ಕೊರೊನಾತಂಕದ ನಡುವೆಯೇ ಸ್ಕೂಲ್‌ ಓಪನ್

ಖುಷಿಯಿಂದಲೇ ಶಾಲೆಗಳತ್ತ ಬಂದ ಸ್ಟೂಡೆಂಟ್ಸ್- ಹೂ ನೀಡಿ ವಿದ್ಯಾರ್ಥಿಗಳಿಗೆ ವೆಲ್ ಕಮ್

492

Get real time updates directly on you device, subscribe now.

ತುಮಕೂರು: ರಾಜ್ಯದಲ್ಲಿ ಕೋವಿಡ್‌-19 ಸೋಂಕಿನ ಆರ್ಭಟ ತಗ್ಗಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ 9ನೇ ತರಗತಿಯಿಂದ 12ನೇ ತರಗತಿವರೆಗೆ ಶಾಲಾ ಕಾಲೇಜುಗಳನ್ನು ಸರ್ಕಾರ ಆರಂಭಿಸಿದ್ದು, ಜಿಲ್ಲೆಯಲ್ಲೂ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬೆನ್ನಿಗೆ ಬ್ಯಾಗ್‌ ತಗಲು ಹಾಕಿಕೊಂಡು ಖುಷಿಯಿಂದಲೇ ಹೆಜ್ಜೆ ಹಾಕಿದರು.
ಕಳೆದ ಒಂದೂವರೆ ವರ್ಷದಿಂದ ಕೊರೊನಾ ಮಹಾಮಾರಿಯ ಆರ್ಭಟದ ಹಿನ್ನೆಲೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಮನೆಯಲ್ಲಿಯೇ ಆನ್ ಲೈನ್‌ ಪಾಠ ಕೇಳುತ್ತಿದ್ದರು. ಇದೀಗ ಸೋಂಕಿನ ಪ್ರಮಾಣ ತಗ್ಗಿರುವುದರಿಂದ ಸರ್ಕಾರ 9 ರಿಂದ 12ನೇ ತರಗತಿವರೆಗೆ ಭೌತಿಕ ತರಗತಿ ಆರಂಭಿಸಿದೆ.
ಕಳೆದ ಒಂದೂವರೆ ವರ್ಷದಿಂದ ಮನೆಯಲ್ಲಿಯೇ ಆನ್ ಲೈನ್‌ ಪಾಠ ಕೇಳುತ್ತಾ ಅರ್ಥೈಸಿಕೊಳ್ಳಲು ಸಾಧ್ಯವಾಗದಿದ್ದರೂ ವಿಧಿ ಇಲ್ಲದೆ ಮನೆಯಲ್ಲೇ ಉಳಿದಿದ್ದ ಮಕ್ಕಳು ಆರಂಭವಾದ ಶಾಲಾ ಕಾಲೇಜುಗಳ ಭೌತಿಕ ತರಗತಿಗಳಿಗೆ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ನೊಂದಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುತ್ತಾ ಹಾಜರಾದರು. ತರಗತಿಯ ಒಳಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ಡೆಸ್ಕ್ ನಲ್ಲಿ ವಿದ್ಯಾರ್ಥಿಗಳು ಕುಳಿತಿದ್ದು, ತರಗತಿ ಮುಗಿಯುವವರೆಗೂ ಮಾಸ್ಕ್ ಧರಿಸಿಕೊಂಡೇ ಪಾಠ ಕೇಳಿದರು.
ಪ್ರತಿ ಶಾಲಾ ಕೊಠಡಿಯಲ್ಲಿ 20 ಮತ್ತು ಅದಕ್ಕಿಂತ ಕಡಿಮೆ ಸಂಖ್ಯೆಯ ಮಕ್ಕಳು ಕೂರಲು ಮಾತ್ರ ಅವಕಾಶ ಮಾಡಿಕೊಡಲಾಗಿದೆ.
ನಗರದ ಎಂಪ್ರೆಸ್‌ ಕರ್ನಾಟ ಪಬ್ಲಿಕ್‌ ಶಾಲೆ, ಸಿದ್ದಗಂಗಾ ಮಹಿಳಾ ಪ.ಪೂ. ಕಾಲೇಜು, ವಿದ್ಯಾನಿಕೇತನ ಪ.ಪೂ. ಕಾಲೇಜು, ಸಿದ್ದಾರ್ಥ ಗ್ರಾಮಾಂತರ ಪ್ರೌಢಶಾಲೆ ಸೇರಿದಂತೆ ಜಿಲ್ಲೆಯಾದ್ಯಂತ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಆರಂಭವಾಗಿವೆ. ಈ ಎಲ್ಲ ಶಾಲಾ ಕಾಲೇಜುಗಳಲ್ಲೂ ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಖುಷಿ ಖುಷಿಯಿಂದಲೇ ತರಗತಿಗಳತ್ತ ತೆರಳಿದ ದೃಶ್ಯ ಕಂಡು ಬಂದವು.
ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದರೆ, ಇನ್ನು ಕೆಲವು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ ಕೈಗೆ ಸ್ಯಾನಿಟೈಸರ್‌ ಹಾಕಿ ತರಗತಿಯ ಪ್ರವೇಶಕ್ಕೆ ಅವಕಾಶ ನೀಡಲಾಯಿತು.
ಕಳೆದ ಮೂರ್ನಾಲ್ಕು ದಿನಗಳಿಂದಲೇ ಶಾಲಾ ಕಾಲೇಜುಗಳ ತರಗತಿಗಳ ಕೊಠಡಿಗಳನ್ನು ಸ್ವಚ್ಛಗೊಳಿಸಿ ಸಿದ್ಧಪಡಿಸಲಾಗಿತ್ತು. ಗ್ರಾಪಂ, ಪಟ್ಟಣ ಪಂಚಾಯ್ತಿಗಳ ನೆರವಿನೊಂದಿಗೆ ಕೊಠಡಿಗಳಲ್ಲಿ ಸ್ಯಾನಿಟೈಸ್‌ ಮಾಡಲಾಗಿತ್ತು.
ಕೊರೊನಾ ಸೋಂಕು ಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗದೆ ಇರುವುದರಿಂದ ಶಾಲೆಗಳಲ್ಲಿ ಇನ್ನು ಬಿಸಿಯೂಟ ಆರಂಭಿಸುತ್ತಿಲ್ಲ, ಮಕ್ಕಳೇ ಮನೆಯಿಂದ ಊಟ, ಕುಡಿಯುವ ನೀರು ತರುವಂತೆ ತಿಳಿಸಲಾಗಿದೆ ಎಂದು ಡಿಡಿಪಿಐ ಸಿ.ನಂಜಯ್ಯ ತಿಳಿಸಿದ್ದಾರೆ.
ಶಿಕ್ಷಕರು ಹಾಗೂ ಶಾಲೆಗಳ ಬಹುತೇಕ ಸಿಬ್ಬಂದಿಗೆ ಲಸಿಕೆ ಹಾಕಿಸಲಾಗಿದೆ. ಲಸಿಕೆ ಹಾಕಿಸಿಕೊಂಡ ಶಿಕ್ಷಕರು ಮತ್ತು ಸಿಬ್ಬಂದಿ ಮಾತ್ರ ಕೆಲಸಕ್ಕೆ ಹಾಜರಾಗಬೇಕು. ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿರುವುದಾಗಿ ಅವರು ಹೇಳಿದ್ದಾರೆ.

Get real time updates directly on you device, subscribe now.

Comments are closed.

error: Content is protected !!