ನೀರಿನ ವಿಚಾರದಲ್ಲಿ ರಾಜಕೀಯ ನಿಲ್ಲಿಸಲಿ: ರಂಗನಾಥ್

ಮಾರ್ಕೋನಹಳ್ಳಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು

474

Get real time updates directly on you device, subscribe now.

ಕುಣಿಗಲ್‌: ಎಡೆಯೂರು ಹೋಬಳಿಯ 22 ಕೆರೆಗೆ ನೀರು ಹರಿಸಲು ಸಾಧ್ಯವೆ ಇಲ್ಲ ಎಂದು ವಿರೋಧ ಪಕ್ಷಗಳು ಕೈಕಟ್ಟಿ ಕುಳಿತಿದ್ದು, ನಮ್ಮ ಅವಧಿಯಲ್ಲಿ ಶ್ರಮಿಸಿ 25 ವರ್ಷಗಳ ನಂತರ 22 ಕೆರೆಗಳಿಗೆ ನೀರು ಹರಿಸಿದ್ದೇನೆ ಎಂದು ಶಾಸಕ ಡಾ.ರಂಗನಾಥ ತಿಳಿಸಿದರು.
ಶುಕ್ರವಾರ ಮಾರ್ಕೋನಹಳ್ಳಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತಾಲೂಕಿನ ವಿರೋಧ ಪಕ್ಷದ ಟೀಕೆ ಏನೆ ಇರಲಿ ತಾಲೂಕಿನ ರೈತರ ಬದುಕು ಹಸನು ಮಾಡಲು ಶ್ರಮಿಸುತ್ತೇನೆ. ಸತತ ಮೂರನೆ ವರ್ಷವೂ ಮಾರ್ಕೋನಹಳ್ಳಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುತ್ತಿದ್ದೇನೆ, ಮುಂದಿನ ದಿನಗಳಲ್ಲಿ ಲಿಂಕ್‌ ಕೆನಾಲ್‌ ಅನುಷ್ಠಾನದ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆಸಲಾಗುತ್ತದೆ. ಸಂಸದ ಡಿ.ಕೆ.ಸುರೇಶ್‌ ಮಾರ್ಗದರ್ಶನದಲ್ಲಿ ಮಾರ್ಕೋನಹಳ್ಳಿ ಜಲಾಶಯ ತುಂಬಿದ ನಂತರ ಹೆಚ್ಚುವರಿಯಾಗಿ ನದಿಗೆ ಹೋಗುತ್ತಿರುವ ನೀರನ್ನು ಮಂಗಳಾ ಜಲಾಶಯಕ್ಕೆ ಹರಿಸಲು ಐದು ಕೊಟಿ ರೂ. ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಒಪ್ಪಿಗೆ ಪಡೆದು ಅಂತಿಮ ಅನುಮೋದನೆಗೆ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೆ ಅನುಮತಿ ಸಿಗುವ ಭರವಸೆ ಇದೆ.
ಹಿಂದಿನ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ಅವರ ಕಾಳಜಿಯಿಂದ ಮಾರ್ಕೋನಹಳ್ಳಿ ಜಲಾಶಯಕ್ಕೆ ಒಂದು ಟಿಎಂಸಿ ಹೇಮಾವತಿ ನೀರು ನಿಗದಿಯಾಗಿದೆ. ಈ ಹಿಂದೆ ಮಾರ್ಕೋನಹಳ್ಳಿಗೆ ಯಾವುದೇ ನೀರು ನಿಗದಿಯಾಗಿರಲಿಲ್ಲ. ಬಿಜೆಪಿ ಸರ್ಕಾರ ನಾಗಮಂಗಲ ತಾಲೂಕಿಗೆ ನೀರು ಕೊಂಡೊಯ್ಯಲು, ತಾಲೂಕಿಗೆ ಅನ್ಯಾಯವಾಗುತ್ತದೆ ಎಂದು ತಾವು ಅಡ್ಡಪಡಿಸಿದ್ದೆ, ಈಗ ಸರ್ಕಾರ ನೀರು ಹಂಚಿಕೆಗೆ ಅನುಮೋದನೆ ನೀಡಿ ಆದೇಶ ಮಾಡಿದೆ. ಚುಂಚನಗಿರಿ ಶ್ರೀಗಳವರ ಸಹಕಾರದಿಂದ ಎನ್‌ಬಿಸಿ ಕೆನಾಲ್‌ನಿಂದ ಮಾರ್ಕೋನಹಳ್ಳಿಗೆ ನೇರವಾಗಿ ಫೀಡರ್‌ ಕೆನಾಲ್‌ ಮಾಡಲು ಯೋಜನೆ ಸಿದ್ಧಪಡಿಸಲಾಗುತ್ತಿದೆ. ನೀರಾವರಿ ವಿಷಯದಲ್ಲಿ ರಾಜಕಾರಣ ಮಾಡಲು ಇಚ್ಚಿಸೊಲ್ಲ, ವಿರೋಧ ಪಕ್ಷಗಳು ನೀರಾವರಿ ವಿಷಯದಲ್ಲಿ ಟೀಕೆ ಮಾಡುವುದು ಬಿಟ್ಟು, ತಾಲೂಕಿನ ನೀರಾವರಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕು. ತಾಲೂಕಿನ ರೈತರ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲು ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ ಎಂದರು.
ತಾಲೂಕಿನ ಗ್ರಾಮಾಂತರ ಪ್ರದೇಶದ ಜನರ ಸಮಸ್ಯೆ ಆಲಿಸಲು ಸಂಚಾರಿ ಜನಸಂಪರ್ಕ ಸಭೆ ಹಮ್ಮಿಕೊಂಡಿದ್ದು ಸದರಿ ಸಭೆಯಲ್ಲಿ ಕಂದಾಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖಾಧಿಕಾರಿಗಳು ಉಪಸ್ಥಿತರಿದ್ದು, ಗ್ರಾಮಾಂತರ ಪ್ರದೇಶದ ಜನರ ಸಮಸ್ಯೆಯನ್ನು ಅವರ ಮನೆಬಾಗಿಲಲ್ಲೆ ಆಲಿಸಿ ಪರಿಹಾರ ಕಲ್ಪಿಸಿಕೊಡಲು ಶ್ರಮಿಸಲಾಗುವುದು. ಈ ದಿನ ಕೆ.ಹೊನ್ನಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.
ಹೇಮಾವತಿ ನಾಲಾ ವಲಯದ ಪ್ರಭಾರ ಇಇ ಜಯರಾಮಯ್ಯ, ಸಹಾಯಕ ಕೃಷಿ ನಿರ್ದೇಶಕಿ ಶೌಮ್ಯಶ್ರೀ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕಿ ಮೂಕಾಂಬಿಕ, ಮುಖಂಡರಾದ ನಂಜೇಗೌಡ, ಹರೀಶ್‌, ಗೋಂವಿದರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!