ತುಮಕೂರು: ಆಗಸ್ಟ್ 24 ರಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಚಿಕ್ಕಹಳ್ಳಿ ಗ್ರಾಮದ ಚೋಟ ಸಾಹೇಬರ ಪಾಳ್ಯ ಬಳಿಯ ಅರಣ್ಯದಲ್ಲಿ ನಡೆದಿರುವ ರೈತ ಮಹಿಳೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೆರಡು ದಿನದಲ್ಲಿ ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬಿ.ಸುರೇಶ್ ಗೌಡ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಘಟನೆ ನಡೆಯಬಾರದಿತ್ತು, ಆದರೆ ನಡೆದಿದೆ, ಇದನ್ನು ಭೇದಿಸಲು ಈಗಾಗಲೇ ಪೊಲೀಸರು ಸುಮಾರು 20 ಜನ ನುರಿತ ಅಧಿಕಾರಿಗಳು, ಸಿಬ್ಬಂದಿ ಒಳಗೊಂಡ 3 ತಂಡ ರಚಿಸಿದ್ದಾರೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ನಮಗಿದೆ, ಈ ನಿಟ್ಟಿನಲ್ಲಿ ನಾವು ಪೊಲೀಸರಿಗೆ ಆತ್ಮಸ್ಥೈರ್ಯ ತುಂಬಬೇಕಿದೆ ಎಂದರು.
ಘಟನೆ ನಡೆದಿರುವ ಸ್ಥಳ ಅತ್ಯಂತ ನಿರ್ಜನ ಪ್ರದೇಶವಾಗಿರುವುದರಿಂದ ಈ ಪ್ರಕರಣ ಭೇದಿಸುವುದು ತುಮಕೂರು ಪೊಲೀಸರಿಗೆ ಸವಾಲಾಗಿದೆ, ಅಲ್ಲದೆ ಸಂತ್ರಸ್ಥ ಮಹಿಳೆ ಕೂಡ ಸಾವನ್ನಪ್ಪಿರುವುದರಿಂದ ಮತ್ತಷ್ಟು ಜಟಿಲವಾಗಿದೆ, ಆದರೂ ನಮ್ಮ ಪೊಲೀಸರ ಮೇಲೆ ವಿಶ್ವಾಸವಿದೆ, ಈಗಾಗಲೇ 2 ಬಾರಿ ಐಜಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಮಾರ್ಗದರ್ಶನ ನೀಡಿದ್ದಾರೆ, ಅಲ್ಲದೆ ತ್ಯಾಮಗೊಂಡ್ಲುವಿನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದ್ದು, ಅದಕ್ಕೂ, ಇದಕ್ಕೂ ಸಂಬಂಧವಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಮುಂದಿನ ಒಂದು ವಾರದೊಳಗೆ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದರು.
ಘಟನೆ ಕುರಿತಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಮಾಹಿತಿ ಕಲೆಹಾಕಿದ್ದಾರೆ. ಇನ್ನೆರಡು ದಿನಗಳಲ್ಲಿ ಸ್ಥಳಕ್ಕೆ ಭೇಟಿ ನೀಡುವ ಜೊತೆಗೆ, ಸಂತ್ರಸ್ಥ ಮಹಿಳೆಯ ಮನೆಗೂ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ಅವರ ಕುಟುಂಬಕ್ಕೆ ಅಗತ್ಯವಿರುವ ನೆರವನ್ನು ಸಹ ನೀಡಲಿದ್ದಾರೆ. ಮೈಸೂರು ಘಟನೆ ಬಹುಬೇಗ ಪತ್ತೆಯಾಗಲು ಪ್ರಕರಣದಲ್ಲಿ ಸಂತ್ರಸ್ಥರು ಬದುಕುಳಿದಿದ್ದರು, ಎರಡು ಪ್ರಕರಣಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಆದರೂ ನಮ್ಮ ಪೊಲೀಸರು ಸಮರ್ಥರಿದ್ದಾರೆ, ಪ್ರಕರಣ ಭೇದಿಸಿಯೇ ತೀರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿ, ಎಸ್‌ಸಿ ಮೋರ್ಚಾ ಅಧ್ಯಕ್ಷ ವೈ.ಹೆಚ್ಚ.ಹುಚ್ಚಯ್ಯ, ವಕ್ತಾರ ಕೊಪ್ಪಲ್ ನಾಗರಾಜ, ಕೆ.ಟಿ.ಶಿವಕುಮಾರ್ ಮತ್ತಿತರರು ಇದ್ದರು.
ಮಹಿಳೆ ಕೊಲೆ ಆರೋಪಿಗಳನ್ನು ಪೊಲೀಸರು ಶೀಘ್ರ ಬಂಧಿಸ್ತಾರೆ: ಸುರೇಶ್ ಗೌಡ
ಘಟನಾ ಸ್ಥಳಕ್ಕೆ ಗೃಹ ಸಚಿವರು ಭೇಟಿ ಕೊಡ್ತಾರೆ
Get real time updates directly on you device, subscribe now.
Comments are closed.