ತುಮಕೂರು: ರೇಷ್ಮೆ ಕೃಷಿಯನ್ನು ಕೃಷಿ ಇಲಾಖೆ ವ್ಯಾಪ್ತಿಗೆ ತರುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಕಾನೂನು ಸಂಸದೀಯ ವ್ಯವಹಾರಗಳ, ಶಾಸನ ರಚನೆಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಹಾಗೂ ರೇಷ್ಮೆ ಇಲಾಖೆ ಸಹಯೋಗದೊಂದಿಗೆ 75ನೇ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರೇಷ್ಮೆ ಬೆಳೆಗಾರರ ಕಾರ್ಯಾಗಾರ ಮತ್ತು ಸವಲತ್ತುಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ರೇಷ್ಮೆ ಕೃಷಿಯೂ ಕೃಷಿ ಇಲಾಖೆ ವ್ಯಾಪ್ತಿಯ ಮೂಲಭೂತ ಅಂಶವಾಗಿದೆ. ರೇಷ್ಮೆ ಕೃಷಿಗೆ ಒತ್ತು ನೀಡುವ ಹಿನ್ನೆಲೆಯಲ್ಲಿ ರೇಷ್ಮೆ ಕೃಷಿಯನ್ನು ಪ್ರತ್ಯೇಕವಾಗಿ ಭಾಗ ಮಾಡಿಕೊಂಡಿದ್ದು, ಅನಗತ್ಯವಾದ ಖರ್ಚನ್ನು ಕಡಿಮೆ ಮಾಡುವ ಹಿತದೃಷ್ಟಿಯಿಂದ ರೇಷ್ಮೆ ಕೃಷಿಯನ್ನೂ ಕೃಷಿ ಇಲಾಖೆ ವ್ಯಾಪ್ತಿಗೆ ತರುವ ಚಿಂತನೆ ನಡೆಸಲಾಗಿದೆ. ಆದರೆ ಈ ಚಿಂತನೆಯ ತೀರ್ಮಾನ ಇನ್ನೂ ಅಂತಿಮವಾಗಿಲ್ಲ ಎಂದರು.
ರೇಷ್ಮೆ ಬೆಳೆ ಬೇರೆ ಬೆಳೆಗಿಂತ ವಿಭಿನ್ನವಾಗಿದ್ದು, ರೇಷ್ಮೆ ಬೆಳೆಯುವುದು ಮೊದಲಿನಷ್ಟು ಜಟಿಲವಾಗಿಲ್ಲ, ವೈಜ್ಞಾನಿಕ ಸಂಶೋಧನೆಯಿಂದ ಬಹಳ ಸರಳೀಕರಣ ಮಾಡಲಾಗಿದ್ದು, ರೈತರು ರೇಷ್ಮೆ ಕೃಷಿ ಅವಲಂಬಿಸುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು ಎಂದರು.
ರೇಷ್ಮೆ ಕೃಷಿ ಈಗ ಯಾರು ಬೇಕಾದರೂ ಬೆಳೆಯಬಹುದಾದ ಲಾಭದಾಯಕ ಉದ್ಯಮವಾಗಿದೆ. ರೇಷ್ಮೆ ಬೆಳೆಗಾರರಿಗೆ ಆಧುನಿಕ ತಂತ್ರಜ್ಞಾನ ಸುಲಭವಾಗಿ ಸಿಗುತ್ತಿದ್ದು, ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವುದರೊಂದಿಗೆ ರೇಷ್ಮೆ ಕೃಷಿಯಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.
