ಶಾಸಕ ರಂಗನಾಥ್‌ ನೀರಿನ ಹೆಸರಲ್ಲಿ ಪ್ರಚಾರ ಪಡೀತಿದ್ದಾರೆ: ಆನಂದ್ ಪಟೇಲ್

373

Get real time updates directly on you device, subscribe now.

ಕುಣಿಗಲ್‌: ಒಂದು ಕಿ.ಮೀ ದೂರದ ಮಂಗಳಾ ಜಲಾಶಯದ ಕೆನಾಲ್‌ ಮಾಡಿಸಿ ನೀರು ಹರಿಸಲಾಗದ ಶಾಸಕರು 180 ಕಿ.ಮೀ ದೂರದ ಶ್ರೀರಂಗ ಏತನೀರಾವರಿ ಯೋಜನೆ ಮಾಡಿಸಿ ನೀರು ಹರಿಸುತ್ತಾರೆಯೆ, ಶಾಸಕರು ಸಂಸದರ ಪಾಲಿಗೆ ನೀರು ಹರಿಸುವ ಯೋಜನೆ ಪೈಪ್‌ಲೈನ್‌ ನೆಪದಲ್ಲಿ ದುಡ್ಡು ಹೊಡೆಯುವ, ಚುನಾವಣೆಯಲ್ಲಿ ಮತ ಗಳಿಸುವ ವಿಷಯ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್‌ ಪಟೇಲ್‌ ಆರೋಪಿಸಿದರು.
ಬುಧವಾರ ತಾಲೂಕಿನ ಮಂಗಳಾ ಜಲಾಶಯದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾರ್ಕೋನಹಳ್ಳಿ ಜಲಾಶಯ ತುಂಬಿ ತಮಿಳುನಾಡಿಗೆ ಹರಿಯುವ ಹೆಚ್ಚುವರಿ ನೀರನ್ನು ಮಂಗಳಾಕ್ಕೆ ಹರಿಸಲು 2001 ರಲ್ಲೆ ವೈ.ಕೆ.ರಾಮಯ್ಯ ಯೋಜನೆ ರೂಪಿಸಿದ್ದು, ಕೇವಲ 5 ಕೋಟಿ ವೆಚ್ಚದಲ್ಲಿ ಯೋಜನೆ ಸಾಧುವಾದರೂ ಮಾಡಿಸದೆ ಶಾಸಕರು ನಿರ್ಲಕ್ಷ್ಯವಹಿಸಿದ್ದಾರೆ. ಆದರೆ 180 ಕಿ.ಮೀ ದೂರದಿಂದ ನೀರು ಹರಿಸುವುದಾಗಿ ಶ್ರೀರಂಗ ಯೋಜನೆಯೆ ಬಗ್ಗೆ ಹೇಳುತ್ತಾರೆ. ಇವರಿಗೆ ನೀರು ಹರಿಸೋದು ಬೇಕಿಲ್ಲ, ನೀರಾವರಿ ಯೋಜನೆ ಹೆಸರಲ್ಲಿ ದುಡ್ಡು ಮಾಡೋದರ ಜೊತೆಯಲ್ಲಿ ಮೂರ್ನಾಲ್ಕು ಚುನಾವಣೆ ಕಳೆದರೂ ಯೋಜನೆ ಅನುಷ್ಠಾನ ಮಾಡದೆ ಚುನಾವಣೆ ವಿಷಯವಾಗಿ ಮತ ಗಳಿಸುವ ವಿಷಯವಾಗಿದೆ.
ಹೇಮಾವತಿ ನಾಲಾ ವಲಯದ ನೀರಾವರಿ ವ್ಯವಸ್ಥೆಗೆ ಇದ್ದ ಹಣವನ್ನು ಪಿಡಬ್ಲ್ಯುಡಿ, ಜಿಪಂ ರಸ್ತೆಗಳ ಅಭಿವೃದ್ಧಿಗೆ ಬಳಸಿದ್ದೇ ಶಾಸಕರ ಸಾಧನೆಯಾಗಿದೆ, ಕಳೆದ ಕೆಲ ವರ್ಷಗಳಿಂದ 11 ಟಿಎಂಸಿ ನೀರು ವ್ಯರ್ಥವಾಗಿ ತಮಿಳುನಾಡಿಗೆ ಹರಿದಿದೆ. ಮಾರ್ಕೋನಹಳ್ಳಿಯಿಂದ ಕೇವಲ ಒಂದು ಕಿ.ಮೀ ದೂರದ ಮಂಗಳಾ ಜಲಾಶಯಕ್ಕೆ ಅರ್ಧ ಟಿಎಂಸಿ ನೀರು ಹರಿಸಲಾಗಿಲ್ಲ. 40 ಕೋಟಿ ರೂ. ವೆಚ್ಚದಲ್ಲಿ ತಮ್ಮ ಸಂಬಂಧಿ ಸಚಿವರಾಗಿದ್ದಾಗ ರಸ್ತೆಗೆ ಹಾಕುವ ಮೂಲಕ ಅಚ್ಚುಕಟ್ಟು ಪ್ರದೇಶದ ಜನರಿಗೆ ಮೋಸ ಮಾಡಿದ್ದಾರೆ. ಇವರು ಶಾಸಕರು ಕುಣಿಗಲ್‌ಗಾ..? ನಾಗಮಂಗಲಕ್ಕಾ ಎಂಬ ಅನುಮಾನ ಮೂಡುತ್ತಿದೆ, ತಾಲೂಕಿನ ಜಲಾಶಯದಿಂದ ನಾಗಮಂಗಲಕ್ಕೆ ನೀರು ಕೊಂಡೊಯ್ಯುವ ಪೂಜೆಯಲ್ಲಿ ಪಾಲ್ಗೊಂಡು ತಾಲೂಕಿನ ಜನತೆಗೆ ಅನ್ಯಾಯ ಮಾಡಿದ್ದಾರೆ. ಇವರು ಶಾಸಕರಾಗಿ ಮೂರು ವರ್ಷ ಕಳೆದರೂ ಒಂದೆ ಒಂದು ಶಾಶ್ವತ ಕಾಮಗಾರಿ ಮಾಡಿಲ್ಲ, ನಾಗಮಂಗಲ ಭಾಗದಲ್ಲಿ 1224 ಎಕರೆ ಪ್ರದೇಶದಲ್ಲಿ ಕೈಗಾರಿಕೆ ವಸಾಹತು ಪ್ರದೇಶಕ್ಕೆ ಮಾರ್ಕೋನಹಳ್ಳಿ ಜಲಾಶಯದ ನೀರನ್ನು ಹಂಚಿಕೆ ಮಾಡಿ ಅಚ್ಚುಕಟ್ಟು ಭಾಗದ ರೈತರಿಗೆ ಮರಣ ಶಾಸನ ತರುವ ಕೆಲಸ ಮಾಡುತ್ತಾ ತಾಲೂಕಿನ ಜಲಮೂಲಗಳನ್ನು ಕೈಗಾರಿಕೆ ತ್ಯಾಜ್ಯ ಸಂಗ್ರಹಿಸುವ ತಾಣವನ್ನಾಗಿಸುವ ವ್ಯವಸ್ಥಿತ ತಂತ್ರ ಮಾಡುತ್ತಿದ್ದಾರೆ, ಕೈಗಾರಿಕೆಗೆ ರೈತರ ಜಮೀನನ್ನು ಕೊಡಿಸಿ ರೈತನ ಜಮೀನಿನಲ್ಲೆ ಆತನನ್ನು ವಾಚ್‌ಮೆನ್‌ ಕೆಲಸಕ್ಕೆ ಹಚ್ಚುವ ವ್ಯವಸ್ಥಿತ ಪಿತೂರಿ ಮಾಡುತ್ತಿದ್ದಾರೆ.
