ತುಮಕೂರು: ನಗರ ಸ್ಥಳೀಯ ಸಂಸ್ಥೆಗಳ ತೆರಿಗೆ ವಸೂಲಾತಿಯಲ್ಲಿ ಉದಾಸೀನ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎನ್.ನಾಗರಾಜು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿಗದಿತ ಗುರಿಯಂತೆ ಆಸ್ತಿ, ನೀರು, ಜಾಹಿರಾತು ತೆರಿಗೆ ಹಾಗೂ ಅಂಗಡಿ ಮಳಿಗೆಗಳ ಬಾಡಿಗೆ ಸಂಗ್ರಹ ಸೇರಿದಂತೆ ಎಲ್ಲಾ ಕರ ವಸೂಲಾತಿಯನ್ನೂ ಕಾಲಮಿತಿಯೊಳಗೆ ವಸೂಲಿ ಮಾಡಬೇಕು. ನೂರರಷ್ಟು ತೆರಿಗೆ ಸಂಗ್ರಹಿಸಿ ಅಭಿವೃದ್ಧಿಗೆ ಆದ್ಯತೆ ನೀಡುವುದರೊಂದಿಗೆ ಆರ್ಥಿಕ ಸಂಪನ್ಮೂಲ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತೆರಿಗೆ ಸಂಗ್ರಹಣೆ ಕಾರ್ಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಬಹಳ ಹಿಂದುಳಿದಿದೆ ಎಂದು ಬೇಸರ ವ್ಯಕ್ತಪಡಿಸಿದ ಸಚಿವರು, ತೆರಿಗೆ ಸಂಗ್ರಹದಲ್ಲಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಬಾಕಿ ಇರುವ ತೆರಿಗೆ ವಸೂಲಿ ಮಾಡಬೇಕು, ಅಲ್ಲದೆ ವ್ಯಾಪಾರಸ್ಥರ ಪರವಾನಗಿಯನ್ನು ಕಾಲ ಕಾಲಕ್ಕೆ ನವೀಕರಣಗೊಳಿಸಬೇಕು. ಪರವಾನಗಿ ಇಲ್ಲದೆ ವ್ಯಾಪಾರ ನಡೆಸುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು, ನಿಗದಿತ ಅವಧಿಯೊಳಗೆ ತೆರಿಗೆ ಪಾವತಿ ಮಾಡದೇ ಇರುವ ಸಾರ್ವಜನಿಕರಿಗೆ ನೋಟೀಸ್ ನೀಡಬೇಕು ಎಂದು ನಿರ್ದೇಶಿಸಿದರು.
ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮ ಅನುಷ್ಠಾನಗೊಳಿಸಲು ಆದ್ಯತೆ ಕೊಡಬೇಕು ಎಂದು ಸೂಚನೆ ನೀಡಿದರು.
ಜವಾಬ್ದಾರಿಯನ್ನು ತೆಗೆದುಕೊಳ್ಳದೆ ಉದಾಸೀನವಾಗಿ ಕೆಲಸ ಮಾಡಿದರೆ ಅಭಿವೃದ್ಧಿ ಹೇಗೆ ಸಾಧ್ಯವಾಗಲಿದೆ ಎಂದ ಸಚಿವರು, ಮುಂದಿನ ಕೆಡಿಪಿ ಸಭೆ ಆರಂಭದಲ್ಲಿಯೇ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಮನವಿ ಮಾಡಿದರು.
ಅಧಿಕಾರಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಅಭಿವೃದ್ಧಿಗೆ ಆದ್ಯತೆ ನೀಡಿ ಕೆಲಸ ಮಾಡಬೇಕು. ಕೆಲಸ ಮಾಡದೇ ಇರುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪೌರಕಾರ್ಮಿಕರ ಆರೋಗ್ಯದ ಬಗ್ಗೆ ಚರ್ಚಿಸಿದ ಸಚಿವರು, ಕೋವಿಡ್ 19 ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಪೌರ ಕಾರ್ಮಿಕರೆಲ್ಲರಿಗೂ ಶೇ.100 ರಷ್ಟು ಕೋವಿಡ್ ಲಸಿಕೆ ಹಾಕಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಎರಡೂ ಡೋಸ್ ಲಸಿಕೆ ಪಡೆದ ಪೌರಕಾರ್ಮಿಕರಿಗೆ ಕೋವಿಡ್ ಸೋಂಕು ದೃಢಪಟ್ಟಿದೆಯೇ ಎಂಬ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ತಿಪಟೂರು ನಗರ ಸಭಾ ಆಯುಕ್ತರು ಮಾತನಾಡಿ, ನಮ್ಮ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ಶೇ.90 ರಷ್ಟು ಕೋವಿಡ್ ಲಸಿಕೆ ಹಾಕಿಸಲಾಗಿದೆ. ಎರಡೂ ಡೋಸ್ ಪಡೆದ ಯಾರಿಗೂ ಕೋವಿಡ್ ದೃಢಪಟ್ಟಿರುವ ವರದಿಯಾಗಿಲ್ಲ. ಲಸಿಕೆ ಪಡೆಯದೇ ಬಾಕಿ ಉಳಿದಿರುವ ಎಲ್ಲಾ ಪೌರಕಾರ್ಮಿಕರಿಗೂ ಲಸಿಕೆ ಹಾಕಿಸಲು ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಜಿಲ್ಲೆಯ ತಿಪಟೂರು ನಗರ ಸಭೆಯ ವ್ಯಾಪ್ತಿಯಲ್ಲಿಯೇ ತೆರಿಗೆ ಸಂಗ್ರಹಣೆ ತೃಪ್ತಿದಾಯಕವಾಗಿಲ್ಲ, ಹೀಗಾದರೆ ಅಭಿವೃದ್ಧಿ ಸಾಧ್ಯವಾಗುವುದಿಲ್ಲ, ನಿರ್ಧಿಷ್ಟ ಗುರಿಯಂತೆ ಎಲ್ಲಾ ತೆರಿಗೆಗಳನ್ನು ವಸೂಲಿ ಮಾಡಬೇಕು, ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಅಭಿವೃದ್ಧಿಗೊಳಿಸಬೇಕು, ಕುಡಿಯುವ ನೀರಿನ ಯೋಜನೆಯಡಿ ಮನೆಗಳಿಗೆ ನಳ ಸಂಪರ್ಕ ನೀಡುವ ಕಾರ್ಯವೂ ಕಾಲಮಿತಿಯೊಳಗೆ ಮುಗಿಯಬೇಕು ಎಂದು ತಿಪಟೂರು ನಗರ ಸಭೆ ಆಯುಕ್ತರಿಗೆ ಸೂಚಿಸಿದರು.
ಕಳೆದ ಒಂದೂವರೆ ವರ್ಷದಿಂದ ಬಾಡಿಗೆಯನ್ನು ನಿರ್ಧಿಷ್ಟ ಪ್ರಗತಿಯಂತೆ ವಸೂಲಿ ಮಾಡಿಲ್ಲವೆಂದು ಮಧುಗಿರಿ ಕಂದಾಯ ನಿರೀಕ್ಷಕ ಸಂತೋಷ್ ಅವರಿಗೆ ಎಚ್ಚರಿಕೆ ನೀಡಿದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಗುರಿಯಂತೆ ತೆರಿಗೆ ವಸೂಲಿ ಮಾಡದಿದ್ದರೆ ಅಮಾನತು ಮಾಡಲಾಗುವುದು ಎಂದು ತಾಕೀತು ಮಾಡಿದರು.
ಸಭೆಯಲ್ಲಿ ತಿಪಟೂರು, ಶಿರಾ, ಮಧುಗಿರಿ ಹಾಗೂ ಚಿಕ್ಕನಾಯಕನಹಳ್ಳಿ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲಿಸಿದ ಸಚಿವದ್ವಯರು, ವಸತಿ ಯೋಜನೆಯಡಿ ನಿವೇಶನ ಹಂಚಿಕೆಯಾಗಿರುವ ಅರ್ಹ ಪೌರಕಾರ್ಮಿಕ ಫಲಾನುಭವಿಗಳಿಗೆ ನಿವೇಶನ ನೀಡಬೇಕು. ಅನಧಿಕೃತವಾಗಿ ಒಳಚರಂಡಿ ಸಂಪರ್ಕ ಪಡೆದಿದ್ದರೆ ಅಂತಹವರಿಂದ ತೆರಿಗೆ ವಸೂಲಿ ಮಾಡಬೇಕು ಎಂದು ಸೂಚನೆ ನೀಡಿದರು.