ಮಹಾತ್ಮಗಾಂಧೀಜಿ ಅವರು ಗ್ರಾಮ ಸ್ವರಾಜ್ಯದಿಂದ ಸುಸ್ಥಿರ ದೇಶ, ಸುಸ್ಥಿರ ಜೀವನಕ್ಕೆ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದರು, ಹತ್ತಿ ಮತ್ತು ರೇಷ್ಮೆ ಬೆಳೆಯಲ್ಲಿ ಮುಂದಿದ್ದ ಭಾರತ ದೇಶ ಈಗ ಕೇವಲ ಮಾರಾಟ ಕೇಂದ್ರವಾಗುತ್ತಿರುವುದು ಬೇಸರದ ಸಂಗತಿ, ಈ ನಿಟ್ಟಿನಲ್ಲಿ ರೇಷ್ಮೆ ಉತ್ಪಾದನೆ ಹೆಚ್ಚು ಮಾಡಬೇಕಾಗಿದ್ದು, ರೈತರು ಹೆಚ್ಚಾಗಿ ರೇಷ್ಮೆ ಕೃಷಿಯತ್ತ ವಾಲಬೇಕಿದೆ ಎಂದು ಕಿವಿಮಾತು ಹೇಳಿದರು.
ಜಿಲ್ಲೆಯಲ್ಲಿ ವೈ.ಕೆ.ರಾಮಯ್ಯ ಅವರು ರೇಷ್ಮೆ ಬೆಳೆಗೆ ನೀಡಿರುವ ಕೊಡುಗೆಯನ್ನು ನಾವು ಸ್ಮರಿಸಬೇಕು, ಜಿಲ್ಲೆಯಲ್ಲಿ ಜಪಾನ್ ಯೋಜನೆಯೊಂದಿಗೆ ರೇಷ್ಮೆ ಬೆಳೆಗೆ ಹೆಚ್ಚು ಒತ್ತು ಕೊಟ್ಟಿದ್ದೆವು, ಮೈಸೂರು ತಳಿಗೆ ಕುಣಿಗಲ್ ತಾಲ್ಲೂಕು ತವರು, ಆದರೆ ಅದನ್ನು ಈಗ ರಾಮನಗರ ಜಿಲ್ಲೆಗೆ ಕೊಟ್ಟಿದ್ದೇವೆ, ಜಿಲ್ಲೆಯ ತಳಿಯನ್ನು ಉಳಿಸಬೇಕಿದೆ ಎಂದು ಸಲಹೆ ನೀಡಿದರು.
ರೇಷ್ಮೆ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಲು ಆಗದೆ ಇರುವುದರಿಂದ ರೈತರು ರೇಷ್ಮೆಯಿಂದ ಹಿಂದೆ ಸರಿದರು, ರೇಷ್ಮೆ ಬೆಳೆಗೆ ಮಡಿವಂತಿಕೆ ತಂದಿದ್ದರಿಂದ ರೈತರು ಹೊರಗುಳಿದರು, ಆದರೆ ಇಂದು ರೇಷ್ಮೆ ಮಾರುಕಟ್ಟೆ ಮೇಲೆ ಹಿಡಿತ ಸಾಧ್ಯವಾಗುತ್ತಿದೆ. ಶುಚಿತ್ವ ಕಾಪಾಡಬೇಕೆಂಬ ನಿಟ್ಟಿನಲ್ಲಿ ರೇಷ್ಮೆ ಬೆಳೆಗೆ ಮಡಿವಂತಿಕೆ ತರಲಾಗಿತ್ತು ಎಂಬುದನ್ನು ವೈಜ್ಞಾನಿಕವಾಗಿ ಸಾಬೀತು ಪಡಿಸಲಾಗಿದೆ ಎಂದರಲ್ಲದೆ ರೇಷ್ಮೆ ಉದ್ಯಮ ಈಗ ಸರಳೀಕರಣಗೊಂಡಿರುವುದರಿಂದ ಇತ್ತೀಚಿನ ದಿನಗಳಲ್ಲಿ ರೈತರು ರೇಷ್ಮೆ ಕೃಷಿಯತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂದು ಹೇಳಿದರು.
