ಗುಬ್ಬಿ: ದಲಿತರ ಸ್ಮಶಾನಕ್ಕೆ ಸರ್ಕಾರದಿಂದ ಜಮೀನು ಮಂಜೂರಾಗುವ ವಿಚಾರ ತಿಳಿದ ತಕ್ಷಣ ಅತಿಕ್ರಮಣ ಮಾಡಿ ಕೃಷಿ ನಡೆಸಿ ಅನುಭವದಲ್ಲಿರುವುದಾಗಿ ಅರ್ಜಿ ಹಾಕುವ ಪ್ರಕ್ರಿಯೆಗೆ ಮೊದಲು ಕಡಿವಾಣ ಹಾಕುವಂತೆ ದಲಿತ ಮಖಂಡರು ಒಕ್ಕೋರಲಿನ ಮನವಿ ಮಾಡಿದ ಘಟನೆ ದಲಿತರ ಕುಂದುಕೊರತೆ ಸಭೆಯಲ್ಲಿ ನಡೆಯಿತು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಹಸೀಲ್ದಾರ್ ಬಿ.ಆರತಿ ಮಾರ್ಗದರ್ಶನದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ದಲಿತರ ಕುಂದುಕೊರತೆ ಸಭೆಯಲ್ಲಿ ದಲಿತರ ಸ್ಮಶಾನ ಮಂಜೂರು ಬಗ್ಗೆ ಗಂಭೀರ ಚರ್ಚೆ ನಡೆಯುವ ಸಂದರ್ಭದಲ್ಲಿ ಸಲ್ಲದ ನೆಪವೊಡ್ಡಿ ಸ್ಮಶಾನಕ್ಕೆ ಸ್ಥಳವಿಲ್ಲದಂತೆ ಮಾಡಲು ಕೆಲವರು ಕಾದು ಕುಳಿತಿದ್ದಾರೆ, ಇಂತಹ ಅಡೆತಡೆಗೆ ಬೆಲೆ ನೀಡದೆ ದಲಿತರಿಗೆ ಸ್ಮಶಾನಕ್ಕೆ ಜಮೀನು ಕಾನೂನು ರೀತಿ ನೀಡುವಂತೆ ಮನವಿ ಮಾಡಿದರು.
ಎಸ್.ಕೊಡಗಿಹಳ್ಳಿ ಎಂ.ಎಸ್.ಪಾಳ್ಯ ಬಳಿ ಸ್ಮಶಾನಕ್ಕೆ ಜಮೀನು ಅಳತೆ ಮಾಡಲು ಅವಕಾಶ ಮಾಡಿಕೊಡದ ಬಗ್ಗೆ ಚರ್ಚೆ ಮಾಡಿದರು. ಸ್ಥಳಕ್ಕೆ ಹಾಜರಾಗಿದ್ದ ಅಧಿಕಾರಿಗಳನ್ನು ಬೆದರಿಸಿ ಓಡಿಸಿದ್ದರು ಎಂದು ಆರೋಪ ಮಾಡಿದರು. ಜಿ.ಹೊಸಹಳ್ಳಿ ಸ್ಮಶಾನ ಜಾಗ ಈಚೆಗೆ ಅಕ್ರಮವಾಗಿ ತೆಂಗು ಅಡಿಕೆ ಸಸಿ ನೆಟ್ಟು ಅತಿಕ್ರಮಿಸಿರುವ ಬಗ್ಗೆ ಕೂಡಾ ದೂರಿದರು, ನಂತರದಲ್ಲಿ ಸರ್ಕಾರಿ ಕಚೇರಿಗಳಲ್ಲಿ ದಲಿತರ ಅಹವಾಲು ಕೇಳುತ್ತಿಲ್ಲ, ಕನಿಷ್ಠ ಗೌರವ ಕೂಡಾ ಸಿಗುತ್ತಿಲ್ಲ, ಈ ಪೈಕಿ ಪೊಲೀಸ್ ಠಾಣೆಗಳನ್ನು ದಲಿತ ಮುಖಂಡರನ್ನು ಅಗೌರವವಾಗಿ ಕಾಣಲಾಗುತ್ತಿದೆ ಎಂದು ಚೇಳೂರು ಶಿವನಂಜಪ್ಪ ಆರೋಪಿಸಿದರು.
