ತುಮಕೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿರುವ ವಾತಾವರಣ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಿಂದಿನಿಂದಲೂ ಇದೆ, ಅದಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಅವರಿಗಿದ್ದ ದೂರದೃಷ್ಟಿಯೇ ಕಾರಣ ಎಂದು ತುಮಕೂರು ವಿವಿ ಮಾಜಿ ಕುಲಪತಿ ಮತ್ತು ನ್ಯಾಕ್ ನಿರ್ದೇಶಕ ಡಾ.ಎಸ್.ಸಿ.ಶರ್ಮಾ ಅಭಿಪ್ರಾಯಪಟ್ಟರು.
ನಗರದ ಸಿದ್ಧಗಂಗಾ ತಾಂತ್ರಿಕ ಮಹಾ ವಿದ್ಯಾಲಯದ ಬಿರ್ಲಾ ಸಭಾಂಗಣದಲ್ಲಿ ನಡೆದ 11ನೇ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿ, ಜಾಗತಿಕ ನಾಯಕತ್ವ ಬೆಳೆಸುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅವಶ್ಯಕವಾಗಿದ್ದು, ಪರಿಣಾಮಕಾರಿಯಾಗಿರುವ ಈ ನೀತಿ ರಾಷ್ಟ್ರವನ್ನು ಹೊಸದಿಕ್ಕಿಗೆ ಕೊಂಡೊಯ್ಯಲಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಯುವ ಸಮುದಾಯದಲ್ಲಿ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗಿದ್ದು, ವಿದ್ಯಾರ್ಥಿಗಳ ಪ್ರತಿಭೆಗೆ ತಕ್ಕಂತೆ ಕೌಶಲ್ಯ ದೊರೆಯಲಿದೆ ಎಂದ ಅವರು, ಭಾರತೀಯ ಶಿಕ್ಷಣ ಸಂಸ್ಕೃತಿಗೆ ಜಾಗತಿಕ ಮನ್ನಣೆ ಇದೆ. ಪದವಿ ಪಡೆದಿರುವ ವಿದ್ಯಾರ್ಥಿಗಳು ದೇಶಕ್ಕೆ ಕೊಡುಗೆ ನೀಡುವ ಕಡೆ ಶ್ರಮಿಸುವಂತಾಗಲಿ ಎಂದು ಕರೆ ನೀಡಿದರು.
ಘಟಿಕೋತ್ಸದ ಸಾನಿಧ್ಯವಹಿಸಿ ಸಿದ್ಧಗಂಗಾ ಮಠಾಧೀಶ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಕೋವಿಡ್ ಇಂದು ಎಲ್ಲಾ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದ್ದು, ಇದಕ್ಕೆ ಶಿಕ್ಷಣ ರಂಗವೂ ಹೊರತಾಗಿಲ್ಲ, ಕೋವಿಡ್‌ನಿಂದಾಗಿ ಆನ್‌ಲೈನ್ ಶಿಕ್ಷಣ ಸೇರಿದಂತೆ ಹೊಸ ಕಲಿಕಾ ಮಾರ್ಗಗಳತ್ತ ಚಿಂತಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪದವಿ ಶಿಕ್ಷಣ ಪಡೆಯುವ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಿದ್ದು, ಉದ್ಯಮ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಮಹಿಳೆಯರು ಮುಂದೆ ಬರಬೇಕು ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್‌ಐಟಿ ಕಾಲೇಜಿನಲ್ಲಿ ಪೂರಕ ವಾತಾವರಣವನ್ನು ಕಲ್ಪಿಸಲಾಗಿದ್ದು, ದೇಶದಲ್ಲಿ ತಾಂತ್ರಿಕ ಶಿಕ್ಷಣ ಪಡೆಯುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಬೇಕು, ದೇಶದಲ್ಲಿ ತಾಂತ್ರಿಕ ಶಿಕ್ಷಣ ಪಡೆಯುವವರ ಪ್ರಮಾಣ ಶೇ.50ಕ್ಕೆ ಹೆಚ್ಚಬೇಕು, ಉದ್ಯಮ, ಉದ್ದಿಮೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಭಾಗವಹಿಸುವ ಮೂಲಕ ಮಹಿಳಾ ಸಬಲೀಕರಣವನ್ನು ಸಾಧಿಸಬೇಕು ಎಂದು ಸಲಹೆ ನೀಡಿದರು.
ಎಸ್‌ಐಟಿ ಕಾಲೇಜಿನಲ್ಲಿ ಓದಿರುವ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ರಾಜಕಾರಣ, ಸಮಾಜಸೇವೆ, ಮಾಹಿತಿ ತಂತ್ರಜ್ಞಾನ ಹೀಗೆ ಹಲವು ಕ್ಷೇತ್ರಗಳಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ, ಅಂತಹ ಸಾಧಕರ ಸ್ಫೂರ್ತಿಯನ್ನು ವಿದ್ಯಾರ್ಥಿಗಳು ಹೊಂದುವ ಮೂಲಕ ಸಮಾಜಕ್ಕೆ ಮರಳಿ ನೀಡುವ ಪರಂಪರೆ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
11ನೇ ಘಟಿಕೋತ್ಸವದಲ್ಲಿ ಇಂಡಸ್ಟ್ರೀಯಲ್ ಇಂಜನಿಯರ್ ಮತ್ತು ಮ್ಯಾನೇಜ್ಮೆಂಟ್ ವಿಭಾಗದ ಹುಸ್ನೀಯಾ ಖಾನಂ ಅವರಿಗೆ ಡಾ.ಶಿವಕುಮಾರಸ್ವಾಮೀಜಿ ಚಿನ್ನದ ಪದಕವನ್ನು ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ, ಎಸ್‌ಐಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ, ಸಿಇಒ ಡಾ.ಶಿವಕುಮಾರಯ್ಯ, ಪ್ರಾಂಶುಪಾಲ ಡಾ.ಎಸ್.ವಿ.ದಿನೇಶ್ ಇತರರು ಇದ್ದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೌಶಲ್ಯಾಭಿವೃದ್ಧಿಗೆ ಒತ್ತು: ಶರ್ಮ
Get real time updates directly on you device, subscribe now.
Prev Post
Next Post
Comments are closed.