ಅತ್ಯಾಚಾರಿಗಳ ಬಂಧನಕ್ಕೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ

162

Get real time updates directly on you device, subscribe now.

ತುಮಕೂರು: ಗ್ರಾಮಾಂತರದ ಚಿಕ್ಕಹಳ್ಳಿ ಗ್ರಾಮದ ತಿಗಳ ಸಮುದಾಯದ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೂಡಲೇ ಕ್ರಮಕೈಗೊಂಡು ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು, ಆ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ತಿಗಳ ಸಮಾಜದ ಮುಖಂಡರು, ಮಹಾನಗರ ಪಾಲಿಕೆ ಮೇಯರ್‌, ಉಪಮೇಯರ್‌ ಆದಿಯಾಗಿ ಪಾಲಿಕೆ ಎಲ್ಲಾ ಹಾಲಿ ಮತ್ತು ಮಾಜಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್‌ ಫೋರ್ಸ್‌ ಸೇರಿದಂತೆ ಜಾತ್ಯತೀತವಾಗಿ ಸಾರ್ವಜನಿಕರು, ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ಸೋಮವಾರ ಶಾಂತಿಯತವಾಗಿ ಬೃಹತ್‌ ಪ್ರತಿಭಟನೆ ನಡೆಸಿದರು.
ಕರ್ನಾಟಕ ಅಗ್ನಿವಂಶ ಕ್ಷತ್ರಿಯ ತಿಗಳ ಸಮುದಾಯದ ರಾಜ್ಯಾಧ್ಯಕ್ಷ ಸುಬ್ಬಣ್ಣ, ಮಹಾನಗರ ಪಾಲಿಕೆ ಸದಸ್ಯ ನರಸಿಂಹಮೂರ್ತಿ, ಮುಖಂಡ ರವೀಶ್‌ ಜಾಂಗೀರ್‌ ನೇತೃತ್ವದಲ್ಲಿ ನಗರದ ಬಿಜಿಎಸ್‌ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪಿಯನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿ, ಆರೋಪಿಯ ಪ್ರತಿಕೃತಿಯೊಂದಿಗೆ ಭಿತ್ತಿಫಲಕಗಳನ್ನು ಹಿಡಿದು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಆರೋಪಿಗಳನ್ನು ಬಂಧಿಸಿ ಉಗ್ರ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಅಗ್ನಿವಂಶ ಕ್ಷತ್ರಿಯ ತಿಗಳ ಸಂಘದ ರಾಜ್ಯಾಧ್ಯಕ್ಷ ಸುಬ್ಬಣ್ಣ, ತಿಗಳ ಸಮುದಾಯ ಮೂಲತಃ ರೈತ ಸಮುದಾಯಕ್ಕೆ ಸೇರಿದ್ದು, ಹೊಲ ಗದ್ದೆಗಳಿಗೆ ಕೆಲಸಕ್ಕೆ ತೆರಳುವುದು, ಹೈನುಗಾರಿಕೆ ಇತ್ಯಾದಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಇತ್ತೀಚೆಗೆ ತುಮಕೂರು ಗ್ರಾಮಾಂತರದ ಚಿಕ್ಕಹಳ್ಳಿಯಲ್ಲಿ ತಿಗಳ ಸಮುದಾಯದ ಮಹಿಳೆಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಖಂಡನೀಯ, ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಅವರನ್ನು ಗಲ್ಲಿಗೇರಿಸಬೇಕು, ಆ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮೈಸೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ ರೇಪ್‌ ನಡೆದು ಒಂದು ವಾರದೊಳಗೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದು, ತುಮಕೂರಿನಲ್ಲಿ ಘಟನೆ ನಡೆದು 10 ದಿನಗಳೇ ಕಳೆದಿವೆ. ಇದುವರೆಗೂ ಆರೋಪಿಗಳ ಯಾವುದೇ ಸುಳಿವು ಸಿಗುತ್ತಿಲ್ಲ ಎಂಬುದು ಎಷ್ಟು ಸರಿ? ಈ ಪ್ರಕರಣದ ತನಿಖೆ ಚುರುಕುಗೊಳ್ಳಬೇಕು ಎಂದು ಆಗ್ರಹಿಸಿದರು.
