ಹೆಗಡೆ ಅಧಿಕಾರಕ್ಕಾಗಿ ರಾಜಕಾರಣ ಮಾಡಲಿಲ್ಲ: ಮಹಿಮಾ ಪಟೇಲ್

218

Get real time updates directly on you device, subscribe now.

ತುಮಕೂರು: ವಿಧಾನಸಭಾ ಅಧಿವೇಶನ ಎಂದರೆ ಜಗಳ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ವಿಧಾನಸಭೆಗೆ ಬರುವುದು ಜನರ ಸಮಸ್ಯೆ ಚರ್ಚಿಸುವುದಕ್ಕೆ, ಜನಪರ ಕಾರ್ಯಕ್ರಮ ರೂಪಿಸುವುದಕ್ಕೆ ಎನ್ನುವುದನ್ನು ಮರೆಯುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾಪಟೇಲ್‌ ಅಭಿಪ್ರಾಯಪಟ್ಟರು.
ಮೈದಾಳದ ಶಿವಶೈಕ್ಷಣಿಕ ಆಶ್ರಮದಲ್ಲಿ ನಡೆದ ರಾಮಕೃಷ್ಣ ಹೆಗಡೆ ಅವರ ಜನ್ಮದಿನಾಚರಣೆಯಲ್ಲಿ ಮಾತನಾಡಿ, ಅಧಿಕಾರಕ್ಕಾಗಿ ಎಂದಿಗೂ ಜೆ.ಎಚ್‌.ಪಾಟೀಲ್‌, ರಾಮಕೃಷ್ಣ ಹೆಗಡೆ ಅವರಾಗಲಿ ರಾಜಕಾರಣಕ್ಕೆ ಬರಲಿಲ್ಲ, ಸಮಾಜ ಸೇವೆ ಮಾಡುವ ಉದ್ದೇಶದಿಂದ ಬಂದ ಅವರು ನ್ಯಾಯ, ನೀತಿ, ಧರ್ಮದ ಮೇಲೆಯೇ ಅಧಿಕಾರಕ್ಕೆ ಬಂದರು, ಮುಖ್ಯಮಂತ್ರಿ ಆದರು ಕೇವಲ ರಾಜಕಾರಣಕ್ಕೆ ಸೀಮಿತವಾಗದೇ, ಕಲೆ, ಸಾಹಿತ್ಯ, ಸಿನಿಮಾ ಹೀಗೆ ಹಲವು ವಿಷಯಗಳ ಬಗ್ಗೆ ಆಸಕ್ತಿ ಹೊಂದಿದ್ದರು ಎಂದರು.
ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯಬೇಕು ಎನ್ನುವ ಮನಸ್ಥಿತಿ ಹೊಂದಿದ್ದ ಜೆ.ಎಚ್‌.ಪಾಟೀಲ್‌ ಅವರೊಂದಿಗೆ ಸೇರಿದ ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂತು, ನಿಜಲಿಂಗಪ್ಪ, ವಿ.ಪಿ.ಸಿಂಗ್‌ ಅವರಂತಹ ನಾಯಕ ಒಡನಾಟದಲ್ಲಿ ರೂಪು ಗೊಂಡಿರುವುದು ಜೆಡಿಯು, ಚುನಾವಣೆಗಾಗಿ ರಾಜಕಾರಣ ಮಾಡುವುದನ್ನು ಬಿಟ್ಟು ಜನರೊಂದಿಗೆ ಬೆರೆತು, ಜನರ ಸಮಸ್ಯೆ ಅರಿಯುವ ಕಡೆಗೆ ಜೆಡಿಯು ಮುಖಂಡರು ಮುಂದಾಗಬೇಕು ಎಂದು ತಿಳಿಸಿದ್ದರು ಎಂದರು.
ರಾಮಕೃಷ್ಣ ಹೆಗಡೆ ಅವರು ಜೆಡಿಯು ಪಕ್ಷವನ್ನು ಕಟ್ಟಲು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದರು, ನಮ್ಮ ತಂದೆ ಹಾಗೂ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕೆಲವು ಭ್ರಷ್ಟರು ಜೊತೆಯಲ್ಲಿದ್ದರು ಅವರನ್ನು ಹೇಗೆ ಬಳಕೆ ಮಾಡಬೇಕೆಂಬುದು ಅವರಿಗೆ ತಿಳಿದಿತ್ತು ಎಂದರು.
