ಸಂವಿಧಾನ ಬದ್ಧ ಮೀಸಲಾತಿ ವಂಚಿತ ಸಮುದಾಯಗಳಿಗೆ ಸಿಗಲಿ

ಸಮಾನತೆಯ ಕೂಗು ಗಟ್ಟಿಗೊಳ್ಳಲಿ: ಪರಂ

169

Get real time updates directly on you device, subscribe now.

ತುಮಕೂರು: ದೇಶಕ್ಕೆ ಸ್ವಾತಂತ್ರ ಬಂದ 74 ವರ್ಷ ಕಳೆದರೂ ಯಾವುದೇ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಬದಲಾವಣೆ ಕಾಣದೆ ಇರುವುದು ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಜನರು ಸಮಾನತೆಗಾಗಿ ಎತ್ತಿರುವ ಈ ಧ್ವನಿ ದೊಡ್ಡದಾಗಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.
ನಗರದ ಹರ್ಬನ್‌ ರೆಸಾರ್ಟ್ ನಲ್ಲಿ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಹಾಗೂ ತುಮಕೂರು ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟ ಜಂಟಿಯಾಗಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ ನಂತರದಲ್ಲಿ ಹಿಂದುಳಿದ ವರ್ಗಗಳ ಸಮಗ್ರ ಅಧ್ಯಯನಕ್ಕೆಂದು ನೇಮಕವಾಗದ ಆಯೋಗಗಳು ಒಂದಕ್ಕೊಂದು ತಾಳೆಯಿಲ್ಲದೆ ಅಂಕಿ ಅಂಶಗಳನ್ನು ನೀಡಿ ಸಾಕಷ್ಟು ಗೊಂದಲ ಉಂಟು ಮಾಡಿವೆ. ಇದನ್ನೇ ಲಾಭ ಮಾಡಿಕೊಂಡ ಆಳುವ ಸರಕಾರಗಳು ಹಿಂದುಳಿದ ವರ್ಗಗಳ, ಅದರಲ್ಲಿಯೂ ಅತಿ ಹಿಂದುಳಿದ ವರ್ಗಗಳನ್ನು ಮೀಸಲಾತಿಯಿಂದ ವಂಚಿಸುತ್ತಲೇ ಬಂದಿವೆ, ಹಾಗಾಗಿ ಸಮಾನತೆಯ ಈ ಕೂಗು ಮತ್ತಷ್ಟು ಗಟ್ಟಿಗೊಳ್ಳಬೇಕಾಗಿದೆ ಎಂದರು.
ಒಂದೇಡೆ ಹಂತ ಹಂತವಾಗಿ ಸರಕಾರಿ ಸಂಸ್ಥೆಗಳು ಖಾಸಗೀಕರಣಗೊಳ್ಳುತ್ತಿವೆ, ಇನ್ನೊಂದಡೆ ಹೊರಗುತ್ತಿಗೆ ಎಂಬ ಪೆಡಂಭೂತ ಯಾವುದೇ ಭದ್ರತೆಯಿಲ್ಲದೆ ಯುವಜನರು, ಅದರಲ್ಲಿಯೂ ಎಸ್ಸಿ, ಎಸ್ಟಿ, ಒಬಿಸಿ ಯುವಜನತೆ ದುಡಿಯುತ್ತಿರುವುದನ್ನು ಗಮನಿಸಿದರೆ ಆಳುವ ವರ್ಗಗಳು ಈ ಜನಾಂಗವನ್ನು ಸರಕಾರಿ ನೌಕರರಿಯಿಂದ ದೂರ ಇಡಲು ನಡೆಸಿದ ಹುನ್ನಾರ ಎಂಬ ಅನುಮಾನ ನಮ್ಮೆಲ್ಲರನ್ನು ಕಾಡುತ್ತಿದೆ. ಭಾರತದಲ್ಲಿ ದಲಿತರು ಮಾತ್ರ ಅಪಮಾನಕ್ಕೆ ಒಳಗಾಗುತ್ತಿಲ್ಲ, ಹಿಂದುಳಿದ, ಅದರಲ್ಲಿಯೂ ಅತಿ ಹಿಂದುಳಿದ, ಕುಲಕಸುಬನ್ನೇ ನಂಬಿಕೊಂಡು ಬದುಕುತಿದ್ದ ನೂರಾರು ಸಮುದಾಯಗಳು ಸಹ ಅಪಮಾನಕ್ಕೆ ಒಳಗಾಗುತ್ತಿವೆ. ಇದರ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತಬೇಕಾಗಿದೆ, ಯಾವುದೇ ಹೋರಾಟವಿಲ್ಲದೆ ಶೇ.3 ರಷ್ಟು ಜನ ಶೇ.10 ಮೀಸಲಾತಿಯನ್ನು ಕಾನೂನಾತ್ಮಕವಾಗಿ ಪಡೆದಿರುವಾಗ, ಶೇ.52 ರಷ್ಟಿರುವ ನಾವುಗಳು ಏಕೆ ಮೀಸಲಾತಿಗಾಗಿ ಅಂಗಲಾಚಬೇಕು, ಇದನ್ನು ಪ್ರತಿಯೊಬ್ಬ ಯುವಜನರು ಅರ್ಥ ಮಾಡಿಕೊಂಡು ಮುನ್ನಡೆಯಬೇಕಾಗಿದೆ ಎಂದು ಡಾ.ಜಿ.ಪರಮೇಶ್ವರ್‌ ತಿಳಿಸಿದರು.
ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಮಾತನಾಡಿ, ಹಿಂದುಳಿದ ಜಾತಿಗಳ ಇಂದಿನ ಸ್ಥಿತಿಗೆ ನಾವುಗಳೇ ಕಾರಣ, ಸಂವಿಧಾನ ನಮಗೆ ಏನು ನೀಡಿದೆ, ಅದರಲ್ಲಿ ನಾವು ಪಡೆದಿರುವುದು ಎಷ್ಟು ಎಂಬುದನ್ನು ಸರಿಯಾಗಿ ತಿಳಿದುಕೊಂಡು ಮೌನಕ್ಕೆ ಶರಣಾಗಿದ್ದೇ ಕಾರಣ, ನೂನ್ಯತೆ ಎಲ್ಲಿದೆ ಎಂದು ಮೊದಲು ಪತ್ತೆ ಹಚ್ಚಿ ಹೋರಾಟ ಆರಂಭಿಸಬೇಕಾಗಿದೆ, ದಲಿತರಿಗೆ ಮೀಸಲಾತಿ ಸಿಕ್ಕಿ 73 ವರ್ಷ ಕಳೆದರೂ ಅವರಿಗೆ ದಕ್ಕಿರುವುದು ಶೇ.9.08 ಮಾತ್ರ, 1996ರಲ್ಲಿ ಉದ್ಯೋಗದಲ್ಲಿ, 2008ರಲ್ಲಿ ಶಿಕ್ಷಣದಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ದೊರೆತರು ಇದುವರೆಗೂ ಲಭ್ಯವಾಗಿರುವುದು ಶೇ.2.5 ರಷ್ಟು ಮಾತ್ರ, ಐಐಟಿ, ಐಐಎಂ ನಂತಹ ಶಿಕ್ಷಣ ಸಂಸ್ಥೆಗಳಲ್ಲಿ ತಳಸಮುದಾಯಗಳ ಶೇ.98 ರಷ್ಟು ಹುದ್ದೆಗಳು ಖಾಲಿ ಇವೆ, ಇವುಗಳ ವಿರುದ್ಧ ನಾವೆಲ್ಲರೂ ಧ್ವನಿ ಎತ್ತಬೇಕಾಗಿದೆ ಎಂದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್‌.ದ್ವಾರಕಾನಾಥ್‌ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿ ಅಸ್ಪಷ್ಯರ ಒಂದು ರೀತಿಯ ಸಮಸ್ಯೆ ಎದುರಿಸುತ್ತಿದ್ದರೆ, ಒಬಿಸಿಯಲ್ಲಿ ಗೋಚರವೇ ಆಗದ ಅನೇಕ ಸಮುದಾಯಗಳಿವೆ. ಅವುಗಳನ್ನು ಪ್ರತಿನಿಧಿಸುವವರು ಯಾರು ಎಂಬ ಪ್ರಶ್ನೆ ಬೃಹದಾಕಾರವಾಗಿ ನಮ್ಮ ಮುಂದಿದೆ. ಇಂತಹ ಹೊತ್ತಿನಲ್ಲಿ ಪ್ರಬಲ ಜಾತಿಗಳ 2ಎ ಜಾತಿ ಪಟ್ಟಿಗೆ ಸೇರಲು ಪೈಪೋರ್ಟಿ ನಡೆಸುತ್ತಿರುವುದನ್ನು ನೋಡಿದರೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ತಬ್ಬಲಿಗಳಾಗಿರುವ ಈ ಸಮುದಾಯಗಳ ಪಾಡೇನು, ಅದಕ್ಕಾಗಿ ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದೇವೆ ಎಂದರು.
