇಲ್ಲ ಎನ್ನುವುದನ್ನು ಸರಕು ಸಾಗಣೆದಾರರಿಗೆ ಪತ್ರ ನೀಡಬೇಕಿರುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.
ಟೋಲ್‌ಗಳಲ್ಲಿ ಸ್ಥಳೀಯವಾಗಿ ಸಂಚರಿಸುವ ಲಾರಿಗಳಿಗೂ ಟೋಲ್‌ ಶುಲ್ಕ ವಿಧಿಸಲಾಗುತ್ತಿದೆ, ಇದನ್ನು ಕೈ ಬಿಡಬೇಕೆಂದು ಮನವಿ ಮಾಡಿದ ಅವರು ಓವರ್‌ ಲೋಡ್‌ ನಿಂದಾಗಿ ಲಾರಿಗಳಿಗೂ ಕೆಲಸವಿಲ್ಲ ಹಾಗೂ ರಸ್ತೆ ಹಾಳಾಗುವುದರಿಂದ ಓವರ್‌ ಲೋಡ್‌ ತಪ್ಪಿಸಬೇಕು ಎಂದು ಮನವಿ ಮಾಡಿದರು.
20-21ನೇ ಸಾಲಿನಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಕಡಿಮೆಯಾಗಿರುವುದರಿಂದ ವಿಮೆ ಹಣದಲ್ಲಿ ನಿಗದಿತ ಹಣವನ್ನು ವಿಮೆದಾರರಿಗೆ ವಾಪಸ್‌ ನೀಡಬೇಕೆಂದು ಮನವಿ ಮಾಡಿದ ಅವರು, ಗುಣಮಟ್ಟದ ರಸ್ತೆಗಳು ಹಾಳಾಗಲು ಓವರ್‌ ಲೋಡ್‌ ಸಮಸ್ಯೆ ಕಾರಣ, ಮಂಗಳೂರು ಬಂದರಿನಿಂದ 30 ಸಾವಿರ ಟನ್‌ ಅನ್ನು ಕೇವಲ 900 ಲಾರಿ ಕೊಂಡೊಯ್ಯುತ್ತಿವೆ, ಇದರಿಂದ ಸರಕಾರಕ್ಕೆ ನಷ್ಟವಾಗುತ್ತಿದೆ. ಲಾರಿ ಮಾಲೀಕರ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿಗಳಿಗೂ ಹಾಗೂ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಸೆ.15 ರೊಳಗೆ ಸಮಸ್ಯೆ ಬಗೆಹರಿಸಲು ಸರಕಾರ ವಿಫಲವಾದರೆ ಸರಕು ಸಾಗಣೆ ಬಂದ್‌ ಮಾಡುವ ಮೂಲಕ ಲಾರಿ ಮಾಲೀಕರು ಒಗ್ಗಟ್ಟು ಪ್ರದರ್ಶಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಫೆಡರೇಶನ್‌ ಆಫ್‌ ಕರ್ನಾಟಕ ಲಾರಿ ಓನರ್ಸ್ ಅಂಡ್‌ ಏಜೆಂಟರ್ಸ್ ಅಸೋಸಿಯೇಷನ್‌ ಉಪಾಧ್ಯಕ್ಷ ಮುತ್ತು, ತುಮಕೂರು ಜಿಲ್ಲಾಧ್ಯಕ್ಷ ಮುಜಾಮಿಲ್‌, ಗೌರವಾಧ್ಯಕ್ಷ ಮನ್ಸೂರ್‌, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುನೀಲ್‌ ಡಿ.ಕೆ, ಸುಜೀತ್‌ ಆಳ್ವ, ರಹಮತ್‌ಖಾನ್‌ ಸೇರಿದಂತೆ ಹಲವರು ಇದ್ದರು.

Get real time updates directly on you device, subscribe now.

Comments are closed.

error: Content is protected !!