ಪ್ರತಿ ಸಭೆಯಲ್ಲೂ ಅರ್ಧ ಟೀ ಕುಡಿದು ಬಿಸ್ಕತ್ ತಿಂದು ಹೋಗುವ ದುಸ್ಥಿತಿ ಬಂದಿದೆ. ಸಭೆಯಲ್ಲಿ ಚರ್ಚಿಸುವ ವಿಚಾರಕ್ಕೆ ಯಾವುದೇ ಉತ್ತರ ಸಿಗುತ್ತಿಲ್ಲ, ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡುವ ಅಧಿಕಾರಿಗಳು ವರ್ಗಾವಣೆ ಆಗುತ್ತಾರೆ, ಬರಿ ಭರವಸೆಯಲ್ಲಿ ಮುಂದಿನ ಸಭೆಯಲ್ಲಿ ಮರಳಿ ಅದೇ ಸಮಸ್ಯೆ ಚರ್ಚೆ ಮಾಡಲಾಗುತ್ತದೆ ಎಂದು ಆರೋಪಿಸಿದ ಮಾರನಹಳ್ಳಿ ಶಿವಯ್ಯ ದಲಿತರ ಸಮಸ್ಯೆಗಳಿಗೆ ಸೂಕ್ತ ಉತ್ತರವನ್ನು ಮುಂದಿನ ಸಭೆಯಲ್ಲಿ ನೀಡಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಕಾಲ್ಪನಿಕ ಅರಣ್ಯ ಪ್ರದೇಶದಲ್ಲಿ ನೂರಾರು ವರ್ಷದಿಂದ ಅನುಭವಕ್ಕಿರುವ ರೈತರಿಗೆ ತೊಂದರೆ ನೀಡದಂತೆ ನ್ಯಾಯಾಲಯ ತಿಳಿಸಿದೆ. ಅರಣ್ಯ ಇಲಾಖೆಗೂ ಸೂಚಿಸಿರುವ ಸಚಿವರು ಸಹ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡದಂತೆ ಸೂಚಿಸಿದ್ದಾರೆ. ಆದರೂ ಅರಣ್ಯ ಇಲಾಖೆ ಸಿಬ್ಬಂದಿ ಅನುಭವದಲ್ಲಿರುವ ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.
ಮಾರಶೆಟ್ಟಿಹಳ್ಳಿ ಪಿಡಿಓ ದಲಿತರ ವಿರುದ್ಧ ಅನುಚಿತವಾಗಿ ವರ್ತಿಸಿದ್ದಾರೆ, ಮಂಜೂರಾಗಿರುವ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡಿದ್ದರೆ ತೆರವು ಮಾಡಿಸಿದ ಅಧಿಕಾರಿ ದಲಿತರನ್ನು ಅಗೌರವದಲ್ಲಿ ನೋಡಿದ್ದಾರೆ. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನ ಸ್ವಚ್ಛತೆ ಮತ್ತು ದುರಸ್ಥಿಗೆ ಪಟ್ಟಣ ಪಂಚಾಯಿತಿಗೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ ತಾಳಿದ್ದಾರೆ ಎಂಬ ಆರೋಪಕ್ಕೆ ಉತ್ತರ ನೀಡಿದ ಮುಖ್ಯಾಧಿಕಾರಿ ಯೋಗೀಶ್ ಒಂದು ತಿಂಗಳಲ್ಲಿ ಭವನ ಅಚ್ಚಕಟ್ಟು ಮಾಡುವ ಭರವಸೆ ನೀಡಿದರು. ಆರ್‌ಆರ್‌ಟಿ ವಿಭಾಗದಲ್ಲಿ ಸಿಬ್ಬಂದಿ ದಲಿತರ ಅರ್ಜಿಗಳಿಗೆ ಬೆಲೆ ನೀಡುವುದಿಲ್ಲ, ಕೇವಲವಾಗಿ ನಡೆಸಿಕೊಳ್ಳುವ ಸಿಬ್ಬಂದಿ ವಿರುದ್ಧ ಕ್ರಮವಹಿಸಲು ಒತ್ತಾಯಿಸಿದರು. ಎಚ್‌ಎಎಲ್ ಘಟಕ ಕೆಲಸ ಆರಂಭವಾದ ಸಂದರ್ಭದಲ್ಲಿ 120 ದಲಿತ ಕುಟುಂಬ ಒಕ್ಕಲೆಬ್ಬಿಸಲಾಗಿತ್ತು. ಅವರು ಅನುಭವದಲ್ಲಿದ್ದ ಜಮೀನು ಪಡೆದು ಪರ್ಯಾಯ ಜಮೀನು ನೀಡುವಲ್ಲಿ ನಿರ್ಲಕ್ಷ್ಯ ಮಾಡಲಾಗಿದೆ. ಕಳೆದ ಆರು ವರ್ಷಗಳಿಂದ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಲು ಫಣೀಂದ್ರ ಆಗ್ರಹಿಸಿದರು.
ಎಲ್ಲಾ ಸಮಸ್ಯೆಗಳನ್ನು ಆಲಿಸಿದ ತಹಸೀಲ್ದಾರ್ ಬಿ.ಆರತಿ ಅವರು ಮುಂದಿನ ಸಭೆಯಲ್ಲಿ ಸೂಕ್ತ ಉತ್ತರ ಒದಗಿಸುವ ಭರವಸೆ ನೀಡಿದರು.
ಸಭೆಯಲ್ಲಿ ತಾಪಂ ಸಹಾಯಕ ನಿರ್ದೇಶಕ ಜಯಸಿಂಹ, ಸಮಾಜ ಕಲ್ಯಾಣಾಧಿಕಾರಿ ರಾಮಣ್ಣ, ವಲಯ ಅರಣ್ಯಾಧಿಕಾರಿ ದುಗ್ಗಪ್ಪ, ಎಎಸ್ಐ ಶಿವಣ್ಣ ಸೇರಿದಂತೆ ದಲಿತ ಮುಖಂಡರು ಹಾಜರಿದ್ದರು.
ದಲಿತರ ಸ್ಮಶಾನ ಜಾಗ ಕಬಳಿಕೆ ಉನ್ನಾರಕ್ಕೆ ಆಕ್ರೋಶ
Get real time updates directly on you device, subscribe now.
Next Post
Comments are closed.