ಸ್ಮಾರ್ಟ್‌ಸಿಟಿ ಕಾಮಗಾರಿ ಸಂಪೂರ್ಣ ಕಳಪೆ

ಅವ್ಯವಹಾರವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಲು ಪಾಲಿಕೆ ಸದಸ್ಯರ ಒತ್ತಾಯ

380

Get real time updates directly on you device, subscribe now.

ತುಮಕೂರು: ನಗರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು, ಟೆಂಡರ್‌ ಸಲ್ಲಿಸಿದ ಮೊತ್ತಕ್ಕೂ, ವರ್ಕ್‌ ಆರ್ಡರ್‌ ನೀಡಿರುವ ಮೊತ್ತಕ್ಕೂ ಸಾಕಷ್ಟು ವೆತ್ಯಾಸವಿದ್ದು, ಸಾಕಷ್ಟು ಅವ್ಯವಹಾರ ನಡೆದಿರುವ ಶಂಕೆ ಇರುವುದರಿಂದ ಇಡೀ ಯೋಜನೆಯನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸುವಂತೆ ಪಾಲಿಕೆಯ ವಿರೋಧ ಪಕ್ಷದ ನಾಯಕ ಜೆ.ಕುಮಾರ್‌ ಒತ್ತಾಯಿಸಿದ್ದಾರೆ.
ನಗರಪಾಲಿಕೆಯಲ್ಲಿ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ, ಒಂದು ಕೆಲಸವೂ ಪೂರ್ಣಗೊಂಡಿಲ್ಲ, ಅಲ್ಲದೆ ಮುಂದಿನ ದಿನಗಳಲ್ಲಿ ಇದನ್ನು ನಿರ್ವಹಿಸಬೇಕಾದ ಪಾಲಿಕೆಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಆರ್‌ಟಿಐ ಮೂಲಕ ಮನವಿ ಸಲ್ಲಿಸಿದರೂ ಸಮರ್ಪಕ ಉತ್ತರವನ್ನು ಅಧಿಕಾರಿಗಳು ನೀಡುತ್ತಿಲ್ಲ, ಪ್ರಶ್ನಿಸಿದರೆ ಜಿಲ್ಲಾಧಿಕಾರಿಗಳು ಪೊಲೀಸರ ಕಾವಲಿನಲ್ಲಿ ಕೆಲಸ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಗುತ್ತಿಗೆದಾರರು ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳ ನಡುವೆ ಅವ್ಯವಹಾರ ನಡೆದಿರುವ ಶಂಕೆಇದೆ, ಹಾಗಾಗಿ ಇಡೀ ಯೋಜನೆಯನ್ನೇ ಲೋಕಾಯುಕ್ತ ತನಿಖೆಗೆ ಒಳಪಡಿಸುವುದು ಸೂಕ್ತ ಎಂದರು.
4ನೇ ವಾರ್ಡ್‌ನ ಸದಸ್ಯ ಮಹೇಶ್‌ ಮಾತನಾಡಿ, ತುಮಕೂರಿನ ಹೃದಯ ಭಾಗದಲ್ಲಿರುವ ವಿವೇಕಾನಂದ ರಸ್ತೆ ಕಾಮಗಾರಿ ಎಂಟು ತಿಂಗಳಾದರೂ ಮುಗಿದಿಲ್ಲ, ಅನಗತ್ಯವಾಗಿ ಜಲ್ಲಿ ಹಾಕಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ರಸ್ತೆ ಸರಿಯಾಗದ ಕಾರಣ ಅಂಗಡಿಗಳ ಮಾಲೀಕರು ವ್ಯಾಪಾರ ವಹಿವಾಟು ಇಲ್ಲದೆ, ಬಾಡಿಗೆ ಕಟ್ಟಲು ಪರದಾಡುವಂತಹ ಸ್ಥಿತಿ ಇದೆ. ಅಲ್ಲದೆ 14 ಕೋಟಿ ರೂ. ಖರ್ಚು ಮಾಡಿದರೂ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಕಾಮಗಾರಿಯ ಸೆಲ್ಲರ್‌ ರೆಡಿ ಮಾಡಿಲ್ಲ, ಅನಗತ್ಯವಾಗಿ ಒಂದೇ ಕಾಮಗಾರಿಗೆ ಪದೇ ಪದೆ ಎಸ್ಟಿಮೆಂಟ್‌ ಕಾಸ್ಟ್ ಹೆಚ್ಚಳ ಮಾಡಿ, ಮನಬಂದಂತೆ ಹಣ ಖರ್ಚು ಮಾಡಲಾಗುತ್ತಿದೆ. ಸ್ಮಾರ್ಟ್ ಸಿಟಿ ಎಂಬುದು ತುಮಕೂರು ನಗರದ ಜನತೆಗೆ ಒಂದು ಶಾಪವಾಗಿದೆ ಎಂದರು. ಸದಸ್ಯರ ಈ ಅಭಿಪ್ರಾಯವನ್ನು ಮೇಯರ್ ಆದಿಯಾಗಿ ಬಹುತೇಕ ಸದಸ್ಯರು ಮೇಜು ಕುಟ್ಟಿ ಅನುಮೋದಿಸಿದರು.

