ರೇಪಿಸ್ಟ್ ಗಳನ್ನು ಅರೆಸ್ಟ್ ಮಾಡಿ ಕಠಿಣ ಶಿಕ್ಷೆ ಕೊಡಿ

ತುಮಕೂರಿನಲ್ಲಿ ಜೆಡಿಎಸ್ ಬೃಹತ್‌ ಪ್ರತಿಭಟನೆ- ಅತ್ಯಾಚಾರ ಪ್ರಕರಣ ಖಂಡಿಸಿ ಆಕ್ರೋಶ

366

Get real time updates directly on you device, subscribe now.

ತುಮಕೂರು: ತುಮಕೂರು ಗ್ರಾಮಾಂತರದ ಚಿಕ್ಕಹಳ್ಳಿ ಗ್ರಾಮದ ರೈತ ಮಹಿಳೆಯೊಬ್ಬರ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೂಡಲೇ ಕ್ರಮಕೈಗೊಂಡು ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವುದರ ಜೊತೆಗೆ ಇಸ್ಪೀಟ್‌ ದಂಧೆ, ಅಕ್ರಮ ಮಧ್ಯಮಾರಾಟ, ಕೊಲೆ ಸುಲಿಗೆ ಪ್ರಕರಣಗಳು ಹೆಚ್ಚುತ್ತಿದ್ದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಕೂಡಲೇ ಕ್ರಮಕೈಗೊಂಡು ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕೆಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ ಆಗ್ರಹಿಸಿದರು.
ನಗರದ ಡಾ.ಶಿವಕುಮಾರ ಸ್ವಾಮೀಜಿ ವೃತ್ತದಿಂದ ಅನ್ಯಾಯಕ್ಕೊಳಗಾದ ಕುಟುಂಬಸ್ಥರೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಮತ್ತು ಪೊಲೀಸರ ವೈಫಲ್ಯದ ವಿರುದ್ಧ ಘೋಷಣೆ ಕೂಗುತ್ತಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ನಡೆಸಿ ಮಾತನಾಡಿ, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಉತ್ತರ ಭಾರತದ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರದ ಸ್ಥಳಕ್ಕೆ ಮುಖ್ಯಮಂತ್ರಿಗಳು, ಗೃಹ ಸಚಿವರು, ಡಿಜಿಪಿ ಸೇರಿ 120 ಕಿ.ಮೀ. ವೇಗದಲ್ಲಿ ಸರ್ಕಾರವೇ ಹೋಗಿ ಪರಿಶೀಲನೆ ನಡೆಸಿ ನ್ಯಾಯ ಕೊಡಿಸಲೇಬೇಕು ಎಂದು ಹೋರಾಟ ಮಾಡಿರುವುದು ಸ್ವಾಗತಾರ್ಹ, ಆದರೆ ಗ್ರಾಮೀಣ ಭಾಗದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ನೀವ್ಯಾಕೆ ಮುತುವರ್ಜಿ ವಹಿಸುತ್ತಿಲ್ಲ, ನಗರ ಪ್ರದೇಶದಲ್ಲಿ ನಡೆದ ಘಟನೆಗೆ ಒತ್ತು ಕೊಟ್ಟಂತೆ ಗ್ರಾಮೀಣ ಪ್ರದೇಶದ ಪ್ರಕರಣಕ್ಕೆ ಯಾಕೆ ಒತ್ತುಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರು ಗ್ರಾಮಾಂತರ ಹಿರೇಹಳ್ಳಿ ಭಾಗದ ಚಿಕ್ಕಹಳ್ಳಿ ಗ್ರಾಮದ ರೈತ ಮಹಿಳೆಯೊಬ್ಬಳು ಗುಡ್ಡದ ಬುಡಕ್ಕೆ ದನ ಮೇಯಿಸಲು ಹೋಗಿದ್ದಾಗ ಅಪರಿಚಿತ ವ್ಯಕ್ತಿಗಳು ಆಕೆಯನ್ನು ಬಲವಂತದಿಂದ ಎಳೆದೊಯ್ದು ಸಾಮೂಹಿಕವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ. ಮಾತ್ರವಲ್ಲದೆ ಆಕೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯಸರವನ್ನು ಕಿತ್ತುಕೊಂಡು ಹೋಗಿದ್ದಾರೆ. ಈ ಘಟನೆ ನಡೆದು ಮೂರ್ನಾಲ್ಕು ದಿನಗಳು ಕಳೆದರೂ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದರು.
