ಆತ್ಮನಿರ್ಭರ್‌ ಯೋಜನೆಗೆ ಪೂರಕವಾಗಿ ಕಾರ್ಯ ನಿರ್ವಹಣೆ: ಶೋಭಾ ಕರಂದ್ಲಾಜೆ

ರೈತರ ಆದಾಯ ಹೆಚ್ಚಿಸಲು ಯೋಜನೆ ರೂಪಿಸಲಾಗುತ್ತೆ

191

Get real time updates directly on you device, subscribe now.

ತುಮಕೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಆತ್ಮನಿರ್ಭರ್‌ ಭಾರತ್‌ ಯೋಜನೆಗೆ ಪೂರಕವಾಗಿ ಕಾರ್ಯ ನಿರ್ವಹಿಸುವುದಾಗಿ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ನಗರದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ದರ್ಶನ ಪಡೆದು ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಬಹಳ ದಿನಗಳ ನಂತರ ಸಿದ್ಧಗಂಗಾ ಮಠಕ್ಕೆ ಶ್ರೀಗಳ ಆಶೀರ್ವಾದಕ್ಕಾಗಿ ಆಗಮಿಸಿದ್ದೇನೆ, ಶ್ರೀಗಳು ಜೀವಂತವಾಗಿದ್ದ ಸಂದರ್ಭದಲ್ಲಿ ಶ್ರೀಮಠಕ್ಕೆ ಬಂದಾಗಲೆಲ್ಲಾ ಅವರು ಕೃಷಿ ಅಭಿವೃದ್ಧಿ, ರೈತರ ಕಲ್ಯಾಣ ಹಾಗೂ ನೀರಾವರಿಯ ಬಗ್ಗೆ ತಮ್ಮೊಂದಿಗೆ ಚರ್ಚೆ ನಡೆಸಿ ಸಲಹೆ ನೀಡುತ್ತಿದ್ದರು. ಅಂತೆಯೇ ಪ್ರಸ್ತುತ ತಾವು ಕೃಷಿ ಸಚಿವರಾಗಿದ್ದು ಪೂಜ್ಯರ ಆಶೀರ್ವಾದ ಪಡೆದು ತಮ್ಮ ಕಾರ್ಯ ಪ್ರಾರಂಭಿಸುವುದಾಗಿ ತಿಳಿಸಿದರು.
ಒಂದು ಜಿಲ್ಲೆ ಒಂದು ಬೆಳೆ ಯೋಜನೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೊರೊನಾ ಕಾರಣದಿಂದ ಈ ಯೋಜನೆಯ ಅನುಷ್ಠಾನದಲ್ಲಿ ಕೊಂಚ ವಿಳಂಬವಾಗಿದ್ದು, ಈಗಾಗಲೇ ಪ್ರಧಾನ ಮಂತ್ರಿಗಳು ಅದರ ಬಗ್ಗೆ ಕಾರ್ಯ ಪ್ರವೃತ್ತರಾಗಲು ಸೂಚನೆ ನೀಡಿದ್ದಾರೆ. ಅದರಂತೆಯೇ ಪ್ರತಿಯೊಬ್ಬ ರೈತನಿಗೂ ಅನುಕೂಲವಾಗುವಂತೆ ಅವರ ಆದಾಯ ಇಮ್ಮಡಿಗೊಳಿಸುವ ಯೋಜನೆ ರೂಪಿಸುವುದಾಗಿ ಹೇಳಿದರು.
ತಾವು ರಾಜ್ಯದ ರೈತರ ಸಮಸ್ಯೆ ಹಾಗೂ ಕೃಷಿ ಯೋಜನೆಗಳ ಅನುಷ್ಠಾನದ ಬಗ್ಗೆ ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅವರೊಂದಿಗೆ ಚರ್ಚಿಸಿದ್ದು, ರಾಜ್ಯದಲ್ಲಿ ರೈತರಿಗೆ ಆಗಬೇಕಿರುವ ಅನುಕೂಲಗಳು ಹಾಗೂ ಒಂದು ಜಿಲ್ಲೆ ಒಂದು ಬೆಳೆಯ ಬಗ್ಗೆ ಸಭೆ ನಡೆಸುವುದಾಗಿ ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕ ಜ್ಯೋತಿಗಣೇಶ್‌, ಮಾಜಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸುರೇಶ್ ಗೌಡ, ಮಾಜಿ ಎಂಎಲ್‌ಸಿ ಸದಸ್ಯ ಡಾ. ಎಂ.ಆರ್‌.ಹುಲಿನಾಯ್ಕರ್‌, ಜಿಲ್ಲಾ ಭಾಜಪ ಯುವ ಮೋರ್ಚಾ ಅಧ್ಯಕ್ಷ ಅರಕೆರೆ ರವೀಶ್‌, ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್‌.ಆರ್‌.ಗೌಡ, ಮುಖಂಡರಾದ ಶಿವಪ್ರಸಾದ್‌, ಎಂ.ಬಿ.ನಂದೀಶ್‌, ರವಿಶಂಕರ್‌ ಹೆಬ್ಬಾಕ, ಪ್ರೇಮಾ ಹೆಗಡೆ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!