3ನೇ ಅಲೆ ಎದುರಿಸಲು ಜಿಲ್ಲಾಡಳಿತ ಸಿದ್ಧವಾಗಿದೆ: ಮಾಧುಸ್ವಾಮಿ

ಕೊರೊನಾ ವಾರಿಯರ್ಸ್‌ ಸೇವೆ ಅನನ್ಯ

132

Get real time updates directly on you device, subscribe now.

ತುಮಕೂರು: ವೈದ್ಯಕೀಯ ಸಿಬ್ಬಂದಿ, ಸ್ವಯಂ ಸೇವಕರು ಹಾಗೂ ಉದ್ದಿಮೆದಾರರ ಸಹಕಾರದಿಂದ ಜಿಲ್ಲಾಡಳಿತ 3ನೇ ಅಲೆ ಸೇರಿದಂತೆ ಕೊರೊನಕ್ಕೆ ಸಂಬಂಧಿಸಿದ ಎಂತಹ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಕುಂಚಟಿಗರ ಸಂಘ, ಮಹಿಳಾ ಘಟಕದ ವತಿಯಿಂದ ಆಯೋಜಿಸಿದ್ದ ಕೊರೊನಾ ವಾರಿಯರ್ಸ್ ಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ತೊಂದರೆಯಾಗಬಹುದು ಎಂಬ ಹಿನ್ನೆಲೆಯಲ್ಲಿ ಹಿರಿಯ ತಜ್ಞ ವೈದ್ಯರ ಮೂಲಕ ಕರ್ತವ್ಯ ನಿರತ ವೈದ್ಯಕೀಯ ಸಿಬ್ಬಂದಿಗೆ ತರಬೇತಿ ಕೊಡಿಸಲಾಗಿದೆ. ಅಲ್ಲದೆ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿಯೂ ಕನಿಷ್ಠ 5 ಮಕ್ಕಳ ಐಸಿಯು ಬೆಡ್‌ಗಳನ್ನು ವ್ಯವಸ್ಥೆ ಮಾಡಿದ್ದು, ಆಮ್ಲಜನಕದ ಕೊರತೆ ನೀಗಿದ್ದು, ಕೊರೊನ ಎದುರಿಸಲು ಸರ್ವ ಸನ್ನದ್ದರಾಗಿದ್ದೇವೆ ಎಂದರು.
ಮೊದಲನೇ ಅಲೆಯ ಆರಂಭದಲ್ಲಿ ಐಸಿಯು ಬೆಡ್‌ ಕೊರತೆ, ಆಮ್ಲಜನಕದ ಕೊರತೆ, ಖಾಸಗಿ ಆಸ್ಪತ್ರೆಗಳ ಅಸಹಾಕಾರದಿಂದ ತೊಂದರೆಯಾಗಿದ್ದ ನಿಜ, ಆದರೆ ಕೊರತೆಯ ನಡುವೆಯೂ ನಮ್ಮ ವೈದ್ಯಕೀಯ ಸಿಬ್ಬಂದಿ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಿದ್ದರ ಫಲವಾಗಿ ಸಾವು, ನೋವಿನ ಪ್ರಮಾಣ ಕಡಿಮೆಯಾಯಿತು. ಎರಡನೇ ಅಲೆಯ ವೇಳೆ ಸಹ ಆರಂಭದಲ್ಲಿ ಸಾಕಷ್ಟು ತೊಂದರೆಯಾದರೂ ನಂತರದಲ್ಲಿ ಸುಧಾರಿಸಿಕೊಂಡು ಎಲ್ಲವನ್ನು ನಿಭಾಯಿಸಿಕೊಂಡು ಮುನ್ನಡೆದಿದ್ದೇವೆ. ಇದಕ್ಕೆ ನಮ್ಮ ವೈದ್ಯಕೀಯ ಸಿಬ್ಬಂದಿಯ ನಿಸ್ವಾರ್ಥ ಸೇವೆಯೇ ಕಾರಣ ಎಂದು ಸಚಿವ ಮಾಧುಸ್ವಾಮಿ ನುಡಿದರು.
ಶಾಸಕ ಜಿ.ಬಿ.ಜೋತಿಗಣೇಶ್‌ ಮಾತನಾಡಿ, ಕೊರೊನ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ ಅದರಲ್ಲಿಯೂ ಶುಶ್ರೂಕರು ತಮಗೆ ಸಿಕ್ಕಿ ಅಲ್ಪಸ್ವಲ್ಪ ಜೀವರಕ್ಷಕ ಸಾಧನಗಳನ್ನೇ ಬಳಸಿಕೊಂಡು ಸೋಂಕಿತರಿಗೆ ಚಿಕಿತ್ಸೆ ನೀಡಿ, ಜಿಲ್ಲೆಗೆ ಒಳ್ಳೆಯ ಹೆಸರು ತಂದಿದ್ದಾರೆ, ನಿಜವಾಗಿಯೂ ಸನ್ಮಾನ ದೊರೆಯಬೇಕಿರುವುದು ಅವರಿಗೆ, ಮುಂದೆಯೂ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸೇವೆ ಸಲ್ಲಿಸುವಂತಹ ಧೈರ್ಯ ಅವರಿಗೆ ದೊರೆಯಲಿ ಎಂದು ಆಶೀಸಿದರು.