ಈ ಘಟನೆಯಿಂದ ಇಡೀ ತುಮಕೂರು ಏನು ಆಗಿಲ್ಲವೇ ಎನ್ನುವಂತೆ ಶಾಂತವಾಗಿದ್ದರೆ, ಜನಪ್ರತಿನಿಧಿಗಳು ಕೂಡ ಇದರ ಬಗ್ಗೆ ಧ್ವನಿ ಎತ್ತುತ್ತಿಲ್ಲ, ಅಧಿಕಾರಿಗಳು ಕೂಡ ಗಂಭೀರ ಪ್ರಕರಣ ಎಂದು ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದಂತೆ ಕಂಡುಬರುತ್ತಿಲ್ಲ, ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಎರಡು ಪ್ರಕರಣವನ್ನು ಗಂಭೀರ ಸ್ವರೂಪದ್ದು ಎಂದು ಪರಿಗಣಿಸಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕಾದುದು ಜವಾಬ್ದಾರಿ ಕೂಡ, ಆದರೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವಂತಾಗಿದೆ ಎಂದು ಕಿಡಿಕಾರಿದರು.
ಇದೆಲ್ಲವನ್ನು ಗಮನಿಸುತ್ತಿದ್ದರೆ ಉತ್ತರ ಪ್ರದೇಶದಿಂದ ಇಲ್ಲಿಗೆ ವಿದ್ಯಾಭ್ಯಾಸಕ್ಕೆಂದು ಬಂದ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಇಡೀ ಸರ್ಕಾರವೇ ಗಂಭೀರವಾಗಿ ಪರಿಗಣಿಸಿದ್ದು, ಗ್ರಾಮಾಂತರದ ಒಬ್ಬ ಸಾಮಾನ್ಯ ಬಡ ರೈತ ಮಹಿಳೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಯಾಕಿಲ್ಲ ಎಂದು ಪ್ರಶ್ನಿಸಿದರು.
ಕಳೆದ ಒಂದು ವರ್ಷದ ಹಿಂದೆ ತುಮಕೂರು ಗ್ರಾಮಾಂತರದಲ್ಲಿ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಇಂತಹ ಪ್ರಕರಣ ನಡೆಯಲು ರಾಜ್ಯದ ವಿವಿಧ ಭಾಗಗಗಳಿಂದ ತುಮಕೂರಿನ ದೇವರಾಯನ ದುರ್ಗ, ಹಿರೇಹಳ್ಳಿ ಸೇರಿದಂತೆ ವಿವಿಧ ಕಡೆ ಇಸ್ಪೀಟ್‌ ಜೂಜು ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು, ಇಂತಹ ಅಪರಾಧ ಚಟುವಟಿಕೆಗಳಿಗೆ ಕಾರಣವಾಗಿವೆ. ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಕ್ಯಾತ್ಸಂದ್ರ ಸಿಪಿಐ ಚನ್ನೇಗೌಡರಿಗೆ ದೂರವಾಣಿ ಕರೆ ಮಾಡಿ ಹೇಳಿದರೆ ಉಡಾಫೆಯಾಗಿ ಮಾತನಾಡುತ್ತಾರೆ, ಕೂಡಲೇ ಅವರನ್ನು ಅಮಾನತುಪಡಿಸಬೇಕು, ಹಾಗೆಯೇ ಕೋರಾ ಎಸ್‌ಐ ಹರೀಶ್‌ ಮತ್ತು ತುಮಕೂರು ಗ್ರಾಮಾಂತರ ಸಿಪಿಐ ರಾಮಕೃಷ್ಣಪ್ಪ ಅವರನ್ನೂ ಕರ್ತವ್ಯ ನಿರ್ಲಕ್ಷದ ಆರೋಪದ ಮೇಲೆ ಅಮಾನತು ಮಾಡಬೇಕು ಎಂದು ಶಾಸಕ ಡಿ.ಸಿ.ಗೌರಿಶಂಕರ್‌ ಒತ್ತಾಯಿಸಿದರು.
ಪ್ರತಿಭಟನೆ ನಂತರ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಪೂರ್‌ ವಾಡ್‌ ಮಾತನಾಡಿ, ಈಗಾಗಲೇ ಪ್ರಕರಣ ತನಿಖೆ ಹಂತದಲ್ಲಿದೆ, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುತ್ತದೆ, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲು ಕಾರ್ಯೋನ್ಮುಖವಾಗಿದ್ದು, ಜನಸ್ನೇಹಿ ಆಡಳಿತ ನೀಡಲು ನಾನು ಸದಾ ಬದ್ಧನಿದ್ದೇನೆ ಎಂದು ತಿಳಿಸಿದರು.
ಜೆಡಿಎಸ್‌ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್‌.ನಾಗರಾಜ್‌, ಕುಂಭಯ್ಯ, ಹಿರಿಯ ಉಪಾಧ್ಯಕ್ಷ ಗಂಗಣ್ಣ, ದೇವರಾಜು, ಜೆಡಿಎಸ್‌ ನಗರಾಧ್ಯಕ್ಷ ಬೆಳ್ಳಿ ಲೋಕೇಶ್‌, ಪಾಲಿಕೆ ಸದಸ್ಯರಾದ ನರಸಿಂಹಮೂರ್ತಿ, ಶ್ರೀನಿವಾಸಮೂರ್ತಿ, ಹೆಚ್‌.ಡಿ.ಕೆ.ಮಂಜುನಾಥ್‌, ಶ್ರೀನಿವಾಸ್‌, ಮುಖಂಡರಾದ ರವೀಶ್‌ ಜಾಂಗೀರ್‌, ನರಸೇಗೌಡ, ಲಕ್ಷ್ಮಮ್ಮ, ತಾಹೇರಾ ಕುಲ್ಸುಮ್‌, ಜಯಶ್ರೀ, ವಿಜಯ್‌ಕುಮಾರ್‌, ಕೈದಾಳ ರಮೇಶ್‌, ಪ್ರೆಸ್‌ ರಾಜಣ್ಣ, ಗಂಗಹನುಮಯ್ಯ, ಬೆಳಗುಂಬ ವೆಂಕಟೇಶ್‌, ಬೈರೇಗೌಡ, ಎಂ.ಆರ್‌.ಮಂಜುನಾಥ್‌, ಹಿರೇಹಳ್ಳಿ ಮಹೇಶ್‌ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!