ಅತ್ಯಾಚಾರ, ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹ

149

Get real time updates directly on you device, subscribe now.


ತುಮಕೂರು: ಆಗಸ್ಟ್ 24 ರಂದು ತುಮಕೂರು ತಾಲೂಕು ಚಿಕ್ಕಹಳ್ಳಿಯ ಬಳಿಯ ಚೋಟೆ ಸಾಹೇಬರ ಪಾಳ್ಯದ ಅರಣ್ಯದಲ್ಲಿ ನಡೆದಿರುವ ರೈತ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಮಾವೇಶಗೊಂಡ ಕಾಂಗ್ರೆಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಡಾ.ರಫಿಕ್‌ ಅಹಮದ್‌, ಮೈಸೂರು ಘಟನೆ ನಡೆದ ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿರುವುದು ಸ್ವಾಗತಾರ್ಹ, ಆದರೆ ಚಿಕ್ಕಹಳ್ಳಿ ಘಟನೆ ನಡೆದು 10 ದಿನ ಕಳೆದರೂ ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ, ಕೂಡಲೇ ರಾಜ್ಯಪಾಲರು ಸರಕಾರಕ್ಕೆ ನಿರ್ದೇಶನ ನೀಡಿ, ಅತ್ಯಾಚಾರಿಗಳನ್ನು ಬಂಧಿಸುವಂತೆ, ಅವರಿಗೆ ಕಠಿಣ ಶಿಕ್ಷೆಗೆ ಗುರಿ ಪಡಿಸುವಂತೆ ನಿರ್ದೇಶನ ನೀಡಬೇಕು, ಹಾಗೆಯೇ ಸಂತ್ರಸ್ಥ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂಬುದು ಜಿಲ್ಲಾ ಕಾಂಗ್ರೆಸ್‌ನ ಆಗ್ರಹವಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ ಮಾತನಾಡಿ, ಬಿಜೆಪಿ ಜಿಲ್ಲಾಧ್ಯಕ್ಷರು ಘಟನಾ ಸ್ಥಳಕ್ಕೆ ಗೃಹಮಂತ್ರಿಗಳು ಬಂದ ನಂತರ ತನಿಖೆ ಚುರುಕುಗೊಳ್ಳಲಿದೆ ಎಂದು ಹೇಳಿಕೆ ನೀಡಿರುವುದು ಜನರನ್ನು ದಾರಿತಪ್ಪಿಸುವ ಕ್ರಿಯೆಯಾಗಿದೆ. ಜಿಲ್ಲಾ ಪೊಲೀಸರು ದಕ್ಷರಿದ್ದಾರೆ. ಉತ್ತಮವಾಗಿಯೇ ಕೆಲಸ ನಿರ್ವಹಿಸುತ್ತಾರೆ, ಅವರಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸವನ್ನು ಮಾಡಬೇಕಾಗಿದೆ. ಬಿಜೆಪಿ ಸರಕಾರ ಮಹಿಳೆಯರಿಗೆ ರಕ್ಷಣೆ ಒದಗಿಸುವಲ್ಲಿ ವಿಫಲವಾಗಿದೆ. ಗಾಂಧಿ ಕಂಡ ಕನಸು ಈ ಸರಕಾರದಲ್ಲಿ ಈಡೇರಲು ಸಾಧ್ಯವಿಲ್ಲ, ರಾಜ್ಯ ಸರಕಾರ ಕೂಡಲೇ ಆರೋಪಿಗಳನ್ನು ಬಂಧಿಸಬೇಕು, ಸಂತ್ರಸ್ಥ ಕುಟುಂಬಕ್ಕೆ 25 ಲಕ್ಷ ರೂ. ಗಳ ಪರಿಹಾರ ನೀಡಬೇಕೆಂದು ಕಾಂಗ್ರೆಸ್‌ ಪಕ್ಷ ಒತ್ತಾಯಿಸುತ್ತದೆ ಎಂದರು.
ಮಾಜಿ ಮೇಯರ್‌ ಫರೀದಾಬೇಗಂ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ, ಜಿಲ್ಲಾ ಪೊಲೀಸರು ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವ ಮೂಲಕ ಮಹಿಳೆಯರಿಗೆ ರಕ್ಷಣೆ ಒದಗಿಸಬೇಕು ಎಂಬುದು ಕಾಂಗ್ರೆಸ್‌ ಪಕ್ಷದ ಎಲ್ಲಾ ಮಹಿಳಾ ಕಾರ್ಯಕರ್ತರ ಒತ್ತಾಯವಾಗಿದೆ ಎಂದರು.
ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಪಾಲಿಕೆಯ ಸದಸ್ಯರಾದ ನಯಾಜ್‌, ಮಹೇಶ್‌, ಜೆ.ಕುಮಾರ್‌,ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಆಟೋರಾಜು, ಮೆಹಬೂಬ್‌ ಪಾಷ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಗೀತಾ ರುದ್ರೇಶ್‌, ಗೀತಮ್ಮ, ಸುಜಾತ, ಮುಖಂಡರಾದ ನಟರಾಜು, ಮಂಜುನಾಥ್‌, ಗುರುಪ್ರಸಾದ್‌, ಸಂಜೀವಕುಮಾರ್‌, ನದೀಂಪಾಷ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!