ತುಮಕೂರು: ವಿಧಾನ ಪರಿಷತ್ ಸದಸ್ಯರಾದ ಬೆಮೆಲ್ ಕಾಂತರಾಜು ಅವರು ಕಾಂಗ್ರೆಸ್ ಸೇರಲು ಇಂಗಿತ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಆರ್.ರಾಜೇಂದ್ರ ಅವರ ಆಹ್ವಾನದ ಮೇರೆಗೆ ನಮ್ಮ ಮನೆಗೆ ಸೌಹಾರ್ಧ ಭೇಟಿಗಾಗಿ ಆಗಮಿಸಿದ್ದರು ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಇತ್ತೀಚೆಗೆ ಜಿ.ಟಿ.ದೇವೇಗೌಡರೂ ಸಹ ಕಾಂಗ್ರೆಸ್ ಸೇರಲು ಇಂಗಿತ ವ್ಯಕ್ತಪಡಿಸಿರುವಂತೆಯೇ ಬೆಮೆಲ್ ಕಾಂತರಾಜು ಅವರು ಕೂಡ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದರು.
ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ನಮ್ಮ ಜಿಲ್ಲೆಯಲ್ಲೂ ಬಹಳಷ್ಟು ಬದಲಾವಣೆಗಳ ನಿರೀಕ್ಷೆ ಮಾಡಬಹುದು ಎಂದು ಈ ಹಿಂದೆಯೇ ನಾನು ಹೇಳಿದ್ದೆ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಜಿ.ಟಿ.ದೇವೇಗೌಡರಿಗೂ ಸಹ ಆರು ತಿಂಗಳ ಹಿಂದೆಯೇ ಹೇಳಿದ್ದೆ, ಸಿದ್ಧರಾಮಯ್ಯ ಅವರಿಗೆ ಜಿಲ್ಲೆಯ ಚಿಕ್ಕನಾಹಕನಹಳ್ಳಿ ಅಥವಾ ಮಧುಗಿರಿ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿದ್ದೇನೆ ಎಂದರು.
ನಮ್ಮ ಜಿಲ್ಲೆಯ ಕೆಲವು ವಿಚಾರಗಳನ್ನು ಹೇಳಿದ್ದೇನೆ, ಅವೆಲ್ಲವೂ ಕಾಲಕಳೆದಂತೆ ಸತ್ಯವಾಗುವಂತಹ ಕಾಲ ಸನ್ನಿಹಿತವಾಗುತ್ತಿವೆ ಎಂದರು.
ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರ ನೇಮಕದಿಂದ ಸರ್ಕಾರಕ್ಕೆ ಶೇ.10 ಅಥವಾ 20ರಷ್ಟು ಹಣ ಉಳಿತಾಯವಾಗಬಹುದು ಬಿಟ್ಟರೆ, ಇದರಿಂದ ದುಷ್ಪರಿಣಾಮಗಳೇ ಹೆಚ್ಚಾಗುತ್ತವೆ. ಇತ್ತೀಚೆಗೆ ಆರ್‌ಟಿಒ ಕಚೇರಿಯಲ್ಲಿ ಹೊರಗುತ್ತಿಗೆ ನೌಕರರಿಂದ ಅವರದ್ದೇ ಡ್ಯಾಂಗಲ್ ಬಳಸಿ ಸುಮಾರು ನಾಲ್ಕೈದು ಕೋಟಿ ಹಣವನ್ನು ಬೇರೆ ಕಡೆ ವರ್ಗಾಯಿಸಿದ್ದಾರೆ ಎಂಬ ಮಾಹಿತಿಗಳಿವೆ. ಹೀಗೆ ಬಹಳಷ್ಟು ಇಲಾಖೆಗಳಲ್ಲಿ ಎಲ್ಲೆಲ್ಲಿ ಹೊರಗುತ್ತಿಗೆ ಅಧಿಕಾರಿಗಳಿದ್ದಾರೆ ಅಲ್ಲೆಲ್ಲಾ ಇಂತಹ ದುಷ್ಪರಿಣಾಮಗಳೇ ಹೆಚ್ಚಾಗಿ ನಡೆಯುತ್ತವೆ, ಹೊರಗುತ್ತಿಗೆ ನೌಕರರಿಗೆ ಹೊಣೆಗಾರಿಕೆ ಇರುವುದಿಲ್ಲ, ಖಾಸಗಿ ಏಜೆನ್ಸಿಯವರ ಮೂಲಕ ನೇಮಕವಾಗಿರುತ್ತಾರೆ, ನಾಳೆ ಏನು ಮಾಡಿದರೂ ಅವರ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ ಎಂಬ ಪರಿಸ್ಥಿತಿಗೆ ಬರಲಾಗುತ್ತದೆ ಎಂದು ಹೇಳಿದರು.
