ಬಿಜೆಪಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷ

108

Get real time updates directly on you device, subscribe now.

ತುಮಕೂರು: ಭಾರತೀಯ ಜನತಾ ಪಾರ್ಟಿ ರೈತಮೋರ್ಚಾ ರಾಜ್ಯಾದ್ಯಂತ ರೈತರ ಸಮಸ್ಯೆಗಳಿಗೆ ಸ್ಪಂದಿಸುವ, ರೈತರ ಕಷ್ಟಕಾರ್ಪಣ್ಯಗಳಲ್ಲಿ ಭಾಗಿಯಾಗುವಂತಹ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಾಗೂ ರೈತರ ಮಧ್ಯೆ ರಾಯಭಾರಿಗಳಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ರೈತ ಮೋರ್ಚಾ ಪದಾಧಿಕಾರಿಗಳು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್‌.ಶಿವಪ್ರಸಾದ್‌ ತಿಳಿಸಿದರು.
ನಗರದ ಪುಟ್ಟಸ್ವಾಮಯ್ಯನಪಾಳ್ಯದಲ್ಲಿ ಭಾರತೀಯ ಜನತಾಪಾರ್ಟಿ ನಗರ ಮಂಡಲ ವತಿಯಿಂದ ರೈತ ಮೋರ್ಚಾ ಕಾರ್ಯಕಾರಿಣಿ ಸಭೆ ಹಾಗೂ ರೈತ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ದೇಶದಲ್ಲಿ ಶೇ.50 ರಷ್ಟು ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ, ನಮ್ಮ ದೇಶದ ಒಟ್ಟಾರೆ ಜಿಡಿಪಿ 2013-14ರಲ್ಲಿ ನಮ್ಮ ರಾಜ್ಯದ ಪಾಲು ಕೇವಲ ಶೇ.14 ರಷ್ಟಿತ್ತು. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ವಾರ್ಷಿಕ ವರಮಾನ ದ್ವಿಗುಣಗೊಳ್ಳಬೇಕೆಂಬ ನಿಟ್ಟಿನಲ್ಲಿ 7 ವರ್ಷಗಳಲ್ಲಿ ರೈತಪರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಿದರು.
ಕಳೆದ 60- 70 ವರ್ಷಗಳಲ್ಲಿ ದೇಶದಲ್ಲಿ ಸ್ವಾವಲಂಬಿಗಳಾಗಿರುವ ರೈತರನ್ನು ಪರಾವಲಂಬಿಗಳನ್ನಾಗಿ ಮಾಡಿ, ಆಡಳಿತ ಮಾಡಿರುವ ಸರ್ಕಾರಗಳ ತಪ್ಪು ಗ್ರಹಿಕೆಯಿಂದ ರೈತರ ಬಗ್ಗೆ ಅವರಿಗಿದ್ದ ಅಸಡ್ಡೆಯಿಂದ ಇಂದು ರೈತರ ಪರಿಸ್ಥಿತಿ ಹೀನಾಯವಾಗಿ ಹೋಗುತ್ತಿರುವ ಸಂದರ್ಭದಲ್ಲಿ ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಳ್ಳಲಾಗದೆ ಕೃಷಿಯಿಂದ ವಿಮುಖವಾಗಿ ಬೇರೆ ಬೇರೆ ಕ್ಷೇತ್ರಗಳಿಗೆ ವಲಸೆ ಹೋಗುತ್ತಿರುವ ವೇಳೆಯಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ರೈತರ ಆರ್ಥಿಕ ಸಬಲೀಕರಣವಾಗಬೇಕು, ದೇಶದಲ್ಲಿ ಶೇ.50 ರಷ್ಟಿರುವ ರೈತರು ಆರ್ಥಿಕವಾಗಿ ಸದೃಢಗೊಳ್ಳದಿದ್ದರೆ ದೇಶದ ಆರ್ಥಿಕತೆ ಸದೃಢ ಸಾಧ್ಯವಿಲ್ಲ ಎಂಬ ನಿಟ್ಟಿನಲ್ಲಿ ರೈತರಪರವಾದ ಮಹತ್ತರ ಯೋಜನೆಗಳನ್ನು ಜಾರಿಗೆ ತಂದಂತಹ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ತಿಳಿಸಿದರು.
ದೇಶದಲ್ಲಿ ರೈತರ ಆರ್ಥಿಕ ಸದೃಢತೆಗೆ ಮತ್ತು ರೈತರ ಆತ್ಮಹತ್ಯೆ ತಡೆಗಟ್ಟಲು ಕೃಷಿ ತಜ್ಞರು, ಚಿಂತಕರು, ಪ್ರಗತಿಪರ ರೈತರನ್ನೊಳಗೊಂಡ ಸಮಿತಿ ರಚಿಸಿ ರೈತ ಸದೃಢವಾಗಲು ಏನು ಮಾಡಬೇಕು ಎಂಬ ಸಲಹೆ ನೀಡುವಂತೆ ಸೂಚಿಸಿದ್ದರ ಪರಿಣಾಮ ಪ್ರಮುಖವಾಗಿ 5 ವಿಚಾರಗಳ ಬಗ್ಗೆ ಗಮನ ಹರಿಸಬೇಕೆಂದು ಸಮಿತಿ ವರದಿ ನೀಡಿತ್ತು ಎಂದರು.
