ವಕೀಲರು ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸಲಿ

132

Get real time updates directly on you device, subscribe now.

ಕುಣಿಗಲ್‌: ವಕೀಲರು ತಮ್ಮ ವೃತ್ತಿಬದ್ಧತೆ, ಕ್ಷಮತೆಯಿಂದ ಕಾರ್ಯನಿರ್ವಹಿಸಿ ಕೇವಲ ಗೋಡೆಗಳ ಮೇಲೆ ತಮ್ಮ ಹೆಸರು ಉಳಿಯುವಂತೆ ಮಾಡುವ ಬದಲು ಜನರ ಮನಸಿನಲ್ಲಿ ಉಳಿಯುವಂತಹ ಖ್ಯಾತಿಗಳಿಸುವ ಮೂಲಕ ಜನಪರವಾಗಿರಬೇಕೆಂದು ಎಂದು ರಾಜ್ಯ ಉಚ್ಛನ್ಯಾಯಾಲಯದ ನ್ಯಾಯಮೂರ್ತಿ, ತುಮಕೂರು ಜಿಲ್ಲೆ ಆಡಳಿತಾತ್ಮಕ ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಕೀಲರ ಭವನ ಉದ್ಘಾಟಿಸಿ ಮಾತನಾಡಿ, ದೇಶವನ್ನು ಬಹುವಾಗಿ ಕಾಡುತ್ತಿರುವ ಭ್ರಷ್ಟಾಚಾರ ನಿರ್ಮೂಲನೆ ನಿಟ್ಟಿನಲ್ಲಿ ವಕೀಲರು ಸ್ವಾತಂತ್ರ ಹೋರಾಟಗಾರರಂತೆ ಹೋರಾಟ ನಡೆಸುವ ಅಗತ್ಯತೆ ಹೆಚ್ಚಿದೆ. ದೇಶವು ಪರಕೀಯರ ದಾಸ್ಯದಿಂದ ಸ್ವಾತಂತ್ರ ಪಡೆಯಲು ಅಂದು ಸ್ವಾತಂತ್ರ ಹೋರಾಟಗಾರರು ಶ್ರಮಿಸಿದ್ದರು. ಸ್ವಾತಂತ್ರ ನಂತರ ದೇಶವನ್ನು ಕಾಡುತ್ತಿರುವ ಭ್ರಷ್ಟಾಚಾರ ನಿರ್ಮೂಲನೆ ನಿಟ್ಟಿನಲ್ಲಿ ಸಾಮಾನ್ಯ ಜನರಲ್ಲೂ ಕಾನೂನಿನ ಅರಿವು ಮೂಡಿಸಿ ಭ್ರಷ್ಟಾಚಾರ ನಿಮೂರ್ಲನೆಗೆ ವಕೀಲರು ಶ್ರಮಿಸಬೇಕು ಎಂದರು.
ದೇಶದ ಮೂರು ಅಂಗಗಳಲ್ಲಿ ಎರಡು ಅಂಗಗಳ ಕಾರ್ಯವೈಖರಿ ಸಮರ್ಪಕವಾಗಿಲ್ಲ, ನ್ಯಾಯಾಂಗ ಬಲಿಷ್ಠವಾಗಿದೆ, ಇದಕ್ಕೆ ಕಾರಣ ವಕೀಲರು, ವಕೀಲರು ಬಲಿಷ್ಠರಾದಾಗ ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾಗಿ ಸಮಾಜವು ಬಲಿಷ್ಠವಾಗುತ್ತದೆ ಎಂದು ತಿಳಿಸಿದರು.
ವಕೀಲರು ಕಕ್ಷಿದಾರನಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಏಕಾಗ್ರತೆ, ಬದ್ಧತೆ, ಶ್ರದ್ಧೆಯಿಂದ ಅಧ್ಯಯನಶೀಲರಾಗಿ ಶ್ರಮಿಸಬೇಕು, ವೃತ್ತಿಯಲ್ಲಿ ವೈಫಲ್ಯವಾಗುವ ವಕೀಲರಿಂದ ಕ್ಷಕಿದಾರ ಸೇರಿದಂತೆ ಸಮಾಜಕ್ಕೂ ಮಾರಕ ಎಂಬುದ ಮರೆಯಬಾರದು. ಕೆಲ ಪ್ರಕರಣಗಳಲ್ಲಿ ಮಹಿಳಾ ವಕೀಲರು ಮಹಿಳೆಯರ ಪರವಾಗಿ ಅರ್ಜಿ ಸಲ್ಲಿಸಿ ಸಮರ್ಪಕ ನ್ಯಾಯ ದೊರಕಿಸಿಕೊಡದೆ ಇರುವುದು ಸಹ ವಕೀಲ ವೃತ್ತಿಗೆ ಅನ್ಯಾಯ ಮಾಡಿದಂತೆ ಎಂಬುದ ಮರೆಯಬಾರದು. ಕೊವಿಡ್‌ ಮಹಾಮಾರಿ ನಡುವೆ ರಾಜ್ಯದಲ್ಲಿ 260 ವಕೀಲರು, ರಾಷ್ಟ್ರದಲ್ಲಿ ನಾಲ್ಕುಲಕ್ಷ ವಕೀಲರು ಮೃತಪಟ್ಟರೂ ಜನತೆಗೆ ನ್ಯಾಯ ದೊರಕಿಸಿ ಕೊಡುವಲ್ಲಿ ವಕೀಲರು ಶ್ರಮಿಸಿದ್ದಾರೆ. ಇಡೀ ರಾಷ್ಟ್ರದಲ್ಲಿ ಕರ್ನಾಟಕ ರಾಜ್ಯದಲ್ಲಿ ಕೊವಿಡ್‌ ಪಿಡುಗಿನ ನಡುವೆ ಉತ್ತಮ ಸಾಧನೆ ಮಾಡಿದ್ದು ವಕೀಲರ ಬದ್ಧತೆ, ಸಹಕಾರದಿಂದ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶರಾದ ಜಿ.ಎಸ್‌.ಸಂಗ್ರೇಶಿ ಮಾತನಾಡಿ, ವಕೀಲರ ಮೇಲೆ ಉತ್ತಮ ಸಮಾಜ ನಿರ್ಮಾಣದ ಜವಾಬ್ದಾರಿ ಇದೆ ಎಂಬುದ ಮರೆಯಬಾರದು, ವೃತ್ತಿಯಲ್ಲಿ ಬದ್ಧತೆ, ನೈಪುಣ್ಯತೆ ಹೊಂದಿ ಕಕ್ಷಿದಾರರಿಗೆ ಸಮರ್ಪಕ ನ್ಯಾಯ ಕೊಡಿಸುವ ಜೊತೆಯಲ್ಲಿ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಮಾಜಮುಖಿಯಾಗಿರಬೇಕು ಎಂದರು.
ಹಿರಿಯ ವಕೀಲ, ಮಾಜಿ ಸಂಸದ ಎಸ್‌.ಪಿ.ಮುದ್ದುಹನುಮೇಗೌಡ ಮಾತನಾಡಿ, ವಕೀಲರ ಭವನ ನಿರ್ಮಾಣ ತಾಲೂಕಿನ ವಕೀಲರಿಗೆ ಮತ್ತಷ್ಟು ದಕ್ಷತೆ, ಬದ್ಧತೆಯಿಂದ ಕೆಲಸ ಮಾಡಲು ಪೂರಕವಾಗಲಿ, ಭವನದಲ್ಲಿ ಗ್ರಂಥಾಲಯ ವ್ಯವಸ್ಥೆ ಮಾಡಿರುವುದರಿಂದ ಹೊಸ ಹೊಸ ಕಾನೂನು ವಿಷಯಗಳ ಅಧ್ಯಯನ ಮಾಡಿ ಮತ್ತಷ್ಟು ಪರಿಣಾಮಕಾರಿ ಸೇವೆ ನೀಡಲು ಸಹಕಾರಿಯಾಗಲಿ ಎಂದರು.
ನ್ಯಾಯಾಧೀಶರಾದ ರಾಘವೇಂದ್ರ, ಲಕ್ಷ್ಮೀನರಸಿಂಹ, ಅನಿತಾ, ರಾಜ್ಯ ವಕೀಲರ ಪರಿಷತ್‌ ಸದಸ್ಯ ಮಧುಸೂಧನ್‌, ಶಾಸಕ ಡಾ.ರಂಗನಾಥ, ವಕೀಲರ ಸಂಘದ ಅಧ್ಯಕ್ಷ ಹುಚ್ಚೇಗೌಡ, ಕಾರ್ಯದರ್ಶಿ ಶಂಕರ್‌, ವಕೀಲರ ಸಂಘದ ಪದಾಧಿಕಾರಿಗಳು, ಪಿಡಬ್ಲುಡಿ ಎಇಇ ಗುರುಸಿದ್ದಪ್ಪ, ಗಿರಿಗೌಡ ಇತರರು ಇದ್ದರು.