ಮುಖ್ಯಮಂತ್ರಿ ಚಂದ್ರು ಮಾತನಾಡಿ, ಕುಲವೃತ್ತಿ ನಂಬಿ ಬದುಕುತಿದ್ದ ಶ್ರಮಜೀವಿಗಳಿಗೆ ರಾಜಕೀಯ ಅಧಿಕಾರ ಸಿಗದ ಹೊರತು ಗುಲಾಮಗಿರಿಯಿಂದ ಮುಕ್ತರಾಗಲು ಸಾಧ್ಯವಿಲ್ಲ, ಶೇ.52 ರಷ್ಟಿರುವ ಜನರಿಗೆ ಶೇ.32 ರಷ್ಟು ಮೀಸಲಾತಿ ನೀಡಲಾಗಿದೆ. ಶೇ.3 ರಷ್ಟಿರುವ ಜನರಿಗೆ ಶೇ.10 ರಷ್ಟು ಮೀಸಲಾತಿ ನೀಡಲಾಗಿದೆ. ಈ ತಾರತಮ್ಯ ಹೋಗಲಾಡಿಸಬೇಕೆಂಬ ಹೋರಾಟಕ್ಕೆ ಆಳುವ ಸರಕಾರಗಳಿಂದ ಬೆಲೆ ಸಿಗದ ಪರಿಣಾಮ ಕಾನೂನು ಹೋರಾಟ ಆರಂಭವಾಗಿದೆ. ಮೊದಲು ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ವರದಿ ಬಹಿರಂಗ ಪಡಿಸಬೇಕು, ಇಲ್ಲದಿದ್ದರೆ ಮತ್ತೆ ನಾವು ಚಾತುವರ್ಣ ವ್ಯವಸ್ಥೆ ಮರಳು ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್‌.ರಾಜಣ್ಣ, ಇದೊಂದು ಐತಿಹಾಸಿನ ದಿನ, 2006ರ ಆಗಸ್ಟ್ 21 ರಂದು ತುಮಕೂರಿನ ಸರಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಬೃಹತ್‌ ಅಹಿಂದ ಸಮಾವೇಶ ನಡೆದು,ಒಂದು ಸರಕಾರವೇ ಅಸ್ಥಿತ್ವಕ್ಕೆ ಬಂದಿತ್ತು, ಸಂಘಟನೆಯ ಮೂಲಕ ಮತ್ತೊಮ್ಮೆ ಅಂತಹದ್ದ ಸಮಾವೇಶವನ್ನು ಡಾ.ಜಿ.ಪರಮೇಶ್ವರ್‌ ಅವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಿ ನಡೆಸಲಾಗುವುದು ಎಂದರು.
ವೇದಿಕೆಯಲ್ಲಿ ಹಿಂದುಳಿದ ವರ್ಗದ ಮುಖಂಡರಾದ ವೇಣುಗೋಪಾಲ್‌, ವಿಧಾನಪರಿಷತ್‌ ಸದಸ್ಯ ಪಿ.ಆರ್‌.ರಮೇಶ್‌, ವಿಧಾನಪರಿಷತ್‌ ಮಾಜಿ ಸದಸ್ಯ ವಿ.ಆರ್‌.ಸುದರ್ಶನ್‌, ಮಾಜಿ ಡಿವೈಎಸ್ಪಿ ಸುಬ್ಬಣ್ಣ, ಹೆಚ್‌.ಸಿ.ರುದ್ರಪ್ಪ, ಎಸ್‌.ನಾಗಣ್ಣ, ತುಮಕೂರು ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟ ಚಂದ್ರಶೇಖರಗೌಡ, ಧನಿಯಕುಮಾರ್‌, ಸುರೇಶ್‌, ಪ್ರೆಸ್‌ ರಾಜಣ್ಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!