ಸಾರ್ವಜನಿಕ ಚರ್ಚೆಗೆ ನ್ಯಾಯವಾದಿ ಕಾಂತರಾಜು ವರದಿ ನೀಡಿ: ರೇವಣ್ಣ

ಸಾಮಾಜಿಕ, ಶೈಕ್ಷಣಿಕ ಜಾತಿ ಗಣತಿ ವೈಜ್ಞಾನಿಕ

197

Get real time updates directly on you device, subscribe now.


ತುಮಕೂರು: ರಾಜ್ಯದ 197 ಹಿಂದುಳಿದ ವರ್ಗಗಳು ಹಾಗೂ ದಲಿತ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ತೆರೆದಿಡುವ ನ್ಯಾಯವಾದಿ ಕಾಂತರಾಜು ಅವರ ವರದಿಯನ್ನು ಸರಕಾರ ಈ ಕೂಡಲೇ ಸಾರ್ವಜನಿಕ ಚರ್ಚೆಗೆ ಬಿಡಬೇಕು ಎಂಬುದು ಹಿಂದುಳಿದ ವರ್ಗಗಳ ಒಕ್ಕೋಲರ ಒತ್ತಾಯವಾಗಿದೆ ಎಂದು ಮಾಜಿ ಸಚಿವ ಹೆಚ್‌.ಎಂ.ರೇವಣ್ಣ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ತುಮಕೂರು ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಒಂದು ದಿನದ ಧರಣಿ ಸತ್ಯಾಗ್ರಹವನ್ನು ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಸುಪ್ರಿಂಕೋರ್ಟಿನ ಮಾರ್ಗದರ್ಶನದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸುಮಾರು 180 ಕೋಟಿ ರೂ. ವ್ಯಯ ಮಾಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಗಣತಿ ಮಾಡಿದ್ದಾರೆ. ಇದು ಅತ್ಯಂತ ವೈಜ್ಞಾನಿವಾಗಿದೆ ಎಂದರು.
ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ನ್ಯಾಯವಾದಿ ಕಾಂತರಾಜು ಅವರು ವರದಿ ಸಲ್ಲಿಸಿ ಮೂರು ವರ್ಷ ಕಳೆದರೂ ವರದಿಯನ್ನು ಜಾರಿಗೆ ತರದೆ ಮೂಲೆಗುಂಪು ಮಾಡಲಾಗಿದೆ, ಇದರ ವಿರುದ್ಧ ಈಗಾಗಲೇ ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಹೋರಾಟ ಆರಂಭವಾಗಿದೆ. ಕನಿಷ್ಠ ವರದಿಯಲ್ಲಿನ ಅಂಶಗಳ ಕುರಿತು ಸಾರ್ವಜನಿಕ ಚರ್ಚೆಗೆ ಬಿಟ್ಟು, ಅಲ್ಲಿ ಬರುವ ಅಭಿಪ್ರಾಯಗಳನ್ನು ಸಂಗ್ರಹಿಸಿ, ಅಗತ್ಯ ತಿದ್ದುಪಡಿಗಳನ್ನು ತಂದು ಜಾರಿಗೆ ತರಲು ಅವಕಾಶವಿದೆ, ಆದರೆ ಇದನ್ನು ಸರಕಾರಗಳು ಮಾಡುತ್ತಿಲ್ಲ, ಕೋವಿಡ್‌ ಹೆಸರಿನಲ್ಲಿ ಓಬಿಸಿ ಸಮುದಾಯದ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ, ವಿದ್ಯಾಸಿರಿ ಸಹಾಯಧನ ಸೇರಿದಂತೆ ಈ ಹಿಂದಿನ ಸರಕಾರಗಳು ನೀಡುತ್ತಿದ್ದ ಅನೇಕ ಸವಲತ್ತು ತಡೆ ಹಿಡಿದಿದೆ, ಇದರ ವಿರುದ್ಧ ನಾವೆಲ್ಲರೂ ಧ್ವನಿ ಎತ್ತಬೇಕಾಗಿದೆ ಎಂದರು.