ತುಮಕೂರಿನಲ್ಲಿರುವ ಟಿಹೆಚ್‌ಒ ಕಚೇರಿಯಲ್ಲಿ ಟಿಹೆಚ್‌ಒ ಹೊರತುಪಡಿಸಿದರೆ ಆಡಳಿತಾಧಿಕಾರಿ ಸಮೇತ ಎಲ್ಲಾ ಸಿಬ್ಬಂದಿಯೂ ಹೊರಗುತ್ತಿಗೆ ನೌಕರರೇ ಆಗಿದ್ದಾರೆ, ಹೀಗಿರುವಾಗ ಹೊರಗುತ್ತಿಗೆ ನೌಕರರು ಎಷ್ಟುದಿನ ಕೆಲಸ ಮಾಡುತ್ತೇವೆಯೋ ಅಷ್ಟು ದಿನ ಹಣ ಬಾಚಬೇಕೆಂಬ ಮನೋಭಾವದಲ್ಲಿ ಅವರೆಲ್ಲಾ ಕೆಲಸ ಮಾಡುತ್ತಿರುತ್ತಾರೆ. ಇದರಿಂದ ಸರ್ಕಾರಕ್ಕೆಊ ನಷ್ಟ, ಕೆಲಸದಲ್ಲಿ ದಕ್ಷತೆ ಕಾಣುವುದಕ್ಕೂ ಆಗುವುದಿಲ್ಲ ಎಂಬಂತಾಗುತ್ತದೆ ಎಂದು ತಿಳಿಸಿದರು.
ಸರ್ಕಾರ ಖಾಯಂ ಹುದ್ದೆಗಳ ನೇಮಕಾತಿ ಮಾಡದೇ ಇರುವುದರಿಂದ ಇಷ್ಟೆಲ್ಲಾ ಅನಾಹುತ ನಡೆಯುತ್ತಿರುತ್ತವೆ, ಖಾಯಂ ನೇಮಕಾತಿ ಮಾಡದೇ ಹೊರಗುತ್ತಿಗೆ ನೇಮಕದಿಂದ ಮೀಸಲಾತಿಯಲ್ಲಿ ಯಾರಿಗೆಲ್ಲಾ ಕೆಲಸ ಸಿಗಬೇಕಿತ್ತೊ ಅವರಿಗೆ ಆ ಕೆಲಸ ಸಿಗುತ್ತಿಲ್ಲ, ಮೀಸಲಾತಿ ಪಾಲಿಸಿಯಲ್ಲಿ ಸರ್ಕಾರ ವಂಚನೆಯನ್ನು ವ್ಯವಸ್ಥಿತವಾಗಿ ಮಾಡುತ್ತಿರುವುದು ದುರಂತ ಎಂದರು.
ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳು, ಹೊರಗುತ್ತಿಗೆ ಬಗ್ಗೆ ಹೆಚ್.ಕೆ.ಪಾಟೀಲ್ ಅವರಿಗೆ ಚನ್ನಾಗಿ ಅರಿವಿದ್ದು, ಅವರನ್ನು ತುಮಕೂರಿಗೆ ಕರೆಸಿ ಸುದ್ದಿಗೋಷ್ಠಿ ನಡೆಸಿ ಸಂಪೂರ್ಣ ಚಿತ್ರಣವನ್ನು ರಾಜ್ಯದ ಜನರ ಮುಂದೆ ಇಟ್ಟು ಬೆಳಕು ಚೆಲ್ಲುವುದಾಗಿ ತಿಳಿಸಿದ ಅವರು ಬಹಳಷ್ಟು ಜಾತಿಗಳು ಮೀಸಲಾತಿ ಹೆಚ್ಚಿಸಿ ಎನ್ನುತ್ತಿದ್ದರೆ, ಇನ್ನೂ ಕೆಲವರು ಒಳಮೀಸಲಾತಿಗೆ ಒತ್ತಾಯಿಸುತ್ತಿದ್ದಾರೆ, ಪಂಚಮಶಾಲಿಗಳು 2ಎಗೆ ಸೇರಿಸುವಂತೆ ಒತ್ತಾಯಿಸುತ್ತಿವೆ. ಆದರೆ ಮೀಸಲಾತಿಯಲ್ಲಿ ಇರುವಂತಹ ಅನುಕೂಲವನ್ನು ಜನರಿಗೆ ತಲುಪಿಸದೆ ವಂಚನೆ ಮಾಡುತ್ತಿದ್ದಾರೆ. ಈ ಬಗ್ಗೆ ಬರಗೂರು ರಾಮಚಂದ್ರಪ್ಪ ಅವರ ಜೊತೆಯೂ ಚರ್ಚೆ ನಡೆಸಿದ್ದು, ಅವರೂ ಸಹ ತುಮಕೂರಿಗೆ ಆಗಮಿಸಿ ಮೀಸಲಾತಿ ಬಗ್ಗೆ ಬೆಳಕು ಚೆಲ್ಲುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಹಿಂದೆ ಗಾಂಧಿಜಿಯವರು ಸತ್ಯಕ್ಕೆ ಆಗ್ರಹ ಮಾಡಿ ಸತ್ಯಾಗ್ರಹ ನಡೆಸುತ್ತಿದ್ದರು, ಆದರೆ ಇಂದು ಅಸತ್ಯಕ್ಕೆ ಆಗ್ರಹ ಮಾಡುವುದು ಹೆಚ್ಚಾಗಿದೆ ಎಂದರು.
