ಊರ್ಡಿಗೆರೆಯಲ್ಲಿ ಪೌತಿ ಖಾತೆ ಆಂದೋಲನ 27ಕ್ಕೆ

289

Get real time updates directly on you device, subscribe now.

ತುಮಕೂರು: ರೈತರು ತಮ್ಮ ಪ್ರಿತಾರ್ಜಿತ ಆಸ್ತಿಯ ಹಕ್ಕು ಹೊಂದಲು ಅಡ್ಡಿಯಾಗಿರುವ ಪೌತಿ ಖಾತೆಗೆ ಪ್ರಮುಖ ತೊಂದರೆಯಾಗಿರುವ ಮರಣ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಆಗಸ್ಟ್ 27 ರ ಶುಕ್ರವಾರ ತುಮಕೂರು ತಾಲೂಕು ಊರ್ಡಿಗೆರೆಯ ನಾಡಕಚೇರಿಯ ಬಳಿ ಜಿಲ್ಲಾಡಳಿತದ ಸಹಕಾರದೊಂದಿಗೆ ಪೌತಿ ಖಾತೆ ಆಂದೋಲನ ಆರಂಭಿಸಲಾಗುವುದು ಎಂದು ವಕೀಲ ಹಾಗೂ ಸಮಾಜ ಸೇವಕ ಎಲ್‌.ರಮೇಶ್‌ ನಾಯಕ್‌ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಮೀನಿನ ಅನುಭವದಲ್ಲಿರುವ ವ್ಯಕ್ತಿಗಳು ತಮ್ಮ ಪಿತ್ರಾರ್ಜಿತ ಆಸ್ತಿಯ ಹಕ್ಕು ಪಡೆಯಲು ಅನುಕೂಲವಾಗುವಂತೆ ಕಾನೂನು ಪ್ರಕಾರ ಅಡ್ಡಿಯಾಗಿರುವ ಅವರ ಪೂರ್ವಿಕರ ಮರಣ ಪ್ರಮಾಣ ಪ್ರತ ಪಡೆಯಲು ಅನುಕೂಲವಾಗುವಂತೆ ಕಾನೂನಾತ್ಮಕ ಪ್ರಕ್ರಿಯೆಯನ್ನು ಉಚಿತವಾಗಿ ಮಾಡಿಕೊಡುವ ಈ ಪೌತಿ ಖಾತೆ ಆಂದೋಲನವನ್ನು ಮೊದಲಿಗೆ ಉರ್ಡಿಗೆರೆಯಲ್ಲಿ ಆರಂಭಿಸಲಾಗುತ್ತಿದ್ದು, ನಂತರ ಜಿಲ್ಲೆಯ ಎಲ್ಲಾ ಹೋಬಳಿಗಳಿಗೂ ವಿಸ್ತರಿಸಲಾಗುವುದು ಎಂದರು.
ರಾಜ್ಯ ಸರಕಾರದ ಪ್ರಕಾರ ಪೌತಿ ಖಾತೆಗೆ ಬಂದಿರುವ ಅರ್ಜಿಗಳ ಸಂಖ್ಯೆಯೇ ಸುಮಾರು 2.71 ಲಕ್ಷ ದಷ್ಟಿದೆ. ಇದರ ಜೊತೆಗೆ ಸುಮಾರು 40- 50 ವರ್ಷಗಳಿಂದ ಮುತ್ತಾತ, ತಾತನ, ತಂದೆಯ ಹೆಸರಿನಲ್ಲಿರುವ ಭೂಮಿಯ ಹಕ್ಕು ಮಕ್ಕಳಿಗೆ ಕಾನೂನಾತ್ಮಕವಾಗಿ ವರ್ಗಾವಣೆಯಾಗಿಲ್ಲ. ಇದರ ಪರಿಣಾಮ ಸರಕಾರದ ಯಾವುದೇ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ, ಕನಿಷ್ಠ ಜಮೀನಿನ ಅಭಿವೃದ್ಧಿಗೆ ಬ್ಯಾಂಕುಗಳಿಂದಲೂ ಸಾಲ ಸೌಲಭ್ಯ ಪಡೆಯಲು ಅವಕಾಶ ಇಲ್ಲದಂತಾಗಿದೆ. ಹಾಗಾಗಿ ರೈತರ ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರಥಮವಾಗಿ ಪೌತಿ ಖಾತೆ ಆಂದೋಲನವನ್ನು ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳ ಸಹಕಾರೊಂದಿಗೆ ಕೈಗೊಳ್ಳಲಾಗಿದೆ ಎಂದು ವಕೀಲ ರಮೇಶ್‌ ನಾಯಕ್‌ ತಿಳಿಸಿದರು.
