ರೋಗ ಭೀತಿಯಲ್ಲಿ ಜನತೆ- ತ್ಯಾಜ್ಯ ಸುರಿಯುವುದು ತಡೆಯಲು ಆಗ್ರಹ

ಕುಣಿಗಲ್‌ ಚಿಕ್ಕಕೆರೆ ಕೋಡಿಯಲ್ಲಿ ಪ್ರಾಣಿಗಳ ತ್ಯಾಜ್ಯ

157

Get real time updates directly on you device, subscribe now.


ಕುಣಿಗಲ್‌: ಪಟ್ಟಣದ ಚಿಕ್ಕ ಕೆರೆ ಕೋಡಿಯಲ್ಲಿ ಪ್ರಾಣಿಗಳ ತ್ಯಾಜ್ಯ ಸುರಿಯುವ ತಾಣವಾಗುವ ಮೂಲಕ ಜಲ ಮಾಲಿನ್ಯಕ್ಕೆ ಕಾರಣವಾಗಿದೆ, ಸಂಬಂಧಪಟ್ಟ ಅಧಿಕಾರಿಗಳು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡು ಜಲಮಾಲಿನ್ಯ ತಡೆಗಟ್ಟಿ ಕೆರೆಯ ಕೋಡಿ ಪ್ರದೇಶದಲ್ಲಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ಕರವೇ ತಾಲೂಕು ಅಧ್ಯಕ್ಷ ಮಂಜುನಾಥ ಆಗ್ರಹಿಸಿದ್ದಾರೆ.
ಪಟ್ಟಣಕ್ಕೆ ಹೊಂದುಕೊಂಡಿರುವ ಚಿಕ್ಕಕೆರೆಯು ಹೇಮಾವತಿ ನಾಲಾ ವಲಯದ ಪ್ರದೇಶಕ್ಕೆ ಬರಲಿದೆ, ಸದರಿ ಕೆರೆ ಅವಲಂಬಿಸಿ ಇಂದಿಗೂ ನೂರಾರು ಎಕರೆ ಪ್ರದೇಶ ತೋಟ, ಗದ್ದೆ, ಹೊಲ ಅಚ್ಚುಕಟ್ಟು ಪ್ರದೇಶ ಇದೆ. ಕೆರೆಯ ಕೋಡಿ ಪ್ರದೇಶದಲ್ಲಿ ರೈಲ್ವೆ ಹಳಿ ಮಾರ್ಗ ಹಾದುಹೋದ ಪರಿಣಾಮ ಮೇಲು ಸೇತುವೆ ನಿರ್ಮಾಣವಾಗಿ ಕೋಡಿ ಪ್ರದೇಶಕ್ಕೆ ಅಷ್ಟಾಗಿ ಯಾರು ಗಮನ ಹರಿಸುವವರು ಇಲ್ಲವಾಗಿದೆ.
ಚಿಕ್ಕಕೆರೆ ಕೋಡಿ ಪ್ರದೇಶದಲ್ಲಿ ಜನಸಂಚಾರ ವಿರಳವಾದ ಕಾರಣ ಕಸಾಯಿ ಖಾನೆಗಳ ತ್ಯಾಜ್ಯ, ಕೋಳಿ ತ್ಯಾಜ್ಯ ಸುರಿಯುವ ತಾಣವಾಗಿ ಮಾರ್ಪಾಟಾಗಿದೆ. ಚಪ್ಪಲಿ ಉದ್ಯಮದಲ್ಲಿ ಸುಧಾರಿತ ಫೈಬರ್‌, ಪ್ಲಾಸ್ಟಿಕ್‌, ನೈಲಾನ್‌ ಹೆಚ್ಚಾಗಿ ಬಳಸುವ ತಂತ್ರಜ್ಞಾನ ಬಂದಾಗಿನಿಂದ ಕುರಿ, ಮೇಕೆ ಚರ್ಮದ ಉದ್ಯಮ ಸಂಪೂರ್ಣ ನೆಲಕಚ್ಚುವಂತಾಗಿದೆ. ಮಾಂಸಕ್ಕಾಗಿ ಕುರಿ, ಮೇಕೆ ಕತ್ತರಿಸಿದ ನಂತರ ಉಳಿಯುವ ತ್ಯಾಜ್ಯ ಚರ್ಮಕ್ಕೆ ಬೆಲೆ ಇಲ್ಲದ ಕಾರಣ ಕೆಲವರು ಚಿಕ್ಕಕೆರೆ ಕೋಡಿ ಪ್ರದೇಶದಲ್ಲೆ ಅನಧಿಕೃತವಾಗಿ ಎಸೆಯುವ ಪರಿಪಾಠ ಬೆಳೆಸಿಕೊಂಡ ಕಾರಣ ಇಡೀ ಕೋಡಿ ಪ್ರದೇಶ ಪ್ರಾಣಿಗಳ ತ್ಯಾಜ್ಯದ ತಾಣವಾಗಿ ಮಾರ್ಪಾಟಾಗಿದೆ.
ಜಾಗದ ಮಾಲೀಕತ್ವ ಹೇಮಾವತಿ ನಾಲಾವಲಯದ್ದೆ ಆದರೂ ಸದರಿ ಕೋಡಿ ಪ್ರದೇಶಕ್ಕೆ ಹೊಂದಿಕೊಂಡಂತೆ ಪುರಸಭೆಯ 7, 8, 9, 19, 20ನೇ ವಾರ್ಡ್‌ ಪ್ರದೇಶಗಳು ಬರಲಿದೆ. ಈ ಪ್ರಾಣಿ ತ್ಯಾಜ್ಯದ ಕೆಟ್ಟವಾಸನೆ ಈ ಭಾಗದ ಜನರನ್ನು ಹೈರಾಣಾಗಿಸಿದೆ. ಸದರಿ ಕೋಡಿ ಪ್ರದೇಶದಲ್ಲಿ ಬೀಳುವ ಮಳೆ ನೀರು, ವಿವಿಧ ವಾರ್ಡ್ ಗಳಿಂದ ಬರುವ ಕೊಳಚೆ ನೀರು, ಪ್ರಾಣಿಗಳ ತ್ಯಾಜ್ಯದ ಜೊತೆ ಹರಿದು ನಾಗಿನಿ ನದಿ ಸೇರಿ ನಂತರ ನಾಗಿನಿ ನದಿಯು ಶಿಂಷಾ ನದಿಯೊಂದಿಗೆ ಸೇರಿ ತಾಲೂಕಿನ ಗಡಿ ಮುಗಿಸಿದ ನಂತರ ಕಾವೇರಿ ನದಿ ಸೇರುತ್ತಿದೆ. ಪ್ರಾಣಿಗಳ ತ್ಯಾಜ್ಯಯುಕ್ತ ನೀರು ನೇರವಾಗಿ ನದಿಗೆ ಸೇರುತ್ತಿರುವುದರಿಂದ ಹಲವು ಸಾಂಕ್ರಾಮಿಕ ರೋಗದ ಬೀತಿ ಜೊತೆಯಲ್ಲಿ ಜಲಮಾಲಿನ್ಯ ಹೆಚ್ಚಾಗುವಂತಾಗಿದೆ. ಈ ನಿಟ್ಟಿನಲ್ಲಿ ಕೆಲ ನಾಗರಿಕರು ಪುರಸಭೆ, ಪರಿಸರ ಅಧಿಕಾರಿಗಳಿಗೆ ದೂರು ನೀಡಿದ್ದರೂ ಇನ್ನು ಯಾವುದೇ ಕ್ರಮವಾಗದ ಕಾರಣ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತು ಕೋಡಿ ಪ್ರದೇಶ ಪ್ರಾಣಿಗಳ ತ್ಯಾಜ್ಯ ವಿಸರ್ಜನಾ ತಾಣವಾಗದ ರೀತಿಯಲ್ಲಿ ಕ್ರಮ ಕೈಗೊಂಡು ಪರಿಸರ ರಕ್ಷಣೆ ಮಾಡುವಂತೆ ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!