ಕೊರಟಗೆರೆ: ಹಾಡ ಹಗಲೇ ಗ್ರಾಮದ ಕುರಿ ಶೆಡ್ ವೊಂದಕ್ಕೆ ದಾಳಿ ಮಾಡಿದ ಚಿರತೆ 14 ಮೇಕೆ, 4 ಕುರಿ ಮೂರು ಕೋಳಿಗಳ ರಕ್ತ ಹೀರಿ ಸಾಯಿಸಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಕೊರಟಗೆರೆ ತಾಲ್ಲೂಕಿನ ಗರುಗದೊಡ್ಡಿ ಗ್ರಾಮದ ರಾಮಕೃಷ್ಣಪ್ಪ ಎಂಬುವವರು ಸುಮಾರು 10 ಲಕ್ಷ ರೂ. ಖರ್ಚು ಮಾಡಿ ಕುರಿಶೆಡ್ ನಿರ್ಮಿಸಿ ಕುರಿ, ಮೇಕೆ ಸಾಕಾಣಿಕೆ ಮಾಡಿ ಜೀವನ ಸಾಗಿಸುತ್ತಿದ್ದರು. ಶನಿವಾರ ಬೆಳಗ್ಗೆ ಸುಮಾರು 11.30 ರಲ್ಲಿ ಶೆಡ್‌ಗೆ ನುಗ್ಗಿದ ಚಿರತೆಯೊಂದು 14 ಮೇಕೆ, 4 ಕುರಿ ಮತ್ತು ಮೂರು ಕೋಳಿಗಳ ರಕ್ತ ಹೀರಿ ಸಾಯಿಸಿದೆ.
ಇದರಿಂದ ಆತಂಕಗೊಂಡ ಗ್ರಾಮಸ್ಥರು ಕೂಡಲೇ ಅರಣ್ಯಾಧಿಕಾರಿಗಳಿಗೆ ಮತ್ತು ತಾಲ್ಲೂಕು ತಹಶೀಲ್ದಾರರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ನಹೀದಾ ಜುಂಜುಂ ಅವರು ಸ್ಥಳ ಪರಿಶೀಲನೆ ಮಾಡಿ ಸ್ಥಳದಲ್ಲಿದ್ದ ಅರಣ್ಯಾಧಿಕಾರಿಗಳಿಗೆ ಚಿರತೆ ಹಿಡಿಯುವಂತೆ ಸೂಚನೆ ನೀಡಿದರು.
ಈ ಹಿಂದೆ ಗ್ರಾಮಸ್ಥರು ಹಲವಾರು ಬಾರಿ ಚಿರತೆ ಹಿಡಿಯುವಂತೆ ದೂರು ನೀಡಿದ್ದರೂ ನಿರ್ಲಕ್ಷ್ಯ ವಹಿಸಿದ್ದೀರಾ, ಇದೇ ರೀತಿ ಮನುಷ್ಯರ ಮೇಲೆ ಚಿರತೆ ದಾಳಿ ನಡೆಸಿದರೂ ನಿರ್ಲಕ್ಷ್ಯ ವಹಿಸುತ್ತೀರಾ ಎಂದು ತಹಶೀಲ್ದಾರ್ ನಹೀದಾ ಜುಂ ಜುಂ ಅರಣ್ಯಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಚಿರತೆ ದಾಳಿಯಿಂದ ಸಾವನ್ನಪ್ಪಿರುವ ಮೇಕೆ, ಕುರಿ ಮತ್ತು ಕೋಳಿಗಳ ಪೋಸ್‌್ಟ ಮಾರ್ಟಂ ಮಾಡಿಸಿ ಸಾಕಾಣಿಕೆ ಮಾಲೀಕರಿಗೆ ತಮ್ಮ ಇಲಾಖೆಯಿಂದ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದರು.
ಸಂಬಂಧಪಟ್ಟ ಅರಣ್ಯ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ, ಅರಣ್ಯಾಧಿಕಾರಿಗಳನ್ನು ಖುದ್ದು ವಿಚಾರಿಸಿದರೆ ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಉಡಾಫೆ ಉತ್ತರ ನೀಡುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಬೋನು ಇಟ್ಟು ಚಿರತೆ ಹಿಡಿಯುವಂತೆ ವಲಯ ಅರಣ್ಯಾಧಿಕಾರಿ ನಾಗರಾಜು ಅವರನ್ನು ಗ್ರಾಮಸ್ಥರು ಒತ್ತಾಯಿಸಿದಾಗ ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ, ಹೇಗೆ ಚಿರತೆ ಮತ್ತು ಕರಡಿಗಳನ್ನು ಹಿಡಿಯಲಿ ಎಂದು ಹಗುರವಾಗಿ ಮಾತನಾಡುತ್ತಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಸ್ಥಳಕ್ಕೆ ಮಾಜಿ ಶಾಸಕ ಸುಧಾಕರ್ ಲಾಲ್ ಭೇಟಿ ನೀಡಿ ವೈಯಕ್ತಿಕವಾಗಿ ಪರಿಹಾರ ನೀಡಿದರು. ವಡ್ಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತರಾಜು, ಕಂದಾಯ ತನಿಖಾಧಿಕಾರಿ ಪ್ರತಾಪ್‌ಕುಮಾರ್, ಗ್ರಾಮ ಲೆಕ್ಕಿಗರಾದ ಮೀನಾಕುಮಾರಿ, ಗ್ರಾಪಂ ಸದಸ್ಯ ಸಂತೋಷ್‌ಕುಮಾರ್, ರೈತಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಜಿ.ವಿ.ವೀರೇಂದ್ರ ಪ್ರಸಾದ್, ವೆಂಕಟೇಶ್, ಜಿ.ವಿ.ನಾಗೇಂದ್ರಕುಮಾರ್, ರಾಜಣ್ಣ ಮುಂತಾದವರು ಹಾಜರಿದ್ದರು.
ಚಿರತೆ ದಾಳಿ- 14 ಮೇಕೆ, 4 ಕುರಿ ಸಾವು
Get real time updates directly on you device, subscribe now.
Next Post
Comments are closed.