ಫ್ಯಾಷನ್ ನಿಂದ ಬದುಕು ಟೊಳ್ಳಾಗಿದೆ. ಕೃಷಿ ಕಾಯಕದ ಮೇಲಿನ ಆಸಕ್ತಿ ಕಡಿಮೆಯಾಗಿದೆ, ಫ್ಯಾಷನ್ ಬದುಕಿನಿಂದ ಹೊರಬಂದು, ಯಾರಿಗೂ ಅಡಿಯಾಳಾಗದೆ ಸ್ವಾಭಿಮಾನದಿಂದ ಬದುಕಬೇಕು, ಯಾವುದೇ ಕಾಯಕವೂ ಕೆಳಮಟ್ಟದ್ದು ಎಂಬ ಭಾವನೆ ತಾಳಬಾರದು, ಶ್ರಮದಲ್ಲಿ ಬದುಕಬೇಕು ಎಂದು ತಿಳಿಸಿದರಲ್ಲದೆ ಕೃಷಿಯನ್ನೇ ಲಾಭದಾಯಕವೆಂದು ಕೃಷಿ ಕಾಯಕಕ್ಕೆ ಮಾತ್ರ ಸೀಮಿತವಾಗಬಾರದು, ಕೃಷಿ ಜೊತೆಗೆ ಕೃಷಿಗೆ ಪೂರಕವಾದ ಉಪಕಸುಬನ್ನು ಅಳವಡಿಸಿಕೊಳ್ಳಬೇಕು, ಉಪಕಸುಬಿನಲ್ಲಿ ಬಂದ ಆದಾಯ ದಿನನಿತ್ಯದ ಬದುಕಿಗೆ ಆಸರೆಯಾಗಲಿದೆ ಎಂದು ಹೇಳಿದರು.
ಸ್ವಾಭಿಮಾನದ ಬದುಕಿನ ಹೆಜ್ಜೆಗಿಂತ ಮತ್ತೊಂದಿಲ್ಲ, ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು, ಹೊಸ ಆವಿಷ್ಕಾರಗಳನ್ನು ರೂಢಿಗತ ಮಾಡಿಕೊಳ್ಳಬೇಕು, ಕಾಲಕ್ಕನುಗುಣವಾಗಿ ಉತ್ಪಾದನೆ ಮಾಡುವುದನ್ನು ಕಲಿತುಕೊಳ್ಳಬೇಕು, ಕೃಷಿ ಬದುಕು ಭಾರ, ಸಾಲವಾಗಬಾರದು, ಉಪಕಸುಬನ್ನು ಅಳವಡಿಸಿಕೊಂಡು ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ರೈತರ ಬೆನ್ನೆಲುಬಿಗೆ ಸರ್ಕಾರ ಸದಾ ಜೊತೆಗಿರುತ್ತದೆ, ಆರ್ಥಿಕವಾಗಿ ಮುಂದೆ ಬರಲು ಸಹಕಾರ ನೀಡುತ್ತದೆ, ಮಹಾತ್ಮಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡಬೇಕು, ರೈತರು ನರೇಗಾ ಯೋಜನೆಯನ್ನು ವರದಾನವನ್ನಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆಯಿತ್ತರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಮಾರ್ಗದರ್ಶನ ದೊರೆಯುತ್ತಿರುವುದರಿಂದ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದೊಂದಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೇಷ್ಮೆ ಬೆಳೆಗಾರರ ಆಸಕ್ತಿ ಗಮನಿಸಿದರೆ ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಇನ್ನಷ್ಟು ವಿಸ್ತರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಿನ ಸಂದರ್ಭದಲ್ಲಿ ವೈಜ್ಞಾನಿಕವಾಗಿ ತಾಂತ್ರಿಕತೆ ಬಳಸಿ ರೇಷ್ಮೆ ಬೆಳೆದರೆ ರೈತರಿಗೆ ನಷ್ಟವಾಗುವುದಿಲ್ಲ, ಸರ್ಕಾರ ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ನರೇಗಾ ಯೋಜನೆಯ ಸದುಪಯೋಗ ಪಡಿಸಿಕೊಂಡು ಹನಿ ನೀರಾವರಿ ಯೋಜನೆ ಬಳಸಿ ಆರ್ಥಿಕತೆ ಸುಧಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೋವಿಡ್‌ನಿಂದ ಜನರು ಕೃಷಿಯ ಕಡೆ ಮುಖ ಮಾಡಿದ್ದಾರೆ, ಅದರಲ್ಲಿ ಯಾವ ಕೃಷಿ ಲಾಭದಾಯಕ ಎನ್ನುವುದನ್ನು ಅರಿತುಕೊಳ್ಳಬೇಕು, ರೈತರಲ್ಲಿ ಕಡಿಮೆಯಾಗುತ್ತಿರುವ ನೈಪುಣ್ಯತೆ, ತಾಂತ್ರಿಕತೆ ಹೆಚ್ಚಿಸಲು ಸರ್ಕಾರ ಸಹಕಾರ ನೀಡುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ನರೇಗಾ ಯೋಜನೆಯಡಿ ರೇಷ್ಮೆ ಕೃಷಿ ಅವಲಂಬಿಸಲು ಆದ್ಯತೆ ನೀಡಲಾಗಿದೆ. ರೇಷ್ಮೆ ಬೆಳೆ ನಾಟಿಯಿಂದ ಹಿಡಿದು ಮುಂದಿನ ಮೂರು ವರ್ಷಗಳ ಕಾಲ ನಿರ್ವಹಣೆ ಮಾಡಲು ನರೇಗಾ ಯೋಜನೆಯಡಿ ಸಹಾಯ ಕಲ್ಪಿಸಲಾಗುವುದು ಎಂದರು.
ರೇಷ್ಮೆಗೆ ಮಾರುಕಟ್ಟೆ ವ್ಯವಸ್ಥೆ ಜೊತೆಗೆ ಉತ್ತಮ ಬೆಲೆಯೂ ಇದೆ. ರೈತರು ಮುಂದೆ ಬಂದಲ್ಲಿ ನರೇಗಾ ಯೋಜನೆ ರೇಷ್ಮೆ ಬೆಳೆಯನ್ನು ವಿಸ್ತರಿಸಲಾಗುವುದು ಎಂದರು.
ರೇಷ್ಮೆ ಇಲಾಖೆ ಉಪನಿರ್ದೇಶಕ ಬಾಲಕೃಷ್ಣ ಮಾತನಾಡಿ, ಭಾರತದ 75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ರೇಷ್ಮೆ ಬೆಳೆಗಾರರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷವೇ ಈ ಕಾರ್ಯಕ್ರಮ ನಡೆಯಬೇಕಿತ್ತು, ಆದರೆ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟ ಕಾರ್ಯಕ್ರಮವನ್ನು ಇಂದು ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ರೇಷ್ಮೆ ಬೆಳೆ ಪ್ರದೇಶ ಹೆಚ್ಚಳ ಮಾಡುವುದರ ಜೊತೆಗೆ ಹನಿನೀರಾವರಿ ಪದ್ಧತಿಯಲ್ಲಿ ರೇಷ್ಮೆ ಬೆಳೆ ಬೆಳೆಯಲು ಇಲಾಖೆಯಿಂದ ದಿಟ್ಟ ಹೆಜ್ಜೆ ಇಡಲಾಗಿದೆ. ಇಲಾಖೆಯಿಂದ ರೇಷ್ಮೆ ಹುಳು ಸಾಕಾಣಿಕೆಗೆ ಶೆಟ್ ನಿರ್ಮಾಣ ಮಾಡಲು ರೇಷ್ಮೆಬೆಳೆಗಾರರಿಗೆ ಸಹಾಯಧನ ಕಲ್ಪಿಸಲಾಗುತ್ತಿದೆ. ವಿಶೇಷ ಕಾಳಜಿ ವಹಿಸಿ ತಾಲೂಕುವಾರು ಗುರಿ ಹೊಂದುವ ಮೂಲಕ ಪ್ರತಿ ವರ್ಷ 1 ಸಾವಿರ ಎಕರೆ ರೇಷ್ಮೆ ಪ್ರದೇಶವನ್ನು ಹೆಚ್ಚಳ ಮಾಡುವ ಗುರಿ ಹೊಂದಲಾಗಿದೆ. ಪ್ರಸ್ತುತ ವರ್ಷ ಸುಮಾರು 1200 ಎಕರೆ ಪ್ರದೇಶ ರೇಷ್ಮೆ ಪ್ರದೇಶವನ್ನು ಹೆಚ್ಚು ಮಾಡಲಾಗುವುದು ಎಂದು ಹೇಳಿದರು.
