ಸರ್ಕಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲು ಹಣಕ್ಕೆ ಬೇಡಿಕೆ

ವೈದ್ಯನ ವಿರುದ್ಧ ಬಿಜೆಪಿ ಪದಾಧಿಕಾರಿಗಳ ಕಿಡಿ

455

Get real time updates directly on you device, subscribe now.


ಕುಣಿಗಲ್‌: ಸಾರ್ವಜನಿಕ ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದ ತಾಯಿ, ನವ ಜಾತ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಹಣಕ್ಕೆ ಬೇಡಿಕೆ ಇಟ್ಟ ಸರ್ಕಾರಿ ಆಸ್ಪತ್ರೆ ವೈದ್ಯನ ಕ್ರಮ ಖಂಡಿಸಿ ಯುವ ಬಿಜೆಪಿ ಪದಾಧಿಕಾರಿಗಳು ವೈದ್ಯನ ಮೇಲೆ ಕ್ರಮಕ್ಕೆ ಆಗ್ರಹಿಸಿ ಬುಧವಾರ ಸಂಜೆ ಧರಣಿ ನಡೆಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕಳೆದ ಕೆಲ ದಿನಗಳ ಹಿಂದೆ ಪಟ್ಟಣದ ಗುಜ್ಜಾರಿ ಮೊಹಲ್ಲ ವಾಸಿ ಆಟೋ ಚಾಲಕ ಇಮ್ರಾನ್‌ ಪತ್ನಿಯನ್ನು ಎರಡನೆ ಹೆರಿಗೆಗೆ ದಾಖಲು ಮಾಡಿದ್ದರು, ಗಂಡು ಮಗುವಾಗಿತ್ತು, ಒಳ ರೋಗಿಯಾಗಿ ಚಿಕಿತ್ಸೆ ಪಡೆದ ನಂತರ ಬುಧವಾರ ಬಿಡುಗಡೆ ಮಾಡಬೇಕಿತ್ತು, ಈ ವೇಳೆ ಚಿಕಿತ್ಸೆ ನೀಡಿದ ಆಸ್ಪತ್ರೆಯ ಸ್ತ್ರೀರೋಗ ತಜ್ಞ ವೈದ್ಯ ತಮಗೆ 10 ಸಾವಿರ, ದಾದಿಯರಿಗೆ ನಾಲ್ಕು ಸಾವಿರ ರೂಪಾಯಿ ನೀಡಬೇಕೆಂದು ಒತ್ತಾಯಿಸಿ, ಬಿಡುಗಡೆ ಮಾಡಲು ನಿರಾಕರಿಸಿದರು ಎನ್ನಲಾಗಿದೆ. ಇಮ್ರಾನ್‌ ಹಣವನ್ನು ಗೂಗಲ್‌ಪೇ ಮೂಲಕ ಹಾಕುವುದಾಗಿ ಹೇಳಿದಾಗ, ಗೋಗಲ್‌ ಪೇ ಬೇಡ ನಗದು ಹಣ ನೀಡುವಂತೆ ವೈದ್ಯರು ಆಗ್ರಹಿಸಿದ್ದರಿಂದ ಬೇಸತ್ತು ಯುವ ಬಿಜೆಪಿ ಅಧ್ಯಕ್ಷ ಧನುಶ್‌ ಗಂಗಾಟ್ಕರ್‌, ಸಲ್ಮಾನ್‌, ಅನೂಪ್‌ಕುಮಾರ, ಅಂಜನ್‌, ಅಮರ್‌ ಗಮನಕ್ಕೆ ತಂದರು.
ಆಸ್ಪತ್ರೆಗೆ ಆಗಮಿಸಿದ ಯುವ ಬಿಜೆಪಿ ಕಾರ್ಯಕರ್ತರು, ಆಡಳಿತ ವೈದ್ಯಾಧಿಕಾರಿ ಗಣೇಶ್ ಬಾಬು ಅವರೊಂದಿಗೆ ಸ್ತ್ರೀರೋಗ ತಜ್ಞರ ಕ್ರಮ ಖಂಡಿಸಿ, ಕೂಡಲೇ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಆಡಳಿತ ವೈದ್ಯಾಧಿಕಾರಿ, ಆರೋಪಿತ ವೈದ್ಯರನ್ನು ಕರೆಸಿದಾಗ, ವೈದ್ಯರು ತಾವು ಯಾವುದೇ ಬೇಡಿಕೆ ಇಟ್ಟಿಲ್ಲ ಎಂಬ ಸಬೂಬು ನೀಡಿದರು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹಣಕ್ಕೆ ಬೇಡಿಕೆ ಇಟ್ಟಿರುವ ವೈದ್ಯರ ನಡೆ ಖಂಡಿಸಿದ ಯುವ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕರೆ ಮಾಡಿ ಕ್ರಮಕ್ಕೆ ಒತ್ತಾಯಿಸಿ ಧರಣಿಗೆ ಮುಂದಾದರು. ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್ ಬಾಬು, ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದಲ್ಲಿ ಆರೋಪಿತ ವೈದ್ಯ ಹರೀಶ್‌ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರೂ ತಕ್ಷಣವೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಯುವ ಬಿಜೆಪಿ ಕಾರ್ಯಕರ್ತರು ಧರಣಿ ಮುಂದುವರೆಸಿದರು.

Get real time updates directly on you device, subscribe now.

Comments are closed.

error: Content is protected !!