ತುಮಕೂರು: ರಾಜ್ಯದಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಬರಬೇಕು, ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಬೇಕು ಎಂಬುದು ನಮ್ಮ ಉದ್ದೇಶ, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ನಗರದ ಹೊರವಲಯದಲ್ಲಿರುವ ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚು ಕೈಗಾರಿಕೆ ಸ್ಥಾಪಿಸುವವರಿಗೆ ಉತ್ತೇಜನ ನೀಡುವ ಮೂಲಕ ಉದ್ಯೋಗ ಸೃಷ್ಟಿಸಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.
ಈಗಾಗಲೇ 2010- 11ರಲ್ಲಿ ರಾಜ್ಯದಲ್ಲಿ ಇನ್ವೆಸ್‌್ಟ ಕರ್ನಾಟಕ ನಡೆಸಲಾಗಿದೆ. ಅದೇ ಮಾದರಿಯಲ್ಲಿ 2022 ರಲ್ಲಿ ಇನ್ವೆಸ್ಟ್ ಕರ್ನಾಟಕ ನಡೆಸುವ ಸಂಬಂಧ ಸದ್ಯದಲ್ಲೇ ದಿನಾಂಕ ನಿಗದಿಗೊಳಿಸಲಾಗುವುದು, ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದರು.
ಇನ್ವೆಸ್ಟ್ ಕರ್ನಾಟಕದ ಮೂಲಕ ರಾಜ್ಯದಲ್ಲಿ ಕನಿಷ್ಠ 5 ಲಕ್ಷ ಉದ್ಯೋಗ ಸೃಷ್ಟಿಯಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲು ಬದ್ಧವಾಗಿದೆ ಎಂದು ಅವರು ಹೇಳಿದರು.
ವಸಂತನರಸಾಪುರ ಕೈಗಾರಿಕಾ ಪ್ರದೇಶದ ಸುಮಾರು 105 ಎಕರೆಯಲ್ಲಿರುವ ಫುಡ್ ಪಾರ್ಕ್ ಅತ್ಯುತ್ತಮ ಮಾದರಿಯಲ್ಲಿದೆ, ಇಲ್ಲಿ ಸಾವಿರಾರು ಕೋಟಿ ಹೂಡಿಕೆಯಾಗುತ್ತಿದೆ, ಇದು ರಾಜ್ಯದಲ್ಲೇ ಮೊದಲನೇ ಫುಡ್ ಪಾರ್ಕ್ ಆಗಿದೆ, ಈ ಫುಡ್ ಪಾರ್ಕ್ ನಲ್ಲಿ ವಿವಿಧ ರೀತಿಯಲ್ಲಿ ಆಹಾರ ಪದಾರ್ಥಗಳ ಸಂರಕ್ಷಣೆ ಮಾಡಲಾಗುತ್ತಿದೆ ಎಂದರು.
ಫುಡ್ ಪಾರ್ಕ್ ನಲ್ಲಿ ಶೇ.80ಕ್ಕಿಂತ ಹೆಚ್ಚು ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ಉದ್ದೇಶ ಇದೆ, ಆದರೆ ಅದಕ್ಕೆ ತಕ್ಕಂತೆ ಕೌಶಲ್ಯದ ಕೊರತೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಮಗಾರಿ ವೀಕ್ಷಣೆ: ವಿಶ್ವದಲ್ಲೇ ಪ್ರಸದ್ದಿ ಪಡೆಯುತ್ತಿರುವ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ ತಲೆಯೆತ್ತಿರುವ ಫುಡ್‌ಪಾರ್ಕ್ ಸೇರಿದಂತೆ ವಿವಿಧ ಕೈಗಾರಿಕೆಗಳಿಗೂ ಭೇಟಿ ನೀಡಿದ ಸಚಿವ ನಿರಾಣಿ, ಕೈಗಾರಿಕೆಗಳಲ್ಲಿ ಕೈಗೊಳ್ಳಲಾಗಿರುವ ಕಾರ್ಯ ವಿಧಾನಗಳನ್ನು ವೀಕ್ಷಿಸಿದರು.
ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ ಟ್ರೀಟೆಡ್ ವಾಟರ್ ಪ್ಲಾಂಟ್, ಮೆಷಿನ್ ಟೂಲ್ ಪಾರ್ಕ್ ಸೇರಿದಂತೆ ವಿವಿಧ ಕೈಗಾರಿಕೆಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕಾಮಗಾರಿಗಳ ಪ್ರಗತಿ ಕುರಿತು ಮಾಹಿತಿ ಕಲೆ ಹಾಕಿದರು.
ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೂ ತೆರಳಿ ಖುದ್ದು ವೀಕ್ಷಿಸಿ, ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಕೈಗಾರಿಕೆಗಳ ಆರಂಭವಾಗಬೇಕು, ಆ ನಿಟ್ಟಿನಲ್ಲಿ ಕಾಮಗಾರಿ ನಡೆಸುವಂತೆ ಸೂಚನೆ ನೀಡಿದರು.
ನಂತರ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಕೆಐಎಡಿಬಿ ಹಾಗೂ ಕೈಗಾರಿಕಾ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಸಚಿವ ನಿರಾಣಿ, ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಅಗತ್ಯ ಇರುವ ಎಲ್ಲಾ ರೀತಿಯ ಸವಲತ್ತು ಸರ್ಕಾರ ಒದಗಿಸುತ್ತಿದೆ, ಇದು ಸಮರ್ಪಕವಾಗಿ ಬಳಕೆಯಾಗಬೇಕು, ಇಡೀ ವಿಶ್ವದಲ್ಲೇ ಈ ಕೈಗಾರಿಕಾ ಪ್ರದೇಶ ಮಾದರಿಯಾಗಿರಬೇಕು ಎಂದು ಸೂಚನೆ ನೀಡಿದರು.
ಈ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಯಾವುದೇ ರೀತಿಯ ಮೂಲಭೂತ ಸೌಕರ್ಯದ ಕೊರತೆ ಉಂಟಾಗಬಾರದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಕೆಐಎಡಿಬಿ ಸಿಇಓ ಡಾ.ಶಿವಶಂಕರ್, ಮುಖ್ಯ ಇಂಜಿನಿಯರ್ ಬಿ.ಕೆ.ಪವಿತ್ರ, ಕಾರ್ಯನಿರ್ವಾಹಕ ಇಂಜಿನಿಯರ್ ಸುನಿಲ್, ವಿಶೇಷ ಜಿಲ್ಲಾಧಿಕಾರಿ ಭಂಡಾರಿ, ವಿಶೇಷ ಭೂಸ್ವಾಧೀನಾಧಿಕಾರಿ ತಬಸ್ಸಮ್ ಜಹೇರಾ, ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಬಿ.ನಾಗೇಶ್, ಫುಡ್‌ಪಾರ್ಕ್ ಅಧಿಕಾರಿ ಕರಣ್ ಕೇಟ್ ಮತ್ತಿತರರು ಇದ್ದರು.
Comments are closed.