ಶಿರಾ ನಗರಸಭೆಯಲ್ಲಿ ಕೇವಲ ಶೇ.4ರಷ್ಟು ಮಾತ್ರ ವ್ಯಾಪಾರ ಪರವಾನಗಿ ನವೀಕರಣ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜೆಸಿಎಂ, ವರಮಾನ ಸಂಗ್ರಹವಾಗದೆ ಸ್ಥಳೀಯ ಸಂಸ್ಥೆಗಳು ನಷ್ಟದಲ್ಲಿವೆ. ಪ್ರಗತಿ ಸಾಧಿಸಿದೇ ಕುಂಟುನೆಪ ಹೇಳುವ ಅಧಿಕಾರಿಗಳು ಮನೆಗೆ ಹೋಗ್ತಿರಾ, ನಾನು ಸ್ವಷ್ಟವಾಗಿ ಹೇಳ್ತಿನಿ ಕೆಲಸ ಮಾಡ್ದಿದ್ರೆ ಸಸ್ಪೆಂಡ್ ಆಗ್ತಿರಾ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿಗೆ ಖರ್ಚು ಮಾಡದಿದ್ದರೆ, ಮುಂದಿನ ವರ್ಷ ಈ ಯೋಜನೆಯಡಿ ಬಿಡುಗಡೆಯಾಗುವ ಅನುದಾನ ಕಡಿತವಾಗಲಿದೆ. ಆದ್ದರಿಂದ ಅಧಿಕಾರಿಗಳು ಅನುದಾನವನ್ನು ಪೂರ್ಣವಾಗಿ ಖರ್ಚು ಮಾಡಬೇಕು ಎಂದು ನಿರ್ದೇಶಿಸಿದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಸಭೆಗೆ ಹಾಜರಾಗುವ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಅಭಿವೃದ್ಧಿ ಪ್ರಗತಿ ಕುರಿತ ಮಾಹಿತಿಯನ್ನು ಸಮರ್ಪಕವಾಗಿ ನೀಡಬೇಕು. ಸಭೆಗೆ ಸಮರ್ಪಕ ಮಾಹಿತಿ ಒದಗಿಸದ ಅಧಿಕಾರಿಗಳು ಅಭಿವೃದ್ಧಿಗೆ ಆದ್ಯತೆ ನೀಡಿಲ್ಲವೆಂದು ಪರಿಗಣಿಸಿ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶುಭಾ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 1,26,257 ಆಸ್ತಿಗಳಿದ್ದು, ಹಿಂದಿನ ವರ್ಷದ 382.23 ಲಕ್ಷ ರೂ. ಹಾಗೂ ಪ್ರಸಕ್ತ ಸಾಲಿನ 1411.562 ಲಕ್ಷ ರೂ. ತೆರಿಗೆ ಸೇರಿದಂತೆ ಒಟ್ಟು 1793.79 ಲಕ್ಷ ರೂ. ತೆರಿಗೆ ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ. ಈ ಪೈಕಿ 830.22 ಲಕ್ಷ ರೂ. ವಸೂಲಿ ಮಾಡಲಾಗಿದ್ದು, 963.57 ಲಕ್ಷ ರೂ. ಬಾಕಿಯಿದೆ ಎಂದು ಮಾಹಿತಿ ಒದಗಿಸಿದರು.
ಸಭೆಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೇರಿದಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಇದ್ದರು.
ಕೋವಿಡ್ ನಿಂದ ತೆರಿಗೆ ವಸೂಲಿ ಕುಂಠಿತ
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎನ್.ನಾಗರಾಜು, ಕೋವಿಡ್ ಕಾರಣದಿಂದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಬರಬೇಕಾದ ಆಸ್ತಿ, ನೀರು, ಜಾಹಿರಾತು ತೆರಿಗೆ ಹಾಗೂ ಅಂಗಡಿ ಮಳಿಗೆಗಳ ಬಾಡಿಗೆ ವಸೂಲಾತಿ ಕುಂಠಿತವಾಗಿದ್ದು, ತೆರಿಗೆ ಪಾವತಿಸುವವರ ಸಂಖ್ಯೆಯೂ ಇಳಿಮುಖವಾಗಿದೆ. ಹಾಗಾಗಿ ಸಭೆ ನಡೆಸಿ ಎಲ್ಲಾ ತೆರಿಗೆಯನ್ನೂ ನೂರರಷ್ಟು ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಸಾರ್ವಜನಿಕರು ಪಾವತಿಸುವ ತೆರಿಗೆಯಿಂದಾಗಿ ಆಡಳಿತ ವ್ಯವಸ್ಥೆಗಳು ಸಮರ್ಪಕವಾಗಿ ನಡೆಯಲಿದ್ದು, ಸಾರ್ವಜನಿಕರು ಕಾಲಕಾಲಕ್ಕೆ ತೆರಿಗೆಗಳನ್ನು ಪ್ರಾಮಾಣಿಕವಾಗಿ ಪಾವತಿಸಬೇಕು ಎಂದು ತಿಳಿಸಿದರು.
ನಗರ, ಪಟ್ಟಣಗಳ ಜನರಿಗೆ ನಿವೇಶನ ಕಲ್ಪಿಸುವ ಸಲುವಾಗಿ ಸುಮಾರು 5000 ನೀವೇಶನಗಳಿಗೆ ಸ್ಥಳ ಗುರುತಿಸಿ ಲೇಔಟ್ ಮಾಡಲಾಗಿದೆ. ಸುಮಾರು 2800 ಫಲಾನುಭವಿಗಳು ಈಗಾಗಲೇ ಆಯ್ಕೆಯಾಗಿದ್ದು, ಶೀಘ್ರದಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
Comments are closed.