ಇತ್ತೀಚೆಗೆ ಚಿಕ್ಕಹಳ್ಳಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದು ಒಂದು ವಾರ ಕಳೆದರೂ ಪೊಲೀಸರಿಗೆ ಸಣ್ಣ ಸುಳಿವು ಸಿಗಲಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರ ಅವರು, ಸ್ಥಳೀಯರು ಈ ರೀತಿಯ ಕೃತ್ಯಕ್ಕೆ ಕೈಹಾಕಿರುವುದಿಲ್ಲ ಎಂಬ ನಂಬಿಕೆ ನನ್ನದು ಬೇರೆ ಕಡೆಯಿಂದ ಬಂದಂತಹವರಿಂದಲೇ ಇಂತಹ ಕೃತ್ಯ ಮಾಡಿರುವ ಶಂಕೆ ಇದೆ. ಪೊಲೀಸರು ತನಿಖೆ ಚುರುಕುಗೊಳಿಸಬೇಕಿದೆ ಎಂದರು.
ಹಿಂದೆ ಪೊಲೀಸರು ವರಿಷ್ಠಾಧಿಕಾರಿಗಳ ಸಮೇತ ಗಸ್ತು ತಿರುಗುತ್ತಿದ್ದರು, ಇದರಿಂದ ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರಲಿಲ್ಲ, ಆದರೆ ಇತ್ತೀಚೆಗೆ ಗಸ್ತು ತಿರುಗುವ ಪೊಲೀಸ್ ವಾಹನಗಳೇ ಕಾಣಿಸುತ್ತಿಲ್ಲ, ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಗಸ್ತು ಹೆಚ್ಚಿಸಬೇಕು, ಜೊತೆಗೆ ವರಿಷ್ಠಾಧಿಕಾರಿಗಳೂ ಸಹ ಗಸ್ತು ತಿರುಗಬೇಕು ಆಗ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಸಲಹೆ ನೀಡಿದರು.
ಗಣೇಶೋತ್ಸವ ಹಬ್ಬ ಆಚರಣೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾವುದೇ ಉತ್ಸವವಿರಲಿ ಜನಸಂದಣಿ ಇಲ್ಲದೆ ಆಚರಿಸಿದರೆ ಉತ್ತಮ, ಕೋವಿಡ್ ಮಾರ್ಗಸೂಚಿಗಳನ್ನು ಸರ್ಕಾರ ಕಠಿಣವಾಗಿ ಜಾರಿಗೆ ತಂದು ಉತ್ಸವಗಳ ಆಚರಣೆಗೆ ಅನುಮತಿ ನೀಡಲಿ ಎಂದು ಹೇಳಿದರು.
ಶಾಲೆ ಆರಂಭಿಸುವ ಕುರಿತಂತೆ ಮಾತನಾಡಿದ ಅವರು, ಮಕ್ಕಳಿಗೆ ವಿದ್ಯೆಗಿಂತ ಜೀವ ಬಹಳ ಮುಖ್ಯ, ಪ್ರಾಣ ಇದ್ದರೆ ಇಂದಲ್ಲ ನಾಳೆ ಕಲಿಯುತ್ತಾನೆ, ಆದ್ದರಿಂದ ಅವರ ಜೀವ ರಕ್ಷಣೆ ಮಾಡುವುದು ಮುಖ್ಯ, ಮಕ್ಕಳ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಶಾಲೆ ಆರಂಭಿಸಲಿ ಎಂದು ಸಲಹೆ ನೀಡಿದರು.
ಬೆಮೆಲ್ ಸೌಹಾರ್ಧವಾಗಿ ನಮ್ಮ ಮನೆಗೆ ಬಂದಿದ್ರು: ಕೆ ಎನ್ ಆರ್
Get real time updates directly on you device, subscribe now.
Next Post
Comments are closed.