ಅಧಿಕಾರಿಗಳಿಗೆ ತಾಪಂ ಆಡಳಿತಾಧಿಕಾರಿ ಬಿ.ರಘು ಸೂಚನೆ

ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಿ

310

Get real time updates directly on you device, subscribe now.

ತುಮಕೂರು: ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ನಿಗದಿಗೊಳಿಸಿದ ಅವಧಿಯೊಳಗೆ ಪೂರ್ಣಗೊಳಿಸಬೇಕೆಂದು ತಾಲ್ಲೂಕು ಪಂಚಾಯ್ತಿ ಆಡಳಿತಾಧಿಕಾರಿ ಬಿ.ರಘು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುಮಕೂರು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆ ಹಾಗೂ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ ಇಲಾಖೆಯಡಿ ಕೈಗೊಂಡಿರುವ ಕಾಮಗಾರಿಗಳಿಗೆ ಈಗಾಗಲೇ ಅನುದಾನ ಬಿಡುಗಡೆ ಮಾಡಿದ್ದು, ವಿಳಂಬ ಮಾಡದೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿಶೇಷ ಘಟಕ ಯೋಜನೆಯಡಿ ಬಿಡುಗಡೆಗೊಂಡಿರುವ ಅನುದಾನ ಸಂಬಂಧಿಸಿದ ಇಲಾಖೆಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಸದ್ಬಳಕೆ ಮಾಡಬೇಕು, ಯೋಜನೆಯಡಿ ಗುರುತಿಸಲಾದ ಫಲಾನುಭವಿಗಳನ್ನು ವಿನಾ ಕಾರಣ ಅಲೆದಾಡುವಂತೆ ಮಾಡದೆ ನಿಗದಿತ ಅವಧಿಯೊಳಗೆ ಯೋಜನೆಯ ಸೌಲಭ್ಯ ತಲುಪಿಸಬೇಕು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಡಿ ಕೈಗೊಂಡಿರುವ ಕಟ್ಟಡ ಕಾಮಗಾರಿ ಅಪೂರ್ಣವಾಗಿದ್ದು, ತ್ವರಿತವಾಗಿ ಪೂರ್ಣಗೊಳಿಸಲು ಸೂಕ್ತ ಕ್ರಮ ಜರುಗಿಸಬೇಕೆಂದು ಸೂಚನೆ ನೀಡಿದರು.
ಅರಣ್ಯ ಇಲಾಖೆಯು ಕೃಷಿ ಪ್ರೋತ್ಸಾಹ ಯೋಜನೆಯಡಿ ರೈತರ ಜಮೀನಿನಲ್ಲಿ ಗಿಡಮರಗಳನ್ನು ಬೆಳೆಸಲು ಕ್ರಮವಹಿಸಬೇಕು. ಉದ್ಯೋಗ ಖಾತರಿ ಮತ್ತು ನರೇಗಾ ಯೋಜನೆಗೆ ಆದ್ಯತೆ ನೀಡಿ ಇಂಗು ಗುಂಡಿಗಳನ್ನು ನಿರ್ಮಿಸುವಂತೆ ರೈತರಲ್ಲಿ ಅರಿವು ಮೂಡಿಸಬೇಕು ಎಂದರಲ್ಲದೆ, ತಾಪಂ ಆವರಣದಲ್ಲಿ ನರೇಗದಿಂದಾಗುವ ಪ್ರಯೋಜನಗಳನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರಕಟಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕೆಂದು ಸಲಹೆ ನೀಡಿದರು.
ಕೃಷಿ ಇಲಾಖೆ ಅಧಿಕಾರಿ ಮಾತನಾಡಿ, ತಾಲ್ಲೂಕಿನಲ್ಲಿ ವಾಡಿಕೆಯಂತೆ ಮಳೆಯಾಗಿದ್ದು ಬಿತ್ತನೆ ಬೀಜ, ರಸಗೊಬ್ಬರವನ್ನು ಸಮಪರ್ಕವಾಗಿ ವಿತರಣೆ ಮಾಡಲಾಗಿದೆ. ಕೃಷಿ ಇಲಾಖೆಯಡಿ ಕೃಷಿ ಹೊಂಡ, ಚೆಕ್‌ ಡ್ಯಾಂಗಳನ್ನು ನಿರ್ಮಿಸಿ ಮಾನವ ದಿನಗಳನ್ನು ಹೆಚ್ಚು ಹೆಚ್ಚು ಸೃಜಿಸುವ ಮೂಲಕ ನರೇಗಾ ಯೋಜನೆ ಯಶಸ್ವಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಆರಂಭವಾಗಿರುವ ಹಾಸ್ಟೆಲ್ ಗಳಲ್ಲಿ ಶೌಚಾಲಯ, ನೀರಿನ ತೊಟ್ಟಿಗಳನ್ನು ಸ್ವಚ್ಛತೆಗೊಳಿಸಿ ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು.
ಜಲ್‌ ಜೀವನ್‌ ಮಿಷನ್‌ ಯೋಜನೆಯಡಿ ಕೈಗೊಂಡಿರುವ ತಾಲ್ಲೂಕಿನ ಪ್ರತಿ ಅಂಗನವಾಡಿ ಹಾಗೂ ಶಾಲೆಗಳಿಗೆ ನಳ ಸಂಪರ್ಕ ಕಲ್ಪಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ತಾಲ್ಲೂಕು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಯಪಾಲ್‌ ಡಿ., ವ್ಯವಸ್ಥಾಪಕಿ ನಾಗರತ್ನ ಸೇರಿದಂತೆ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!