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್‌ ರೇಪ್‌ ಬಗ್ಗೆ ರಾಜಕೀಯ ಮುಖಂಡರು ಸೇರಿದಂತೆ ಅಧಿಕಾರಿಗಳು ಘಟನೆಯ ಬಗ್ಗೆ ಹೆಚ್ಚಿನ ಕಾಳಜಿ ನೀಡುತ್ತಿದ್ದಾರೆ. ತುಮಕೂರಿನಲ್ಲಿ ನಡೆದ ಈ ಮಹಿಳೆಯ ವಿಚಾರವಾಗಿ ಯಾರೊಬ್ಬರೂ ಧ್ವನಿ ಎತ್ತದೇ ಇರುವುದು ವಿಪರ್ಯಾಸ. ರೈತ ಮಹಿಳೆ ಎನ್ನುತ್ತಲೋ ಅಥವಾ ಇವರು ಬಡವರು ಎನ್ನುತ್ತಲೋ ಗೊತ್ತಿಲ್ಲ, ನ್ಯಾಯ ಮಾತ್ರ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಮಾತನಾಡಿ, ತುಮಕೂರು ಗ್ರಾಮಾಂತರದಲ್ಲಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಕೊಲೆ ಪ್ರಕರಣ ಖಂಡನೀಯ, ಅತ್ಯಾಚಾರ ಎಂದರೆ ಭಯ ಪಡುವಂತಹ ಕಠಿಣ ಕಾನೂನನ್ನು ಜಾರಿಗೆ ತರಬೇಕಿದೆ. ಮಹಿಳೆಯ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡುತ್ತಾರೆ. ಇನ್ನು ಮುಂದೆ ಜಿಲ್ಲೆಯಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಪೊಲೀಸರು ಎಚ್ಚರ ವಹಿಸಬೇಕು, ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಮಹಾನಗರಪಾಲಿಕೆ ಸದಸ್ಯ ಟಿ.ಕೆ.ನರಸಿಂಹಮೂರ್ತಿ ಮಾತನಾಡಿ, ತುಮಕೂರು ಗ್ರಾಮಾಂತರ ಹಿರೇಹಳ್ಳಿ ಸಮೀಪದ ಚಿಕ್ಕಹಳ್ಳಿ ಗ್ರಾಮದಲ್ಲಿ ತಿಗಳ ಸಮುದಾಯದ ಮಹಿಳೆ ದನ ಮೇಯಿಸಲು ಹೋಗಿದ್ದಾಗ ಅಪರಿಚಿತ ವ್ಯಕ್ತಿಗಳು ಆಕೆಯನ್ನು ಬಲವಂತದಿಂದ ಎಳೆದೊಯ್ದು ಸಾಮೂಹಿಕವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ. ಅಲ್ಲದೆ ಆಕೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕೂಡ ಕಿತ್ತುಕೊಂಡು ಹೋಗಿದ್ದಾರೆ. ಈ ಘಟನೆ ನಡೆದು ಒಂದು ವಾರ ಕಳೆದರೂ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸದಿರುವುದು ದುರಂತ ಎಂದರು.
ಈ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು, ಆರೋಪಿಗಳಿಗೆ ಕಾನೂನು ರೀತಿ ಶಿಕ್ಷೆ ಆಗುವಂತೆ ಕ್ರಮಕೈಗೊಳ್ಳಬೇಕು ಮತ್ತು ಮೃತ ಸಂತ್ರಸ್ಥೆಗೆ ಇಬ್ಬರು ಹೆಣ್ಣುಮಕ್ಕಳಿದ್ದು ಅವರ ಮುಂದಿನ ಭವಿಷ್ಯಕ್ಕೆ ಅನುಕೂಲವಾಗಲು ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ್‌ ಘಟನೆ ಸಂಬಂಧ ಈಗಾಗಲೇ ತನಿಖೆ ಚುರುಕುಗೊಂಡಿದ್ದು, ಆರೋಪಿಗಳ ಪತ್ತೆಗೆ ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ. ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೂ ಸೂಚಿಸಲಾಗಿದೆ. ಇನ್ನು ಮಹಿಳೆ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಸಲು ಸರ್ಕಾರಕ್ಕೆ ನಿಮ್ಮ ಮನವಿಯನ್ನು ಕಳುಹಿಸಿಕೊಡುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಮಹಾನಗರಪಾಲಿಕೆ ಮೇಯರ್‌ ಬಿ.ಜಿ.ಕೃಷ್ಣಪ್ಪ, ಉಪಮೇಯರ್‌ ನಾಜೀಮಾಭಿ, ಮಾಜಿ ಮೇಯರ್‌ ಲಲಿತಾ ರವೀಶ್‌, ಮಾಜಿ ಉಪಮೇಯರ್‌ ಶಶಿಕಲಾ ಗಂಗಹನುಮಯ್ಯ, ಪಾಲಿಕೆ ಸದಸ್ಯ ಟಿ.ಕೆ.ನರಸಿಂಹಮೂರ್ತಿ, ಮುಖಂಡರಾದ ರವೀಶ್‌ ಜಾಂಗೀರ್‌, ಟಿ.ಎಲ್‌.ಕುಂಭಯ್ಯ, ಕುಂಭಿನರಸಯ್ಯ, ಯಜಮಾನ್‌ ಹನುಮಂತರಾಯ, ಯಜಮಾನ್‌ ಶಿವಕುಮಾರ್‌, ಪ್ರೆಸ್‌ ರಾಜಣ್ಣ, ಪಾಲಿಕೆ ಸದಸ್ಯರಾದ ನಯಾಜ್‌, ಧರಣೇಂದ್ರಕುಮಾರ್‌, ಎ.ಶ್ರೀನಿವಾಸ್‌, ರೂಪಶ್ರೀ ಶೆಟ್ಟಳ್ಳಯ್ಯ, ವಿರೋಧ ಪಕ್ಷದ ನಾಯಕ ಜೆ.ಕುಮಾರ್‌, ಮಂಜುನಾಥ್‌, ಶ್ರೀನಿವಾಸ್‌, ಗೆಳೆಯರ ಬಳಗದ ಜಿಲ್ಲಾಧ್ಯಕ್ಷ ಗೋವಿಂದರಾಜು, ನರಸೇಗೌಡ, ಕರ್ನಾಟಕ ರಾಜ್ಯ ಆಗಿವಂಶ ಕ್ಷತ್ರೀಯ ತಿಗಳ ಯೂತ್‌ ಫೋರ್ಸ್‌ ಅಧ್ಯಕ್ಷ ಮಾರುತಿ ಕೆ.ಆರ್‌., ಪಾಲಿಕೆ ಹಾಲಿ ಮತ್ತು ಮಾಜಿ ಕಾರ್ಪೊರೇಟರ್‌ಗಳು, ಸಂಘ ಸಂಸ್ಥೆಗಳು, ವಿವಿಧ ಸಮುದಾಯದ ಜನಾಂಗದ ಮುಖಂಡರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ನಾಗರಿಕರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!