ತುಮಕೂರು: ಬೊಮ್ಮಾಯಿ ನೇತೃತ್ವದಲ್ಲಿರುವ ರಾಜ್ಯ ಸರ್ಕಾರ ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದು, ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಅಬಕಾರಿ ಮತ್ತು ಹಾಸನ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಊರ್ಡಿಗೆರೆ ಹೋಬಳಿ ಕೆಸರುಮಡು ಗ್ರಾಮ ಪಂಚಾಯತಿಯ ಬೊಮ್ಮನಹಳ್ಳಿಯಲ್ಲಿ ಶ್ರೀಮಾರಮ್ಮ ದೇವಾಲಯದಲ್ಲಿ ಮಾದಪ್ಪ ಮತ್ತು ಕುಟುಂಬದವರು ನಿರ್ಮಾಣ ಮಾಡಿರುವ ಸಮುದಾಯಭವನ ಉದ್ಘಾಟಿಸಿ ಮಾತನಾಡಿ, ಕೋವಿಡ್‌ನಿಂದಾಗಿ ಜಗತ್ತು ತತ್ತರಗೊಂಡಿದೆ, ಮುಂಬರುವ ಮೂರನೇ ಅಲೆ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು, ಕೋವಿಡ್ ಮೂರನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದು, ಸಾರ್ವಜನಿಕ ಸಭೆ ಸಮಾರಂಭ ಮಾಡುವ ಮುಂಚೆ ಸರ್ಕಾರದ ನಿಯಮಾವಳಿ ಪಾಲಿಸಬೇಕು ಎಂದು ಹೇಳಿದರು.
ಕೊರೊನಾ ಹಾವಳಿಯಿಂದಾಗಿ ಸರ್ಕಾರ ಅಭಿವೃದ್ಧಿ ಕಾರ್ಯಗಳ ಕಡೆ ಗಮನ ಹರಿಸಲು ಆಗಲಿಲ್ಲ, ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಗ್ರಾಮಾಂತರ ಪ್ರದೇಶದಲ್ಲಿರುವವರು ಎಚ್ಚರಿಕೆ ವಹಿಸಬೇಕು, ಕೊರೊನಾ ದೂರವಾಗುವವರೆಗೆ ಅದರೊಂದಿಗೆ ಜೀವಿಸುವುದನ್ನು ಕಲಿತು ನಾವು ಪ್ರಗತಿ ಸಾಧಿಸಬೇಕಿದೆ, ಆ ನಿಟ್ಟಿನಲ್ಲಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸರ್ಕಾರ ತೀರ್ಮಾನ ಕೈಗೊಂಡಿದ್ದು, ಮುಂದಿನ ಎರಡು ವರ್ಷಗಳ ಕಾಲ ರಾಜ್ಯದಲ್ಲಿ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಬೊಮ್ಮನಹಳ್ಳಿ ನನ್ನ ತಾಯಿಯ ತವರು ಆಗಾಗಿ ಮಾರಮ್ಮನ ದೇವಾಲಯದಲ್ಲಿ ಊಟದ ಕೊಠಡಿ ಮತ್ತು ಅಡುಗೆ ಕೊಠಡಿಯನ್ನು ನಮ್ಮ ತಾಯಿ ಕಾಳಮ್ಮ ಹೆಸರಿನಲ್ಲಿ ನಿರ್ಮಾಣ ಮಾಡುವುದಾಗಿ ತಿಳಿಸಿದ ಅವರು, ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಚುನಾವಣೆಯಲ್ಲಿ ಊರ್ಡಿಗೆರೆ ಭಾಗದ ಮುಖಂಡರು ಪಕ್ಷಾತೀತವಾಗಿ ಬಂದು ನನ್ನ ಪರ ಪ್ರಚಾರ ಮಾಡಿ, ಗೋಪಾಲಯ್ಯನಿಗೆ ಮತ ಹಾಕಿ ಎಂದು ಮತ ಹಾಕಿಸಿದ್ದಾರೆ. ಈ ಭಾಗದ ಮುಖಂಡರಿಗೆಲ್ಲ ನಾನು ಋಣಿಯಾಗಿದ್ದೇನೆ ಎಂದರು.
ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸುರೇಶ್ ಗೌಡ ಅತ್ಯಂತ ಸನ್ನಿಹಿತದಲ್ಲಿ ಇದ್ದಾರೆ, ಈ ಭಾಗದಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳಿಗೆ ನಾನು ಮತ್ತು ಸುರೇಶ್ ಗೌಡ ಅವರು ಜೊತೆಯಾಗಿ ಶ್ರಮಿಸುವುದಾಗಿ ತಿಳಿಸಿದ ಅವರು, ಸುರೇಶ್ ಗೌಡ ಅವರಿಗೆ ನೀವೆಲ್ಲರೂ ಮುಂದೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ಬಡವರ ಪರವಾಗಿ ಯಾವಾಗಲು ಕೆಲಸ ಮಾಡುವ ಗೋಪಾಲಯ್ಯ ಅವರಿಗೆ ಊರ್ಡಿಗೆರೆ ಹೋಬಳಿಯ ಗ್ರಾಮಗಳಲ್ಲಿ ನೆಂಟರಿದ್ದಾರೆ, ಅವರ ತಾಯಿಯೂ ಇದೇ ಗ್ರಾಮದವರು, ಈ ಭಾಗದ ಜನರೊಂದಿಗೆ ಎಂದಿಗೂ ಇರುವ ಗೋಪಾಲಯ್ಯ ಅವರು ಇಂದು ದೇವಾಲಯ ಉದ್ಘಾಟಿಸಿ, ಕೊರೊನಾ ನಿರ್ಮೂಲನೆಗೆ ತಾಯಿಯಲ್ಲಿ ಪ್ರಾರ್ಥನೆ ಮಾಡಿದ್ದಾರೆ ಎಂದರು.
ಗೋಪಾಲಯ್ಯ ಅವರ ಮನೆಗೆ ಯಾರೇ ಹೋದರು ಬರಿಗೈಯಲ್ಲಿ ಬಂದಿಲ್ಲ, ಮಹಾನ್ ದಾನಿಯಾಗಿರುವ ಗೋಪಾಲಯ್ಯ ಅವರು ಬಡವರ ಮದುವೆ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಅನುಕೂಲವಾಗುವಂತೆ ಸಮುದಾಯ ಭವನ ನಿರ್ಮಾಣಕ್ಕೆ ಸಹಾಯ ಮಾಡುತ್ತಿರುವುದು ಶ್ಲಾಘನೀಯವಾದದ್ದು, ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರದಿಂದ ಗ್ರಾಮದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ದೇವೇಗೌಡ, ನರಸಿಂಹಯ್ಯ, ಬಯಲುಸೀಮೆ ಪ್ರಾಧಿಕಾರ ಮಂಡಳಿ ಮಾಜಿ ಅಧ್ಯಕ್ಷ ಕೆ.ಎ.ದೇವರಾಜು, ಮಾರಮ್ಮ ದೇಗುಲ ಟ್ರಸ್ಟ್ ಅಧ್ಯಕ್ಷ ಗಂಗಪ್ಪ, ಕಾರ್ಯದರ್ಶಿ ಹಾಗೂ ಬೊಮ್ಮನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಮಾರೇಗೌಡ, ಗೌರವಾಧ್ಯಕ್ಷ ವೆಂಕಟಸ್ವಾಮಿ, ಸಹಕಾರ್ಯದರ್ಶಿ ನಾಗರಾಜು, ಕೆಸರಮಡು ಗ್ರಾಪಂ ಅಧ್ಯಕ್ಷೆ ಸಿದ್ಧಗಂಗಮ್ಮ, ಉಪಾಧ್ಯಕ್ಷ ಮನ್ಸೂರ್ ಅಹಮದ್ ಪಾಷ, ಪಿಡಿಒ ಎ.ತೀರ್ಥ, ಗ್ರಾಪಂ ಸದಸ್ಯ ಸಂಪತ್ ಕುಮಾರ್, ಕೆ.ಮಂಜುಳ, ರತ್ನಮ್ಮ ಸೇರಿದಂತೆ ಗ್ರಾಮಸ್ಥರು ಇದ್ದರು.
ಗ್ರಾಮೀಣರು ಕೊರೊನಾ ಬಗ್ಗೆ ಎಚ್ಚರ ವಹಿಸಲಿ: ಗೋಪಾಲಯ್ಯ
Get real time updates directly on you device, subscribe now.
Next Post
Comments are closed.