ವಿಧಾನಪರಿಷತ್‌ ಮಾಜಿ ಸದಸ್ಯ ಹಾಗು ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ್‌ ಮಾತನಾಡಿ, ರಾಜ್ಯದಲ್ಲಿ ಸುಮಾರು 2.70 ಕೋಟಿಯಷ್ಟಿರುವ ಹಿಂದುಳಿದ ವರ್ಗಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಆಡಳಿತಾರೂಢ ಸರಕಾರದ ವಿರುದ್ಧ ನಾವೆಲ್ಲರೂ ಸಿಡಿದೇಳಬೇಕಾಗಿದೆ. ಇಡೀ ರಾಜ್ಯದ ಎಲ್ಲಾ ಸಮುದಾಯಗಳನ್ನು ಒಳಗೊಂಡಂತೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ನಡೆದ ಸಾಮಾಜಿಕ, ಶೈಕ್ಷಣಿಕ ಜಾತಿ ಗಣತಿಯ ವರದಿಯನ್ನು ಜಾರಿಗೆ ತರದೆ ರಾಜ್ಯದ 6.50 ಕೋಟಿ ಜನರಿಗೆ ಅಪಮಾನ ಮಾಡಿದೆ, ಇದನ್ನು ನಾವು ಸಹಿಸಲು ಸಾಧ್ಯವಿಲ್ಲ ಎಂದರು.
ಹಿಂದುಳಿದ ವರ್ಗದ ಅ ಮತ್ತು ಬ ಕ್ಯಾಟಗರಿಯಲ್ಲಿ ಒಟ್ಟು 197 ಸಮುದಾಯಗಳು ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಜಾರಿಯ ಬಗ್ಗೆ ಒಗ್ಗಟ್ಟು ಪ್ರದರ್ಶಿಸದಿದ್ದಲ್ಲಿ ಭವಿಷ್ಯದಲ್ಲಿ ಮತ್ತಷ್ಟು ಕರಾಳ ದಿನಗಳನ್ನು ಎಣಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಪ್ರಸ್ತುತ ಅಧಿಕಾರದಲ್ಲಿರುವ ಸರಕಾರ ಕೇವಲ ಎರಡು ಜಾತಿಗಳ ನಿಗಮಗಳಿಗೆ 1,000 ಕೋಟಿ ರೂ. ನೀಡಿದೆ. ಆದರೆ 197 ಜಾತಿಗಳನ್ನು ಪ್ರತಿನಿಧಿಸುವ ಸುಮಾರು 16 ನಿಗಮಗಳಿಗೆ 500 ಕೋಟಿ ನೀಡಿದೆ. ಇದೇ ನಿಮ್ಮ ಸಾಮಾಜಿಕ ನ್ಯಾಯವೇ ಎಂದು ಪ್ರಶ್ನಿಸಬೇಕಾಗಿದೆ. ಇದರ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗಿದೆ. ಸರಕಾರದ ಈ ಧೋರಣೆಯ ವಿರುದ್ಧ ವಿಧಾನಸೌಧ ಮುತ್ತಿಗೆಯಂತಹ ಕಾರ್ಯಕ್ರಮಕ್ಕೂ ನಾವು ಅಂಜಬಾರದು ಎಂದು ಎಂ.ಡಿ.ಲಕ್ಷ್ಮಿನಾರಾಯಣ್‌ ನುಡಿದರು.
ಬಿಎಂಟಿಸಿ ಮಾಜಿ ಅಧ್ಯಕ್ಷ ನಾಗರಾಜ್‌ ಯಾದವ್‌ ಮಾತನಾಡಿ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಂವಿಧಾನದ ಆಶಯವನ್ನು ಈಡೇರಿಸುವ ಸಲುವಾಗಿ 2013ರಲ್ಲಿ ಸಿದ್ದರಾಮಯ್ಯ ಸಾಮಾಜಿಕ, ಶೈಕ್ಷಣಿಕ ಜಾತಿ ಗಣತಿಗೆ ಚಾಲನೆ ನೀಡಿದ್ದರೂ, ಆದರೆ ವರದಿಯನ್ನು ಸ್ವೀಕರಿಸಲು ಇಂದಿಗೂ ಮೀನಾಮೇಷ ಎಣಿಸಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಜಾತಿವಾರು ಮೀಸಲಾತಿಗೆ ಬದಲಾಗಿ, ಅರ್ಥಿಕ ಮೀಸಲಾತಿಯನ್ನು ಜಾರಿಗೆ ತರಲು ಹೊರಟಿದೆ. ಇದು ಜಾರಿಯಾದರೆ ಎರಡು ಸಾವಿರ ವರ್ಷಗಳಿಂದ ತುಳಿತಕ್ಕೆ ಒಳಗಾಗಿರುವ ಹಿಂದುಳಿದ ಜಾತಿಗಳಿಗೆ ತೀವ್ರ ಅನ್ಯಾಯವಾಗಲಿದೆ. ಹಾಗಾಗಿ ಇಡೀ ದೇಶಕ್ಕೆ ನ್ಯಾಯವಾದಿ ಕಾಂತರಾಜು ಅವರ ವರದಿಯನ್ನು ಜಾರಿಗೆ ತರಲು ನಾವೆಲ್ಲರೂ ಪ್ರಬಲ ಹೋರಾಟ ರೂಪಿಸಬೇಕಾಗಿದೆ ಎಂದರು.