ಎಲ್ಲಾ ಪಕ್ಷಗಳಂತೆ ಕೆಡುವುವ ಕೆಲಸ ಮಾಡದೇ ಕಟ್ಟುವ ಕೆಲಸ ಮಾಡಬೇಕೆಂಬುದು ಸಂಯುಕ್ತ ಜನತಾದಳದ ಧ್ಯೇಯ, ಎಲ್ಲರನ್ನು ಒಳ ಗೊಳ್ಳುವುದು ಪಕ್ಷದ ಸಿದ್ಧಾಂತ, ಎಲ್ಲರನ್ನು ಕೂಡಿಸಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವ ಗುರಿಯನ್ನು ಜೆಡಿಯು ಹೊಂದಿದೆ, ರಾಮಕೃಷ್ಣ ಹೆಗಡೆ, ಎಸ್‌.ಆರ್‌.ಬೊಮ್ಮಾಯಿ ಅವರಂತಹ ನಾಯಕರ ಮಾರ್ಗದರ್ಶನ ನಮ್ಮ ಪಕ್ಷಕ್ಕಿದೆ ಎನ್ನುವುದನ್ನು ಕಾರ್ಯಕರ್ತರು ಅರಿಯಬೇಕು ಎಂದರು.
ಸಮಾಜಕ್ಕಾಗಿ ಬದ್ಧರಾಗಿದ್ದ ದಿವಂಗತ ರಾಮಕೃಷ್ಣ ಹೆಗಡೆ ಅವರ ಜನ್ಮದಿನವನ್ನು ಆಚರಿಸುವ ಮೂಲಕ ಧೀಮಂತರ ನಾಯಕರ ಪರಂಪರೆಯನ್ನು ಮುಂದುವರೆಸುವ ಮೂಲಕ ಸಮಾಜ ನಿರ್ಮಾಣ ಮಾಡಬೇಕೆಂದು, ರಾಜಕಾರಣಿಗಳು, ಅಧಿಕಾರಿಗಳು, ಮಠಾಧೀಶರು ಸೇವಾ ಮನೋಭಾವನೆಯನ್ನು ಕೆಲಸ ಮಾಡುವಂತಾಗಲಿ ಎಂದರು.
ರಾಮಕೃಷ್ಣ ಹೆಗಡೆ ಅವರ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ಹಿರಿಯ ಸಾಹಿತಿ ಕವಿತಾಕೃಷ್ಣ ಅವರು, ರಾಮಕೃಷ್ಣ ಹೆಗಡೆ ಅವರಂತಹ ಮುತ್ಸದ್ಧಿ ರಾಜಕಾರಣಿ ಅವರ ಜನ್ಮದಿನ ಆಚರಿಸುತ್ತಿರುವುದು ರಾಜಕೀಯ ಕ್ಷೇತ್ರದಲ್ಲಿ ಉಳಿದುಕೊಂಡಿರುವ ಪಾವಿತ್ರತೆಯ ಸಂಕೇತ, ಸ್ವಾತಂತ್ರ್ಯ ಹೋರಾಟಗಾರರ ಜೊತೆಯಲ್ಲಿ ಬೆಳೆದ ರಾಮಕೃಷ್ಣ ಹೆಗಡೆ ಅವರಿಗೆ ಚಿಕ್ಕಂದಿನಿಂದಲೂ ದೇಶಪ್ರೇಮವನ್ನು ರೂಢಿಸಿಕೊಂಡಿದ್ದರು ಎಂದು ಹೇಳಿದರು.