2019- 20ನೇ ಸಾಲಿನ ಆಸ್ತಿ ತೆರಿಗೆ ಮುಂದುವರೆಸಲು ನಿರ್ಣಯ
ಕೇಂದ್ರ ಸರಕಾರದ ಮಾರ್ಗದರ್ಶನದಂತೆ ರಾಜ್ಯ ಸರಕಾರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಬರುವ ಖಾಲಿ ನಿವೇಶನಗಳ ಎಸ್‌ಆರ್‌ ದರದ ಶೇ.25 ರನ್ನು ಪರಿಗಣಿಸಿ ಅದರ ಮೇಲೆ ಶೇ.0.25 ರಷ್ಟು ತೆರಿಗೆ ವಿಧಿಸಿ, 2021ರ ಫೆಬ್ರವರಿಯಿಂದ ಜಾರಿ ಮಾಡಲಾಗಿದೆ, ಆದರೆ ಕೊರೊನ ಸಂದರ್ಭದಲ್ಲಿ ಇದು ಜನಸಾಮಾನ್ಯರಿಗೆ ಅತ್ಯಂತ ಹೊರೆಯಾಗಿದೆ. ಅಲ್ಲದೆ ಸದರಿ ವಿಚಾರವನ್ನು ಅಧಿಕಾರಿಗಳು ತೆರಿಗೆ ನಿರ್ಧರಣೆ ಸ್ಥಾಯಿ ಸಮಿತಿಯ ಮುಂದೆಯಾಗಲಿ, ಸಾಮಾನ್ಯ ಸಭೆಯಲ್ಲಾಗಲಿ ಚರ್ಚಿಸದೆ, ಮೇಯರ್‌ ಅವರಿಂದ ಘಟನೋತ್ತರ ಮಂಜೂರಾತಿ ಪಡೆದು, ಏಕಾಏಕಿ ಜಾರಿಗೆ ತಂದಿದೆ. ಇದರಿಂದ ಶೇ.10 ರಷ್ಟು ತೆರಿಗೆ ಹೆಚ್ಚಳವಾಗಿದೆ, ಹಾಗಾಗಿ ಸದರಿ ಆದೇಶವನ್ನು ರದ್ದುಗೊಳಿಸಿ, ಈ ಹಿಂದಿನಂತೆಯೇ ತೆರಿಗೆ ಕಟ್ಟಿಸಿಕೊಳ್ಳುವಂತೆ ಪಾಲಿಕೆ ಸದಸ್ಯರು ಪಕ್ಷ ಭೇದ ಮರೆತು ನಿರ್ಣಯ ಕೈಗೊಂಡರು. ಸರಕಾರದ ನಿರ್ದೇಶನದಂತೆ ಎಷ್ಟು ಪ್ರಮಾಣದಲ್ಲಿ ತೆರಿಗೆ ಹೆಚ್ಚಳ ಮಾಡಬೇಕೆಂಬುದನ್ನು ಸಮಿತಿ ರಚಿಸಿ, ತೀರ್ಮಾನ ಕೈಗೊಂಡು ಸರಕಾರಕ್ಕೆ ಪರಿಷ್ಕರಣೆಗೆ ಕಳುಹಿಸಲು ಸಭೆ ಒಪ್ಪಿಗೆ ನೀಡಿತ್ತು.