ವಿಧಾನಪರಿಷತ್‌ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ, ಕೊರೊನದಿಂದಾಗಿ ಅಭಿವೃದ್ಧಿ ಪಥದಲ್ಲಿದ್ದ ದೇಶ ಹತ್ತು ವರ್ಷ ಹಿಂದಕ್ಕೆ ಸರಿಯಿತು. ಮೊದಲನೇ ಅಲೆಯಲ್ಲಿ ಸಾವು, ನೋವುಗಳು ಸಂಭವಿಸಿದಾಗ ಜನತೆ ಮಾನವೀಯತೆಯೇ ಇಲ್ಲವೇನೋ ಎಂಬಂತೆ ವರ್ತಿಸಿದ ಉದಾಹರಣೆ ನಮ್ಮ ಕಣ್ಣಮುಂದಿದೆ. ಆದರೆ ಎರಡನೇ ಅಲೆಯ ವೇಳೆಗೆ ಜನರಲ್ಲಿಯೂ ಕೊಂಚ ಜಾಗೃತಿ ಮೂಡಿ, ಗೌರವಯುತ ಶವಸಂಸ್ಕಾರ ಸಾಧ್ಯವಾಯಿತು, ತಮ್ಮೆಲ್ಲಾ ಜೀವದ ಹಂಗು ತೊರೆದು ಕೆಲಸ ಮಾಡಿದ ವೈದ್ಯಕೀಯ ಸಿಬ್ಬಂದಿಯ ಜೊತೆಗೆ ಗೌರವಯುತವಾಗಿ, ಸಂಯಮದಿಂದ ವರ್ತಿಸುವ ಮೂಲಕ ಅವರ ಸೇವೆ ಸ್ಮರಿಸೋಣ ಎಂದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ವಿಶ್ವ ಕುಂಚಟಿಗ ಮಹಾಸಂಸ್ಥಾನದ ಮಠದ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಮಹಾಮಾರಿ ಕೊರೊನ ಸಂದರ್ಭದಲ್ಲಿ ತಮ್ಮ ಕುಟುಂಬವನ್ನು ಮರೆತು ಕಾರ್ಯನಿರ್ವಹಿಸಿದ ವೈದ್ಯಕೀಯ ಸಿಬ್ಬಂದಿ ಗೌರವಿಸುವುದು ನಮ್ಮ ಸುಕೃತ, ಹಲವಾರು ಸವಾಲುಗಳ ನಡುವೆ ಜನರ ಜೀವ ಉಳಿಸಿದ ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು, ಆಶಾ, ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ, ಸೋಂಕಿತರ ಕುಟುಂಬಗಳಿಗೆ ಅಗತ್ಯವಿರುವ ಔಷಧಿಗಳನ್ನು ವಿತರಿಸಿ ಸೂಕ್ತ ಮಾರ್ಗದರ್ಶನ ಮಾಡಿದ್ದಾರೆ. ಅನುಮಾನಗಳಿಗೆ ಅವಕಾಶವಿಲ್ಲದೆ ಎಲ್ಲರೂ ಲಸಿಕೆ ಪಡೆಯುವಂತಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕುಂಚಿಟಿಗ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸಿ.ಲಲಿತ ಮಲ್ಲಪ್ಪ ವಹಿಸಿದ್ದರು. ವೇದಿಕೆಯಲ್ಲಿ ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್‌.ಆರ್‌.ಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಶಿವರಾಮಯ್ಯ, ಡಿಹೆಚ್‌ಓ ಡಾ.ನಾಗೇಂದ್ರಪ್ಪ, ಡಿಎಸ್‌ ಡಾ.ವೀರಭದ್ರಯ್ಯ,ಯುವ ಮುಖಂಡರ ಸಂಜಯ್‌ ಜಯಚಂದ್ರ, ದೊಡ್ಡಲಿಂಗಪ್ಪ, ಕುಂಚಿಟಿಗ ಸಂಘದ ಮಹಿಳಾ ಘಟಕದ ಅಂಬುಜ, ನೇತ್ರ, ಗಿರೀಶ್‌, ಕಾತ್ಯಾಯಿನಿ, ಶಶಿಕಲಾ, ಶಾರದ, ಶ್ರೀದೇವಿ, ರಮ್ಯ, ರಾಘವೇಂದ್ರ ತುಷಾರ, ಎಂ.ಹೆಚ್‌.ಮುತ್ತುರಾಜು, ಟಿ.ಪಿ.ಸತೀಶ್‌, ಹೆಚ್‌.ಜಿ.ಕೃಷ್ಣ, ಶಿವಣ್ಣ ವಿ.ವಿ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!