ನಾನು ಎಡ, ಬಲ ಅಲ್ಲ, ಕನ್ನಡ ಪಂಥೀಯ: ಡಾ.ಮಹೇಶ್‌ ಜೋಷಿ

193

Get real time updates directly on you device, subscribe now.

ಮಧುಗಿರಿ: ನಾನು ಬಲಪಂಥೀಯನೂ ಅಲ್ಲ, ಎಡಪಂಥೀಯನೂ ಅಲ್ಲ, ಕನ್ನಡ ಪಂಥೀಯನಾಗಿ ಜಾತಿ, ಧರ್ಮ, ಪಕ್ಷ, ಮೇಲು ಕೀಳು, ಮಹಿಳೆ ಪುರುಷರೆಂಬ ಭೇದ ಭಾವ ಮಾಡದೆ ಕನ್ನಡದ ಪರವಾಗಿ ಕೆಲಸ ಮಾಡುತ್ತೇನೆ ಎಂದು ನಾಡೋಜ ಡಾ.ಮಹೇಶ್‌ ಜೋಷಿ ತಿಳಿಸಿದರು.
ಶನಿವಾರ ಪಟ್ಟಣದ ಕನ್ನಡ ಭವನದಲ್ಲಿ ಕಸಾಪ ಚುನಾವಣೆ ಸೆಪ್ಟೆಂಬರ್‌ ಅಥವಾ ಅಕ್ಟೋಬರ್ ನಲ್ಲಿ ನಡೆಯುವ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯ ಘಟಕ ಸ್ಪರ್ಧಿಸಿರುವ ನಾನು ಕೆಲವು ಪತ್ರಿಕೆಗಳ ಸಮೀಕ್ಷೆ ಪ್ರಕಾರರಿಂದ ಬಹುಮತದಿಂದ ಆಯ್ಕೆಯಾಗುತ್ತೇನೆಂದು ಹಲವು ಪತ್ರಕರ್ತರು ನೀವು ಎಡಪಂಥಿಯರೋ ಅಥವಾ ಬಲಪಂಥಿಯರಾಗಿ ಕೆಲಸ ಮಾಡುತ್ತೀರಾ ಎಂದು ಕೇಳಿದಾಗ ನಾನು ಯಾವ ಯಾವ ಪಂಥಕ್ಕೆ ಸೇರುವುದಿಲ್ಲ, ಕನ್ನಡ ಪಂಥಕ್ಕೆ ಕೆಲಸ ನಿರ್ವಹಿಸುತ್ತೇನೆಂದು ಹೇಳಿದ್ದೇನೆ ಎಂದರು.
ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ ಕನ್ನಡ ಭವನ ನಿರ್ಮಾಣ, ವಿಶ್ವಕನ್ನಡ ಸಮ್ಮೇಳನ ನಡೆಸುವುದಾಗಿ ತಿಳಿಸಿ, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕನ್ನಡ ಅನ್ನದ ಭಾಷೆಯಾಗಿ ಕನ್ನಡಿಗನಿಗೆ ಸ್ಥಳೀಯ ಉದ್ಯಮಗಳು ಮತ್ತು ಕೈಗಾರಿಕೆಗಳಲ್ಲಿ ಮೊದಲ ಆದ್ಯತೆ ಮೇರೆಗೆ ಕೆಲಸ ಕೊಡಬೇಕು. ನಾನು ಕನ್ನಡದ ಸೈನಿಕನಾಗಿ ಕೆಲಸ ಮಾಡುತ್ತಾನೆ, ಕನ್ನಡ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ, ಕನ್ನಡ ಭಾಷೆ ಉಳಿಸಿ ಬೆಳೆಸುತ್ತಿರುವ ಕನ್ನಡ ಶಿಕ್ಷಕರಿಗೆ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ಬೆಂಬಲಿಸುವುದರ ಜೊತೆಗೆ ಮಹಿಳೆಯರಿಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದರು.