ಜಿಲ್ಲೆಯನ್ನು ರೇಷ್ಮೆ ನಾಡನ್ನಾಗಿಸಲು ಪಣತೊಟ್ಟಿದ್ದು, ರಾಜ್ಯದಲ್ಲಿಯೇ ತುಮಕೂರು ಜಿಲ್ಲೆಯನ್ನು ನಂ. 1 ಬಯೋಟಿನ್ ಜಿಲ್ಲೆಯನ್ನಾಗಿ ಮಾಡಲಾಗುವುದು ಎಂದ ಅವರು, ಜಿಲ್ಲೆಯಲ್ಲಿ ಹಳೆ ರೈತ ಹಾಗೂ ಹೊಸ ರೈತರನ್ನು ಸೇರಿಸಿ ಗುಂಪು ಸಭೆ ಮಾಡಲಾಗುತ್ತಿದೆ. ಈ ಮೂಲಕವೇ ರೇಷ್ಮೆ ಬೆಳೆ ಪ್ರದೇಶ ಹೆಚ್ಚಳ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಜಿಲ್ಲೆಯ ಅಜ್ಜಪ್ಪನಹಳ್ಳಿ ವೀರಭದ್ರಯ್ಯ ಅವರಿಗೆ ರಾಜ್ಯಮಟ್ಟದ ಮೊದಲ ರಾಜ್ಯ ಪ್ರಶಸ್ತಿ ಪ್ರಶಂಸನಾ ಪತ್ರ ಹಾಗೂ ಜಿಲ್ಲಾ ಮಟ್ಟದ ಮೊದಲ ಪ್ರಶಸ್ತಿಯನ್ನು ಅಮ್ಮನಗಳ್ಳಿ ನಿರಂಜನ್, ಎರಡನೇ ಪ್ರಶಸ್ತಿಯನ್ನು ಹೊನ್ನಗೊಂಡನಹಳ್ಳಿ ಶಿವಕುಮಾರ್ ಹಾಗೂ ಹುಳ್ಳೆನಹಳ್ಳಿಯ ಚಿಕ್ಕಗಂಗಮ್ಮ ಅವರಿಗೆ ಮೂರನೇ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉದ್ಘಾಟನಾ ಕಾರ್ಯಕ್ರಮದ ನಂತರ ವಿಜ್ಞಾನಿಗಳಾದ ಡಾ.ತಿಮ್ಮಾರೆಡ್ಡಿ, ವಿ.ಜಿ.ಮರಿಭಾಶೆಟ್ಟಿ ಹಾಗೂ ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ವೈ.ಟಿ. ತಿಮ್ಮಯ್ಯ ಕಾರ್ಯಾಗಾರ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ಸೇರಿದಂತೆ ರೈತರು, ಅಧಿಕಾರಿಗಳು ಭಾಗವಹಿಸಿದ್ದರು.
ರೇಷ್ಮೆ ಕೃಷಿ ಮಾಡಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಿ: ಮಾಧುಸ್ವಾಮಿ
ಕೃಷಿ ಇಲಾಖೆ ವ್ಯಾಪ್ತಿಗೆ ರೇಷ್ಮೆ ತರಲು ಚಿಂತನೆ
Get real time updates directly on you device, subscribe now.
Prev Post
Next Post
Comments are closed.