ಸರಕಾರದ ನಿಯಮದ ಪ್ರಕಾರ ವ್ಯಕ್ತಿ ಸತ್ತ 28 ದಿನಗಳ ಒಳಗೆ ಸಂಬಂಧಪಟ್ಟ ಗ್ರಾಮಲೆಕ್ಕಿಗರೇ ಖುದ್ದು ಮರಣ ಪ್ರಮಾಣ ಪತ್ರ ನೀಡಬೇಕು. ಒಂದು ವರ್ಷದ ಒಳಗಿದ್ದರೆ, ತಹಶೀಲ್ದಾರರು, ಸೂಕ್ತ ಕಾರಣಗಳನ್ನು ಪಡೆದು, ಕುಟುಂಬದವರಿಗೆ ಮರಣ ಪ್ರಮಾಣ ಪತ್ರ ವಿತರಿಸಬಹುದಾಗಿದೆ.ಆದರೆ ಒಂದು ವರ್ಷದ ಮೇಲ್ಪಟ್ಟ ಪ್ರಕರಣಗಳು ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದ ಮೂಲಕವೇ ದಾವೆ ಹೂಡಿ, ಮರಣ ಪ್ರಮಾಣ ಪತ್ರ ಪಡೆದು ಪೌತಿ ಖಾತೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.ನ್ಯಾಯಾಲಯದ ಈ ಪ್ರಕ್ರಿಯೆಗೆ ಸಾವಿರಾರು ರೂಗಳ ಖರ್ಚು ಬರುತ್ತದೆ.ಆದರೆ ವಕೀಲನಾಗಿ,ಜನರಿಗೆ ಅದರಲ್ಲಿಯೂ ರೈತರಿಗೆ ಅನುಕೂಲ ಮಾಡಿ ಕೊಡುವ ನಿಟ್ಟಿನಲ್ಲಿ ಈ ಪ್ರಕ್ರಿಯೆಯನ್ನು ಉಚಿತವಾಗಿ ಮಾಡಿಕೊಡಲು ನಿರ್ಧರಿಸಿದ್ದೇನೆ, ಪತ್ರಿಕೆಗಳಲ್ಲಿ ಪ್ರಕಟಣೆ ನೀಡುವುದು ಸಂಬಂಧ ಪಟ್ಟ ಕುಟುಂಬದ ಪ್ರಕ್ರಿಯೆಯಾಗಿದೆ, ಎಷ್ಟೇ ಜನ ಬಂದರೂ ಈ ಕಾರ್ಯವನ್ನು ಕಾನೂನು ಸೇವೆ ಎಂದು ಪರಿಗಣಿಸಿ ಮಾಡಿಕೊಡಲಾಗುವುದು ಎಂದು ಎಲ್‌.ರಮೇಶ್‌ ನಾಯಕ್‌ ತಿಳಿಸಿದರು.
ಬಿಜೆಪಿ ಪಕ್ಷದ ದಾವಣಗೆರೆ ಉಸ್ತುವಾರಿ ಹಾಗೂ ಸ್ಥಳೀಯ ಮುಖಂಡರಾದ ಲಕ್ಷ್ಮೀಶ್‌ ಮಾತನಾಡಿ, ಇದೊಂದು ಪಕ್ಷಾತೀತ, ಜಾತ್ಯಾತೀತ ಕಾರ್ಯಕ್ರಮ, ಕೆಲವರಿಗೆ ಪೌತಿ ಖಾತೆ ಮಾಡಿಸಲು ಏನೆಲ್ಲಾ ಪ್ರಕ್ರಿಯೆ ನಡೆಸಬೇಕು ಎಂಬ ತಿಳುವಳಿಕೆಯೂ ಇಲ್ಲ. ಹಾಗಾಗಿ ಮಧ್ಯವರ್ತಿಗಳ ಕೈಗೆ ಸಿಕ್ಕು ಸಾವಿರಾರು ರೂ.ಗಳನ್ನು ಕಳೆದುಕೊಳ್ಳುತಿದ್ದಾರೆ. ಕೆಲವೊಮ್ಮೆ ಮೋಸ ಹೋಗುತ್ತಿದ್ದಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ವಕೀಲ ರಮೇಶ್‌ ನಾಯಕ್‌ ಅವರು ಕೈಗೊಂಡಿರುವ ಈ ಪೌತಿ ಖಾತೆ ಆಂದೋಲನಕ್ಕೆ ಬೆಂಬಲವಾಗಿ ನಿಂತಿದ್ದು, ನಮ್ಮ ಕೈಲಾದ ಸಹಾಯವನ್ನು ಮಾಡಲು ನಿರ್ಧರಿಸಿದ್ದೇವೆ. ಆ.27 ರಂದು ಬರುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ, ಅಗತ್ಯಬಿದ್ದರೆ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಉರ್ಡಿಗೆರೆ ಗ್ರಾಮಪಂಚಾಯಿತಿ ಸದಸ್ಯ ಮಂಜುನಾಥ್‌, ಮುಖಂಡರಾದ ಶಿವಕುಮಾರ್‌ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!