ಅಧಿಕೃತ ಖಾತೆಗಳನ್ನು ಅಸೇಸ್‌ಡ್‌ ಖಾತೆಗಳಾಗಿ ಮುಂದುವೆರೆಸಲು ಒತ್ತಾಯ
ನಗರದಲ್ಲಿ ಈ ಹಿಂದೆ ಆಯುಕ್ತರಾಗಿದ್ದವರು, ರವಿನ್ಯೂ ಜಾಗದಲ್ಲಿ ಭೂ ಪರಿವರ್ತನೆಯಾಗದೆ, ಟೂಡಾದಿಂದ ಅನುಮೋದನೆ ಪಡೆಯದ ನಿವೇಶನಗಳನ್ನು ಅಸೇಸ್‌ಡ್‌ ಖಾತೆಗಳಾಗಿ ಮಾಡಿದ್ದಾರೆ. ಪ್ರಸ್ತುತ ಸರಕಾರದ ನಿಯಮದ ಪ್ರಕಾರಣ ಇದು ಕಾನೂನು ಬಾಹಿರವಾಗಿರುತ್ತದೆ. ಹಾಗಾಗಿ ಸುಮಾರು 29 ಸಾವಿರ ನಿವೇಶನಗಳ ಮಾಲೀಕರು ತೊಂದರೆಗೆ ಒಳಗಾಗಲಿದ್ದಾರೆ. ಆದ್ದರಿಂದ ಈ ಹಿಂದೆ ಅಧಿಕಾರಿಗಳು ಮಾಡಿದ ತಪ್ಪಿಗಾಗಿ ಜನಸಾಮಾನ್ಯರಿಗೆ ತೊಂದರೆ ನೀಡುವುದು ಬೇಡ, ಇದುವರೆಗೂ ಟೂಡಾ ಅನುಮೋದನೆ ಪಡೆಯದೆಯೂ ಫಾರಂ ನಂಬರ್‌ 3 ಪಡೆದಿರುವ ನಿವೇಶನಗಳ ಮಾಲೀಕರನ್ನು ಅಸೇಸ್‌ಡ್‌ ಖಾತೆಗಳೆಂದು ಪರಿಗಣಿಸಲು ಅವಕಾಶ ಕಲ್ಪಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಸಿ, ನಿರ್ಣಯ ಕೈಗೊಳ್ಳಲಾಯಿತು.

ಅಮಾನಿಕೆರೆಯ ರಾಯಗಾಲುವೆಗಳ ತಡೆಗೋಡೆ ತೆರವಿಗೆ ಒತ್ತಾಯ
ತುಮಕೂರು ನಗರದಲ್ಲಿರುವ ಅಮಾನಿಕೆರೆಗೆ ದೇವರಾಯನ ದುರ್ಗ ಸೇರಿದಂತೆ ಹಲವು ಕಡೆಗಳಿಂದ ಸುಮಾರು 6 ರಾಯಗಾಲುವೆಗಳಿದ್ದು, ಎಲ್ಲವನ್ನು ಸ್ಮಾರ್ಟ್‌ಸಿಟಿಯವರು ಮುಚ್ಚಿದ್ದಾರೆ, ಹೀಗಾಗಿ ಜೋರು ಮಳೆ ಬಂದರೆ ಕಾಲುವೆಯ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಕೂಡಲೇ ತಡೆ ಹಾಕಿರುವ ರಾಯಗಾಲುವೆಗಳನ್ನು ತೆರವುಗೊಳಿಸುವಂತೆ 23ನೇ ವಾರ್ಡ್‌ನ ಸದಸ್ಯ ನರಸಿಂಹಮೂರ್ತಿ ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸ್ಮಾರ್ಟ್‌ಸಿಟಿ ಎಂ.ಡಿ.ರಂಗಸ್ವಾಮಿ, ಅಮಾನಿಕೆರೆಗೆ ಕೊಳಚೆ ನೀರು ಸೇರುತಿದ್ದ ಹಿನ್ನೆಲೆಯಲ್ಲಿ ಅದನ್ನು ಬೇರೆಡೆಗೆ ಕಳುಹಿಸಲು ಪ್ರತ್ಯೇಕ ಡ್ರೈನೇಜ್‌ ಮಾಡಲಾಗುತ್ತಿದೆ. ಸದರಿ ಡ್ರೈನೇಜ್‌ ಕೆಲಸ ಮುಗಿದ ತಕ್ಷಣ ರಾಯಗಾಲುವೆಗಳಿಗೆ ಹಾಕಿರುವ ತಡೆಯನ್ನು ತೆರವುಗೊಳಿಸಲಾಗುವುದು. ಅಲ್ಲದೆ ಬೆಳಗುಂಬ ರಸ್ತೆಯ ಅಭಿವೃದ್ಧಿ ಕಾರ್ಯ ವೇಗದಲ್ಲಿ ನಡೆಯುತಿದ್ದು, ಅಕ್ಟೋಬರ್‌ ಅಂತ್ಯದೊಳಗೆ ಕೋತಿ ತೋಪಿನಿಂದ ಹನುಮಂತಪುರದ ಸೇತುವೆ ವರೆಗೆ ಕಾಮಗಾರಿ ಪೂರ್ಣಗೊಳಿಸಿ ಜನಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಇದೇ ರೀತಿ ನಗರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳನ್ನು ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದರು.
ಸಭೆಯ ಅಧ್ಯಕ್ಷತೆಯನ್ನು ಮೇಯರ್‌ ಬಿ.ಜಿ.ಕೃಷ್ಣಪ್ಪ ವಹಿಸಿದ್ದರು. ಪಾಲಿಕೆ ಆಯುಕ್ತರಾದ ರೇಣಕಾ, ಉಪಮೇಯರ್‌ ನಾಜೀಮಾ ಬಿ, ಸಂಸದ ಜಿ.ಎಸ್‌.ಬಸವರಾಜು ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!