ಕಸಾಪ ಅಧ್ಯಕ್ಷೆಯಾಗಿ ಸಲ್ಲಿಸಿದ ಸೇವೆ ತೃಪ್ತಿ ನೀಡಿದೆ

120

Get real time updates directly on you device, subscribe now.


ತುಮಕೂರು: ಕಳೆದ ಐದುವರೆ ವರ್ಷದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತುಮಕೂರ ಜಿಲ್ಲಾ ಅಧ್ಯಕ್ಷರಾಗಿ ಪಾರದರ್ಶಕ ಆಡಳಿತ ನೀಡಿದ್ದು, ನೆನೆಗುದಿಗೆ ಬಿದ್ದಿದ್ದ ಕನ್ನಡ ಭವನವನ್ನು ಪೂರ್ಣಗೊಳಿಸಿದ್ದು, ಜನಮಾನಸದಲ್ಲಿ ಉಳಿಯುವಂತಹ ಕಾರ್ಯಕ್ರಮವಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕನ್ನಡಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2016ರ ಮಾರ್ಚ್‌ 05 ರಂದು ಅಧಿಕಾರ ವಹಿಸಿಕೊಂಡು, ಇಂದಿನವರೆಗೆ ನಿರಂತರವಾಗಿ ಕನ್ನಡ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಿದ್ದು, ಕೊರೊನ ಸಂಕಷ್ಟದ ನಡುವೆಯೂ ಕನ್ನಡ ಕಮ್ಮಟಗಳು, ಕಾರ್ಯಾಗಾರ, ದತ್ತಿ ಉಪನ್ಯಾಸ, ಪುಸಕ್ತಗಳ ಪ್ರಕಟಣೆ, ಸಮ್ಮೇಳನ ಸೇರಿದಂತೆ ಹತ್ತು ಹಲವು ಕಾರ್ಯಕ್ರಮ ನಡೆಸಿಕೊಂಡು ಬರಲಾಗಿದೆ ಎಂದರು.
ಕಳೆದ 12 ವರ್ಷಗಳಿಂದ ನೆನೆಗುದಿಗೆ ಬಿದಿದ್ದ ಜಿಲ್ಲೆಯ ಕನ್ನಡ ಮನಸ್ಸುಗಳ ಅಸ್ಮಿತೆಯ ಸಂಕೇತವಾಗಿದ್ದ ಕನ್ನಡಭವನಕ್ಕೆ 1.29 ಕೋಟಿ ರೂ. ಗಳನ್ನು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿ, ಲೋಕಾರ್ಪಣೆ ಮಾಡಿದ್ದಲ್ಲದೆ, ಶಿರಾ ತಾಲೂಕ ಕನ್ನಡ ಭವನ, ತುರುವೇಕೆರೆ ಕನ್ನಡ ಭವನ, ಶಿರಾ ಕನ್ನಡ ಭವನ, ಸುವರ್ಣ ಮಹೋತ್ಸವ ಸಭಾಂಗಣ ನಿರ್ಮಾಣ,ಅಮರಶಿಲ್ಪಿ ಜಕಣಾಚಾರಿ ಆರ್ಟ್‌ ಗ್ಯಾಲರಿ ನಿರ್ಮಾಣದಂತಹ ಶಾಶ್ವತ ಕಾರ್ಯಕ್ರಮಗಳನ್ನು ರಾಜ್ಯ ಅಪೆಕ್ಸ್ ಬ್ಯಾಂಕ್‌ ಸಹಯೋಗದಲ್ಲಿ ಕೈಗೊಳ್ಳಲಾಗಿದೆ. ಇದರ ಜೊತೆಗೆ ಖಂಡಕಾವ್ಯಗಳ ಮೂಲಕ ತಳಸಮುದಾಯಗಳ ಧ್ವನಿಯಾಗಿದ್ದ ಕೆ.ಬಿ.ಸಿದ್ದಯ್ಯ ಅವರ ಸರ್ವಾಧ್ಯಕ್ಷತೆಯಲ್ಲಿ ಗಡಿನಾಡು ಪಾವಗಡದಲ್ಲಿ 12ನೇ ಜಿಲ್ಲಾ ಸಮ್ಮೇಳನ, ಎಸ್‌.ಜಿ.ಸಿದ್ದರಾಮಯ್ಯ ಸರ್ವಾಧ್ಯಕ್ಷತೆಯಲ್ಲಿ ತುಮಕೂರು ನಗರದ ಗಾಜಿನ ಮನೆಯಲ್ಲಿ 13ನೇ ಜಿಲ್ಲಾ ಸಮ್ಮೇಳನ ನಡೆಸಲಾಯಿತು. ಇದರ ಜೊತೆಗೆ ವಿವಿಧ ತಾಲೂಕು, ಹೋಬಳಿ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದೇನೆ ಎಂದು ಬಾ.ಹ.ರಮಾಕುಮಾರಿ ತಿಳಿಸಿದರು.
