ತುಮಕೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಾಗೂ ಕಲ್ಪತರು ನಾಡು ತುಮಕೂರಿನಲ್ಲಿ ಪದೇ ಪದೆ ಅತ್ಯಾಚಾರದಂತಹ ಅಪರಾಧ ಪ್ರಕರಣ ಮರುಕಳಿಸುತ್ತಿರುವುದು ಅತ್ಯಂತ ವಿಷಾಧನೀಯ ಸಂಗತಿಯಾಗಿದೆ, ಇತ್ತೀಚೆಗೆ ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಸಮಾಜಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ ಎಂದು ಎಪಿವಿಪಿ ಆಕ್ರೋಶ ವ್ಯಕ್ತಪಡಿಸಿದೆ.
ನಗರದ ತುಮಕೂರು ವಿವಿ ಬಳಿ ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಅತ್ಯಾಚಾರಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.
ಮೈಸೂರಿನಂತಹದ್ದೇ ಒಂದು ಪ್ರಕರಣ ತುಮಕೂರ ಜಿಲ್ಲೆಯಲ್ಲಿ ನಡೆದಿರುವುದು ಜಿಲ್ಲೆಯ ಜನ ತಲೆ ತಗ್ಗಿಸುವಂತೆ ಮಾಡಿದೆ. ಹಿರೇಹಳ್ಳಿಯ ಚೋಟ ಸಾಬರಪಾಳ್ಯದಲ್ಲಿ 30 ವರ್ಷದ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿದೆ. ಹೆಣ್ಣನ್ನು ತಾಯಿಯ ರೂಪದಲ್ಲಿ ಕಾಣುವ ಶ್ರೇಷ್ಠ ಸಂಸ್ಕೃತಿ ಹೊಂದಿರುವ ದೇಶ ನಮ್ಮದು, ಅಲ್ಲದೆ ತುಮಕೂರು ಹಾಗೂ ಮೈಸೂರು ತನ್ನದೇ ಆದ ಗೌರವ ಘನತೆ ಹೊಂದಿರುವ ನಗರಗಳಾಗಿವೆ. ಈ ಪ್ರಕರಣಗಳನ್ನು ಎಬಿವಿಪಿ ಉಗ್ರವಾಗಿ ಖಂಡಿಸುತ್ತದೆ, ಪೊಲೀಸ್ ಇಲಾಖೆಯು ಅಪರಾಧಿಗಳನ್ನು ತಕ್ಷಣ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು, ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸ ಬೇಕೆಂದು ಎಬಿವಿಪಿ ಆಗ್ರಹಿಸಿದೆ.
ಎರಡು ಪ್ರಕರಣದ ಅಪರಾಧಿಗಳನ್ನು ಬಂಧಿಸಬೇಕು, ವಿದ್ಯಾರ್ಥಿನಿಯರು ಭಯ ಮುಕ್ತರಾಗಿ ಓಡಾಡುವ ವಾತಾವರಣ ನಿರ್ಮಾಣ ಮಾಡಬೇಕು. ನಿರ್ಜನ ಪ್ರದೇಶದಲ್ಲಿ ಸುತ್ತಮುತ್ತ ಪೊಲೀಸರು ನಿತ್ಯ ಗಸ್ತು ತಿರುಗಬೇಕು, ತುಮಕೂರು ಜಿಲ್ಲೆಯ ನಿರ್ಜನ ಪ್ರದೇಶಗಳಲ್ಲಿ ಅನೈತಿಕ ಚಟುವಟಿಕೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ತುಮಕೂರು ವಿಭಾಗ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್, ನಗರ ಕಾರ್ಯದರ್ಶಿ ಪ್ರತಾಪ್ ಸಿಂಹ, ನಗರ ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ಕಾರ್ಯಕರ್ತರಾದ ಚೈತ್ರಾ ರೇಣುಕಾಪ್ರಸಾದ್, ಸಿದ್ದಾರ್ಥ್, ವಿಕಾಸ್, ಮಂಜೇಶ, ಮಧು, ದೀಪ್ತಿ, ಮೇಘನಾ, ಪ್ರಿಯಾ, ಶಿಲ್ಪಾ, ಪೂಜಾ ,ಅನುಶ್ರೀ, ಸುಮಾ ,ದೀಕ್ಷಾ ಇತರರು ಇದ್ದರು.
ಅತ್ಯಾಚಾರ ಆರೋಪಿಗಳನ್ನು ಬಂಧಿಸಲು ಎಬಿವಿಪಿ ಒತ್ತಾಯ
Get real time updates directly on you device, subscribe now.
Comments are closed.