ಕನ್ನಡ ನಾಡಿನ ಸೈನಿಕರು ಅರೆಕಾಲಿಕ ಸೈನಿಕರು ಮತ್ತು ವಿಕಲಚೇತನರಿಗೆ ಯಾವುದೇ ಶುಲ್ಕವಿಲ್ಲದೆ ಕಸಾಪ ಗೌರವ ಸದಸ್ಯತ್ವವನ್ನು ನೀಡುತ್ತೆನೆ, ಅಜೀವ ಸದಸ್ಯತ್ವದ ಶುಲ್ಕ 250 ರೂ. ಗೆ ಇಳಿಸುತ್ತೇನೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗಿ ಜನೋಪಯೋಗಿ ಜನಪರ ಕಾರ್ಯಗಳನ್ನು ಕೈಗೊಳ್ಳುತ್ತೇನೆ, ನಾನು ಸಮಯ ಪ್ರಜ್ಞೆಗೆ ಆದ್ಯತೆ ನೀಡುತ್ತೇನೆ, ಯಾವುದೇ ಸಭೆ ನಿಗದಿತ ಕಾಲಕ್ಕೆ ಸರಿಯಾಗಿ ಪ್ರಾರಂಭವಾಗಬೇಕು, ಯಾವುದೇ ಹಾರ ತುರಾಯಿಗಳಿಗೆ ಅವಕಾಶ ನೀಡದೆ, ಕನ್ನಡ ಪುಸ್ತಕಗಳನ್ನು ಹೆಚ್ಚು ಕಾರ್ಯಕ್ರಮಗಳಲ್ಲಿ ಬಳಸುವಂತೆ ಮಾಡುತ್ತೇನೆ ಎಂದರು.
ನಾನು ಯಾವುದೇ ಪ್ರಾದೇಶಿಕ ಸಂಸ್ಥೆ ಯ ಪ್ರತಿನಿಧಿ ಆಗಿರೋದಿಲ್ಲ, ಅಖಂಡ ಕರ್ನಾಟಕದ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸುತ್ತೇನೆ, ಕನ್ನಡ ಸಾಹಿತ್ಯ ನೆಲ ಜಲ ಜನಪದ ರಕ್ಷಣೆ ಅಭಿವೃದ್ಧಿಗೆ ಸಾಹಿತ್ಯ ಪರಿಷತ್‌ನಿಂದ ಸದಾ ಸಕ್ರಿಯನಾಗಿರುತ್ತೇನೆ ಎಂದರು.
ನನ್ನ ಒಟ್ಟಿಗೆ ಇಪ್ಪತ್ತೊಂದು ಅಭ್ಯರ್ಥಿಗಳು ಸ್ಪರ್ಧಿಸಿದ್ದು ಅವರನ್ನು ಸಹ ಸ್ಪರ್ಧಿಗಳು ಎಂದು ತಿಳಿದು ಚುನಾವಣೆ ಬಳಿಕ ಎಲ್ಲರೂ ಸೇರಿ ಕನ್ನಡದ ತೇರನ್ನು ಎಳೆದು ಬದಲಾವಣೆಯ ಯುಗವನ್ನು ತರುತ್ತೇನೆಂದರು.
ಕನ್ನಡ ಸಾಹಿತ್ಯ ಪರಿಷತ್‌ ಸದಸ್ಯತ್ವ ಪಡೆಯುವ ವಿಧಾನ ನವೀಕೃತ ಗೊಳಿಸುತ್ತೇನೆ, ಕಾರ್ಯಚಟುವಟಿಕೆಯನ್ನು ಮುಂದೆ ಸಂಪೂರ್ಣ ಪಾರದರ್ಶಕವಾಗಿರುವುದು, ಹಳ್ಳಿಹಳ್ಳಿಗೂ ಪಾದಯಾತ್ರೆ ಮಾಡಿ ಕನ್ನಡ ಸಾಹಿತ್ಯ ಪರಿಷತ್ ನ ವ್ಯಾಪ್ತಿ ವಿಸ್ತರಿಸುತ್ತೇನೆ, ಮಾತೃಭಾಷೆಯಾದ ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣದ ಅನುಷ್ಠಾನಕ್ಕೆ ಒತ್ತು ನೀಡುತ್ತೇನೆ, ಕನ್ನಡದ ಅನ್ನದ ಭಾಷೆಯಾಗಲು ಎಲ್ಲಾ ರೀತಿಯ ಭಗೀರಥ ಪ್ರಯತ್ನ ಮಾಡುತ್ತೇನೆ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡಕ್ಕೆ ಗೌರವ ತರುತ್ತೇನೆ. ರಾಜಕೀಯದಲ್ಲಿ ತಟಸ್ಥನಾಗಿ ಕನ್ನಡ ಪಂಥದ ಸೇವಕನಾಗಿರುತ್ತೇನೆ. ಸಾಮಾಜಿಕ ನ್ಯಾಯ ಪ್ರಾದೇಶಿಕ ನ್ಯಾಯ ಹಾಗೂ ಪ್ರತಿಭಾ ನ್ಯಾಯವನ್ನು ಎತ್ತಿಹಿಡಿದು ಎಲ್ಲರಿಗೂ ಸಮರ್ಪಕವಾದ ನ್ಯಾಯ ಒದಗಿಸುತ್ತೇನೆಂದರು.

