ಕೋವಿಡ್‌ ಹೆಚ್ಚಿರುವ ಪ್ರದೇಶಗಳಲ್ಲಿ ಲಸಿಕೆ ಹಾಕಿ: ಜಿಲ್ಲಾಧಿಕಾರಿ

343

Get real time updates directly on you device, subscribe now.

ತುಮಕೂರು: ಜಿಲ್ಲೆಯಲ್ಲಿ ಕೋವಿಡ್‌-19 ಸೋಂಕಿನ ಪ್ರಮಾಣ ಹೆಚ್ಚಿರುವ ಪ್ರದೇಶಗಳಲ್ಲಿನ ಜನರಿಗೆ ಮೊದಲಾದ್ಯತೆಯಾಗಿ ಮೊದಲ ಹಾಗೂ ಎರಡನೇ ಡೋಸ್‌ ಲಸಿಕೆ ನೀಡುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಕೋವಿಡ್‌-19 ಸಂಬಂಧ ಜರುಗಿದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸೋಂಕಿನ ನಿಯಂತ್ರಣಕ್ಕಾಗಿ ಲಸಿಕಾಕರಣ ಅಭಿಯಾನವನ್ನು ಎಲ್ಲಾ ತಾಲೂಕುಗಳಲ್ಲಿಯೂ ಯಶಸ್ವಿಗೊಳಿಸಬೇಕು. ಲಸಿಕೆ ಕುರಿತು ಜಾಗೃತಿ ಮೂಡಿಸುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಲಸಿಕಾರಣ ಕಾರ್ಯ ಮಾಡಬೇಕು ಎಂದು ನಿರ್ದೇಶಿಸಿದರು.
ಪಾವಗಡ ತಾಲೂಕಿನಲ್ಲಿ ಮಾದರಿ ಯೋಜನೆಯೊಂದನ್ನು ರೂಪಿಸಿ ಒಂದೊಂದು ದಿನ ಒಂದೊಂದು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಲಸಿಕೆ ನೀಡಬೇಕು. ಲಸಿಕೆ ನೀಡುವ ಮುನ್ನ ಗ್ರಾಮ ಪಂಚಾಯತ್ ನಲ್ಲಿ ಡಂಗೂರ ಸಾರಬೇಕು. ಲಸಿಕಾಕರಣದ ಬಗ್ಗೆ ಹೆಚ್ಚು ಪ್ರಚಾರ ಮಾಡಿ ಲಸಿಕೆ ನೀಡಬೇಕು ಎಂದು ತಹಸೀಲ್ದಾರ್‌, ಇಒ, ತಾಲೂಕು ಆರೋಗ್ಯಾಧಿಕಾರಿಗಳಿಗೆ ಸಲಹೆ ನೀಡಿದರು.
ಎಲ್ಲಾ ತಾಲೂಕುಗಳಲ್ಲಿಯೂ ನಿಗಧಿತ ಗುರಿಯಂತೆ ಕೋವಿಡ್‌ ಪರೀಕ್ಷೆ ನಡೆಸಬೇಕು. ಸೋಂಕಿತರನ್ನು ಕಡ್ಡಾಯವಾಗಿ ಹೋಂ ಐಸೋಲೇಷನ್‌ ಅಥವಾ ಕೋವಿಡ್‌ ಕೇರ್‌ ಸೆಂಟರ್ ನಲ್ಲಿಟ್ಟು ಚಿಕಿತ್ಸೆ ನೀಡಬೇಕು ಎಂದು ನಿರ್ದೇಶಿಸಿದರು.
ಬೆಳೆ ಸಮೀಕ್ಷೆಗೆ ಹೆಚ್ಚು ಪ್ರಚಾರ: ಬೆಳೆ ಸಮೀಕ್ಷೆ ಆ್ಯಪ್‌ ಮೂಲಕ ರೈತರು ಬೆಳೆ ಸಮೀಕ್ಷೆ ಮಾಡಿಕೊಳ್ಳುವ ಬಗ್ಗೆ ಎಲ್ಲಾ ತಹಸೀಲ್ದಾರ್‌, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಹೆಚ್ಚಿನ ಪ್ರಚಾರ ಮಾಡಿ ಬೆಳೆ ಸಮೀಕ್ಷೆ ಕೈಗೊಳ್ಳಲು ರೈತರಿಗೆ ಅರಿವು ಮೂಡಿಸಬೇಕು ಎಂದು ನಿರ್ದೇಶಿಸಿದರು.
ಇದೇ ವೇಳೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ ಮಾತನಾಡಿ, ಈ ಬಾರಿ ಶೇ.50 ರಷ್ಟು ಬೆಳೆ ಸಮೀಕ್ಷೆ ಪ್ರಗತಿ ರೈತರಿಂದಲೇ ಆಗಬೇಕಿದೆ. ಹಾಗಾಗಿ ರೈತರಿಗೆ ಹೆಚ್ಚು ಅರಿವು ಮೂಡಿಸಿ ರೈತರೇ ಬೆಳೆ ಸಮೀಕ್ಷೆ ಕೈಗೊಳ್ಳಲು ಕ್ರಮ ವಹಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಸಂಭಾವ್ಯ 3ನೇ ಅಲೆ ತಡೆಗಾಗಿ ಸರ್ಕಾರ ಆರೋಗ್ಯ ನಂದನ್‌ ಕಾರ್ಯಕ್ರಮ ರೂಪಿಸಿದ್ದು, ಈ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು. ಈ ಕಾರ್ಯಕ್ರಮದ ಅಂಗವಾಗಿ ಶಾಲೆಗೆ ಆಗಮಿಸುವ ಮಕ್ಕಳಿಗೆ ತಪಾಸಣೆ, ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ವಿತರಣೆ, ಶಾಲೆಗೆ ತೆರಳುವ ಪೋಷಕರಿಗೆ ಲಸಿಕೆ ನೀಡಲು ಕ್ರಮವಹಿಸಬೇಕು. ಆರೋಗ್ಯಧಿಕಾರಿ, ಇಒ, ಶಿಕ್ಷಣಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು ಸಮನ್ವಯ ಸಾಧಿಸಿಕೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್ ಕುಮಾರ್‌ ಶಹಾಪುರವಾಡ್‌, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್‌, ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಶಸ್ತ್ರಚಿಕಿತ್ಸಕ ವೀರಭದ್ರಯ್ಯ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!