ಕೇಂದ್ರ ಸರ್ಕಾರದ ವಿರುದ್ಧ ರೈತರ ಕಿಡಿ- ತುಮಕೂರಿನಲ್ಲಿ ಪ್ರತಿಭಟನೆ

ರೈತರ ಮೇಲಿನ ದೌರ್ಜನ್ಯ ಖಂಡಿಸಿ ಆಕ್ರೋಶ

86

Get real time updates directly on you device, subscribe now.

ತುಮಕೂರು: ಕೇಂದ್ರ ಸರ್ಕಾರ ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯ ದಬ್ಬಾಳಿಕೆ ನಿಲ್ಲಿಸಬೇಕು, ಸುಪ್ರೀಂ ಕೋರ್ಟ್‌ ನಿರ್ದೇಶನ ಪಾಲಿಸಬೇಕು ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಒತ್ತಾಯಿಸಿದರು.
ಹರಿಯಾಣದಲ್ಲಿ ರೈತರ ಮೇಲೆ ನಡೆದಿರುವ ಪೊಲೀಸರ ಹಲ್ಲೆ ವಿರೋಧಿಸಿ ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನಾನಿರತರನ್ನು ಉದ್ದೇಶಿ ಮಾತನಾಡಿ, ಕೇಂದ್ರ ಸರ್ಕಾರ ರೈತರನ್ನು ಉಗ್ರಗಾಮಿಗಳಂತೆ ನೋಡುತ್ತಿದೆ, ರೈತ ವಿರೋಧಿ ಕಾನೂನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ಮೇಲೆ ದೌರ್ಜನ್ಯ ನಡೆಸಿ ಕೀಳುಮಟ್ಟದಲ್ಲಿ ನಡೆದು ಕೊಂಡಿದೆ ಎಂದು ಆರೋಪಿಸಿದರು.
ಹರಿಯಾಣ ಮುಖ್ಯಮಂತ್ರಿ ಕಟ್ಟರ್‌ ರೈತರ ಚಳವಳಿಯನ್ನು ಹತ್ತಿಕ್ಕಲು ಪದೇ ಪದೆ ರೈತರ ಮೇಲೆ ಲಾಠಿ ಚಾರ್ಜ್‌ ಮಾಡಿಸುವ ಮೂಲಕ ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದೆ, ಅಹಿಂಸಾತ್ಮಕ ಹೋರಾಟ ಮಾಡುತ್ತಿರುವ ರೈತರ ಮೇಲೆ ಹಿಂಸಾತ್ಮಕ ಪ್ರಚೋದನೆ ನೀಡುವುದನ್ನು ಬಿಟ್ಟು ರೈತರೊಂದಿಗೆ ಕುಳಿತು ಮಾತನಾಡಲಿ ಎಂದು ಹೇಳಿದರು.
ಸುಪ್ರೀಂ ಕೋರ್ಟ್‌ ಒಂದೂವರೆ ವರ್ಷ ರೈತ ವಿರೋಧಿಯಾಗಿರುವ ಕಾನೂನು ಜಾರಿಗೆ ತರಬಾರದು ಎಂದು ಸೂಚನೆ ನೀಡಿದ್ದರು ಸಹ, ಖಾಸಗೀಕರಣ ಮತ್ತು ನಗರೀಕರಣದ ಘೋಷಣೆ ಮಾಡುತ್ತಲೇ ಇದ್ದು ಕೇಂದ್ರ ಸರ್ಕಾರ ಕಾಯ್ದೆ ಜಾರಿಗೆ ನಿಯಂತ್ರಣ ಮಾಡಬೇಕು, ಪ್ರಧಾನಿ ಅವರು ರೈತರೊಂದಿಗೆ ಮಾತನಾಡಬೇಕು ಎಂದು ಒತ್ತಾಯಿಸಿದರು.
ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರೋಧಿ ಸೆ.25 ರಂದು ಭಾರತ ಬಂದ್ ಗೆ ರೈತ ಒಕ್ಕೂಟ ಕರೆ ನೀಡಿದ್ದು, ರಾಜ್ಯದಲ್ಲಿಯೂ ಬಂದ್ ಗೆ ಬೆಂಬಲ ನೀಡಲಾಗುವುದು, ಬಂದ್‌ ಯಶಸ್ವಿಗೊಳಿಸಲು ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.
ಮೈಸೂರು, ತುಮಕೂರು, ಬೆಳಗಾವಿಯಲ್ಲಿ ಅತ್ಯಾಚಾರ ನಡೆದಿದೆ, ಗೃಹ ಇಲಾಖೆ ಮುಗ್ಗರಿಸಿದ್ದು, ಆಡಳಿತ ವೈಫಲ್ಯ ಎದುರಿಸುತ್ತಿದ್ದು ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ನೀಡಬೇಕು, ಸರ್ಕಾರದ ಹಿನ್ನೆಡೆಯನ್ನು ಸರಿಪಡಿಸುವತ್ತ ಮುಖ್ಯಮಂತ್ರಿಗಳು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಬೆಳಕಿಗೆ ಬಂದಿರುವ ಮಾದಕ ದ್ರವ್ಯ ಪ್ರಕರಣದಲ್ಲಿ ಸಿನಿಮಾ ತಾರೆಗಳನ್ನು ಬಂಧಿಸಿದರೆ ಮುಗಿದು ಹೋಯಿತೇ? ಮಾದಕ ವಸ್ತು ನಿಯಂತ್ರಣಕ್ಕೆ ಕಠಿಣ ಕಾನೂನು ರೂಪಿಸಲು ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಅವರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದ್ ಪಟೇಲ್‌ ಹರಿಯಾಣ ಸರ್ಕಾರ ರೈತರನ್ನು ಆತಂಕವಾದಿಗಳಂತೆ ನಡೆಸಿಕೊಂಡಿದೆ ಇಂತಹ ಜನವಿರೋಧಿ ನೀತಿ ಖಂಡಿಸಿ, ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಮತ್ತು ಮಹಿಳಾ ದೌರ್ಜನ್ಯ ನಿಯಂತ್ರಿಸಬೇಕು, ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಪೊಲೀಸರು ಕಾರ್ಯನಿರ್ವಹಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ಅವರು ಜಿಲ್ಲಾ ಮಟ್ಟದಲ್ಲಿ ರೈತರ ಸಮಸ್ಯೆ ಬಗೆಹರಿಸಲು ಬದ್ಧವಾಗಿದ್ದು, ರೈತರು ಸಲ್ಲಿಸಿರುವ ಮನವಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಭಕ್ತರಹಳ್ಳಿ ಬೈರೇಗೌಡ, ಕಾರ್ತಿಕ್‌ ಹೊಸಪೇಟೆ, ಮಹಾಂತೇಶ್‌ ಪೂಜಾರಿ, ಉಪಾಧ್ಯಕ್ಷರುಗಳಾದ ಮಂಜುನಾಥಗೌಡ, ಶಾಂತರೆಡ್ಡಿ, ದುರ್ಗಪ್ಪ, ಉಮಾ, ಈರಣ್ಣ, ಗಣೇಶ್‌ ಇಬ್ಬನಗೆರೆ, ಭೀಮೋಶಿ ಗಡ್ಡದ್‌, ಧನಂಜಯ ಆರಾಧ್ಯ ಸೇರಿದಂತೆ ಜಿಲ್ಲಾಧ್ಯಕ್ಷರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!