ಸಂಸದ ಜಿ.ಎಸ್‌.ಬಸವರಾಜು ವಿರುದ್ಧ ಜೆಡಿಎಸ್‌ ಪ್ರತಿಭಟನೆ

ಶಾಸಕ ಶ್ರೀನಿವಾಸ್‌ ಬಳಿ ಕ್ಷಮೆ ಕೇಳಲು ಆಗ್ರಹ

212

Get real time updates directly on you device, subscribe now.

ತುಮಕೂರು: ಗುಬ್ಬಿ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವ ಎಸ್‌.ಆರ್.ಶ್ರೀನಿವಾಸ್‌ ಅವರನ್ನು ಅವಹೇಳನಕಾರಿಯಾಗಿ ಮಾತನಾಡಿರುವ ಲೋಕಸಭಾ ಸದಸ್ಯ ಜಿ.ಎಸ್‌.ಬಸವರಾಜು ವಿರುದ್ಧ ನಗರ ಮತ್ತು ಜಿಲ್ಲಾ ಜೆಡಿಎಸ್‌ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಬಿಜಿಎಸ್‌ ವೃತ್ತದಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್‌.ಸಿ.ಆಂಜಿನಪ್ಪ ನೇತೃತ್ವದಲ್ಲಿ ಸಮಾವೇಶಗೊಂಡ ಜೆಡಿಎಸ್‌ ಕಾರ್ಯಕರ್ತರು ಜಿ.ಎಸ್‌.ಬಸವರಾಜು ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್‌.ಸಿ.ಆಂಜಿನಪ್ಪ, ಜೆಡಿಎಸ್‌ ಹಿರಿಯ ಮುಖಂಡರು ಹಾಲಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಅವರು ಗುಬ್ಬಿ ಕ್ಷೇತ್ರದ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿದ್ದು, ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಇಂತಹವರ ಮೇಲೆ ಸಂಸದರು ಕೀಳುಮಟ್ಟದ ಭಾಷೆ ಬಳಸಿ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದರು.
ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷವನ್ನು ಕಟ್ಟಿದಂತಹ ಮತ್ತು ಗುಬ್ಬಿ ಕ್ಷೇತ್ರಕ್ಕೆ ಹೇಮಾವತಿ ನೀರು ಹರಿಸಲು ಶ್ರಮಿಸಿರುವ ವಾಸಣ್ಣ ಅವರು ಯಾವುದೇ ಭ್ರಷ್ಟಾಚಾರವಿಲ್ಲದೆ, ಕಪ್ಪು ಚುಕ್ಕೆ ಇಲ್ಲದಂತೆ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ. ಇಂತಹವರ ಬೆಳವಣಿಗೆಯನ್ನು ಸಹಿಸದೆ ಸಂಸದರು ಅವಹೇಳನ ಮಾಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ಜಿಲ್ಲೆಗೆ ನಿಮ್ಮ ಕೊಡುಗೆಯಾದರೂ ಏನು ಎಂದು ಸಂಸದ ಜಿ.ಎಸ್‌.ಬಸವರಾಜು ಅವರನ್ನು ಪ್ರಶ್ನಿಸಿದ ಆರ್‌.ಸಿ.ಆಂಜಿನಪ್ಪ, ಕೋವಿಡ್‌ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸಬೇಕಾಗಿದ್ದವರು ಎಲ್ಲಿದ್ದರು ಎಂದು ಪ್ರಶ್ನಿಸಿದರು.
ಗುಬ್ಬಿ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ವಾಸಣ್ಣ ಅವರು ಐದನೇ ಬಾರಿಗೂ ಶಾಸಕರಾಗಿ ಹೆಚ್ಚು ಬಹುಮತದೊಂದಿಗೆ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಜೆಡಿಎಸ್‌ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್‌. ನಾಗರಾಜು ಮಾತನಾಡಿ, ಗುಬ್ಬಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕರಾದ ವಾಸಣ್ಣ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿರುವ ಸಂಸದರ ಹೇಳಿಕೆ ಖಂಡನೀಯ, ನಿಮ್ಮ ಮಾತಿನ ಮೇಲೆ ಹಿಡಿತವಿರಬೇಕು, ನಾಲ್ಕು ಬಾರಿ ಗುಬ್ಬಿ ಕ್ಷೇತ್ರದಲ್ಲಿ ಶಾಸಕರಾಗಿ ಒಂದು ಬಾರಿ ಸಚಿವರಾಗಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಅಂತಹವರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.
ಜೆಡಿಎಸ್‌ ನಗರಾಧ್ಯಕ್ಷ ಬೆಳ್ಳಿ ಲೋಕೇಶ್‌ ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಬಡವರಿಗೆ, ಕೂಲಿ ಕಾರ್ಮಿಕರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ, ಎಲ್ಲರಿಗೂ ಆಹಾರದ ಕಿಟ್ ಗಳನ್ನು ವಿತರಿಸಿ ಜನರ ನೆರವಿಗೆ ಆಸರೆಯಾಗಿದ್ದಾರೆ. ಕ್ಷೇತ್ರದ ಜನತೆಯ ಕಷ್ಟ ಸುಖಗಳನ್ನು ಆಲಿಸಿ ಅವರ ಸಮಸ್ಯೆ ಬಗೆಹರಿಸುವ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಇಂತಹ ಜನಪ್ರಿಯ ಶಾಸಕರ ವಿರುದ್ಧ ಸಂಸದ ಜಿ.ಎಸ್‌.ಬಸವರಾಜು ಅವರು ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದರು.
ಗುಬ್ಬಿ ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಗುರು ರೇಣುಕಾರಾಧ್ಯ ಮಾತನಾಡಿ, ಸುಳ್ಳನ್ನೇ ಮೈಗೂಡಿಸಿಕೊಂಡು ಜನರಿಗೆ ಸದಾ ಸುಳ್ಳು ಹೇಳುತ್ತಾ ಬಂದಿರುವ ಸಂಸದರು ಇತ್ತೀಚೆಗೆ ಗುಬ್ಬಿ ತಾಲ್ಲೂಕು ನಂದಿಹಳ್ಳಿ ಗ್ರಾಮದ ಕಾರ್ಯಕ್ರಮವೊಂದರಲ್ಲಿ ಈ ಭಾಗದ ರೈತರಿಗೆ ಅನುಕೂಲವಾಗುವಂತೆ ಡ್ಯಾಂ ನಿರ್ಮಿಸಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರದಿಂದ 550 ಕೋಟಿ ರೂ. ಬಿಡುಗಡೆಯಾಗಿದೆ. ಇದಕ್ಕಾಗಿ ರೈತರು ತಮ್ಮ ಜಮೀನುಗಳನ್ನು ಬಿಟ್ಟುಕೊಡಬೇಕು. ರೈತರಿಗೆ ಎಕರೆಗೆ 80 ಲಕ್ಷ ರೂ. ನಿಂದ 1 ಕೋಟಿ ರೂ. ವರೆಗೆ ಉತ್ತಮ ಬೆಲೆ ನೀಡಲಾಗುವುದು ಎಂದು ಹೇಳುವಾಗ ನಮ್ಮ ಶಾಸಕರಾದ ಎಸ್‌.ಆರ್‌.ಶ್ರೀನಿವಾಸ್‌ ಅವರು ರೈತರಿಗೆ ಸುಳ್ಳು ಹೇಳಬೇಡಿ ಎಂದು ಸಂಸದರಿಗೆ ಹೇಳಿದ್ದಕ್ಕೆ, ಸಂಸದರು ಶಾಸಕರಿಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ, ಕೂಡಲೇ ಶಾಸಕರ ಮತ್ತು ಕ್ಷೇತ್ರದ ಜನತೆಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್‌ ಮುಖಂಡರಾದ ಆರ್‌.ದೇವರಾಜು, ಗೋವಿಂದರಾಜು, ಪಾಲಿಕೆ ಸದಸ್ಯರಾದ ನರಸಿಂಹಮೂರ್ತಿ, ಶ್ರೀನಿವಾಸ್‌, ಮಂಜುನಾಥ್‌, ಧರಣೇಂದ್ರಕುಮಾರ್‌, ಗಂಗಣ್ಣ, ಜಾಂಗೀರ್‌ ರವೀಶ್‌, ನರಸಿಂಹರಾಜು, ಕೃಷ್ಣಮೂರ್ತಿ, ತಾಹೇರಾ ಕುಲ್ಸುಮ್‌, ಸುಲ್ತಾನ್‌ ಮಹಮ್ಮದ್‌, ಇಸ್ಮಾಯಿಲ್‌ ಇತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!