ತವರು ಮನೆ: ನಾನು ಐಎಎಸ್ ಗೆ ತಯಾರಿ ವೇಳೆ ಮಧುಗಿರಿಯಲ್ಲಿ ಎಸ್ಪಿಯಾಗಿದ್ದ ಪಚಾವ್‌ ಅವರ ಮನೆಯಲ್ಲಿ ಉಳಿದುಕೊಂಡು 2 ತಿಂಗಳು ವ್ಯಾಸಂಗ ಮಾಡ್ದೆ, ಉನ್ನತ ಹ್ದುಗೆ ಏರಲು ಮಧುಗಿರಿಯಲ್ಲಿ ಮಾಡಿದ ಅಧ್ಯಯನ ಮತ್ತು ಅಭ್ಯಾಸ ಭದ್ರಬುನಾದಿ ಆಗಿತ್ತು, ಮಧುರವಾದ ನೆನಪುಗಳು ನೀಡುವಂತಹ ಮತ್ತು ಕನ್ನಡದ ಆಸ್ತಿ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರು ಈ ನೆಲದಲ್ಲಿ ಉಪವಿಭಾಗಾಧಿಕಾರಿ ಆಗಿದ್ದು ನನಗೆ ಮಧುಗಿರಿಗೆ ಬಂದರೆ ತವರು ಮನೆಗೆ ಬಂದಷ್ಟೇ ಸಂತೋಷ ವಾಗುತ್ತದೆ ಎಂದರು.
ಈ ವೇಳೆ ವಿಶ್ರಾಂತ ನ್ಯಾಯಾಧೀಶ ಅರಳಿ ನಾಗರಾಜು, ಚೆನ್ನ ಬಸವ ಕೊಟ್ಟಗಿ, ನಬಿಸಾಬ್‌, ತಾಲ್ಲೂಕು ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸ್‌ ಮೂರ್ತಿ, ಕಲಾರಂಗದ ಅಧ್ಯಕ್ಷ ಪ.ವಿ.ಸುಬ್ರಹ್ಮಣ್ಯ, ಕಸಾಪ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಸಿ.ಕೃಷ್ಣಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ರಕ್ತದಾನಿ ಶಿಕ್ಷಕರ ಬಳಗದ ಶಶಿಕುಮಾರ್‌ ಕೆಂಪೇಗೌಡ, ಶಿಕ್ಷಕರಾದ ರಾಮಚಂದ್ರಪ್ಪ, ರಾಮಕೃಷ್ಣಪ್ಪ, ಪುರಸಭಾ ಮಾಜಿ ಸದಸ್ಯ ಬಿ.ಆರ್‌.ಸತ್ಯನಾರಾಯಣ, ಕೋಡ್ಲಾಪುರ ನಾರಾಣಪ್ಪ, ನರಸಿಂಹಮೂರ್ತಿ, ಗೋವಿಂದ ಆರ್‌. ಮುಜುಮ್ದಾರ್‌, ಅಮರಾವತಿ ದ್ರೇಹಾಚಾರ್, ಮಂಜುಳಾ ನಾಗಭೂಷಣ್‌, ಲಲಿತಾಂಬಾ ನರಸಿಂಹಯ್ಯ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!