ಈಗಾಗಲೆ ದೊಡ್ಡಕೆರೆ ಅಚ್ಚುಕಟ್ಟು ರೈತರನ್ನು ಮುಗಿಸಿ ಇದೀಗ ಮಾರ್ಕೋನಹಳ್ಳಿ ಜಲಾಶಯದ ಅಚ್ಚುಕಟ್ಟುದಾರರ ರೈತರನ್ನು ಮುಗಿಸಲು ಹೊರಟಿದ್ದಾರೆ. ಹೆಚ್ಚುವರಿ ಅಲೋಕೇಶನ್‌ ಒಂದು ಟಿಎಂಸಿ ಎಂಬ ಅವೈಜ್ಞಾನಿಕ ನೀರು ಮಂಜೂರಾತಿ ಪತ್ರ ಜನತೆ ಮುಂದಿಟ್ಟು ಜನರನ್ನು ವಂಚನೆ ಮಾಡಲು ಮುಂದಾಗಿದ್ದಾರೆ. ವಾಸ್ತವ ಗೊತ್ತಾದರೆ ಜನರೆ ತಕ್ಕ ಪಾಠ ಕಲಿಸುತ್ತಾರೆ, ಮಾರ್ಕೋನಹಳ್ಳಿ, ಮಂಗಳಾ ಲಿಂಕ್‌ ಕೆನಾಲ್‌ ಕಾಮಗಾರಿ ಆರಂಭಿಸಬೇಕು, ಇಲ್ಲವಾದಲ್ಲಿ ನಾಲಾ ವಲಯದ ಕಚೇರಿಗೆ ಸೆಪ್ಟಂಬರ್‌ 23 ರಂದು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿ, ಶಾಸಕರು ನೀರು ಹರಿಸುವ ವಿಷಯದಲ್ಲಿ ರಾಜಕಾರಣ ಮಾಡಿಕೊಂಡು ಪಕ್ಷಕ್ಕೆ ಗ್ರಾಮಸ್ಥರನ್ನು ಸೇರಿಸಿಕೊಳ್ಳುತ್ತಿರುವುದು ಖಂಡನೀಯ. ತಾಲೂಕಿಗೆ ಅನ್ಯಾಯ ಮಾಡಿ ಬೇರೆ ಕಡೆಗೆ ನೀರು ಕೊಂಡೊಯ್ಯಲು ಶಾಸಕರ ಮೇಲೆ ಯಾವುದೇ ರೀತಿಯ ದಬಾಳಿಕೆ ಪ್ರಭಾವ ಇದ್ದರೆ ಹೇಳಲಿ ರೈತ ಸಂಘ ಶಾಸಕರ ರಕ್ಷಣೆಗೆ ಅವರ ಜೊತೆ ನಿಲ್ಲುತ್ತದೆ ಎಂದರು.
ತಾಲೂಕು ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ತಾಲೂಕಿನ ನೀರನ್ನು ಬೇರೆಡೆ ಹರಿಸಿದರೂ ಶಾಸಕರು ತಮ್ಮ ಹಿಂಬಾಲಕರಿಂದ ಭಗೀರಥ ಬಿರುದಾವಾಳಿ ಹಾಕಿಸಿಕೊಳ್ಳುತ್ತಿದ್ದಾರೆ. ಮೊದಲು ದೊಡ್ಡಕೆರೆಗೆ ನೀರುಹರಿಸಿ ಕೊಳೆಯುತ್ತಿರುವ ನೀರು ಹೊರಬಿಡಲಿ, ಹೇಮೆ ಯೋಜನೆಯಲ್ಲಿದ್ದರೂ 10 ವರ್ಷಗಳಿಂದ ಹೇಮ ನೀರು ಹರಿಸದಿರುವ ಮಂಗಳಾ ಜಲಾಶಯಕ್ಕೆ ನೀರು ಹರಿಸಲಿ, ಮಾರ್ಕೋನಹಳ್ಳಿ ಜಲಾಶಯಕ್ಕೆ ತುರುವೇಕೆರೆ ಇತರೆ ಭಾಗದಿಂದ ಸೋರಿಕೆ ನೀರು ಒಂದು ಟಿಎಂಸಿ ಬರುತ್ತಿದೆ, ಈ ನೀರನ್ನು ಹರಿಸಿ ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಹರಿಯುವ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ಎಂದರು.
ರೈತ ಮುಖಂಡರಾದ ಬೊರೇಗೌಡ, ಲಕ್ಷ್ಮಣ, ವೆಂಕಟೇಶ, ನಂದೀಶ, ಪ್ರಕಾಶ, ನಾರಾಯಣ, ಕುಮಾರಗೌಡ, ಚಿಕ್ಕೆಗೌಡ, ಪ್ರದೀಪ, ರಾಜಣ್ಣ, ಗಂಗಾಧರ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!