ನೀನು ನನ್ನ ತರಹ ಎತ್ತರಕ್ಕೆ ಬೆಳೆಯ ಬೇಕಮ್ಮ
ನ್ಯಾಯಮೂರ್ತಿಗಳನ್ನು ಸ್ವಾಗತಿಸಲು ಸ್ಥಳೀಯ ವಕೀಲರ ಸಂಘ, ನಾದಸ್ವರ ತಂಡವನ್ನು ಕರೆಸಿದ್ದರು. ನಾದಸ್ವರ ತಂಡದಲ್ಲಿ ತಾಳ ಹಾಕುತ್ತಿದ್ದ ಬಾಲಕಿಯನ್ನು ಕಂಡ ನ್ಯಾಯಮೂರ್ತಿ ಬಿ.ವೀರಪ್ಪ, ಆಕೆಯನ್ನು ತಮ್ಮ ಬಳಿ ಕರೆದು ಶಾಲೆ ರಜೆ ಇದೆ ಎಂದು ನಿಮ್ಮ ಕೌಟುಂಬಿಕ ವೃತ್ತಿ ಮಾಡುವುದೇನೋ ಸರಿ, ಆದರೆ ವಿದ್ಯಾಭ್ಯಾಸದ ಕಡೆಗೂ ಹೆಚ್ಚು ಗಮನ ನೀಡಿ ಚೆನ್ನಾಗಿ ಓದಿ ಎತ್ತರಕ್ಕೆ ಬೆಳೆಯಬೇಕೆಂದರು. ಪೋಷಕರನ್ನು ಕರೆದು ಒಳ್ಳೆಯ ವಿದ್ಯಾಭ್ಯಾಸ ಕೊಡಿಸುವಂತೆ ಸೂಚಿಸಿದರು. ನ್ಯಾಯಮೂರ್ತಿಗಳ ಈ ಕ್ರಮ ನರೆದಿದ್ದ ವಕೀಲ ವೃಂದ, ಜನಸಾಮಾನ್ಯರ ಪ್ರಶಂಸೆಗೂ ಪಾತ್ರವಾಯಿತು.

Get real time updates directly on you device, subscribe now.

Comments are closed.

error: Content is protected !!