ರೈತರ ಹೊಲಕ್ಕೆ ನೀರು ಕೊಡಬೇಕು, ರೈತರಿಗೆ ಸಮರ್ಪಕ ವಿದ್ಯುತ್‌, ರಸಗೊಬ್ಬರ ಕೊಡಬೇಕು, ಬಿತ್ತನೆ ಬೀಜ, ಸಾಲಸೌಲಭ್ಯ ಸಿಗುವಂತಾಗಬೇಕು, ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ರೈತರು ಬೆಳೆದ ಬೆಳೆಗಳಿಗೆ ಪರಿಹಾರ ಸಿಗಬೇಕು ಎಂಬ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿದರೆ ರೈತರ ಆರ್ಥಿಕ ಸದೃಢತೆಗೆ ಸರ್ಕಾರದ ದಿಟ್ಟ ನಿಲುವು ಯಶಸ್ವಿಯಾಗಲು ಸಾಧ್ಯ ಎಂಬ ವರದಿ ನೀಡಿದ್ದರ ಪರಿಣಾಮ ಇಂದು ಪ್ರಧಾನಿ ನರೇಂದ್ರ ಮೋದಿಯವರು ಹಲವಾರು ಯೋಜನೆ ಜಾರಿಗೆ ತಂದಿದ್ದಾರೆ ಎಂದು ವಿವರಿಸಿದರು.
ಕೃಷಿ ಸಿಂಚಾಯಿ ಯೋಜನೆ ಹನಿ ನೀರಾವರಿ ಮೂಲಕ ಪ್ರತಿ ರೈತನ ಜಮೀನಿಗೆ ನೀರು ಕೊಡುವ ಯೋಜನೆ ಜಾರಿಗೆ ತಂದಿದ್ದು, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 5 ವರ್ಷಗಳಲ್ಲಿ 50 ಲಕ್ಷ ಹೆಕ್ಟೇರ್‌ ಪ್ರದೇಶಗಳಿಗೆ ಕೃಷಿ ಸಿಂಚಾಯಿ ಯೋಜನೆ ಮುಖಾಂತರ ಹನಿ ನೀರಾವರಿ ಮೂಲಕ ರೈತರಿಗೆ ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬೆಳೆಯುವ ಯೋಜನೆ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಜೊತೆಗೆ ಫಸಲ್‌ ಬಿಮಾ ಯೋಜನೆ, ಸೋಲಾರ್‌ ಮೂಲಕ ವಿದ್ಯುತ್‌ ಉತ್ಪಾದನೆ, ಕೃಷಿ ಮಸೂದೆಗಳ ತಿದ್ದುಪಡಿ ಹಾಗೂ ಕಿಸಾನ್‌ ಸಮ್ಮಾನ್‌ ಯೋಜನೆಯಂತಹ ಅನೇಕ ರೈತಪರ ಯೋಜನೆಗಳನ್ನು ಜಾರಿಗೆ ತಂದು ಇಂದು ದೇಶದಲ್ಲೇ ರೈತ ಆರ್ಥಿಕವಾಗಿ ಸದೃಢವಾಗಲು ದಿಟ್ಟ ನಿಲುವು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಬಿಜೆಪಿ ರೈತಮೋರ್ಚಾ ನಗರ ಮಂಡಲ ಅಧ್ಯಕ್ಷ ಸತ್ಯಮಂಗಲ ಜಗದೀಶ್‌ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಜತೆಗೆ ಮುಂಬರುವ ಜಿಲ್ಲಾ ಪಂಚಾಯತ್‌ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ರೈತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶಿವಶಂಕರ್‌ ಬಾಬು, ರೈತ ಮೋರ್ಚಾ ಪ್ರಭಾರಿ ವಿರೂಪಾಕ್ಷಪ್ಪ, ರೈತಮೋರ್ಚಾ ನಗರ ಮಂಡಲ ಅಧ್ಯಕ್ಷ ಸತ್ಯಮಂಗಲ ಜಗದೀಶ್‌, ಪಾಲಿಕೆ ಸದಸ್ಯ ಮಂಜುನಾಥ್‌, ನಗರ ಪ್ರಧಾನ ಕಾರ್ಯದರ್ಶಿ ರಾಜೀವ್‌ ಆಚಾರ್‌, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸಿದ್ದೇಶ್‌, ಜಿಲ್ಲಾ ರೈತಮೋರ್ಚಾ ಮಹಿಳಾ ಕಾರ್ಯದರ್ಶಿ ಜಯಶ್ರೀ, ಶ್ರೀನಿವಾಸ್‌ ಅಣೆತೋಟ, ರವೀಶ್‌, ಪ್ರಫುಲ್ಲಕುಮಾರ್‌ ಮುಂತಾದವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!