ಆಚಾರ್ಯ ವಿನೋಬಾ ಭಾವೆ ಅವರ ಸಂಪರ್ಕದಲ್ಲಿದ್ದ ರಾಮಕೃಷ್ಣ ಹೆಗಡೆ ಅವರು ಸರ್ವೋದಯ ತತ್ವವನ್ನು ಒಪ್ಪಿಕೊಂಡಿದ್ದರು, ಎಲ್ಲರ ಏಳ್ಗೆಗಾಗಿ ವಕೀಲರಾಗಿ ಸೇವೆ ಸಲ್ಲಿಸಿ, ಶಿರಸಿ ಪಟ್ಟಣದಿಂದ ಬಂದು ಮುಖ್ಯಮಂತ್ರಿಯಾಗಿ ದಕ್ಷ ಆಡಳಿತ ನೀಡಿದ ಅವರು, ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರಿಗೆ ಆಪ್ತರಾಗಿ ಗುರುತಿಸಿಕೊಂಡಿದ್ದರು, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಮಾಡಿದ ಸೇವೆ ಅನನ್ಯವಾದದ್ದು, ಕುಡಿಯುವ ನೀರಿನ ವ್ಯವಸ್ಥೆಯನ್ನು ಹಳ್ಳಿಹಳ್ಳಿಗೂ ತಲುಪಿಸಿ, ನುಡಿದಂತೆ ನಡೆದ ಧೀಮಂತ ರಾಜಕಾರಣಿ ಎಂದರು.
ಜೆಡಿಯು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ಎಲ್‌.ರವಿ ಮಾತನಾಡಿ, 1996ರಲ್ಲಿ ಹೆಗಡೆ ಅವರನ್ನು ಜನತಾದಳದಿಂದ ಉಚ್ಛಾಟಿತರಾದ ನಂತರ ರಾಷ್ಟ್ರ ನಿರ್ಮಾಣ ವೇದಿಕೆ ಮಾಡಿದ್ದರು, ಹೆಗಡೆ ಅವರೊಂದಿಗೆ ಕೆಲಸ ಮಾಡಿದ್ದ ವೀರಣ್ಣ ಅವರನ್ನು ಅದಕ್ಕೆ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿದ್ದರು, ರಾಜಕಾರಣದಲ್ಲಿದ್ದ ಚಾಕು,ಚೂರಿ ಸಂಸ್ಕೃತಿಯ ಬಗ್ಗೆ ಹೆಗಡೆ ಅವರಿಗೆ ಬೇಸರವಿತ್ತು, ಒಳ್ಳೆಯ ಸಂಸ್ಕೃತಿ ಇದ್ದರೆ ಜನರು ಗುರುತಿಸುತ್ತಾರೆ ಎಂದು ಹೆಗಡೆ ಅವರು ಸಲಹೆ ನೀಡಿದ್ದರು ಎಂದರು.
2010ರಿಂದ ನಿರಂತರವಾಗಿ ರಾಮಕೃಷ್ಣ ಹೆಗಡೆ ಅವರ ಜನ್ಮಜಯಂತಿಯನ್ನು ಜೆಡಿಯು ಜಿಲ್ಲಾಘಟಕ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ, ರಾಜಕಾರಣದಲ್ಲಿ ಏನು ಆಗುತ್ತೀವೋ, ಇಲ್ಲವೋ ಗೊತ್ತಿಲ್ಲ ಆದರೆ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಉಳಿಯುವುದು ಮುಖ್ಯ ಎನ್ನುವುದನ್ನು ರಾಮಕೃಷ್ಣ ಹೆಗಡೆ ಅವರಿಂದ ಕಲಿತಿದ್ದೇವೆ, ಅದನ್ನೇ ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಅಧ್ಯಕ್ಷ ರಮೇಶ್‌ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಧನಂಜಯ್‌, ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ, ಚಂದ್ರಶೇಖರ್‌ ಗಂಗೂರ್‌, ಬೆಂಗಳೂರು ನಗರಾಧ್ಯಕ್ಷೆ ಲಕ್ಷ್ಮೀ, ರಾಜ್ಯ ಕಾರ್ಯದರ್ಶಿ ಕಲ್ಪನಾ ಗೌಡ, ಕಾನೂನು ವಿಭಾಗದ ಅಧ್ಯಕ್ಷ ದೀಪಕ್‌ ನಾರಾಚಿ, ರಾಜ್ಯ ಕಾರ್ಯದರ್ಶಿ ಆದಿನಾರಾಯಣ್‌, ಕಾರ್ತೀಕ್‌ ಸೇರಿದಂತೆ ರಾಜ್ಯ ಪದಾಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!