ವಿಧಾನಸಭೆಯ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಮಾತನಾಡಿ, 1931ರಲ್ಲಿ ಬ್ರಿಟಿಷ ಆಡಳಿತದಲ್ಲಿ ಜಾತಿಗಣತಿ ನಡೆಸಿದ್ದನ್ನು ಬಿಟ್ಟರೆ, 1974ರಲ್ಲಿ ದೇವರಾಜ ಅರಸು ಅವರು ಅಧಿಕಾರಕ್ಕೆ ಬರುವವರೆಗೂ ಜಾತಿ ಗಣತಿ ನಡೆದಿರಲಿಲ್ಲ. ಅರಸು ಅವರು ಎಲ್‌.ಜಿ.ಹಾವನೂರು ಅವರ ನೇತೃತ್ವದಲ್ಲಿ ಆಯೋಗ ರಚಿಸಿ, ಅವರು ನೀಡಿದ ವರದಿಯ ಅನ್ವಯ ಅನೇಕ ಕಾಯ್ದೆಗಳನ್ನು ಜಾರಿಗೆ ತಂದ ಪರಿಣಾಮ ಹಿಂದುಳಿದ ವರ್ಗಗಳು ರಾಜಕೀಯ, ಶೈಕ್ಷಣಿಕ ಮೀಸಲಾತಿ ಪಡೆದು, ಸಾಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ. ಹಾಗಾಗಿ ಕಾಂತರಾಜು ಅವರ ವರದಿಯನ್ನು ಜಾರಿಗೆ ತರುವ ಮೂಲಕ ಈ ಸಮುದಾಯಗಳಿಗೆ ಮತ್ತಷ್ಟು ಸರಕಾರಿ ಸವಲತ್ತು ವಿಸ್ತಾರಗೊಳ್ಳಬೇಕಾಗಿದೆ. ಆಡಳಿತದಲ್ಲಿರುವ ಸರಕಾರಗಳು ಮನಸೋಯಿಚ್ಚೆ, ಬಾಹ್ಯ ಒತ್ತಡಕ್ಕೆ ಮಣಿದು, ಕಾನೂನು ಬಾಹಿರ ಮೀಸಲಾತಿ ಹಂಚಿಕೆಯನ್ನು ತಕ್ಷಣವೇ ನಿಲ್ಲಿಸಬೇಕು. ಪ್ರಬಲ ಜಾತಿಗಳನ್ನು 2 ಎ ಪಟ್ಟಿಗೆ ಸೇರಿಸುವ ಪ್ರಕ್ರಿಯೆಯನ್ನು ಕೂಡಲೇ ಕೈಬೀಡಬೇಕೆಂದು ಆಗ್ರಹಿಸಿದರು.
ದೊಡ್ಡ ಬಳ್ಳಾಪುರ ಮಠದ ದಿವ್ಯ ಜ್ಞಾನಾನಂದಸ್ವಾಮೀಜಿ, ಮಾಜಿ ಶಾಸಕ ಡಾ.ರಫಿಕ್‌ ಅಹಮದ್‌, ಎಸ್‌.ನಾಗಣ್ಣ, ಪಿ.ಎನ್‌.ರಾಮಯ್ಯ, ನರಸೀಯಪ್ಪ, ಆರ್‌.ವೇಣುಗೋಪಾಲ್‌, ಅಡಿಟರ್‌ ಅಂಜನಪ್ಪ, ಸುರೇಶ್‌ ಲಾತೂರ್‌, ನಿಕೇತ್‌ ರಾಜ್‌ ಮೌರ್ಯ, ರಾಮಚಂದ್ರಪ್ಪ, ಧನಿಯಕುಮಾರ್‌, ಪ್ರೆಸ್‌ ರಾಜಣ್ಣ, ಕೆಂಪರಾಜು, ಮಧುಕರ್‌, ವಿರೂಪಾಕ್ಷ ಇತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!