ಭೌತಿಕವಾಗಿ ಕನ್ನಡ ಭವನಗಳ ಜೊತೆಗೆ, ಬೌದ್ಧಿಕವಾಗಿ 12ನೇ ಜಿಲ್ಲಾ ಸಮ್ಮೇಳನ ನೆನಪಿಗಾಗಿ ನೆಲಗಡಲೆ ಸ್ಮರಣಸಂಚಿಕೆ, ಜಿಲ್ಲಾ ಕನ್ನಡ ಭವನ ಉದ್ಘಾಟನೆ ಸಂದರ್ಭದಲ್ಲಿ ನೆನಪಿನ ಹೊತ್ತಿಗೆ, ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಜನ್ಮ ಶತಾಬ್ದಿ ಅಂಗವಾಗಿ ಜಯಚಾಮರಾಜ ಒಡೆಯರ್‌ ನೆನಪಿನ ಕೃತಿ, ಕನ್ನಡವೇ ನಮ್ಮಮ್ಮ ನೂರೊಂದು ಕನ್ನಡ ಗೀತೆಗಳ ಸಂಗ್ರಹ, ತುಮಕೂರು ಜಿಲ್ಲಾ ಸಾಹಿತಿಗಳ ಮಾಹಿತಿ ಕೋಶ, ಡಾ.ಡಿ.ವಿ.ಪರಶಿವಮೂರ್ತಿ, ಡಾ.ಬಿ.ನಂಜುಂಡಸ್ವಾಮಿ ಅವರ ಸಂಪಾದಕತ್ವದಲ್ಲಿ ಪ್ರಾಚೀನ ಕವಿಗಳ ಕುರಿತ 620 ಪುಟಗಳ ಕಾವ್ಯಕಲ್ಪ ಕೃತಿಗಳನ್ನು ಹೊರತರಲಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳಿಗೆ ಲೆಕ್ಕಪತ್ರ ನಿರ್ವಹಣೆ ಕುರಿತಂತೆ ಕಾರ್ಯಾಗಾರ, ಕುವೆಂಪು ಭಾಷಾ ಭಾರತಿ ಸಹಯೋಗದಲ್ಲಿ ಮಹಿಳಾ ಅನುವಾದ ಕಮ್ಮಟ, ಕರ್ನಾಟಕ ಸಂಘ ಮಂಡ್ಯ ಇವರ ಸಹಯೋಗದಲ್ಲಿ ರಾಜ್ಯಮಟ್ಟದ ಮೂಡಲಪಾಯ ಯಕ್ಷಗಾನ ಕಾರ್ಯಾಗಾರ ಹಾಗೂ ಅಬ್ದುಲ್‌ ರೆಹಮಾನ ಪಾಷ ಅವರ ನಿರ್ದೇಶನದಲ್ಲಿ ವೈಜ್ಞಾನಿಕ ಮನೋಭಾವ, ಕಾರ್ಯಕ್ರಮ ಆಯೋಜನೆ, ನಿರೂಪಣೆ, ನಿರ್ವಹಣೆ ಕುರಿತ ಕಾರ್ಯಾಗಾರ ನಡೆಸಲಾಗಿದೆ. ಭಾಗೀರಥಮ್ಮ ಅವರ ಹೆಸರಿನಲ್ಲಿ ಮೂರು ದತ್ತಿ ಪ್ರಶಸ್ತಿ, ಮಡಿವಾಳ ಮಾಚಿದೇವರ ಹೆಸರಿನಲ್ಲಿ ದತ್ತಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕನ್ನಡ ಓದುಗರಿಗಾಗಿ ಕನ್ನಡ ಭವನ ಆವರಣದಲ್ಲಿ ಗ್ರಂಥಾಲಯ ಆರಂಭ, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಕನ್ನಡದಲ್ಲಿ ನೂರಕ್ಕೆ ನೂರು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಪಿಹೆಚ್‌ಡಿ ಪಡೆದವರಿಗೆ ಗೌರವ ಸನ್ಮಾನ, ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆ, ಕಸಾಪ ಫಿಲ್ಮ್ ಸೊಸೈಟಿ ಸ್ಥಾಪನೆ ಅಂಗವಾಗಿ ದೇವರ ನಾಡಲ್ಲಿ, ಕಾಡು ಹಾದಿಯ ಹೂವುಗಳು ಚಲನಚಿತ್ರ ಪ್ರದರ್ಶನ, ಮಹಿಳಾ ಕಲಾವಿದರಿಂದ ಗೋಕುಲದ ರಾಧೆಯರು ನಾಟಕ ಪ್ರದರ್ಶನ, ತುಮಕೂರು ವಿವಿ, ಸಮತ ವಿದ್ಯಾಲಯದ ಸಹಯೋಗದಲ್ಲಿ ಕುವೆಂಪು ಓದು ಅಭಿಯಾನ ಹೀಗೆ ಹಲವಾರು ಕಾರ್ಯಕ್ರಮವನ್ನು ಕಳೆದ ಐದು ವರ್ಷಗಳಲ್ಲಿ ನಡೆಸಲಾಗಿದೆ ಎಂದರು.
ಮಳೆ ನೀರು ನಿರ್ವಹಣೆ ಕುರಿತಂತೆ ರಾಜ್ಯಮಟ್ಟದ ಜಲ ಸಾಹಿತ್ಯ ಸಮ್ಮೇಳನ, ಅನಿವಾಸಿ ತುಮಕೂರಿನ ಸಾಹಿತಿಗಳ ಸಮಾವೇಶ, ಮೂಡಲಪಾಯ ಯಕ್ಷಗಾನ ಭಾಗವಂತಿಕೆ ಕಥನಗಳ ಮುದ್ರಣ ಸೇರಿದಂತೆ ಕೆಲವು ಕಾರ್ಯಕ್ರಮ ಮಾಡಲು ಸಾಧ್ಯವಾಗಿಲ್ಲ, ಮುಂದಿನ ಅಧ್ಯಕ್ಷರು ಇವುಗಳನ್ನು ನಡೆಸಿಕೊಡುವರೆಂಬ ವಿಶ್ವಾಸವಿದೆ. ಇದರ ಜೊತೆಗೆ ನಗರ ಟಿಜಿಎಂಸಿ ಬ್ಯಾಂಕಿನಲ್ಲಿ 5 ಲಕ್ಷ ರೂ. ಗಳನ್ನು ಡಿಪಾಸಿಟ್‌ ಇರಿಸಿ ಅದರಲ್ಲಿ ಬರುವ ಬಡ್ಡಿಯಲ್ಲಿ ಪ್ರತಿವರ್ಷ ನವೆಂಬರ್‌ 01 ರಂದು ಐದು ಜನ ಸಾಹಿತಿಗಳನ್ನು ಗುರುತಿಸಿ ಅವರಿಗೆ ತಲಾ ಐದು ಸಾವಿರ ರೂ. ನಗದು ಬಹುಮಾನ ನೀಡಿ ಗೌರವಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಬಾ.ಹ.ರಮಾಕುಮಾರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ರಾಕ್‌ ಲೈನ್‌ ರವಿಕುಮಾರ್‌, ಗೋವಿಂದಯ್ಯ, ಕೋಶಾಧ್ಯಕ್ಷ ಬಿ.ಮರುಳಯ್ಯ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!